Thursday, May 23, 2024

‘ರಾಮ’ಯಾತ್ರೆ V/s  ‘ನ್ಯಾಯ’ಯಾತ್ರೆ: ಇತಿಹಾಸ ಕಲಿಸುವ ಪಾಠವೇನು?

Most read

ದೇಶದಲ್ಲೀಗ ಏಕಕಾಲದಲ್ಲಿ ಎರಡು ಬೃಹತ್ ರಾಜಕೀಯ ಯಾತ್ರೆಗಳು ನಡೆಯುತ್ತಿವೆ. ಒಂದು ಯಾತ್ರೆ ರಾಮನ ಹೆಸರಿನಲ್ಲಿ ನಡೆಯುತ್ತಿದ್ದರೆ ಮತ್ತೊಂದು ನ್ಯಾಯದ ಹೆಸರಿನಲ್ಲಿ. ರಾಮನ ಹೆಸರಿನ ರಾಜಕೀಯ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಾಳಾಗಿದ್ದರೆ ನ್ಯಾಯದ ಹೆಸರಿನ ರಾಜಕೀಯ ಯಾತ್ರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಾಳು. ಈ ಎರಡೂ ರಾಜಕೀಯ ಕಾರ್ಯಕ್ರಮಗಳಲ್ಲಿರುವ ಒಂದು ಪ್ರಮುಖ ವ್ಯತ್ಯಾಸವೇನೆಂದರೆ ರಾಮನ ಹೆಸರಿನಲ್ಲಿ ನಡೆಯುತ್ತಿರುವ ಯಾತ್ರೆ ಧಾರ್ಮಿಕ ಮುಸುಕು ಹೊದ್ದುಕೊಂಡಿದ್ದು ಸಾಮಾನ್ಯ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಇರಾದೆ ಹೊಂದಿದೆ. ಆದರೆ ಮತ್ತೊಂದೆಡೆ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಅಂತಹ ಯಾವುದೇ ಮುಸುಕು ಹೊಂದಿಲ್ಲ. ಜನರನ್ನು ದೇಶದ ಜ್ವಲಂತ ಇಶ್ಯೂಗಳ ಕುರಿತಾಗಿ ಯೋಚಿಸುವಂತೆ, ಮಾತಾಡುವಂತೆ ಮಾಡುವ ಇರಾದೆ ಇದಕ್ಕಿದೆ. ಈ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆದಿದ್ದ ಭಾರತ್ ಜೋಡೋ ಯಾತ್ರೆ ದೇಶದ ಜನರ ನಡುವೆ ವಿಶ್ವಾಸ ಮೂಡಿಸುವ ಉದ್ದೇಶ ಹೊಂದಿತ್ತು. ಇದೀಗ ಮಣಿಪುರದಿಂದ ಗುಜರಾತ್ ವರೆಗೆ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗಾಂಧಿ ದೇಶದ ಸಮಸ್ಯೆಗಳ ಕುರಿತು ಮಾತಾಡುತ್ತಿದ್ದಾರೆ. ಹಿಂದಿನಂತೆ ಈಗಲೂ ಜನಪ್ರವಾಹವೇ ಹರಿದು ಬಂದು ಹೋದೆಡೆಯೆಲ್ಲಾ ಒಂದು ಸಂಚಲನ ಮೂಡುತ್ತಿದೆ.

 ಆದರೆ ಯಾವ ಯಾತ್ರೆ ದೇಶದ ಜನಸಾಮಾನ್ಯನ ಮನಸ್ಸನ್ನು ತಟ್ಟುತ್ತದೆ? ಯಾವ ಯಾತ್ರೆ ಸಾಮಾನ್ಯ ಭಾರತೀಯನ ಬದುಕನ್ನು ಹಸನು ಮಾಡಬಲ್ಲದು? ಯಾವ ಯಾತ್ರೆ ದೇಶದ ಏಳಿಗೆಗೆ ಪೂರಕವಾಗಬಲ್ಲದು? ಯಾವ ಯಾತ್ರೆ ದೇಶದಲ್ಲಿ ನೆಮ್ಮದಿಯ ಬದುಕನ್ನು ಖಾತ್ರಿಗೊಳಿಸಬಲ್ಲದು? ಇನ್ನೇನು ಲೋಕಸಭಾ ಚುನಾವಣೆಗೆ ತಿಂಗಳುಗಳು ಬಾಕಿಯಿರುವಾಗ ದೇಶದ ಸಾಮಾನ್ಯ ಜನ ಮೇಲಿನ ಎರಡು ಯಾತ್ರೆಗಳಲ್ಲಿ ಯಾವುದರಿಂದ ಪ್ರೇರಣೆ ಪಡೆಯುತ್ತಾರೆ ಎಂಬುದು ದೇಶದ ಮುಂದಿನ ಸಧ್ಯಭವಿಷ್ಯವನ್ನು ನಿರ್ಧರಿಸಲಿದೆ.

ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಟಾ ಕಾರ್ಯಕ್ರಮ ಬಿಜೆಪಿ – ಆರೆಸ್ಸೆಸ್ ಸಂಘಪರಿವಾರದ ದ್ವೇಷ ರಾಜಕಾರಣದ ಫಲ. 90ರಲ್ಲಿ ಅಡ್ವಾಣಿಯ ರಥಯಾತ್ರೆಯಿಂದ ಆರಂಭಗೊಂಡಿದ್ದ ಈ ರಾಜಕೀಯ ದಂಡಯಾತ್ರೆ ಈ ದೇಶದಲ್ಲಿ ಹುಟ್ಟು ಹಾಕಿದ ಹಿಂಸೆ, ಸಾವು ನೋವು, ಅಧೋಗತಿ, ಕಂದಕಗಳು ಅಷ್ಟಿಷ್ಟಲ್ಲ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇರುವ ಜಾಗವೇ ರಾಮನ ಜನ್ಮಸ್ಥಳ ಎಂದು ಎಲ್ಲೂ ನಿರೂಪಿತವಾಗಿಲ್ಲ. ರಾಮಜನ್ಮಭೂಮಿ ವಿವಾದದ ಆರಂಭ ಕಾಲದಲ್ಲಿ ವಿಶ್ವ ಹಿಂದೂ ಪರಿಷತ್ ಮುಂದೆ ಮಾಡಿದ್ದ ಸ್ಕಂದ ಪುರಾಣವಾಗಲೀ, ಅಯೋಧ್ಯೆ ಮಹಾತ್ಮೆಯಾಗಲೀ ಹೇಳುವ ರಾಮ ಜನ್ಮ ಭೂಮಿಗೂ ಬಾಬರಿ ಮಸೀದಿಗೂ ತಾಳಮೇಳವಿಲ್ಲ. ಇದುವರೆಗೆ ನಡೆದಿರುವ ಪುರಾತತ್ವ ಅಧ್ಯಯನಗಳೂ ಇದನ್ನು ಸಾಬೀತು ಮಾಡಲಿಲ್ಲ. 1949ರ ಡಿಸೆಂಬರ್ 22-23ರಂದು ರಾತ್ರೋ ರಾತ್ರಿ ಮಸೀದಿಯ ಒಳಗೆ ರಾಮಲಲ್ಲಾ ವಿಗ್ರಹ ಕಾಣಿಸಿಕೊಂಡಿದ್ದು ಒಂದು ಹುನ್ನಾರವಾಗಿದ್ದನ್ನು ನಂತರದ ತನಿಖೆಗಳು ಬಯಲು ಮಾಡಿದ್ದವು. 1980ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಬಾಬರಿ ಮಸೀದಿ ಕೆಡವಿ ರಾಮ ಮಂದಿರ ಕಟ್ಟಬೇಕು ಎಂಬ ಬೇಡಿಕೆ ತಂದಿತು. ಇದನ್ನು ಒಂದು ರಾಷ್ಟ್ರಮಟ್ಟದ ಆಂದೋಲನವಾಗಿಸಿತು. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಈ ವಿವಾದ 1989ರಲ್ಲಿ ಬಿಜೆಪಿಗೆ ಲೋಕಸಭೆಯಲ್ಲಿ 86 ಸೀಟುಗಳನ್ನು ಗೆಲ್ಲಿಸಿಕೊಟ್ಟಿತು. 1984ರಲ್ಲಿ ಬಿಜೆಪಿಗೆ ಇದ್ದಿದ್ದು ಕೇವಲ ಬೆರಳೆಣಿಕೆಯ ಸಂಸದರು.

1990ರಲ್ಲಿ ವಿಪಿ ಸಿಂಗ್ ಸರ್ಕಾರ ಮಂಡಲ್ ಆಯೋಗದ ವರದಿಯ ಪ್ರಕಾರ ಹಿಂದುಳಿದ ಜಾತಿಗಳಿಗೆ ಉದ್ಯೋಗದಲ್ಲಿ 27% ಮೀಸಲಾತಿ ಕಲ್ಪಿಸಲು ಮುಂದಾಯಿತು. ಇದು ದೇಶದ ಶೂದ್ರವರ್ಗದಲ್ಲಿ ತರಬಹುದಾದ ಸಾಮಾಜಿಕ ಆರ್ಥಿಕ ಬಲ ಮತ್ತು ಜಾಗೃತಿಯನ್ನು ಮನಗಂಡೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)  ಮತ್ತು ಬಿಜೆಪಿ  (BJP) 1990ರ ಸೆಪ್ಟೆಂಬರ್ 12ರಂದು ರಥಯಾತ್ರೆಯನ್ನು ಘೋಷಿಸಿ ಸೆಪ್ಟೆಂಬರ್ 25ರಂದು ಚಾಲನೆ ನೀಡಿದ್ದವು. ಇದಕ್ಕೆ ಮೊದಲು ಮಂಡಲ್ ವರದಿ ವಿರುದ್ಧ ದೇಶದಾದ್ಯಂತ ಆಕ್ರೋಶವನ್ನೂ ಇದೇ ಶಕ್ತಿಗಳು ಹುಟ್ಟುಹಾಕಿದ್ದವು. ಹಿಂದುಳಿದ ಜಾತಿಗಳೇ ತಮ್ಮದೇ ಹಿತಕ್ಕೆ ವಿರುದ್ಧವಾಗಿ ತಾವೇ ಬೀದಿಗೆ ಇಳಿಯುವಂತೆ ಮಾಡಿದ್ದವು. ಇದರ ಮುಂದುವರಿದ ಭಾಗವಾಗಿಯೇ ಅಯೋಧ್ಯಾ ರಥಯಾತ್ರೆ ನಡೆಸಿ ಜನರ ಆಕ್ರೋಶ ಮುಸ್ಲಿಮರ ವಿರುದ್ಧ ತಿರುಗುವಂತೆ ಮಾಡಿದ್ದರು. ಈ ರಥಯಾತ್ರೆ ಹೋದಲ್ಲೆಲ್ಲಾ ಭಜರಂಗದಳ, ವಿ ಹೆಚ್ ಪಿ ಕಾರ್ಯಕರ್ತರಲ್ಲಿ ಮಿಲಿಟೆಂಟ್ ಭಾವನೆ ತುಂಬಿತು. ಪರಿಣಾಮವಾಗಿ ಅಕ್ಟೋಬರ್ ತಿಂಗಳಿನಲ್ಲಿ ನೂರಾರು ಕೋಮುಗಲಭೆಗಳು ನಡೆದು ಸಾವು ನೋವುಗಳು ಬಂಧನಗಳು ನಡೆದವು. ಇದು ಸೃಷ್ಟಿಸಿದ ದ್ವೇಷದ ಫಲವಾಗಿ ಮರುವರ್ಷ ಅಂದರೆ 1991ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನಂತರದಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. ಮತ್ತೆ 1992ರಲ್ಲಿ ಲಕ್ಷಾಂತರ ಸಂಘಪರಿವಾರದ ಕಾರ್ಯಕರ್ತರನ್ನು ಅಯೋಧ್ಯೆಗೆ ತೆರಳುವಂತೆ ಮಾಡಿ ಬಾಬರಿ ಮಸೀದಿ ಕೆಡವಲಾಯ್ತು. ಇಡೀ ದೇಶದ ಇತಿಹಾಸದಲ್ಲಿ ಕೋಮು ಧ್ರುವೀಕರಣಕ್ಕೆ ಈ ಅಯೋಧ್ಯೆ ವಿವಾದ ನೀರು ಗೊಬ್ಬರ ಒದಗಿಸಿತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ-ಮುಸ್ಲಿಂರನ್ನು ಇಬ್ಬಾಗ ಮಾಡಿ ದೇಶ ಆಳಿದ್ದಕ್ಕಿಂತಲೂ ಪರಿಣಾಮಕಾರಿಯಾಗಿ ತಾವು ಮಾಡಿ ತೋರಿಸಬಲ್ಲೆವು ಎಂದು ಬಿಜೆಪಿ-ಆರೆಸ್ಸೆಸ್ ಸಂಘಪರಿವಾರ ತೋರಿಸಿತು. ದುರಂತವೆಂದರೆ ನ್ಯಾಯಾಲಯದ ಮೆಟ್ಟಿಲೇರಿದ್ದ ಅಯೋಧ್ಯಾ ರಾಮ ಮಂದಿರ ವಿವಾದವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಾದೀಶರು ಬಗೆಹರಿಸಿದ್ದು ಶತಮಾನದ ನ್ಯಾಯಿಕ ದುರಂತವೆಂದೇ ಹೇಳಬೇಕು. ಯಾವುದೇ ನ್ಯಾಯತತ್ವವನ್ನು ಹಾಗೂ ವಾಸ್ತವಾಂಶ, ಸಾಕ್ಷಿ ಪುರಾವೆಗಳನ್ನು ಗಾಳಿಗೆ ತೂರಿ ನ್ಯಾಯತತ್ವಕ್ಕೇ ಅಪಚಾರ ಬಗೆದ ತೀರ್ಪು ಇದಾಯಿತು.

ಕಳೆದ ಈ ಮೂರು ದಶಕಗಳಲ್ಲಿ ದೇಶದಲ್ಲಿ ಸಾಕಷ್ಟು ನೀರು ಹರಿದಿದೆ. ದ್ವೇಷ , ಕೋಮು ಭಾವನೆ, ಮುಸ್ಲಿಂ ದ್ವೇಷ, ಹುಸಿ ರಾಷ್ಟ್ರೀಯತೆ, ಮತೀಯ ದುರಭಿಮಾನ ಭಾರತೀಯರ ನರನಾಡಿಗಳಲ್ಲಿ ಹರಿಯುವಂತೆ ಮಾಡಲಾಗಿದೆ. ಇಂತಹ ಹೊತ್ತಿನಲ್ಲಿ ಮತ್ತೊಂದು ಚುನಾವಣೆ ಎದುರಾಗಿದೆ. ಈಗ ಮತ್ತೆ ಅದೇ ರಾಮನ ಹೆಸರಿನ ರಾಜಕಾರಣ ಜೋರಾಗಿ ನಡೆಯುತ್ತಿದೆ.

ಕಳೆದ ಎರಡು ಚುನಾವಣೆಗಳಲ್ಲಿ ದೇಶದ ಜನರು ತಾವೆಷ್ಟು ಮೂರ್ಖರು ಎಂದು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ. 2014ರ ಚುನಾವಣೆಯಲ್ಲಿ ಈ ದೇಶವನ್ನು ಉದ್ದಾರ ಮಾಡಲೆಂದೇ ‘ಮೋದಿ’ ಬಂದಿದ್ದಾನೆ ಎಂದು ನಂಬಿಕೊಂಡಿದ್ದರು. ಮೋದಿಯನ್ನು ಪ್ರಧಾನಿಯಾಗಿಯೂ ಮಾಡಿದರು. ಆದರೆ ತಾವೆಂತಾ ಮುಟ್ಟಾಳರು ಎಂದು ಅವರಿಗೆ ಅರಿವಾಗುವ ಅನೇಕ ಘಟನೆಗಳು ದೇಶದಲ್ಲಿ ನಡೆದವು. ನೋಟ್ ಬ್ಯಾನ್ ನಡೆದು ಸಾಮಾನ್ಯ ಜನರು ಹೈರಾಣಾದರು, ದೇಶದ ಆರ್ಥಿಕತೆ ಕುಸಿಯತೊಡಗಿತು. ಮತ್ತೆ ಅವೈಜ್ಞಾನಿಕ ಜಿ ಎಸ್ ಟಿ ಜಾರಿಗೊಂಡು ಮತ್ತೊಂದು ಬರೆ ಬಿದ್ದಿತು. ರೈತ ವಿರೋಧಿ ಕರಾಳ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು; ಕಾಶ್ಮೀರದ ಬಾಲೆಯ ಸಾಮೂಹಿಕ ಅತ್ಯಾಚಾರ, ಗುಜರಾತಿನ ದಲಿತರನ್ನು ವಾಹನಕ್ಕೆ ಕಟ್ಟಿ ಬರಿಬೆನ್ನಿನ ಮೇಲೆ ಬಡಿಯುತ್ತಾ ದರದರನೆ ಎಳೆದಿದ್ದು, ಹತ್ರಾಸ್ ದಲಿತ ಬಾಲಕಿಯ ಅತ್ಯಾಚಾರ ಮತ್ತು ಅಪರಾಧಿಗಳ ರಕ್ಷಣೆ, ಉತ್ತರ ಪ್ರದೇಶದ ಮತೀಯ ಎನ್ ಕೌಂಟರುಗಳು, ಕುಸ್ತಿಪಟು ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಣಿಪುರದ ಹಿಂಸಾಚಾರ, ಬಿಲ್ಕಿನ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ, ರಾಜ್ಯಗಳಿಗೆ ಹಣ ಹಂಚಿಕೆಯಲ್ಲಿ ಅನ್ಯಾಯ, ಕರಾಳ ಕಾರ್ಮಿಕ ಕಾನೂನುಗಳ ಜಾರಿ, ಕಾಶ್ಮೀರದ ರಾಜ್ಯದ ಸ್ಥಾನಮಾನ ರದ್ದತಿ, ಲವ್ ಜಿಹಾದ್ ಸುಳ್ಳುಪ್ರಚಾರ, ಹಲಾಲ್ , ಹಿಜಾಬ್ ವಿವಾದಗಳು, ಕೊವಿಡ್ ಸಮಯದಲ್ಲಿ ಸರ್ಕಾರ ಹೊಣೆಗೇಡಿತನದಿಂದ ಉಂಟಾದ ಲಕ್ಷಾಂತರ ಜನರ ಸಾವುಗಳು, ರಾಜಕೀಯ ಪ್ರೇರಿತ ಇಡಿ ದಾಳಿಗಳು, ಮೀಸಲಾತಿ ದುರ್ಬಲಗೊಳಿಸುವ EWS 10% ಮೀಸಲಾತಿ ಜಾರಿ, ಜನರ ಸಂಕಷ್ಟದ ಸಮಯದಲ್ಲಿ ಪ್ರಧಾನಿಯ ಮೌನ, ವಿದೇಶಿ ಪ್ರವಾಸದ ಖಯಾಲಿ, ಭಾರತ-ಚೀನಾ ಗಡಿ ಭಾಗದಲ್ಲಿ ಚೀನಾದ ದಬ್ಬಾಳಿಕೆ, ಪುಲ್ವಾಮಾ ದಾಳಿಯ ಸೈನಿಕರ ಸಾವು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಡುಗೆ ಸಿಲಿಂಡರ್ ಬೆಲೆ ಏರಿಕೆ … ಇವೇ ಅಲ್ಲವೇ ಕಳೆದ 10 ವರ್ಷಗಳಲ್ಲಿ ಈ ದೇಶ ಕಂಡಿರುವುದು? ಈ ನಡುವೆ ಸಾಮಾನ್ಯ ಭಾರತೀಯನ ಆದಾಯ ಮತ್ತು ಚಿಕ್ಕಪುಟ್ಟ ಉದ್ದಿಮೆಗಳು ಕುಸಿತ ಕಂಡಿದ್ದರೆ ಅದೇ ವೇಳೆಯಲ್ಲಿ ಅಂಬಾನಿ- ಆದಾನಿಗಳ ವರಮಾನ ನಾಲ್ಕೈದು ಪಟ್ಟು ಹೆಚ್ಚಿರುವುದು ಎಂತಾ ಸೋಜಿಗವಲ್ಲವೆ?

ದೇಶದ ಸಂಪತ್ತಿನ ಸಮಾನ ಹಂಚಿಕೆ ಆಗಬೇಕೆಂದು ಈ ದೇಶ ಕಟ್ಟಿದ ಎಲ್ಲಾ ದಾರ್ಶನಿಕರ, ನಾಯಕರ ಆದರ್ಶವಾಗಿತ್ತು. ಸರ್ಕಾರಗಳಿಗೂ ಈ ಬಾಧ್ಯತೆಯನ್ನು ಸಂವಿಧಾನದ ಮೂಲಕ ಹೇರಿಕೊಂಡಿದ್ದೇವೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ದೇಶ ಈ ಆದರ್ಶಕ್ಕೆ ಸಂಪೂರ್ಣ ತದ್ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವುದು ಪ್ರತಿ ಭಾರತೀಯನ ಅನುಭವಕ್ಕೆ ಬಂದಿದೆ. ಈ ಅನುಭವ ಪ್ರಜ್ಞೆಗೆ ಜಾರುವ ಮೊದಲೇ ಅವನನ್ನು ಪ್ರಜ್ಞಾಹೀನನನ್ನಾಗಿ ಮಾಡಬೇಕೆಂದರೆ ಅದಕ್ಕೆ ಆ ‘ರಾಮ’ನೇ ಬೇಕು. ಜನರು ಪ್ರಜ್ಞೆ ಕಳೆದುಕೊಳ್ಳುವುದು ಮಾತ್ರವಲ್ಲ, ಆವೇಶ ಭರಿತರಾಗಬೇಕು, ಆಕ್ರೋಶಿತರಾಗಬೇಕು ಈ ದೇಶ ತಲುಪಿರುವ ಸ್ಥಿತಿಯ ಕುರಿತು ಅಲ್ಲ, ನೆರೆಹೊರೆಯ ಮುಸ್ಲಿಮರ ಮೇಲೆ, ಕ್ರೈಸ್ತರ ಮೇಲೆ. ‘ಹಿಂದೂ ರಾಷ್ಟ್ರ ನಿರ್ಮಾಣದ’ ಭಾವುಕತೆಯನ್ನೇ ತುಂಬಿಕೊಂಡ ‘ಹಿಂದೂ’ ಮತದಾರ ಮತ್ತೆ ‘ಮೋದಿ’ಗೆ ಮತ ಚಲಾಯಿಸಬೇಕು. ಮತ್ತೊಮ್ಮೆ ಮೋದಿ ಬಂದರೆ ಮುಂದಿನ 100 ವರ್ಷಗಳಿಗೆ ಈ ದೇಶದ ಬಹುಜನರನ್ನು ದಾಸ್ಯಕ್ಕೆ ತಳ್ಳುವುದು ಕಷ್ಟವೇನಲ್ಲ. ಇದುವೇ ದೇಶದಲ್ಲಿ ಬಲಪಂಥೀಯ ಸಂಘಟನೆಗಳು ಹಿಂದುತ್ವ ರಾಜಕಾರಣದ ಹೆಸರಿನಲ್ಲಿ, ಸಾಂಸ್ಕೃತಿಕ ರಾಷ್ಟ್ರವಾದದ ಹೆಸರಿನಲ್ಲಿ ನಿರಂತರವಾಗಿ ಮಾಡಿಕೊಂಡು ಬಂದ ಮಸಲತ್ತು.

ಇಂತಹ ಹೊತ್ತಿನಲ್ಲಿ ಜನರು “ನ್ಯಾಯ” ನೀತಿ ಸಮತೆಯ ಕುರಿತು ಯೋಚಿಸಲಿ; ಧಾರ್ಮಿಕತೆಯ ಭಾವತೀವ್ರತೆಯಲ್ಲಿ ತಮ್ಮ ಬದುಕನ್ನು ಮರೆಯದಿರಲಿ; ಸತ್ಯವನ್ನು ಮರೆಗೆ ಸರಿಸಿ ಮೋಸ, ವಂಚನೆ ಅನ್ಯಾಯಗಳು ಮೆರೆಯುತ್ತಿರುವ ಹೊತ್ತಿನಲ್ಲಿ ಜನರನ್ನು ಕಾಡುತ್ತಿರುವ ನಿಜ ಜೀವನದ ಸಮಸ್ಯೆಗಳು ಚುನಾವಣೆಯ ವಿಷಯಗಳಾಗಲಿ; ಭಾವನಾತ್ಮಕ ರಾಜಕಾರಣದ ಬೆನ್ನು ಬಿದ್ದು ಭವಿಷ್ಯವನ್ನು ನರಕ ಮಾಡಿಕೊಳ್ಳದಿರಲಿ.  

More articles

Latest article