ಎಡಬಿಡಂಗಿ ಸ್ವಾಮಿಗಳು ಮತ್ತು ಕಂಗೆಡಿಸುತ್ತಿರುವ ಸಂಘಿಗಳು…

Most read

ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಹೇಗೆ ಕಡಿಮೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರಗಳು ತಲೆ ಕೆಡಿಸಿ ಕೊಳ್ಳುತ್ತಿವೆ‌. ಆದರೆ ಈ ಸ್ವಾಮೀಜಿಗಳು ಮಾತ್ರ ಜನಸಂಖ್ಯೆ ಹೆಚ್ಚು ಮಾಡುವುದರಲ್ಲಿ ಮಗ್ನರಾಗಿದ್ದಾರಾ? ಹೀಗಿದ್ದ ಮೇಲೆ ಮಠ ಬಿಟ್ಟು ಮನೆ ಸೇರಬೇಕು. ಅದು ಬಿಟ್ಟು ಮಠದಲ್ಲಿ ಮಾಡಬಾರದ ಕೆಲಸಗಳ ಬಗ್ಗೆ ಮಠಾಧೀಶರಿಗೇಕೆ ಇಷ್ಟು ತುಮುಲ ಎಂಬುದೇ ಅರ್ಥವಾಗುವುದಿಲ್ಲ!  – ರಮೇಶ್‌ ಹಿರೇಜಂಬೂರು, ಹಿರಿಯ ಪತ್ರಕರ್ತರು.

ಸಮಾಜ ಅದ್ಯಾಕೋ ದಿನೇ ದಿನೆ ದಿಕ್ಕುತಪ್ಪುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಜನರಿಗೆ ಮಂಕುಬೂದಿ ಎರಚಿ ಹಿಂದುತ್ವದ ಅಡಿಯಲ್ಲಿ ಅಸಮಾನತೆ ಸೃಷ್ಟಿಸುವ ಹುನ್ನಾರಗಳು‌ ಸದ್ದಿಲ್ಲದೆ ನಡೆಯುತ್ತಿವೆ. ಇದಕ್ಕೆ ಪ್ರತ್ಯಕ್ಷ ಸಾಕ್ಷ್ಯ 3ನೇ ವಿಶ್ವ ಹವ್ಯಕ ಸಮ್ಮೇಳನ!.

ಹೌದು, ಹವ್ಯಕ ಸಮುದಾಯದ ಸಭೆ ಅದೊಂದು ದೊಡ್ಡ ಸಮುದಾಯ ಕಟ್ಟುವ ಸಮ್ಮೇಳನ ಎಂಬುದನ್ನು ಒಪ್ಪಿಕೊಳ್ಳೊಣ. ‌ಇದರ ಹಿಂದಿನ ಅಜೆಂಡಾ ಹಿಂದುತ್ವದ ಪ್ರತಿಪಾದನೆ ಎಂಬುದೂ ಗುಟ್ಟಾಗಿ ಉಳಿದಿಲ್ಲ. ಅದೂ ಸಂಘಿಗಳ ಕೆಲಸ ಎಂದು ಸುಮ್ಮನಿದ್ದು ಬಿಡೋಣ. ಆದರೆ ಅಲ್ಲಿಗೆ ಬಂದ ಸ್ವಯಂ ಘೋಷಿತ ಸನ್ಯಾಸಿ ಸ್ವಾಮೀಜಿಗಳು ಸುಮ್ಮನೆ ಏನಾದರೂ ಮಾತನಾಡಿ‌, ಉಪದೇಶ ಹೇಳಿ ಹೋಗಿದ್ದರೆ ಸಾಕಿತ್ತು. ಬದಲಿಗೆ “3 ರಿಂದ 5 ಮಕ್ಕಳನ್ನು ಪಡೆಯಿರಿ, ನಿಮಗೆ ಮಕ್ಕಳನ್ನು ಸಾಕೋಕೆ ಆಗಿಲ್ಲ ಎಂದರೆ ನಮ್ಮ ಮಠಕ್ಕೆ ಬಿಡಿ” ಎಂದು ಹೇಳಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಸಂಗತಿ. 

ವಿಶ್ವ ಹವ್ಕಕ ಸಮ್ಮೇಳನದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ

ಹೊಸನಗರದ ರಾಘವೇಶ್ವರ ಭಾರತಿ ಸ್ವಾಮೀಜಿಯ ಮೇಲೆ ಈಗಾಗಲೇ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಇವರ ವಿರುದ್ಧರ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಸ್ವತಃ ಹೈಕೋರ್ಟ್ ನ್ಯಾಯಾಧೀಶರೇ ಹಿಂದೆ ಸರಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.‌ ಹೀಗಿರುವಾಗ ಇಂಥವರ ಕೈಗೆ‌ ಮಕ್ಕಳನ್ನು ಹೆತ್ತು ಮಠಕ್ಕೆ ನೀಡಬೇಕೆ? ಅದರಲ್ಲೂ ಹೆಣ್ಣುಮಕ್ಕಳನ್ನು? ಈ ಪ್ರಶ್ನೆಯನ್ನು ಈಗ ಹವ್ಯಕರೇ ಕೇಳುತ್ತಿದ್ದಾರೆ. ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸರಸ್ವತಿ ಸ್ವಾಮೀಜಿ ಕೂಡ ಅದೇ ಮಾತನ್ನು ಉಲ್ಲೇಖಿಸಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಹಾಗೂ ಸಮಾಜವನ್ನು ದಿಕ್ಕು ತಪ್ಪಿಸುವ ಹಾಗೂ ಅಸಮಾನತೆ ಸೃಷ್ಟಿಸುವ ಹುನ್ನಾರವಲ್ಲದೆ ಮತ್ತೇನೂ ಅಲ್ಲ.

ಭಾರತದಲ್ಲಿನ ಜನಸಂಖ್ಯೆ ಈಗ 145 ಕೋಟಿ ದಾಟಿದೆ. ಕರ್ನಾಟಕ ಒಂದರಲ್ಲೇ 7.24 ಕೋಟಿ ಜನಸಂಖ್ಯೆ ಇದೆ. ಇಡೀ ವಿಶ್ವದ ಶೇ.17.79 ರಷ್ಟು ಜನಸಂಖ್ಯೆ ಭಾರತ ಒಂದರಲ್ಲೇ ಇದೆ. ಹೀಗಿದ್ದಮೇಲೆ ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಹೇಗೆ ಕಡಿಮೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರಗಳು ತಲೆ ಕೆಡಿಸಿಕೊಳ್ಳುತ್ತಿವೆ‌. ಆದರೆ ಈ ಸ್ವಾಮೀಜಿಗಳು ಮಾತ್ರ ಜನಸಂಖ್ಯೆ ಹೆಚ್ಚು ಮಾಡುವುದರಲ್ಲಿ ಮಗ್ನರಾಗಿದ್ದಾರಾ? ಹೀಗಿದ್ದ ಮೇಲೆ ಮಠ ಬಿಟ್ಟು ಮನೆ ಸೇರಬೇಕು, ಅದು ಬಿಟ್ಟು ಮಠದಲ್ಲಿ ಮಾಡಬಾರದ ಕೆಲಸಗಳ ಬಗ್ಗೆ ಮಠಾಧೀಶರಿಗೇಕೆ ಇಷ್ಟು ತುಮುಲ ಎಂಬುದೇ ಅರ್ಥವಾಗುವುದಿಲ್ಲ! 

ಹವ್ಯಕ ಸಮ್ಮೇಳನ

ಸರ್ಕಾರಗಳು ಜನಸಂಖ್ಯೆ ಹೆಚ್ಚಾಗಿದೆ, ಹೀಗಾಗಿ ಎಲ್ಲರೂ ಎರಡು ಮಕ್ಕಳಿದ್ದರೆ ಸಾಕು, ಮನೆಗೊಂದು ಮಗು ಸಾಕು ಎಂದು ತೀರ್ಮಾನಿಸುತ್ತಿವೆ. ಇಂತಹ ಹೊತ್ತಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು. ಉತ್ತಮ ಗುಣಮಟ್ಟದ ಜೀವನ ಕಟ್ಟಿಕೊಡಬೇಕು. ಅವರಿಗೆ  ಮೂಲಭೂತ ಸೌಕರ್ಯ ಸೃಷ್ಟಿಸಿ ಕೊಡಬೇಕು. ಸಮಾಜಕ್ಕೆ ಅವರನ್ನು ಉತ್ತಮ ಮಾನವ ಸಂಪನ್ಮೂಲವಾಗಿಸುವ ಹೊಣೆಗಾರಿಗೆ ಸಮಾಜದ ಎಲ್ಲರದ್ದು. ಆದರೆ ಮಠಾಧೀಶರು ಸಮಾಜದ ಅಭಿವೃದ್ಧಿ ಕಡೆಗೆ ಯೋಚಿಸಬೇಕು. ಸಮ ಸಮಾಜ ಕಟ್ಟುವ ಬಗ್ಗೆ, ಜಾತಿ‌ಮತ ಧರ್ಮಗಳ ಆಚೆಗೆ ನಿಂತು ಸಮಾನತೆಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಯೋಚಿಸಬೇಕು. ಆದರೆ ಈ ಇಬ್ಬರು ಹವ್ಯಕ ಸ್ವಾಮೀಜಿಗಳು ಅದ್ಯಾವುದೋ ಒಂದು ರಾಷ್ಟ್ರ ಮಟ್ಟದ ವರದಿ ಓದಿಕೊಂಡು ಬಂದು “ಹವ್ಯಕ ಸಮಾಜ ನಶಿಸುತ್ತಿದೆ. ಜನಸಂಖ್ಯೆ ಕಡಿಮೆ ಆಗುತ್ತಿದೆ. ಇಂದಿನ ಯುವಜನತೆ ಕುಟುಂಬ ವ್ಯವಸ್ಥೆಯಿಂದ ದೂರಾಗುತ್ತಿದೆ” ಎಂದು ಬೊಬ್ಬೆ ಹೊಡೆದಿದ್ದಾರೆ!

ಯುವಜನತೆ ಇಂದು ಸಾಧನೆಯ ಹಾದಿಯ ಕಡೆಗೆ ವಾಲುತ್ತಿರುವುದು ಸುಳ್ಳಲ್ಲ. ಹಾಗಂತ ಯಾರೂ ಸನ್ಯಾಸ ಸ್ವೀಕರಿಸುತ್ತಿಲ್ಲ. ಸಮಾಜದಲ್ಲಿ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಹೆಚ್ಚಾಗುತ್ತಿದೆ ನಿಜ. ಆದರೆ ಅದಕ್ಕೂ ನ್ಯಾಯಾಲಯದ ಅನುಮತಿ ಇದೆ. ಕಾನೂನಿನಲ್ಲಿ ಅವಕಾಶವಿದೆ. ಹಾಗಂದ ಮಾತ್ರಕ್ಕೆ ಎಲ್ಲರೂ ಕುಟುಂಬ ವ್ಯವಸ್ಥೆಯಿಂದ ದೂರಾಗುತ್ತಿಲ್ಲ. ಒಂದು ಮಗುವಿಗೆ ಜನ್ಮ ನೀಡಿದ ನಂತರದ ಅದರ ಶಿಕ್ಷಣ, ಅದರ ಅಗತ್ಯಗಳು, ಅದಕ್ಕೆ ಸಿಗಬೇಕಾದ ಸೌಲಭ್ಯಗಳು ಎಲ್ಲವನ್ನು ಅದರ ತಂದೆ ತಾಯಿ ಕೊಡಲೇಬೇಕು. ಅದು ಅದರ ಮೂಲಭೂತ ಹಕ್ಕು. ಪ್ರತಿಯೊಬ್ಬ ತಂದೆ ತಾಯಂದಿರೂ ಕೂಡ ಎಷ್ಟೇ ಕಷ್ಟವಾದರೂ ತನ್ನ ಮಗುವಿಗೆ ಉತ್ತಮ ಜೀವನ ಸಿಗಬೇಕು ಎಂದೆ ಕನಸು ಕಾಣುತ್ತಾರೆ. ಜೊತೆಗೆ ಆ ಕನಸು ನನಸು ಮಾಡಲಿಕ್ಕೆ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಾರೆ. 

ಅದೇ ಕಾರಣಕ್ಕೆ ಮೊದಲು ಏನಾದರೂ ಸಾಧಿಸಿ, ಬದುಕಿಗೊಂದು ನೆಲೆ ಕಂಡುಕೊಂಡು ಆನಂತರ ಮದುವೆ-ಮಕ್ಕಳ ಬಗ್ಗೆ ಇಂದಿನ ಯುವಜನತೆ ಆಲೋಚಿಸುತ್ತಿದ್ದಾರೆ. ಅದು ತಪ್ಪೂ ಅಲ್ಲ. ಆದರೆ ಅವರ ಕಷ್ಟ ಹಾಗೂ ಜೀವನದ ಪೂರ್ವ ಸಿದ್ಧತೆಗಳನ್ನು ಅರಿಯದ ಈ ಮಠಾಧೀಶರು ಯುವಜನತೆ ಏನೋ ಸಂಪೂರ್ಣವಾಗಿ ಹಾದಿ ತಪ್ಪುತ್ತಿದ್ದಾರೆ ಎನ್ನುವಂತೆ ಮಾತನಾಡಿರುವುದು ಸರಿಯಲ್ಲ. ಜೊತೆಗೆ 18 ವರ್ಷಕ್ಕೇ ಮದುವೆ ಮಾಡಿಕೊಳ್ಳಿ ಎಂದಿರುವುದೂ ಸರಿಯಾದದ್ದಲ್ಲ.

ಕೊನೆಮಾತು: 

ಇಂತಹ ಅವಿವೇಕಿತನದ ಮಾತುಗಳನ್ನು ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರವಿರಲಿ.‌ ಯಾರೂ‌ ಮಕ್ಕಳನ್ನು ಹೆತ್ತು ಇನ್ಯಾರದ್ದೋ ಬಳಿ ಬಿಡಲು ಒಪ್ಪುವುದಿಲ್ಲ. ಅದು ಸಂಸ್ಕಾರವೂ ಅಲ್ಲ; ಸಂಪ್ರದಾಯವೂ ಅಲ್ಲ…


ರಮೇಶ್‌ ಹಿರೇಜಂಬೂರು

ಹಿರಿಯ ಪತ್ರಕರ್ತರು

More articles

Latest article