(ಅಂಧಭಕ್ತನೊಬ್ಬ ಬುದ್ಧಿವಂತನಿಗೆ ಎದುರಾದ)
ಭಕ್ತ : ಇತ್ತೀಚೆಗೆ ಈ ಸಾಬರ ಹಾವಳಿ ಜಾಸ್ತಿ ಆಯ್ತು ಅಲ್ವರಾ?
ಬುದ್ಧಿವಂತ : ಅದು ಹೇಗೆ ಹೇಳ್ತಿ?
ಭಕ್ತ : ನೋಡಿ ಐ ಲವ್ ಮಹಮದ್ ಅಂತಾ ಬ್ಯಾನರ್ ಹಾಕ್ತಾರಲ್ಲಾ.. ಅವರಿಗೆಷ್ಟು ಧೈರ್ಯ ಅಂತಾ?
ಬುದ್ಧಿವಂತ : ಮತ್ತೆ ನಿಮ್ಮವರು ಐ ಲವ್ ಆರೆಸ್ಸೆಸ್ ಅಂತಾ ಊರ ತುಂಬಾ ಬ್ಯಾನರು ಸ್ಟಿಕರ್ರು ಅಂಟಿಸಿ ಪ್ರಚಾರ ಮಾಡ್ತೀರಲ್ಲಾ.. ಅದು ಸರೀನಾ?
ಭಕ್ತ : ನೀವೇನೇ ಹೇಳಿ ಇದಕ್ಕೆಲ್ಲಾ ಕಾರಣ ಆ ನೆಹರು. ನಮ್ಮ ದೇಶವನ್ನ ಒಡೆದಿದ್ದೇ ಆ ಮಹಾಶಯ.
ಬುದ್ಧಿವಂತ : ಆಹಾ ಯಾರಯ್ಯಾ ನಿನಗೆ ಹೇಳಿದ್ದು. ಹಿಂದೂಗಳಿಗೊಂದು ಮುಸ್ಲಿಮರಿಗೊಂದು ದೇಶ ಅಂತಾ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ್ದೇ ನಿಮ್ಮ ಆದರಣೀಯ ಸಾವರ್ಕರ್. ಅದರಿಂದ ಪ್ರೇರೇಪಿತರಾಗಿ ಮಹಮದ್ ಅಲಿ ಜಿನ್ನಾ ಪಾಕಿಸ್ತಾನದ ಬೇಡಿಕೆ ಇಟ್ಟಿದ್ದು.
ಭಕ್ತ : ಇದನ್ನ ನಾವು ನಂಬೋದಿಲ್ಲಾ ಬಿಡಿ.
ಬುದ್ಧಿವಂತ : ನಂಬಿ ಇಲ್ಲಾ ಬಿಡಿ ಸ್ವಾಮಿ. ಐತಿಹಾಸಿಕ ಸತ್ಯಗಳಿವು. ಸಾವರ್ಕರರವರ ಹಿಂದೂ ಮಹಾಸಭೆ ಹಾಗೂ ಜಿನ್ನಾರವರ ಮುಸ್ಲಿಂ ಲೀಗ್ ಸೇರಿ ಸಮ್ಮಿಶ್ರ ಸರಕಾರ ನಡೆಸಿದ್ದೂ ಸಹ ಇತಿಹಾಸ.
ಭಕ್ತ : ಇದೆಲ್ಲಾ ಸುಳ್ಳು ಆರೋಪ. ನಮ್ಮ ಸಾವರ್ಕರ್ ಮುಸಲ್ಮಾನರ ಜೊತೆ ಸೇರೋಕೆ ಸಾಧ್ಯವೇ ಇಲ್ಲಾ. ಇದೆಲ್ಲಾ ನಗರ ನಕ್ಸಲರು ಹೆಣೆದ ಕಟ್ಟುಕತೆ ಅಷ್ಟೇ.
ಬುದ್ಧಿವಂತ : ಸ್ವಲ್ಪ ಚರಿತ್ರೆ ತಿಳ್ಕೊಳ್ರಿ. 1942-43 ರಲ್ಲಿ ಬಂಗಾಳ, ಸಿಂದ್ ಹಾಗೂ ಸಿಂಹಳ ಪ್ರಾಂತ್ಯದಲ್ಲಿ ಜಂಟಿ ಸರಕಾರ ರಚಿಸಿದ್ದರು ಅನ್ನೋದಾದ್ರೂ ಗೊತ್ತಾ.
ಭಕ್ತ : ಅದೆಲ್ಲಾ ನಮಗೊತ್ತಿಲ್ಲ, ನಮಗೆ ಹೇಳಿಕೊಟ್ಟಿರೋದಿಷ್ಟೇ ಈ ಕಾಂಗ್ರೆಸ್ ನಿಂದಾನೇ ದೇಶ ವಿಭಜನೆ ಆಯ್ತು ಅಂತಾ.
ಬುದ್ಧಿವಂತ : ಹೌದಾ.. ಹಾಗಾದ್ರೆ ಬ್ರಿಟೀಷರು ದೇಶ ವಿಭಜನೆ ಪ್ರಸ್ತಾಪ ಇಟ್ಟಾಗ ನಿಮ್ಮ ಆರೆಸ್ಸೆಸ್ ಆಗಲಿ ಇಲ್ಲಾ ಅದರ ತಾಯಿಬೇರು ಹಿಂದೂ ಮಹಾಸಭಾ ಆಗಲಿ ಯಾಕೆ ಪ್ರತಿಭಟನೆ ಮಾಡಲಿಲ್ಲ. ನಿಮ್ಮ ಆರಾಧ್ಯರಾದ ಸಾವರ್ಕರ್, ಗೋಳ್ವಾಲ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ, ಹೆಡಗೇವಾರ್ ಗಳೆಲ್ಲಾ ಯಾಕೆ ಮೌನವಾಗಿದ್ರು, ವಿಭಜನೆ ಬೇಡಾ ಅಂತಾ ಹೇಳಲಿಲ್ಲಾ.
ಭಕ್ತ : ಹೆ ಹ್ಹೆ.. ಇದೆಲ್ಲಾ ನಿಜಾ ಅಲ್ಲಾ ಬಿಡಿ.. ಭಾರತ ಹಿಂದೂ ರಾಷ್ಟ್ರ ಆಗಬೇಕಿತ್ತು ಅಲ್ವರಾ..
ಬುದ್ಧಿವಂತ : ನಿಜ ಏನು ಅಂತಾ ನಿಮಗೆ ಗೊತ್ತಿಲ್ಲ ಅಂದ್ರೆ ತಿಳ್ಕೊಳ್ಳಿ. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದಲ್ಲಿ 560 ಸಂಸ್ಥಾನಗಳಿದ್ವು. ಅದರಲ್ಲಿ 200 ಕ್ಕೂ ಹೆಚ್ಚು ಮುಸ್ಲಿಂ ಸಂಸ್ಥಾನಗಳು. ಉತ್ತರ ಭಾರತದ ಕೆಲವು ಮುಸ್ಲಿಂ ರಾಜರು ಪಾಕಿಸ್ಥಾನಕ್ಕೆ ಸೇರಲು ಬಯಸಿದರು. ಆದರೆ ಬೇರೆ ಪ್ರದೇಶದ ರಾಜರುಗಳು ಭಾರತ ಹಿಂದೂ ರಾಷ್ಟ್ರ ಆದರೆ ನಾವು ಸ್ವತಂತ್ರವಾಗಿಯೇ ಇರುತ್ತೇವೆ ಎಂದು ತೀರ್ಮಾನಿಸಿದರು.
ಭಕ್ತ : ಆಗ ಸರ್ದಾರ ಪಟೇಲರು ಸೈನ್ಯ ತಗೊಂಡೋಗಿ ಎಲ್ಲಾ ಮುಸ್ಲಿಂ ಸಂಸ್ಥಾನಗಳನ್ನು ಸೆದೆಬಡಿದು ಭಾರತಕ್ಕೆ ಸೇರಿಸಿದರು ಅಲ್ವಾ..
ಬುದ್ಧಿವಂತ : ನೋ.. ಅದು ಹಾಗಲ್ಲಾ. “ಭಾರತ ಹಿಂದೂ ರಾಷ್ಟ್ರ ಆಗೋದಿಲ್ಲ. ಅದು ಯಾರೊಬ್ಬರ ಧರ್ಮಕ್ಕೂ ಸೇರಿದ್ದಲ್ಲಾ, ಎಲ್ಲಾ ಧರ್ಮೀಯರದ್ದು” ಎಂದು ಹೇಳಿದಾಗ ಭೂಪಾಲ, ಕಾಶ್ಮೀರ, ಟ್ರಾವನ್ಕೋರ್, ಜಿನಾಗಡ್, ಮಣಿಪುರ, ಸಿಕ್ಕಿಂ, ಗೋವಾ ಪ್ರಾಂತ್ಯಗಳು ಭಾರತ ದೇಶದಲ್ಲಿ ಸೇರಲು ಒಪ್ಪಿಕೊಂಡವು. ಹೈದರಾಬಾದ್ ನಿಜಾಮನ ಮೇಲೆ ಮಾತ್ರ ಸೇನೆ ಕಾರವಾಯಿ ನಡೆಸಲಾಯ್ತು.
ಭಕ್ತ : ನೀವೇನೇ ಹೇಳಿ, ದೇಶ ವಿಭಜನೆ ಬೇಡಿಕೆ ಬಂದಿದ್ದು ಮಾತ್ರ ಈ ದೇಶದ್ರೋಹಿ ಮುಸಲ್ಮಾನರಿಂದ.
ಬುದ್ಧಿವಂತ: ಯಾರು ಹೇಳಿದ್ದು. ಪಂಜಾಬ್, ಬಂಗಾಳ ಹಾಗೂ ಉತ್ತರ ಭಾರತದ ಕೆಲವು ಮುಸಲ್ಮಾನರಿಂದ ಮಾತ್ರ ದೇಶ ವಿಭಜನೆ ಬೇಡಿಕೆ ಬಂದಿತ್ತೇ ಹೊರತು ದಕ್ಷಿಣ ಭಾರತದ ಮುಸಲ್ಮಾನರಿಂದಲ್ಲ.
ಭಕ್ತ : ಅವರಿಗೆ ಬೇರೆ ದೇಶ ಕೊಟ್ಟ ಮೇಲೆ ಈ ಮುಸಲ್ಮಾನರು ನಮ್ಮ ದೇಶದಲ್ಲಿ ಯಾಕೆ ಉಳೀಬೇಕಿತ್ತು.
ಬುದ್ಧಿವಂತ : ಹಾಗಾದ್ರೆ 2 ಕೋಟಿಯಷ್ಟು ಹಿಂದೂಗಳು ಯಾಕೆ ಮುಸ್ಲಿಂ ದೇಶವಾದ ಪಾಕಿಸ್ಥಾನ ಮತ್ತು ಬಾಂಗ್ಲಾಗಳಲ್ಲಿ ಉಳಿದುಕೊಂಡ್ರು?
ಭಕ್ತ : ನೀವೇನೇ ಹೇಳಿ, ಈ ಮುಸಲರನ್ನ ಈ ದೇಶದಿಂದ ಓಡಿಸಿದರೆ ನಾವು ಹಿಂದೂಗಳು ನೆಮ್ಮದಿಯಾಗಿ ಇರಬಹುದು.
ಬುದ್ಧಿವಂತ : ಮುಸ್ಲಿಮರು ಇರೋದರಲ್ಲೇ ನಿಮ್ಮ ಆರೆಸ್ಸೆಸ್ ಹಾಗೂ ಸಂಘ ಪರಿವಾರದ ಅಂಗಗಳು ಅಸ್ತಿತ್ವದಲ್ಲಿರೋದು. ಮುಸಲ್ಮಾನರೇ ಇರದಿದ್ದರೆ ಅವರಿಗೆ ದ್ವೇಷ ರಾಜಕೀಯ ಮಾಡಲು ಆಗ್ತಾನೇ ಇರಲಿಲ್ಲ, ದ್ವೇಷದ ಕಿಡಿ ಹಚ್ಚಿ ಭಾವನೆಗಳನ್ನು ಉದ್ರೇಕಿಸಿ ಆಡಳಿತದ ಚುಕ್ಕಾಣಿ ಹಿಡಿಯಲೂ ಸಾಧ್ಯವಾಗ್ತಿರಲಿಲ್ಲ.
ಭಕ್ತ : ಆದರೂ ನಮ್ಮ ಭಾರತ ಹಿಂದೂಗಳ ದೇಶ. ಬೇರೆ ಧರ್ಮದವರು ಇಲ್ಲಿ ಬಾಲ ಬಿಚ್ಚಲೇಬಾರದು.
ಬುದ್ಧಿವಂತ : ಯಾರಪ್ಪಾ ಹೇಳಿದ್ದು ಭಾರತ ಹಿಂದೂಗಳ ದೇಶ ಅಂತಾ. ಇದು ಎಲ್ಲಾ ಮತ ಧರ್ಮ ಜಾತಿ ಜನಾಂಗ ಸಮುದಾಯಗಳು ಸೇರಿದ ಸರ್ವ ಜನಾಂಗದ ಶಾಂತಿಯ ತೋಟ.
ಭಕ್ತ : ಇಲ್ಲಿ ನಾವು ಹಿಂದೂ ಧರ್ಮದವರೇ ಬಹುಸಂಖ್ಯಾತರು. ಅದಕ್ಕೆ ಇದು ಹಿಂದೂರಾಷ್ಟ್ರ..
ಬುದ್ಧಿವಂತ : ಅರೆರೆರ್ರೇ.. ಹಿಂದೂ ಅನ್ನೋ ಧರ್ಮವೇ ಎಲ್ಲೂ ಇಲ್ಲವಲ್ಲಾ. ಅದೊಂದು ಜೀವನ ಕ್ರಮ ಅಂತ ಸುಪ್ರೀಂ ಕೋರ್ಟು ಹೇಳಿದೆ, ಅಷ್ಟೇ ಯಾಕೆ ನಿಮ್ಮ ಮೋದಿಯವರೂ ಹೇಳಿದ್ದಾರಲ್ವಾ. ಇಲ್ಲದ ಧರ್ಮ ಇದೆ ಅಂತಾ ಯಾಕ್ರಯ್ಯಾ ಹೇಳ್ತೀರಿ.
ಭಕ್ತ : ಅಂದರೆ ನಾವು ಹಿಂದೂಗಳಲ್ವಾ? ನಮ್ಮದು ಹಿಂದೂ ಧರ್ಮ ಅಲ್ವಾ? ಇದು ಹಿಂದೂ ರಾಷ್ಟ್ರ ಅಲ್ವಾ? ನಿಮ್ಮಂತಾ ಹಿಂದೂ ದ್ರೋಹಿಗಳು ಮಾತ್ರ ಹೀಗೆ ಹೇಳೋಕೆ ಸಾಧ್ಯ?
ಬುದ್ಧಿವಂತ : ನೋಡು ಭಾರತದಲ್ಲಿ ಇರೋದು ವೈದಿಕ ಧರ್ಮ ಮಾತ್ರ. ಅದು ಮನುಶಾಸ್ತ್ರದ ವರ್ಣ ಸಿದ್ಧಾಂತದ ಮೇಲೆ ನಿಂತಿದೆ. ಅದರಲ್ಲಿ ಬ್ರಾಹ್ಮಣ ಶ್ರೇಷ್ಠ ಹಾಗೂ ಕ್ಷತ್ರಿಯ ಮತ್ತು ವೈಶ್ಯರು ಮಧ್ಯಮ ಹಾಗೂ ಶೂದ್ರರು ಕನಿಷ್ಠರು ಅಂತಾ ಇದೆ. ಇನ್ನು ಬಹುಸಂಖ್ಯಾತ ದಲಿತರು ಹಾಗೂ ಆದಿವಾಸಿಗಳು ಲೆಕ್ಕಕ್ಕೇ ಇಲ್ಲ. ಹೀಗಿರುವಾಗ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಅನ್ನೋದು ಕೂಡಾ ವೈದಿಕಶಾಹಿ ಕುತಂತ್ರ.
ಭಕ್ತ : ಆದರೆ ಇದನ್ನೆಲ್ಲಾ ಈಗ ಯಾರು ನಂಬ್ತಾರೆ. ನಮಗೆ ಧರ್ಮ ಮುಖ್ಯ. ಈ ಸಾಬರಿಂದಾ ಹಿಂದೂ ಧರ್ಮಕ್ಕೆ ಅಪಾಯ ಇದೆ. ಧರ್ಮ ರಕ್ಷಣೆಗೆ ಸಂಘ ಇದೆ. ಸಂಘದ ಜೊತೆಗೆ ನಾವಿದ್ದೇವೆ. ಜೈ ಶ್ರೀರಾಮ್.
ಬುದ್ಧಿವಂತ : ಮೆದುಳಿನ ತುಂಬಾ ದ್ವೇಷ ಹಾಗೂ ಅಂಧಭಕ್ತಿಯನ್ನು ತುಂಬಿಕೊಂಡ ನಿಮ್ಮಂತವರಿಗೆ ಏನು ಹೇಳಿದರೂ ಬೋರ್ಗಲ್ಲ ಮೇಲೆ ನೀರು ಹುಯ್ದಂತೆ. ದಾರಿ ಬಿಡಯ್ಯಾ ನಾನು ಹೋಗಬೇಕು.
ಭಕ್ತ : ನೀವು ನಿಮ್ಮಂತೋರು ಹಿಂದೂ ದ್ರೋಹಿಗಳು. ಧರ್ಮದ್ರೋಹಿಗಳು, ಸಂಘ ದ್ರೋಹಿಗಳು ಅಷ್ಟೇ ಯಾಕೆ ದೇಶದ್ರೋಹಿಗಳು. ನಿಮ್ಮನ್ನೆಲ್ಲಾ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ಜೈ ಶ್ರೀರಾಂ, ಭಾರತ್ ಮಾತಾಕೀ ಜೈ. (ಹೋಗುವನು)
ಬುದ್ಧಿವಂತ : ದೇವರು ಧರ್ಮದ ಹೆಸರಲ್ಲಿ ಬ್ರೇನ್ ವಾಶ್ ಮಾಡಿಸಿಕೊಂಡ ಇಂತಹ ಅಂಧ ಭಕ್ತರಿಗೆ ಎಷ್ಟು ಹೇಳಿದರೂ ಪ್ರಯೋಜನವಿಲ್ಲ. ಯಾವ ಬೇಧವಿಲ್ಲದೇ ಮನುಷ್ಯರನ್ನು ಮನುಷ್ಯರನ್ನಾಗಿ ನೋಡದ ಧರ್ಮಗಳು ಇದ್ದರೆಷ್ಟು ಇರದಿದ್ದರೆಷ್ಟು. ಕೊನೆಗೂ ಪ್ರತಿ ವ್ಯಕ್ತಿಯ ಕಷ್ಟಕ್ಕೆ ನೋವಿಗೆ ದುಃಖಕ್ಕೆ ಮನುಷ್ಯರೇ ಸಹಾಯಕ್ಕೆ ಬರುತ್ತಾರೆಯೇ ಹೊರತು ಯಾವ ದೇವರೂ ಅಲ್ಲ ಇನ್ಯಾವ ಧರ್ಮವೂ ಅಲ್ಲ.
ಹಾಡು :
ನಾವೆಲ್ಲರೂ ಒಂದೆ ಕುಲ ಒಂದೆ ಮತ
ನಾವು ಮನುಜರು ನಾವು ಮನುಜರು..
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು