ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ 5 ಲಕ್ಷದ ವರೆಗಿನ ಸಾಲಕ್ಕೆ ಶೇ.20 ರಷ್ಟು ಸಹಾಯಧನ ನೀಡುವ ಸ್ವಾವಲಂಭಿ ಯೋಜನೆಯನ್ನು ಫೆ.25ರ ವರೆಗೆ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಂದಾಯ ಇಲಾಖೆ, ಘಟಕ ವೆಚ್ಚ/ಗರಿಷ್ಠ ಸಾಲದ ಮೊತ್ತ ರೂ. 5 ಲಕ್ಷದವರೆಗೆ ಇದ್ದಲ್ಲಿ ಈ ಸಾಲದ ಮೊತ್ತದ ಶೇ.20ರಷ್ಟು ಹಣವನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಹಾಯಧನವನ್ನಾಗಿ ನೀಡಲಿದೆ. ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಸೇರಿದಂತೆ ಹೆಚ್ಚಿನ ಘಟಕ ವೆಚ್ಚವಿರುವ ಆದಾಯ ಬರುವಂತಹ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದವರು ಈ ಯೋಜನೆ ಅರ್ಹರಾಗಿರುತ್ತಾರೆ.
ಅರ್ಹರು ಅರ್ಜಿ ಸಲ್ಲಿಸಲು ಈ ಹಿಂದೆ ಜನವರಿ 31 ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಯೋಜನೆ ಮತ್ತಷ್ಟು ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆ.25ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.