ಪಲಾಯನವಾದಿ ಪಕ್ಷಗಳೂ ಪಾಂಡಿತ್ಯವಿಲ್ಲದ ವಕ್ತಾರರೂ..

Most read

ನನ್ನ ಐದಾರು ವರ್ಷಗಳ ಚರ್ಚಾ ಅನುಭವದಲ್ಲಿ ಹೇಳಬೇಕೆಂದರೆ ರಾಜಕೀಯ ಪಕ್ಷಗಳ ವಕ್ತಾರರಿಗೆ ಆಯಾ ಪಕ್ಷಗಳು ತರಬೇತಿ ಕಾರ್ಯಾಗಾರಗಳನ್ನು ಕಾಲಕಾಲಕ್ಕೆ ಆಯೋಜಿಸಬೇಕಿದೆ. ಕೂಗಾಟ ಹಾರಾಟಗಳನ್ನು ಬಿಟ್ಟು ತಮ್ಮ ಪಕ್ಷದ ನಿಲುವಿನ ಪ್ರಕಾರವೇ ವಿಷಯವನ್ನು ಹೇಗೆ ಮಂಡಿಸಬೇಕು ಎನ್ನುವುದನ್ನು ಹೇಳಿಕೊಡಬೇಕಿದೆ. ಒಬ್ಬರು ಅವರಿಗೆ ಕೊಟ್ಟ ಸಮಯದಲ್ಲಿ ಮಾತಾಡುವಾಗ ಮಧ್ಯದಲ್ಲಿ ಬಾಯಿಹಾಕಿ ವಿಷಯಾಂತರ ಮಾಡಬಾರದು ಎಂದು ಕಲಿಸಿಕೊಡಬೇಕಿದೆ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ರಾಷ್ಟ್ರೀಯ ಪಕ್ಷ ಎನ್ನುವ ಹೆಗ್ಗಳಿಕೆ ಇರುವ ಈ ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ವಾಸ್ತವವನ್ನು ಎದುರಿಸಲಾಗದೇ ಪಲಾಯನವಾದಿಯಾಗಿದೆಯಾ? ಸಮಸ್ಯೆ ಯಾವುದೇ ಇರಲಿ ಅದನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ಇಲ್ಲವಾಗಿದೆಯಾ?

ಹೀಗೊಂದು ಅನುಮಾನ ಕಾಡಲು ಕಾರಣವೂ ಇದೆ. ಈಗ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನಾ ಸುದ್ದಿ ಟ್ರೆಂಡಿಂಗ್ ನಲ್ಲಿದೆ. ಎಲ್ಲಾ ಸುದ್ದಿ ಮಾಧ್ಯಮಗಳೂ ಆ ಕುರಿತೇ ಚರ್ಚಿಸುತ್ತಿವೆ. ಕನ್ನಡದ ಅಷ್ಟೂ ನ್ಯೂಸ್‌ ಮೀಡಿಯಾಗಳು ಪ್ಯಾನಲ್ ಚರ್ಚೆಗಳನ್ನು ಪೈಪೋಟಿಯಲ್ಲಿ ಆರಂಭಿಸಿವೆ. ಆದರೆ ರಾಮಮಂದಿರ ಕುರಿತ  ಚರ್ಚೆಗಳಲ್ಲಿ ಕಾಂಗ್ರೆಸ್ ವಕ್ತಾರರು ಯಾವುದೇ ಸುದ್ದಿ ವಾಹಿನಿಯಲ್ಲಿ ಭಾಗವಹಿಸುತ್ತಿಲ್ಲ. ಯಾಕೆಂದು ಕೇಳಿದರೆ ಕಾಂಗ್ರೆಸ್ ಪಕ್ಷವು ತನ್ನ ವಕ್ತಾರರನ್ನು ಯಾವುದೇ ಚಾನೆಲ್ ಗಳಿಗೂ ಕಳಿಸುತ್ತಿಲ್ಲವಂತೆ. ಈ ಸೂಕ್ಷ್ಮ ವಿಷಯದ ಬಗ್ಗೆ ಅಂತರವನ್ನು ಕಾಯ್ದುಕೊಂಡಿದೆಯಂತೆ!

ಈ ಹಿಂದೆ ಬಿಜೆಪಿ ಪಕ್ಷವೂ ಸಹ ಹಲವಾರು ಸಲ ತಮ್ಮ ವಕ್ತಾರರನ್ನು ಚಾನೆಲ್ ಗಳ ಪ್ಯಾನಲ್ ಚರ್ಚೆಗೆ  ತಡೆದದ್ದೂ ಇದೆ. ಇತ್ತೀಚೆಗೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಗುಜರಾತ್ ಸರಕಾರ ಅಪರಾಧಿಗಳನ್ನು ಅಕಾಲಿಕವಾಗಿ ಜೈಲಿನಿಂದ ಬಿಡುಗಡೆ ಮಾಡಿದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದಾಗ ಅದರ ಬಗ್ಗೆ ಚರ್ಚಿಸಲು ತಮ್ಮ ಯಾವುದೇ ವಕ್ತಾರರನ್ನೂ ಬಿಜೆಪಿ ಯಾವುದೇ ಸುದ್ದಿ ವಾಹಿನಿಗೂ ಕಳಿಸದೇ ಪಲಾಯನವಾದಿಯಾಗಿತ್ತು. ಜೆಡಿಎಸ್ ಪಕ್ಷ ಸಹ ಇದಕ್ಕೆ ಹೊರತಲ್ಲ.

ರಾಜಕೀಯ ಪಕ್ಷಗಳು ಮಾಧ್ಯಮಗಳ ಮೂಲಕ ಜನರ ಮುಂದೆ ತಮ್ಮ ಉತ್ತರದಾಯಿತ್ವವನ್ನು ಸಾಬೀತು‌ಪಡಿಸ ಬೇಕಾಗುತ್ತದೆ. ವಿಷಯ ಅದೆಷ್ಟೇ ವಿವಾದಾತ್ಮಕವಾಗಿರಲಿ, ವಿಚಾರ ಅದೆಷ್ಟೇ ಸೂಕ್ಷ್ಮವಾಗಿರಲಿ ಅದನ್ನು ಎದುರಿಸುವ ಸ್ಥೈರ್ಯ ಮತ್ತು ಚಾಕಚಕ್ಯತೆ ರಾಜಕೀಯ ಪಕ್ಷಗಳಿಗೆ ಇರಬೇಕಾಗುತ್ತದೆ. ವಕ್ತಾರರು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸ ಬೇಕಾಗುತ್ತದೆ. ಯಾವಾಗ ವಿವಾದಾತ್ಮಕ ವಿಚಾರಗಳು ತಮ್ಮ ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತವೆ ಎನ್ನುವ ಅನುಮಾನ ಪಕ್ಷದ ನಾಯಕರಿಗೆ ಬರುತ್ತದೋ ಆಗ ಚರ್ಚೆಯಲ್ಲಿ ಭಾಗವಹಿಸದೇ ಹಿಂದೆ ಸರಿಯುವ ನಿರ್ಧಾರವನ್ನು ಪಕ್ಷಗಳು ತೆಗೆದುಕೊಳ್ಳುತ್ತವೆ. ಯಾಕೆ ಹೀಗೆ?

ಈ ಪಕ್ಷಗಳಿಗೆ ತಮ್ಮ ವಕ್ತಾರರ ಮೇಲೆ ನಂಬಿಕೆ ಇಲ್ಲವೇ?  ಚರ್ಚೆಗೆ ಆಯ್ದುಕೊಂಡ ವಿಷಯದ ಮೇಲೆ ಯಾವುದೇ ಅಧ್ಯಯನ ಮಾಡಿಕೊಂಡು ಬರದೇ, ವಿಷಯ ಜ್ಞಾನ ಇಲ್ಲದೇ ತೋಚಿದ್ದನ್ನು ಕ್ಯಾಮರಾ ಮುಂದೆ ಜೋರು ಧ್ವನಿಯಲ್ಲಿ ಒದರಿ ಕೂಗಾಡುವುದನ್ನೇ ಸಂವಾದ ಎಂದುಕೊಂಡ ವಕ್ತಾರರೇ ಹೆಚ್ಚಾಗಿದ್ದಾರೆ. ಮಾತುಬಲ್ಲವರನ್ನು, ಜೋರಾಗಿ ಕೂಗಾಡುವವರನ್ನು, ವಿಷಯಾಂತರ ಮಾಡುವವರನ್ನು, ಗದ್ದಲ ಎಬ್ಬಿಸಿ ಸುದ್ದಿಯಾಗ ಬಯಸುವವರನ್ನು, ಯಾವುದೇ ಸಾಹಿತ್ಯಕ ಸಾಂಸ್ಕೃತಿಕ ಹಿನ್ನೆಲೆ ಇಲ್ಲದವರನ್ನು ಯಾವುಯಾವುದೊ ಕಾರಣಕ್ಕೆ ಪಕ್ಷದ ವಕ್ತಾರರಾಗಿ ನೇಮಿಸಲಾಗಿರುತ್ತದೆ. ಅಂತಹ ವಕ್ತಾರರು ಏರು ದ್ವನಿಯಲ್ಲಿ ಕೂಗಾಡಿ ರಾಡಿ ಎಬ್ಬಿಸುವುದನ್ನೇ ಚರ್ಚೆ ಅಂದುಕೊಂಡಿರುತ್ತಾರೆ. ಕೆಲವರಂತೂ ಜಗಳದ ಮೋಡ್ ನಲ್ಲೇ ಇರುತ್ತಾರೆ. ಇಂತಹ ವಕ್ತಾರರ ಜಗಳ ವಾಗ್ಯುದ್ದಗಳಿಂದಾಗಿ ಪ್ಯಾನಲ್ ಚರ್ಚೆಗಳೇ ದಾರಿ ತಪ್ಪುತ್ತಿವೆ. ಅಲ್ಲಿ ಸಂವಾದದ ಬದಲಾಗಿ ಅನಗತ್ಯ ಸಂಘರ್ಷಗಳೆ ಹೆಚ್ಚಾದಾಗ ವೀಕ್ಷಕರೇ ಬೇಸರಗೊಂಡು ಚಾನೆಲ್ ಬದಲಾಯಿಸುವಂತಾಗುತ್ತದೆ.

ದೇವರು ಧರ್ಮಗಳಂತಹ ಸೂಕ್ಷ್ಮ ವಿಚಾರಗಳು ಹಾಗೂ ಭಾವನಾತ್ಮಕ ವಿವಾದಗಳನ್ನು ತಾಳ್ಮೆಯಿಂದ ತಾರ್ಕಿಕವಾಗಿ ಚರ್ಚಿಸುವಂತಹ ವಕ್ತಾರರು ಕಡಿಮೆ ಇರುವುದರಿಂದಾಗಿ, ರಾಜಕೀಯ ಪಕ್ಷಗಳಿಗೆ ತಮ್ಮ ವಕ್ತಾರರ ಬೌದ್ಧಿಕ ಸಾಮರ್ಥ್ಯ ಹಾಗೂ ವಿಷಯ ಮಂಡನೆಯ ಕೌಶಲದ ಮೇಲೆ ಅಪನಂಬಿಕೆ ಇರುವುದರಿಂದ ಭಾವನಾತ್ಮಕ ಸಂಗತಿಗಳ ಕುರಿತ ಚರ್ಚೆಗಳಿದ್ದಾಗ ತಮ್ಮ ವಕ್ತಾರರನ್ನು ಕಳುಹಿಸಲು ಹಿಂಜರಿಯುತ್ತಾರೆ. ಎಲ್ಲಿ ಈ ವಕ್ತಾರರು ಅನಗತ್ಯವಾಗಿ ಏನೋ ಹೇಳಿಕೆ ಕೊಟ್ಟು ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಡುತ್ತಾರೋ ಎಂಬ ಆತಂಕವೂ ಎಲ್ಲಾ ಪಕ್ಷದ ಉನ್ನತ ನಾಯಕರಿಗೆ ಇದ್ದೇ ಇರುತ್ತದೆ. ಇಂತಿಂತಾ ವಿಷಯಕ್ಕೆ ಇಂತಿಂತಾ ವಾಹಿನಿಗಳಲ್ಲಿ ಪಕ್ಷದ ವಕ್ತಾರರು ಭಾಗವಹಿಸಿ ಚರ್ಚೆ ಮಾಡಬಾರದು ಎಂದು ಪಕ್ಷಗಳು ಆದೇಶಿಸುತ್ತಿವೆ.

ಮಾಧ್ಯಮದ ನಿರೂಪಕರೂ ಸಹ ಪಕ್ಷವನ್ನು ಮುಜುಗರಕ್ಕೀಡು ಮಾಡುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸಮರ್ಥವಾಗಿ ಉತ್ತರ ಹೇಳುವಲ್ಲಿ ವಕ್ತಾರರು ಸೋಲುತ್ತಾರೆ, ಇಲ್ಲವೇ ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಏನನ್ನೋ ಹೇಳಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎನ್ನುವುದೇ ಈ ಅಘೋಷಿತ ಪ್ಯಾನಲ್ ಡಿಸ್ಕಶನ್ ಬಹಿಷ್ಕಾರಕ್ಕೆ ಪ್ರಮುಖ ಕಾರಣವಾಗಿದೆ.

ಈಗ ರಾಮಮಂದಿರದಂತಹ ಮಹತ್ವದ ವಿಷಯದ ಮೇಲೆ ಮಾಧ್ಯಮದಲ್ಲಿ ಚರ್ಚಿಸಲು ಕಾಂಗ್ರೆಸ್ ಪಕ್ಷ ಯಾಕೆ ಯಾವುದೇ ವಕ್ತಾರರನ್ನು ಕಳುಸುತ್ತಿಲ್ಲ? ಯಾಕೆಂದರೆ ರಾಮಮಂದಿರದ ಉದ್ಘಾಟನೆಯ ಪರವಾಗಿ ನಿಲುವು ತೆಗೆದುಕೊಂಡರೆ ಅದು ಬಿಜೆಪಿಗೆ ವರದಾನವಾಗುತ್ತದೆ. ವಿರುದ್ಧವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರೆ ಕಾಂಗ್ರೆಸ್ ರಾಮನ ವಿರೋಧಿ, ಹಿಂದೂ ವಿರೋಧಿ ಎಂದು ಆರೋಪಿಸಲು ಬಿಜೆಪಿಗೆ ಅಸ್ತ್ರ ಕೊಟ್ಟಂತಾಗುತ್ತದೆ. ಪ್ರಾಣ ಪ್ರತಿಷ್ಠಾಪನೆಯ ಪರ ಅಥವಾ ವಿರೋಧದ ಕುರಿತು ಯಾವುದೇ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳದ ಕಾಂಗ್ರೆಸ್ ಹೈಕಮಾಂಡ್ ‘ಬಿಜೆಪಿ ಆರೆಸ್ಸೆಸ್ ಪ್ರಾಯೋಜಿತ ಕಾರ್ಯಕ್ರಮಕ್ಕೆ ನಾವು ಹೋಗುತ್ತಿಲ್ಲ’ ಎಂದು ಹೇಳಿ ಸುಮ್ಮನಾಗಿದೆ. ಇದನ್ನೇ ತನ್ನ ವಕ್ತಾರರ ಮೂಲಕ ಮಾಧ್ಯಮಗಳ ಚರ್ಚೆಯಲ್ಲಿ ಮಂಡಿಸಬಹುದಾಗಿತ್ತು. ಆದರೆ, ಚರ್ಚೆ ಅಂದರೆ ನಿರೂಪಕರ ಹಾಗೂ ಬೇರೆ ಪಕ್ಷಗಳ ವಕ್ತಾರರ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಆ ರಿಸ್ಕೇ ಬೇಡವೆಂದು ಚರ್ಚೆಯಿಂದಲೇ ಹಿಂದೆ ಸರಿಯುವ ನಿರ್ಧಾರವನ್ನು ಕಾಂಗ್ರೆಸ್ ಕೈಗೊಂಡಿದೆ. ಆದರೆ ಕಾಂಗ್ರೆಸ್ಸಿನ ವಕ್ತಾರರು ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬಹುದಾಗಿತ್ತು. ಹಾಗೂ ಹಿಂದುತ್ವವಾದಿ ಪಕ್ಷ ಹಾಗೂ ಸಂಘಟನೆಗಳ ವಕ್ತಾರರಿಗೆ ಕೌಂಟರ್ ಕೊಡಬಹುದಾಗಿತ್ತು, ಆದರೆ ಹಾಗಾಗಲಿಲ್ಲ.

ಇತ್ತೀಚೆಗೆ  ಟಿವಿ 5 ನಲ್ಲಿ ನಡೆದ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಚರ್ಚೆಯಲ್ಲಿ ಭಾಗವಹಿಸಿದ್ದ ಸನಾತನ ಹಿಂದೂ ಸಂಘಟನೆಯ ಮೋಹನ ಗೌಡ ಎನ್ನುವ ಕಟ್ಟರ್ ಹಿಂದುತ್ವವಾದಿ ವಿಕ್ಷಿಪ್ತವಾದ ಸಮರ್ಥನೆ ಕೊಡತೊಡಗಿದ್ದರು. “ಶಂಕರಾಚಾರ್ಯ ಸ್ವಾಮಿಗಳು ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯನ್ನು ವಿರೋಧಿಸಿರಬಹುದು ಆದರೆ ಕಂಚಿ ಸ್ವಾಮಿಗಳೇ ಪ್ರತಿಷ್ಠಾಪನೆಗೆ ಪೌರೋಹಿತ್ಯ ವಹಿಸಿಕೊಂಡಿದ್ದಾರೆ. ಅಲ್ಲಿ ನಡೆಯುತ್ತಿರುವುದು ಪ್ರಾಣ ಪ್ರತಿಷ್ಠಾಪನೆ ಅಲ್ಲ, ಶ್ರೀರಾಮನ ಪುನರ್ ಪ್ರಾಣ ಪ್ರತಿಷ್ಠಾಪನೆ. ಈಗಾಗಲೇ ಅಲ್ಲಿ ಚಿಕ್ಕ ರಾಮಮಂದಿರ ಇತ್ತು. ಅಲ್ಲಿದ್ದ ಮೂರ್ತಿಯನ್ನೇ ಮತ್ತೆ ಪ್ರತಿಷ್ಠಾಪನೆ ಮಾಡಲು ಮಂದಿರ ಪೂರ್ಣಗೊಳ್ಳಬೇಕಿಲ್ಲ” ಎಂಬುದು ಈ ಸನಾತನದ ವಕ್ತಾರನ ವಾದ. ಆದರೆ ಯಾವ ಶಾಸ್ತ್ರದಲ್ಲಿ ಹೀಗೆ ಹೇಳಿದೆ, ಈಗ ಪ್ರತಿಷ್ಠಾಪಿಸುತ್ತಿರುವುದು ಹೊಸದಾದ ಮೂರ್ತಿಯಲ್ಲವೇ?. ಮಂದಿರ ಪೂರ್ಣವಾಗದೇ ಅವಸರದಲ್ಲಿ ಪ್ರತಿಷ್ಠಾಪನೆ ಮಾಡುವುದರ  ಹಿಂದೆ ಚುನಾವಣಾ ರಾಜಕೀಯ ಇಲ್ಲವೇ?” ಎಂದು ಪ್ರಶ್ನಿಸಲು ಕಾಂಗ್ರೆಸ್ ವಕ್ತಾರರೊಬ್ಬರು ಅಲ್ಲಿ ಇರಬೇಕಿತ್ತು. 

” ರಾಷ್ಟ್ರದಲ್ಲಿ ಯಾವುದೇ ಪ್ರಮುಖ ಪೂಜೆ ಯಾಗ ಹವನಗಳು ಆದಾಗ ಆ ದೇಶದ ರಾಜನ ಮುಂದಾಳತ್ವದಲ್ಲಿ ಪುರೋಹಿತರು ಯಜ್ಞಯಾಗ ನಡೆಸುತ್ತಾ ಬಂದಿರುವುದು ಸಂಪ್ರದಾಯ. ಅದೇ ರೀತಿ ರಾಜನ ಸ್ಥಾನದಲ್ಲಿ ಈಗ ಈ ದೇಶದ ಪ್ರಧಾನಿಯಾಗಿರುವ ಮೋದಿಯವರ ನೇತೃತ್ವದಲ್ಲಿ, ಕಂಚಿ ಸ್ವಾಮಿಗಳ ಪೌರೋಹಿತ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಇದರಲ್ಲಿ ತಪ್ಪೇನಿದೆ?” ಎಂಬುದು ಆ ಹಿಂದುತ್ವವಾದಿಯ ವಿತಂಡ ವಾದಕ್ಕೆ ಉತ್ತರಿಸಲು ಕಾಂಗ್ರೆಸ್ಸಿನ ವಕ್ತಾರರು ಅಲ್ಲಿರಬೇಕಾಗಿತ್ತು.

“ಸಂವಿಧಾನಾತ್ಮಕವಾಗಿ ಈಗ ಈ ದೇಶದ ಮುಖ್ಯಸ್ಥರು  ಮೋದಿಯವರಾ ಅಥವಾ ರಾಷ್ಟ್ರಪತಿಗಳಾ? ಪ್ರಧಾನ ಮಂತ್ರಿ ರಾಜನ ಸ್ಥಾನ ಅಲಂಕರಿಸಲು ಸಾಧ್ಯವಾ? ನೀವು ಪ್ರಾಣ ಪ್ರತಿಷ್ಠಾಪನೆಯಲ್ಲಿ ನಿಮ್ಮ ಸನಾತನ ಸಂಸ್ಕೃತಿ ಮುಂದುವರೆಸಬೇಕೆಂದರೆ ರಾಜನ ಸ್ಥಾನದಲ್ಲಿರುವ ರಾಷ್ಟ್ರಪತಿಗಳ ನೇತೃತ್ವದಲ್ಲಿ ಮುಂದುವರೆಯಬೇಕಲ್ಲವೇ. ಯಾಕೆ ಹಾಗೆ ಮಾಡಲಿಲ್ಲ? ” ಎಂದು ಪ್ರಶ್ನಿಸಿ ಅವರ ಮುಖದ ಬೆವರಿಳಿಸಲು ಅಲ್ಲಿ ಕಾಂಗ್ರೆಸ್ಸಿನ ವಕ್ತಾರರು ಇರಬೇಕಿತ್ತು.ಕೊನೆಗೂ ಆ ಜವಾಬ್ದಾರಿಯನ್ನು ಯಾವುದೇ ಪಕ್ಷದೊಳಗೆ ಗುರುತಿಸಿಕೊಳ್ಳದ ನಾನೇ ನಿರ್ವಹಿಸಬೇಕಾಯಿತು.

ಹೊಸ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಸೌಜನ್ಯಕ್ಕೂ ಆಹ್ವಾನಿಸದ ಈ ಹಿಂದುತ್ವವಾದಿ ಪಕ್ಷವು ಇನ್ನು ರಾಮಮಂದಿರದ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಡಲು ಆಹ್ವಾನಿಸುತ್ತಾರಾ? ಅಬ್ರಾಹ್ಮಣರಾದ ಮೋದಿ ರಾಮಮೂರ್ತಿಯನ್ನು ಮುಟ್ಟಿ ಪ್ರತಿಷ್ಠಾಪನೆ ಮಾಡುವುದನ್ನೇ ಶಾಸ್ತ್ರ ನಿಷಿದ್ದ ಎಂದು ಪ್ರತಿಷ್ಠಾಪನೆಗೆ ಹೋಗುವುದನ್ನೇ ಶಂಕರಾಚಾರ್ಯರೆಲ್ಲಾ ಬಹಿಷ್ಕರಿಸಿರುವಾಗ ಇನ್ನು ಆದಿವಾಸಿ ವಿಧವಾ ಮಹಿಳೆಯಾಗಿರುವ ರಾಷ್ಟ್ರಪತಿಗಳು ಇವರ ಪವಿತ್ರ ಮೂರ್ತಿಯನ್ನು ಸ್ಪರ್ಶಿಸಿ ಪೂಜಾ ಕೈಂಕರ್ಯಗಳನ್ನು ಮಾಡಿದ್ದರೆ ಇಡೀ ಸನಾತನವಾದಿ ವೈದಿಕರು ರೌದ್ರ ತಾಂಡವವಾಡುತ್ತಿದ್ದರು.

ವಿತಂಡವಾದಕ್ಕಿಳಿಯುವ ಈ ಸನಾತನಿಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಕೂಗಾಡುವ ಮೂಲಕ ಎದುರಾಳಿಗಳನ್ನು  ಮಾತಾಡದಂತೆ ತಡೆಯುವ ಈ ಬಿಜೆಪಿ ವಕ್ತಾರರನ್ನು ನಿಯಂತ್ರಿಸಲು ತಾತ್ವಿಕವಾಗಿ ಹಾಗೂ ತಾರ್ಕಿಕವಾಗಿ ವಾದ ಮಂಡಿಸುವಂತಹ ವಕ್ತಾರರು ನಿಜಕ್ಕೂ ಬೇಕಾಗಿದ್ದಾರೆ. ಎಲ್ಲಾ ಪಕ್ಷಗಳ ಎಲ್ಲಾ ವಕ್ತಾರರೂ ಅಸಮರ್ಥರು ಅಂತ ಹೇಳಲಾಗುವುದಿಲ್ಲ. ಕೆಲವರು ಒಳ್ಳೆಯ ವಾಗ್ಮಿಗಳೂ ಹಾಗೂ ವಿಷಯಗಳ ಆಳ ಅಗಲ ಅರಿತವರೂ ಇದ್ದಾರೆ. ಆದರೆ ಅವರಿಗೆ ಆಯಾ ಪಕ್ಷಗಳು ಸೈದ್ಧಾಂತಿಕ ಚೌಕಟ್ಟು ಹಾಗೂ ಹಲವಾರು ಕಟ್ಟು ಪಾಡುಗಳನ್ನು ಹಾಕಿರುತ್ತವೆ. ಕ್ಯಾಮರಾ ಆನ್ ಆದಾಗ ಆ ವಕ್ತಾರರು ಮಾಡಿಕೊಳ್ಳುವ ಸಮರ್ಥನೆಗಳು ಆಫ್ ದಿ ಕ್ಯಾಮರಾ ಆದಾಗ ಬೇರೆಯಾಗಿರುತ್ತವೆ. “ಏನು ಮಾಡೋದು ಸರ್, ಒಂದು ಪಕ್ಷದ ಪರವಾಗಿ ಬಂದಾಗ ಆ ಪಕ್ಷದ ನಿಲುವುಗಳನ್ನು ಸಮರ್ಥಿಸಿಕೊಳ್ಳಲೇ ಬೇಕಾಗುತ್ತದೆ” ಎಂದು ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಿದೆ. ಕೆಲವೊಮ್ಮೆ ಅವರ ವೈಯಕ್ತಿಕ ಅನಿಸಿಕೆಗಳ ವಿರುದ್ಧವಾಗಿ ತಾವು ಪ್ರತಿನಿಧಿಸುವ ಪಕ್ಷಗಳ ಪರವಾಗಿ ವಾದಿಸಲೇ ಬೇಕಾದ ಅನಿವಾರ್ಯತೆ ಪಕ್ಷಗಳ ವಕ್ತಾರರದ್ದಾಗಿದೆ.

ಎಷ್ಟೋ ಸಲ ರಂಪಾಟ ಕೂಗಾಟಗಳಿಗೆ ವೇದಿಕೆಯಾಗುವ ಮಾಧ್ಯಮಗಳ ಚರ್ಚೆಗಳಿಗೆ ಹೋಗಲೇಬಾರದೆಂದು ನಾನು ನಿರ್ಧರಿಸಿದ್ದೆ. ಆದರೆ ರಾಜಕೀಯ ಪಕ್ಷಗಳ ನಡುವೆ ಸಾಂಸ್ಕೃತಿಕ ಪ್ರತಿರೋಧ ತೋರಲು, ವೈಚಾರಿಕ ವಾದ ಮಂಡಿಸಲು ಈ ಸುದ್ದಿ ಮಾಧ್ಯಮಗಳ ಚರ್ಚಾ ವೇದಿಕೆ ಸೂಕ್ತವೆಂದುಕೊಂಡು ಮತ್ತೆ ಮತ್ತೆ ಆಹ್ವಾನಿಸಿದ ಸುದ್ದಿ ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಲೇ ಇರುತ್ತೇನೆ.

ನನ್ನ ಐದಾರು ವರ್ಷಗಳ ಚರ್ಚಾ ಅನುಭವದಲ್ಲಿ ಹೇಳಬೇಕೆಂದರೆ ರಾಜಕೀಯ ಪಕ್ಷಗಳ ವಕ್ತಾರರಿಗೆ ಆಯಾ ಪಕ್ಷಗಳು ತರಬೇತಿ ಕಾರ್ಯಾಗಾರಗಳನ್ನು ಕಾಲಕಾಲಕ್ಕೆ ಆಯೋಜಿಸಬೇಕಿದೆ. ಕೂಗಾಟ ಹಾರಾಟಗಳನ್ನು ಬಿಟ್ಟು ತಮ್ಮ ಪಕ್ಷದ ನಿಲುವಿನ ಪ್ರಕಾರವೇ ವಿಷಯವನ್ನು ಹೇಗೆ ಮಂಡಿಸಬೇಕು ಎನ್ನುವುದನ್ನು ಹೇಳಿಕೊಡಬೇಕಿದೆ. ಒಬ್ಬರು ಅವರಿಗೆ ಕೊಟ್ಟ ಸಮಯದಲ್ಲಿ ಮಾತಾಡುವಾಗ ಮಧ್ಯದಲ್ಲಿ ಬಾಯಿಹಾಕಿ ವಿಷಯಾಂತರ ಮಾಡಬಾರದು ಎಂದು ಕಲಿಸಿಕೊಡಬೇಕಿದೆ. ಮತ್ತೊಬ್ಬರ ಅನಿಸಿಕೆಗಳು ಅದೆಷ್ಟೇ ಅಸಹನೀಯವಾಗಿದ್ದರೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರಿವಿಸುತ್ತಲೇ ತಮಗೆ ಕೊಟ್ಟ ಸಮಯದಲ್ಲಿ ತಮ್ಮ ಅಭಿಪ್ರಾಯಬೇಧಗಳನ್ನು ವ್ಯಕ್ತಪಡಿಸುವ ರೀತಿಯನ್ನು ತಿಳಿಸಿಕೊಡಬೇಕಿದೆ. ಹಾಗಾದಾಗ ಯಾವುದೇ ಪ್ಯಾನಲ್ ಚರ್ಚೆ ಬರೀ ವಾದ ವಿತಂಡವಾದವಾಗದೇ ಸಂವಾದವಾಗಲು ಸಾಧ್ಯವಿದೆ. ವೀಕ್ಷಕರನ್ನು ಆಲೋಚನೆಗೆ ಹಚ್ಚಲು ಸಂವಾದದ ಅಗತ್ಯವಿದೆ. ಮಾಧ್ಯಮಗಳ ನಿರೂಪಕರೂ ಈ ನಿಟ್ಟಿನಲ್ಲಿ ಸಂವಾದದ ಮಾರ್ಗಸೂಚಿಯನ್ನು ಪ್ರತಿಯೊಬ್ಬ ಪ್ಯಾನಲಿಸ್ಟ್ ಗಳಿಗೆ ಮುಂಚಿತವಾಗಿ ತಿಳಿಸಿದರೆ ಇನ್ನಷ್ಟು ಸಮರ್ಥವಾಗಿ ಚರ್ಚೆಯನ್ನು ನಿಭಾಯಿಸಬಹುದಾಗಿದೆ. ಸೈದ್ದಾಂತಿಕವಾಗಿ ತರಬೇತಾದ ವಕ್ತಾರರು ಇದ್ದಿದ್ದೆ ಆದರೆ ಹೀಗೆ ಪ್ಯಾನಲ್ ಚರ್ಚೆಗಳಿಂದ ಯಾವುದೇ ಪಕ್ಷದವರು ಚರ್ಚೆಯ ಹೊಣೆಗಾರಿಕೆಯಿಂದ ಹಿಂದೆ ಸರಿಯುವ ಅಗತ್ಯವೇ ಬರುವುದಿಲ್ಲ. ವೀಕ್ಷಿಸುವ ಜನರೂ ಚಾನೆಲ್ ಬದಲಿಸುವ ಸಾಧ್ಯತೆಯೂ ಇಲ್ಲ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

ಇದನ್ನೂ ಓದಿ- ‘ರಾಮ’ಯಾತ್ರೆ V/s  ‘ನ್ಯಾಯ’ಯಾತ್ರೆ: ಇತಿಹಾಸ ಕಲಿಸುವ ಪಾಠವೇನು?

More articles

Latest article