ನವದೆಹಲಿ: ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ತನಿಖೆ ನಡೆಯುತ್ತಿರುವುದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗಳಿಗೆ ತಿರುಗೇಟು ನೀಡಲು ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಉತ್ಪನ್ನಗಳ ಮೇಲೆ ಮುಂದಿನ 24 ಗಂಟೆಗಳಲ್ಲಿ ಆಮದು ಸುಂಕವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ್ದರು. ಜತೆಗೆ ಭಾರತವು ಅಮೆರಿಕದ ಉತ್ತಮ ವ್ಯಾಪಾರ ಪಾಲುದಾರ ರಾಷ್ಟ್ರವಲ್ಲ ಎಂದೂ ಹೇಳೀದ್ದರು. ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಈ ಬೆದರಿಕೆಗಳಲ್ಲಿ ಮೋದಿ, ಎಎ ಮತ್ತು ರಷ್ಯಾ ತೈಲ ಒಪ್ಪಂದದ ನಡುವಿನ ಹಣಕಾಸಿಗೆ ಸಂಬಂಧಿಸಿದ ಅಂಶವು ಬಹಿರಂಗವಾಗಬೇಕು. ಆದರೆ ಮೋದಿ ಕೈಗಳು ಕಟ್ಟಿಹಾಕಿವೆ. ಭಾರತ ಅರ್ಥ ಮಾಡಿಕೊಳ್ಳಬೇಕು. ಅಮೆರಿಕದಲ್ಲಿ ಅದಾನಿ ವಿರುದ್ಧ ತನಿಖೆ ನಡೆಯುತ್ತಿದೆ. ಆದ್ದರಿಂದ ಅಧ್ಯಕ್ಷ ಟ್ರಂಪ್ ಅವರ ಯಾವುದೇ ಬೆದರಿಕೆಗಳಿಗೆ ತಿರುಗೇಟು ನೀಡಲು ಪ್ರಧಾನಿ ಮೋದಿಗೆ ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.