ಮೈಸೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಸರು ನಿನ್ನೆಯಷ್ಟೆ ಬದಲಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸದಾಗಿ ಜಾರಿಗೆ ಬಂದಿರುವ ಗ್ರೇಟರ್ ಬೆಂಗಳೂರಿಗೆ ಶೀಘ್ರದಲ್ಲೇ ಚುನಾವಣೆ ನಡೆಸುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರಿಗೆ ಶೀಘ್ರವೇ ಚುನಾವಣೆ ಮಾಡುತ್ತೇವೆ. ಸಚಿವ ಸಂಪುಟದಲ್ಲಿ ಎಲ್ಲರೂ ಒಪ್ಪಿದ್ದಾರೆ. ಶೀಘ್ರವೇ ಉಪ ಸಮಿತಿ ರಚಿಸುತ್ತೇವೆ ಎಂದರು.
ಗ್ರೇಟರ್ ಬೆಂಗಳೂರು ಅಲ್ಲ ಕ್ವಾರ್ಟರ್ ಬೆಂಗಳೂರು ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಮೊದಲೇ ವಿರೋಧ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ವಿಪಕ್ಷ ನಾಯಕನಾಗಿ ಅಷ್ಟೂ ಟೀಕೆ ಮಾಡದಿದ್ದರೆ ಹೇಗೆ? ಅವರಿಗೆ ನಾವು ಗೌರವ ಕೊಡುತ್ತೇವೆ. ಆದರೆ ಅವರೇ ಗ್ರೇಟರ್ ಬೆಂಗಳೂರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಯಾಕೆ ಕೊಟ್ಟರು? ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಆಗಿದೆ. ಇವರೆಲ್ಲರೂ ಒಪ್ಪಿದ್ದಾರೆ. ಈಗ ವಿಪಕ್ಷವಾಗಿ ಟೀಕೆ ಮಾಡ್ತಿದಾರೆ. ಅವರ ಕೆಲಸ ಅವರು ಮಾಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.