FAKE FSL ವರದಿ: ಯಾರು ಈ ಫಣೀಂದ್ರ? clue4evidence ಹಿನ್ನೆಲೆ ಏನು?

Most read

ಬೆಂಗಳೂರು:ವಿಧಾನಸೌಧದ ಆವರಣದಲ್ಲಿ ʻಪಾಕಿಸ್ತಾನ್ ಜಿಂದಾಬಾದ್ʼ ಎಂದೇ ಕೂಗಲಾಗಿತ್ತು ಎಂದು ಬಿಂಬಿಸಲು ಬಲಪಂಥೀಯ ಸಂಸ್ಥೆಗಳು, ಮಾಧ್ಯಮಗಳು ಹಟಕ್ಕೆ ಬಿದ್ದಿದ್ದು, ಬಿಜೆಪಿ ಕರ್ನಾಟಕ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿರುವ ವರದಿಯನ್ನು ಸಿದ್ಧಪಡಿಸಿದ ಫಣೀಂದ್ರ ಬಿ.ಎನ್ ಇಸ್ಲಾಮೋಫೋಬಿಯಾ ಹರಡುವ ಬಲಪಂಥೀಯ ಟ್ರಾಲ್ ವ್ಯಕ್ತಿ ಎಂಬುದು ಬಯಲಾಗಿದೆ.

ಸಂವಾದ ಫೌಂಡೇಷನ್ ಎಂಬ ಖಾಸಗಿ ಸಂಸ್ಥೆಯು clue4evidence ಎಂಬ ಸಂಸ್ಥೆಯ ಮೂಲಕ ಒಂದು ವರದಿಯನ್ನು ಪಡೆದಿದೆ. ರಾಜ್ಯಸಭಾ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ನಾಸೀರ್ ಸಾಬ್ ಪರವಾಗಿ ಕೂಗಲಾದ ಘೋಷಣೆಗಳ ಕುರಿತು ಈ ವರದಿ ಪಡೆಯಲಾಗಿದ್ದು, ಪೊಲೀಸ್ ತನಿಖೆಯ ಅಧಿಕೃತ ಎಂಬಂತೆ ಬಿಜೆಪಿ ಬಿಂಬಿಸಿ ಪ್ರಚಾರ ಮಾಡುತ್ತಿದೆ. ಖಾಸಗಿ ಸಂಸ್ಥೆ ಮಾಡಿಸಿರುವ ಪರೀಕ್ಷೆಯನ್ನು ಪೊಲೀಸ್ ಇಲಾಖೆ ಮಾಡಿಸಿರುವ ಅಧಿಕೃತ ಎಫ್ ಎಸ್ ಎಲ್ ವರದಿ ಎಂಬಂತೆ ಬಿಂಬಿಸಿ, ಅದರ ಪ್ರತಿಗಳನ್ನು ಭಾರತೀಯ ಜನತಾ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಇದನ್ನೇ ಅಧಿಕೃತ ಎಫ್ ಎಸ್ ಎಲ್ ವರದಿ ಎಂಬಂತೆ ಮಾಧ್ಯಮಗಳು ಸಹ ಬಿಂಬಿಸುತ್ತಿದ್ದು, ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಸತ್ಯ ಎಂದು ಪ್ರತಿಪಾದಿಸುತ್ತಿವೆ. ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ತನಿಖೆಯನ್ನು ದಿಕ್ಕುತಪ್ಪಿಸುವ ಅಧಿಕೃತವಲ್ಲದ ವರದಿಯನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರ ಇದ್ದಂತೆ ತೋರುತ್ತಿದೆ.

ವರದಿ ನೀಡಿರುವ ಫಣೀಂದ್ರ ಬಿ.ಎನ್. ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಷಯಗಳನ್ನು ಗಮನಿಸಿದರೆ, ಈತ ಮುಸ್ಲಿಂ ದ್ವೇಷ ಇರುವ ಸಂಘಪರಿವಾರದ ಕಾಲಾಳು ಎಂಬುದು ಸ್ಪಷ್ಟವಾಗುತ್ತದೆ.

clue4evidence ಸಂಸ್ಥೆಯ ಮುಖ್ಯಕಚೇರಿ ಬೆಂಗಳೂರಿನ ಡಿಕನ್ ಸನ್ ರಸ್ತೆಯಲ್ಲಿದ್ದು, ಮೈಸೂರು ಮತ್ತು ಕೊಚ್ಚಿನ್ ನಲ್ಲಿ ಕಚೇರಿಗಳನ್ನು ಹೊಂದಿದೆ ಎಂದು ಅದರ ವೆಬ್ ಸೈಟ್ ಹೇಳುತ್ತದೆ. ಖಾಸಗಿಯಾಗಿ FSL ವರದಿಗಳನ್ನು ಮಾಡುವ ಇದು, ಡಿಎನ್ ಎ ಅನಾಲಿಸಿಸ್ ಮಾಡುವುದಾಗಿಯೂ ಹೇಳಿಕೊಳ್ಳುತ್ತದೆ.

ಭಾರತೀಯ ಜನತಾ ಪಕ್ಷದ ಎಕ್ಸ್ ಖಾತೆಯಲ್ಲಿ ಎಫ್ ಎಸ್ ಎಲ್ ವರದಿ ಎಂದು ಹೇಳುತ್ತ, ಇದೇ clue4evidence ನೀಡಿರುವ ವರದಿಯ ಒಂದು ಪುಟವನ್ನು ಪೋಸ್ಟ್ ಮಾಡಿದೆ. ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ ಎಂದು ಬರೆಯಲಾಗಿದೆ.

ಮುಂದುವರೆದು, ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಪೋಸ್ಟ್‌ ಮಾಡಲಾಗಿದೆ.
https://twitter.com/BJP4Karnataka/status/1764494815536836826

ಫಣೀಂದ್ರ ಬಿ.ಎನ್.‌ ಎಂಬುವವರು ಸಹಿ ಮಾಡಿರುವ ಈ ವರದಿಯಲ್ಲಿ ನಾಸೀರ್‌ ಸಾಬ್‌ ಜಿಂದಾಬಾದ್‌ ಮತ್ತು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಗಳ ನಡುವೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದೇ ಕೂಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆಯಾದರೂ, ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಯನ್ನೇ ಕೂಗಲಾಗಿದೆ ಎಂದು ಹೇಳಿಲ್ಲ.

ಈ ವರದಿಯನ್ನು ʻಸಂವಾದ ಫೌಂಡೇಷನ್‌ʼ ಎಂಬ ಖಾಸಗಿ ಸಂಸ್ಥೆ ಮಾಡಿಸಿದ್ದು, ಇದನ್ನೇ ಒರಿಜಿನಲ್‌ ಎಫ್‌ ಎಸ್‌ ಎಲ್‌ ವರದಿ ಎಂದು ಬಿಂಬಿಸಲಾಗುತ್ತಿದೆ ಎಂದು ʻದಿ ಸೌತ್‌ ಫಸ್ಟ್‌ ಡಾಟ್‌ ಕಾಮ್‌ʼ ಸಂಪಾದಕಿ ಅನುಷಾ ರವಿ ಸೂದ್‌ ಎಕ್ಸ್‌ ನಲ್ಲಿ ಟ್ವೀಟ್‌ ಮಾಡಿದ್ದಾರೆ.
https://twitter.com/anusharavi10/status/1764503888340607137?t=eB784DjRo4DCRX_0t9UlGw&s=08

More articles

Latest article