ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ವಿರುದ್ಧ ದ್ವೇಷದ ಪೋಸ್ಟ್ : ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲು

Most read

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ದ್ವೇಷದ ಹೇಳಿಕೆ ಟ್ವಿಟ್ ಮಾಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಸಿಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣ ಮೇಲ್ವಿಚಾರಣಾ ಸಮಿತಿಯ ನೋಡಲ್ ಅಧಿಕಾರಿಯ ಸೂಚನೆ ಮೇರೆಗೆ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೆ.ಜಯಲಕ್ಷ್ಮಮ್ಮ ನಗರ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟಿಕರಣ ನೀಡಿರುವ ರಾಜ್ಯ ಚುನಾವಣಾ ಆಯೋಗ, ಸಿ ಟಿ ರವಿಯವರ ಎಕ್ಸ್ ಪೋಸ್ಟ್ ಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಡಿಇಒ ಅವರು ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ 153 ಎ ಮತ್ತು ಆರ್ ಪಿ ಆಕ್ಟ್ 126 ರ ಅಡಿಯಲ್ಲಿ 20.03.24 ರಂದು ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೇಳಿದೆ.

“ಸಿ ಟಿ ರವಿ ಬರಹ ಚುನಾವಣಾ ನೀತಿ ಸಂಹಿತೆಯಡಿ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು” ಎಂದು ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು.

ಸಿ ಟಿ ರವಿ ತಮ್ಮ ಎಕ್ಸ್‌ ಖಾತೆಯಲ್ಲಿ, ಆತ್ಮೀಯ ಹಿಂದೂಗಳೇ, ಕಾಂಗ್ರೆಸ್ ಸಹ ಮಾಲೀಕ ರಾಹುಲ್ ಗಾಂಧಿ ನಮ್ಮ ಹಿಂದೂಗಳ ವಿರುದ್ಧ ಸಮರ ಸಾರಿದ್ದಾರೆ. ಸನಾತನ ಧರ್ಮವನ್ನು ನಾಶಮಾಡಲು ಹೊರಟಿರುವವರಿಂದ ರಕ್ಷಿಸಲು ನಾವು ಒಂದಾಗುವ ಸಮಯ ಬಂದಿದೆ ಎಂದು ೨೦ ಮಾರ್ಚ್ ರಂದು ಟ್ವೀಟ್ ಮಾಡಿದ್ದರು.

ಇದಾದ ನಂತರ ಈಗ, ಸಾಗರದ ಆಳವನ್ನಾದರೂ ಅಳೆಯಬಹುದು, ಆದರೆ ರಾಹುಲ್ ಗಾಂಧಿ ಮನಸಿನಲ್ಲಿ ಹಿಂದೂಗಳು ಮತ್ತು ಹಿಂಧೂ ಧರ್ಮದ ಬಗ್ಗೆ ಇರುವ ದ್ವೇಷವನ್ನು ಅಳೆಯಲಾಗದು. ರಾಹುಲ್ ಗಾಂಧಿ ಅವರು, ಶಕ್ತಿ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ.. ದುಷ್ಟ ಶಕ್ತಿಗಳ ದಾಳಿಯಿಂದ ನಮ್ಮ ಧರ್ಮವನ್ನು ರಕ್ಷಿಸಲು ಹಿಂದೂಗಳು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಿರ್ದಯವಾಗಿ ತೆಗೆದು ಹಾಕಬೇಕು ಎಂದು ಪೋಸ್ಟ್ ಹಾಕಿದ್ದರು.

More articles

Latest article