ಯಾವಾಗ ಎಲ್ಲರಿಗೂ ಸಮಾನತೆ ಕೊಟ್ಟ ಸಂವಿಧಾನ ಅಪಾಯದಲ್ಲಿದೆ ಎಂದು ಗೊತ್ತಾಯಿತೋ, ಧರ್ಮದ್ವೇಷ ರಾಜಕಾರಣದಿಂದ ಜನರ ಬದುಕಿಗೆ ಏನೂ ಪ್ರಯೋಜನ ಇಲ್ಲವೆಂದು ಬಹುಸಂಖ್ಯಾತರಿಗೆ ಅರಿವಾಯಿತೋ, ಆಗ ಇರುವೆಯಂತೆ ಹರಿದ ಜನರ ಶಕ್ತಿ ಮದೋನ್ಮತ್ತ ಆನೆಯನ್ನು ಹಿಡಿದು ಕೆಡವಿ ನಿಯಂತ್ರಣಕ್ಕೆ ಒಳಪಡಿಸಿತು. ಸರ್ವಾಧಿಕಾರಿಯಾಗಿದ್ದ ಮೋದಿಯವರನ್ನು ಬೇರೆ ಪಕ್ಷದವರ ಬೆಂಬಲವಿಲ್ಲದೆ ಸ್ವತಂತ್ರವಾಗಿ ಆಡಳಿತ ನಡೆಸಲಾಗದಂತಹ ದುಸ್ಥಿತಿಗೆ ತರಲಾಯ್ತು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬಿಜೆಪಿ ಜಗತ್ತಿನ ಶ್ರೀಮಂತ ಪಕ್ಷವಾಗಿದ್ದು 2024 ರ ಲೋಕಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿದಿತ್ತು. ಜನಾಭಿಪ್ರಾಯ ರೂಪಿಸುವ ಬಹುತೇಕ ಮಾಧ್ಯಮಗಳನ್ನು ಕೊಂಡುಕೊಳ್ಳಲಾಗಿತ್ತು ಇಲ್ಲವೇ ನಿಯಂತ್ರಣದಲ್ಲಿಟ್ಟುಕೊಳ್ಳಲಾಗಿತ್ತು. ತಮಗೆ ಬೇಕಾದ ಚುನಾವಣಾ ಆಯುಕ್ತರನ್ನೇ ನಿಯೋಜಿಸಲಾಗಿತ್ತು. ಜಗತ್ತಿನ ಅತ್ಯಂತ ಶ್ರೀಮಂತ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಬೃಹತ್ ಬೆಂಬಲವೂ ಇತ್ತು. ಮತಾಂಧತೆಯನ್ನು ತಲೆಯಲ್ಲಿ ತುಂಬಿಕೊಂಡ ಅಂಧಭಕ್ತರ ಸಂಖ್ಯೆ ಕೋಟಿಗಳ ಲೆಕ್ಕದಲ್ಲಿತ್ತು. ಪ್ರಶ್ನಿಸಿದವರ ಹದ್ದುಬಸ್ತಿನಲ್ಲಿಡಲು, ವಿರೋಧಿ ಪಕ್ಷದವರನ್ನು ಜೈಲಿಗಟ್ಟಲು ಐಟಿ, ಈಡಿ, ಎನ್ ಐ ಎ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳ ಸಂಪೂರ್ಣ ನಿಯಂತ್ರಣವೂ ಮೋದಿಯವರ ಬಳಿ ಇತ್ತು. ಜನರನ್ನು ಮರುಳುಮಾಡಲು ಮುದ್ರಣ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಜಾಹೀರಾತುಗಳ ಮಹಾಪೂರವನ್ನೇ ಹರಿಸಲಾಗಿತ್ತು. ಅತೀ ಹೆಚ್ಚು ಜನ ತಂತ್ರಜ್ಞರಿರುವ ಐಟಿ ಸೆಲ್ ವಾರ್ ರೂಂ ಎನ್ನುವ ಫೇಕ್ ನ್ಯೂಸ್ ಫ್ಯಾಕ್ಟರಿ ಸುಳ್ಳು ಸುದ್ದಿಗಳ ಸೃಷ್ಟಿಸಿ ಜನರಲ್ಲಿ ವಿರೋಧ ಪಕ್ಷಗಳವರ ಬಗ್ಗೆ ಅಪಪ್ರಚಾರ ಮಾಡಲು ಸದಾ ಸನ್ನದ್ಧವಾಗಿತ್ತು. ಮೇಲಾಗಿ ಅಂತರ್ಗಾಮಿಯಾಗಿ ಪ್ರಚಾರ ಮಾಡಲು 65 ಲಕ್ಷದಷ್ಟು ಆರೆಸ್ಸೆಸ್ ಕಮಿಟೆಡ್ ಕಾರ್ಯಕರ್ತರ ದಂಡೇ ಕಾರ್ಯಶೀಲವಾಗಿತ್ತು. ಇದರ ಮೇಲೆ ಚಾಣಕ್ಯ ಬಿರುದಾಂಕಿತ ಅಮಿತ್ ಶಾ ರವರ ರಣತಂತ್ರ ಜಾರಿಯಲ್ಲಿತ್ತು. ಎಲ್ಲದಕ್ಕಿಂತಲೂ ಹೆಚ್ಚಾಗಿ ಸ್ವಘೋಷಿತ ದೇವಮಾನವ ಮೋದಿಯವರ ನೇತೃತ್ವವೂ ಇತ್ತು. ಅದರ ಜೊತೆಗೆ ರಾಮನಾಮದ ಅಸ್ತ್ರ, ದೇಶ ಅಪಾಯದಲ್ಲಿದೆ ಎಂಬ ಶಸ್ತ್ರ, ಹಿಂದೂರಾಷ್ಟ್ರ ಸ್ಥಾಪನೆ ಎನ್ನುವ ಬ್ರಹ್ಮಾಸ್ತ್ರ, ಹಿಂದೂಧರ್ಮ ರಕ್ಷಣೆಯ ಸೂಪರ್ ಸಾನಿಕ್ ವೆಪನ್ ಗಳೆಲ್ಲವನ್ನೂ ಪ್ರಯೋಗಿಸಲಾಗಿತ್ತು. ಇಷ್ಟೆಲ್ಲಾ ಇದ್ದ ಮೇಲೆ ಮೋದಿಯವರಿಗೆ ಲೋಕಸಭಾ ಚುನಾವಣೆಯನ್ನು ಚಾರ್ ಸೌ ಪಾರ್ ಮಾಡುವುದು ತುಂಬಾ ಸುಲಭದ ಟಾರ್ಗೆಟ್ ಆಗಿತ್ತು.
ಅದೇ ಮೋದಿ ವಿರೋಧಿ ಪಾಳಯದಲ್ಲಿ ಏನಿತ್ತು? ಕೇಜ್ರಿವಾಲ್ ಹಾಗೂ ಹೇಮಂತ ಸೊರೇನ್ ಎನ್ನುವ ಮುಖ್ಯಮಂತ್ರಿ ಗಳನ್ನು ಸುಳ್ಳು ಕೇಸುಗಳ ಮೇಲೆ ಜೈಲಿಗೆ ಅಟ್ಟಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಮಾಡಲಾಗಿತ್ತು. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಗಳನ್ನು ಸೀಝ್ ಮಾಡಿಸಿ ಚುನಾವಣಾ ಪ್ರಚಾರಕ್ಕೆ ಆರ್ಥಿಕ ಸಂಪನ್ಮೂಲಗಳೇ ಇಲ್ಲದಂತೆ ಮಾಡಲಾಗಿತ್ತು. ವಿರೋಧಿ ಬಣದ ಪ್ರಮುಖ ನಾಯಕರಿಗೆ ಆಮಿಷ ತೋರಿಸಿ ಇಲ್ಲವೇ ತನಿಖೆಯ ಭಯ ಹುಟ್ಟಿಸಿ ಬಿಜೆಪಿ ಪಕ್ಷಕ್ಕೆ ಸೇರಿಸಿ ಕೊಳ್ಳಲಾಗಿತ್ತು. ವಿರೋಧ ಪಕ್ಷಗಳು ಹಾಗೂ ನಾಯಕರುಗಳ ಮೇಲೆ ನಿರಂತರವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರತಿ ಭಾಷಣದಲ್ಲೂ ಸಾರ್ವಜನಿಕವಾಗಿ ನಿಂದಿಸಲಾಗಿತ್ತು. ಪ್ರತಿಪಕ್ಷದ ಬೆಂಬಲಿಗರನ್ನು ದೇಶದ್ರೋಹಿಗಳು ಹಾಗೂ ಧರ್ಮದ್ರೋಹಿಗಳು ಎಂದು ಹಣೆ ಪಟ್ಟಿ ಕಟ್ಟಿ ಅವರ ವಿರುದ್ಧ ಜನರನ್ನು ಎತ್ತಿ ಕಟ್ಟಲಾಗಿತ್ತು. ಕಾಂಗ್ರೆಸ್ ಸರಕಾರ ಬಂದರೆ ಹಿಂದೂಗಳ ಮೀಸಲಾತಿ ಆಸ್ತಿ ಅಷ್ಟೇ ಯಾಕೆ ಮಹಿಳೆಯರ ಮಂಗಳಸೂತ್ರವನ್ನೂ ಕಿತ್ತು ಮುಸಲ್ಮಾನರಿಗೆ ಹಂಚಲಾಗುತ್ತದೆ ಎಂದು ಸ್ವತಃ ಮೋದಿಯವರೇ ಪ್ರಚಾರ ಮಾಡಿಯಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅನಗತ್ಯ ಕೇಸ್ ದಾಖಲಿಸಿ, ಕೋರ್ಟ್ ಕಚೇರಿ ಅಲೆಯುವಂತೆ ಮಾಡಿ ಅಸಾಧ್ಯ ಕಿರುಕುಳ ಕೊಡಲಾಗಿತ್ತು. ಇಂಡಿಯಾ ಒಕ್ಕೂಟದ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸಲಾಯ್ತು. ನೆಹರು ಗಾಂಧಿಯವರನ್ನೂ ಅವಮಾನಿಸಲಾಗಿತ್ತು. ಇಷ್ಟೆಲ್ಲಾ ಆದಮೇಲೆ ಇಂಡಿಯಾ ಒಕ್ಕೂಟ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳೆಲ್ಲಿತ್ತು?
ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಸಲ ಅಚ್ಚರಿಯ ಫಲಿತಾಂಶ ಪ್ರಕಟವಾಗಿತ್ತು. ಭಾರತದ ಜನ ಮತಾಂಧ ಪಕ್ಷವನ್ನು ತಿರಸ್ಕರಿಸಿಯಾಗಿತ್ತು. ಸರಳ ಬಹುಮತಕ್ಕೆ ಅಗತ್ಯವಾದ 272 ಸಂಖ್ಯೆಯನ್ನೂ ದಾಟಲಾಗದೇ ಬಿಜೆಪಿ ಪಕ್ಷ 240 ಕ್ಕೆ ಏದುಸಿರು ಬಿಡುತ್ತಾ ನಿಂತೇ ಬಿಟ್ಟಿತು. ಸರ್ವಾಧಿಕಾರಿಯಂತೆ, ತಾನು ನಡೆದಿದ್ದೇ ದಾರಿ ಎಂಬಂತೆ ನುಗ್ಗುತ್ತಿದ್ದ ಮೋದಿ ಎನ್ನುವ ಆನೆಗೆ ತೀವ್ರ ಮುಖಭಂಗವಾಯಿತು. ಅಯೋಧ್ಯೆಯಲ್ಲಿಯೇ ಬಿಜೆಪಿ ಮಕಾಡೆ ಮಲಗಿತು. NDA ಒಕ್ಕೂಟ ಇರುವುದರಲ್ಲಿಯೇ 58 ಸೀಟುಗಳನ್ನು ಕಳೆದುಕೊಂಡು ಸರಳ ಬಹುಮತಕ್ಕಿಂತ ಕೇವಲ 20 ಸೀಟು ಹೆಚ್ಚುಗಳಿಸಿ ತ್ರಾಸದಾಯಕವಾಗಿ ಸೋಲಿನ ಗಡಿ ದಾಟಿ ನಿಟ್ಟುಸಿರು ಬಿಟ್ಟಿತು. ಬಿಜೆಪಿ ನಂಬಲರ್ಹವಾದ ಎರಡು ಚಿಕ್ಕ ಪ್ರಾದೇಶಿಕ ಪಕ್ಷಗಳ ಕೃಪಾ ಕಟಾಕ್ಷದಲ್ಲಿ ಸರಕಾರ ರಚಿಸಬೇಕಾದ ಅನಿವಾರ್ಯತೆ ಉಂಟಾಯ್ತು.
ಮೋದಿ-ಶಾ ಜೋಡಿ ಒಡ್ಡಿದ ಅಡೆ ತಡೆ ಅನಾನುಕೂಲತೆಗಳ ನಡುವೆಯೂ ಚುನಾವಣಾ ಕಣದಲ್ಲಿ ದಿಟ್ಟವಾಗಿ ಹೋರಾಡಿದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಮೈಕೊಡವಿಕೊಂಡು ಸೆಟೆದೆದ್ದು ನಿಂತು ಕಳೆದ ಸಲಕ್ಕಿಂತಲೂ 140 ಸೀಟುಗಳನ್ನು ಹೆಚ್ಚುವರಿಯಾಗಿ ಗೆದ್ದು ಇಡೀ ಚುನಾವಣೆಯ ಚಿತ್ರಣವನ್ನೇ ಬದಲಾಯಿಸಿತು. ಕಾಂಗ್ರೆಸ್ ಪಕ್ಷ 99 ಸೀಟು ಗೆದ್ದು ಪ್ರಭಲ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಇಂಡಿಯಾ ಒಕ್ಕೂಟಕ್ಕೆ ಒಟ್ಟು 234 ರಲ್ಲಿ ಗೆಲುವಾಗಿತ್ತು.
ಹಣ ಅಧಿಕಾರ ತಂತ್ರಗಾರಿಕೆಗಳಿರುವ ಬಲಾಢ್ಯ ಶಕ್ತಿಯ ಮುಂದೆ ಸೋತು ನಿಸ್ತೇಜವಾಗಿದ್ದ ಪಕ್ಷಗಳ ಒಕ್ಕೂಟ ಅದು ಹೇಗೆ ಸವಾಲಾಗಿ ಎದ್ದು ನಿಂತಿತು? ದ್ವೇಷದ ನಿಗಿನಿಗಿ ಸುಡುವ ಬೆಂಕಿ ಬಜಾರಿನಲ್ಲಿ ತಣ್ಣನೆಯ ಪ್ರೀತಿಯ ಅಂಗಡಿ ಹೇಗೆ ಅಸ್ತಿತ್ವ ಕಂಡುಕೊಂಡಿತು?
ಅದಕ್ಕೆಲ್ಲಾ ಈ ದೇಶದ ಎಚ್ಚೆತ್ತ ಜನರ ವಿವೇಕವೇ ಮುಖ್ಯ ಕಾರಣ. ಯಾವಾಗ ಎಲ್ಲರಿಗೂ ಸಮಾನತೆ ಕೊಟ್ಟ ಸಂವಿಧಾನ ಅಪಾಯದಲ್ಲಿದೆ ಎಂದು ಗೊತ್ತಾಯಿತೋ, ಧರ್ಮದ್ವೇಷ ರಾಜಕಾರಣದಿಂದ ಜನರ ಬದುಕಿಗೆ ಏನೂ ಪ್ರಯೋಜನ ಇಲ್ಲವೆಂದು ಬಹುಸಂಖ್ಯಾತರಿಗೆ ಅರಿವಾಯಿತೋ, ಆಗ ಇರುವೆಯಂತೆ ಹರಿದ ಜನರ ಶಕ್ತಿ ಮದೋನ್ಮತ್ತ ಆನೆಯನ್ನು ಹಿಡಿದು ಕೆಡವಿ ನಿಯಂತ್ರಣಕ್ಕೆ ಒಳಪಡಿಸಿತು. ಸರ್ವಾಧಿಕಾರಿಯಾಗಿದ್ದ ಮೋದಿಯವರನ್ನು ಬೇರೆ ಪಕ್ಷದವರ ಬೆಂಬಲವಿಲ್ಲದೆ ಸ್ವತಂತ್ರವಾಗಿ ಆಡಳಿತ ನಡೆಸಲಾಗದಂತಹ ದುಸ್ಥಿತಿಗೆ ತರಲಾಯ್ತು.
“ಕೋಟೆ ಕಟ್ಟಿ ಮೆರೆದವರೆಲ್ಲಾ ಏನಾದರು, ಜನಶಕ್ತಿಯ ಮುಂದೆ ಧೂಳಾದರು” ಎನ್ನುವಂತೆ ಬಿಜೆಪಿ ಪಕ್ಷವನ್ನು ಸೋಲಿಸಿ, ಮೋದಿ ಎನ್ನುವ ದುರಹಂಕಾರಿಯ ಗರ್ವಭಂಗ ಮಾಡಿದ ಮತಾಂಧರಲ್ಲದ ಮಹಾಜನತೆಗೆ ಧನ್ಯವಾದಗಳು. ಆತ್ಮರತಿ ನಿರತ ಆನೆಗೆ ಅಂಕುಶ ಹಾಕಿ ಪ್ರಜಾಪ್ರಭುತ್ವಕ್ಕೆ ಹಾನಿಯಾಗದಂತೆ ನಿಯಂತ್ರಿಸಿದ ಇಂಡಿಯಾ ಒಕ್ಕೂಟದ ಪಕ್ಷಗಳು ಹಾಗೂ ನಾಯಕರುಗಳಿಗೆ ಅಭಿನಂದನೆಗಳು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ – INDIA ಸೋತಿದೆ ಆದರೆ ಭಾರತ ಗೆದ್ದಿದೆ