ದಸರಾ, ಬಾನು ಮುಷ್ತಾಕ್ ಮತ್ತು ನಾಡ ಸಂಸ್ಕೃತಿ‌ -ಭಾಗ-2

Most read

ಬಾನು ಮುಷ್ತಾಕ್ ಕನ್ನಡ ರಾಷ್ಟ್ರೀಯತೆಯನ್ನು ಸಂಕೇತಿಸುವ  ಭುವನೇಶ್ವರಿ ಪ್ರತಿಮೆಯ ಬಗ್ಗೆ ಎತ್ತಿದ್ದ ಒಂದೆರಡು ಮುಖ್ಯ ಪ್ರಶ್ನೆಗಳು ಮತ್ತು ಅವುಗಳ ಸುತ್ತ ನಡೆದ ಅಪಪ್ರಚಾರವನ್ನು ಸಂಸ್ಕೃತಿ ಅಧ್ಯಯನದ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಸಹಾಯಕ ಪ್ರಾಧ್ಯಾಪಕರಾದ ಸಿ.ಬಿ.ಐನಳ್ಳಿ  ಈ  ಲೇಖನದಲ್ಲಿ ಮಾಡಿದ್ದಾರೆ. ಲೇಖನದ ಎರಡನೆಯ ಹಾಗೂ ಕೊನೆಯ ಭಾಗ ಇಲ್ಲಿದೆ.

ಲೇಖನದ ಮೊದಲ ಭಾಗ ಈ ಲಿಂಕ್‌ ನಲ್ಲಿದೆ – ದಸರಾ, ಬಾನು ಮುಷ್ತಾಕ್ ಮತ್ತು ನಾಡ ಸಂಸ್ಕೃತಿ‌

(ಮುಂದುವರಿದುದು…)

ಹೇರಿಕೆಯ ಪರಿಕಲ್ಪನೆಗಳನ್ನು ಸ್ಥಿರೀಕರಿಸುವ ಮಾಧ್ಯಮಗಳು :

ಕನ್ನಡನಾಡು, ಕನ್ನಡ ನುಡಿ, ಕನ್ನಡ ಸಂಸ್ಕೃತಿ ಎಂಬ ಪರಿಕಲ್ಪನೆಗಳು ಎಲ್ಲಾ ಕಾಲದಲ್ಲೂ ತಟಸ್ಥವಾದವುಗಳೇನಲ್ಲ . ಈ ಪರಿಕಲ್ಪನೆಗಳ ನಿರ್ಮಿತಿಯಲ್ಲೇ ಕೆಲವರನ್ನು ಮೇಲಕ್ಕೆ ಏರಿಸುವ ಬಹುತೇಕರನ್ನು ಎತ್ತಿ ಬಿಸಾಡಿ ಕಡೆಗಣಿಸುವ ಯಜಮಾನ್ಯದ ಮೌಲ್ಯಗಳು ಇವೆ. ಮುಖ್ಯ ವಾಹಿನಿಯ ಮಾಧ್ಯಮಗಳು ಇಂಥ ಯಾಜಮಾನ್ಯವನ್ನು ಸ್ಥಿರೀಕರಿಸುವ ಕೆಲಸದಲ್ಲಿ ನಿರತವಾಗಿವೆ.  ಬಾನು ಮುಷ್ತಾಕ್ ಕೇಳಿದ ‘ನಾನು ಎಲ್ಲಿ ನಿಲ್ಲಲಿ?’ ಎಂಬ ಪ್ರಶ್ನೆಯನ್ನು ಈ ನೆಲೆಯಿಂದ ಗ್ರಹಿಸಬೇಕು.  ಬಡವರು  ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಹಿಂದುಳಿದವರು ಅಲೆಮಾರಿಗಳು ಇವರೆಲ್ಲರ ಎದೆಯ ದನಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕರ್ನಾಟಕದ ದನಿಯಾಗಿ ಕೇಳುತ್ತಿದೆಯೇ? ಅವರ ದುಗುಡ ಈ ನಾಡಿನ ದುಗುಡವಾಗಿ ಕಾಣುತ್ತದೆಯೇ? ಎಂಬುದೇ ಅವರ  ಪ್ರಶ್ನೆಯ ವಿಸ್ತೃತ ಆಶಯ.  ಮಾನವೀಯ ಅಂತ:ಕರಣ  ಹೊಂದಿರುವ ಯಾರಾದರೂ ಈ ಪ್ರಶ್ನೆ ಎದುರಾದಾಗ ಒಂದು ಕ್ಷಣ ವಿಚಲಿತಗೊಳ್ಳುವುದು ಸಹಜ. ಆದರೆ, ಕೂಗುಮಾರಿಗಳಂತೆ ಕೇಕೆ ಹಾಕಿ ಅದನ್ನೇ ಕೋಮುದ್ವೇಷದ ಸೃಷ್ಟಿಗೆ  ಬಳಸಿಕೊಳ್ಳುತ್ತಿರುವ ಜನರೂ ಇದ್ದಾರೆ.  ಇವರು  ಕಳೆದೊಂದು ದಶಕದಿಂದ  ಉಲ್ಬಣಗೊಳ್ಳುತ್ತಿರುವ ನಾಡಿನ  ಅನಾರೋಗ್ಯದ ಸಂಕೇತವಷ್ಟೇ. 

ಪ್ರಶಸ್ತಿ ಸಂದದ್ದು ಜನಪರ ಮೌಲ್ಯಗಳ ಪರಂಪರೆಯ ಸಾತತ್ಯಕ್ಕೆ:

ಅನ್ಯದೇಶಗಳ ದೇಶಭಾಷೆಗಳಲ್ಲಿ ರಚಿತವಾಗಿ, ನಂತರ ಇಂಗ್ಲಿಷ್‌ಗೆ ಭಾಷಾಂತರಗೊಂಡ ಕೃತಿಗಳಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ನೀಡುವುದರ ಉದ್ದೇಶವನ್ನು ಸರಿಯಾಗಿ ಗ್ರಹಿಸಬೇಕು.  ಅನ್ಯ ದೇಶ ಭಾಷೆ ಸಂಸ್ಕೃತಿಗಳ ಕುರಿತಾಗಿ ತಿಳಿದುಕೊಳ್ಳುವ ಗುಣ ಇಂಗ್ಲೀಷ್ ನವರಿಗೆ ಮೊದಲಿಂದಲೂ ಇತ್ತು. ಆದರೆ ಆ ಜ್ಞಾನದಾಹ  ಸಾಮ್ರಾಜ್ಯಶಾಹಿ ಉದ್ದೇಶಗಳಿಗೆ ಪೂರಕವಾಗಿತ್ತು.  ಆದರೆ,  ವಸಾಹತೋತ್ತರವಾದದ ಚಿಂತನೆ ಪ್ರಬಲಗೊಂಡ ನಂತರ ಇಂಗ್ಲಿಷ್‌ನ ಯಾಜಮಾನ್ಯದ ಧೋರಣೆಗಳು ಕಟು ವಿಮರ್ಶೆಗೆ ಒಳಗಾದವು. ಆಗ ಇಂಗ್ಲಿಷ್ ತನ್ನ ವಸಾಹತುಶಾಹಿ ಅಹಂ ಕೇಂದ್ರಿತ ನಿಲುವುಗಳ ಪಾಪಪ್ರಜ್ಞೆಯ ನಿವಾರಣೆಗಾಗಿ ಅಂಚಿನ ಸಂಸ್ಕೃತಿಗಳು ಮತ್ತು ಅದರ ನಡೆ ನುಡಿ ನಂಬಿಕೆ  ಮೌಲ್ಯಗಳನ್ನು  ಒಳಗೊಳ್ಳುವ ಮತ್ತು ಗೌರವಿಸುವ ಪ್ರಯತ್ನಕ್ಕೆ ಮುಂದಾಯಿತು.  ಹೀಗೆ  ಅನ್ಯದೇಶಿಯ ಸಂಸ್ಕೃತಿಗಳನ್ನು ಅನುವಾದದ ಮೂಲಕವಾದರೂ ಇಂಗ್ಲಿಷ್ ಓದುಗರು ಅನುಸಂಧಾನ ಗೊಳ್ಳಬಹುದಾದ ಅವಕಾಶವನ್ನು ರೂಪಿಸಿಕೊಂಡಿದೆ.  ಅನ್ಯ ಸಂಸ್ಕೃತಿಗಳಲ್ಲಿರುವ ಆದರ್ಶಗಳನ್ನು,  ಮನುಷ್ಯ ಬದುಕಿನ ಕುರಿತ ಬದ್ಧತೆ ಹೋರಾಟಗಳನ್ನು ಸ್ವೀಕರಿಸಲೆಂದೇ ಅನುವಾದಗಳನ್ನು ಉತ್ತೇಜಿಸುತ್ತಿದೆ.  ವಾಸ್ತವ ಏನೇ ಇದ್ದರೂ, ಕೊನೆಪಕ್ಷ ತಾತ್ವಿಕವಾಗಿಯಾದರೂ ತನ್ನ ಅಹಂಕಾರವನ್ನು ಕಳೆದುಕೊಳ್ಳುವ ಹಾದಿಯಲ್ಲಿ ಬ್ರಿಟಿಷ್  ಚಿಂತನೆ ಕ್ರಮಿಸಿದೆ. ಆದರೆ ಇದಕ್ಕೆ  ತದ್ವಿರುದ್ಧವಾಗಿ, ಇಂಗ್ಲಿಷ್ ಎಂಬುದೇ ಜ್ಞಾನವೆಂದೂ, ಆ ಭಾಷೆಗೆ ಅನುವಾದಿಸಿದ್ದೇ ಮೂಲ ಕೃತಿ ರಚನೆಗಿಂತ ಶ್ರೇಷ್ಠ ಸಾಧನೆ ಎಂದೂ ವಿತಂಡವಾದವೆದ್ದಿದೆ. ಸಂಸ್ಕೃತವೆಂಬುದೇ  ಜ್ಞಾನವೆನ್ನುತ್ತಿದ್ದವರೆಲ್ಲಾ ಇಂಗ್ಲಿಷ್‌ಗೆ ಅನುವಾದಿಸಿರುವುದರ ಮಹತ್ವವನ್ನು ಕೊಂಡಾಡುತ್ತಿದ್ದಾರೆ. ಕೇವಲ ಅನುವಾದದ ಕೌಶಲಗಳಿಗಾಗಿಯೇ ಈ  ಪ್ರಶಸ್ತಿ ಸಿಗುವುದಿಲ್ಲ. ಯಾವ ಭಾಷೆಯೂ ತನ್ನಷ್ಟಕ್ಕೇ ಶ್ರೇಷ್ಠವಲ್ಲ,  ಕನಿಷ್ಠವೂ ಅಲ್ಲ.  ಇಂಥ ಕುತರ್ಕದ   ನೆರೆಟಿವ್‌ಗಳ  ಹಿಂದಿರುವುದು ಭಾಷೆಯ ಕುರಿತಾದ ವೈಭವೀಕೃತ ನಿಲುವೇ ಹೊರತು ನಾಡಿನ ಜನಸಂಸ್ಕೃತಿಯ  ಕುರಿತ ಗೌರವ ಶ್ರದ್ಧೆ ಪ್ರೀತಿ ಬದ್ಧತೆಗಳಲ್ಲ.  

ಬಾನು ಮುಷ್ತಾಕ್

ಸರಿಯಾಗಿ ಗ್ರಹಿಸಿದರೆ, ಬೂಕರ್ ಪ್ರಶಸ್ತಿ ದಕ್ಕಿರುವುದು  ಜೀವಪರ ಮತ್ತು ನ್ಯಾಯಪರವಾದ  ಮೌಲ್ಯಗಳಿಗೆ. ಪಂಪ, ಬಸವಣ್ಣ, ಅಲ್ಲಮ, ಅಕ್ಕ, ಶರೀಫ, ಮಡಿವಾಳಪ್ಪ,  ಕುವೆಂಪು ಬಿಟ್ಟು ಹೋದ ಜನಪರ ಮೌಲ್ಯಗಳ ಪರಂಪರೆಯಿಂದಾಗಿ ಕನ್ನಡ ಭಾಷೆಗೆ ಒಂದು ಘನತೆ ದಕ್ಕಿದೆ.  ಇಂಥ ಪರಂಪರೆಯ ಸಾತತ್ಯವನ್ನು ತಮ್ಮ ಬದುಕಿನ ವೈಯಕ್ತಿಕ ಮತ್ತು ಸಾಮಾಜಿಕ ಅನುಭವಗಳ ಮೂಲಕ ಇನ್ನೊಂದು ನೆಲೆಯಲ್ಲಿ ಗಟ್ಟಿಗೊಳಿಸಿದ್ದಕ್ಕಾಗಿ ಪ್ರಶಸ್ತಿ ಸಂದಿದೆ. ಇದನ್ನು ಬಿಟ್ಟರೆ ಕನ್ನಡವೂ ಕೂಡ ಎಲ್ಲಾ ಭಾಷೆಗಳಂತೆ ಒಂದು ಭಾಷೆಯಷ್ಟೇ. ಇದಾವುದನ್ನೂ ಪರಿಗಣಿಸದೆ, ಕನ್ನಡ ಮತ್ತು ಇಂಗ್ಲೀಷನ್ನು ನಾಲಗೆಯ ಮೇಲೆ ಕುಣಿಸುತ್ತ ಖುಷಿಪಡುವ, ಅದನ್ನು ಸರಸ್ವತಿ ಮಹಿಮೆ ಎಂದು ಕೊಂಡಾಡುವ ಜನರೇ ಕನ್ನಡವನ್ನು ಭುವನೇಶ್ವರಿಯ ಪ್ರತಿಮೆಯಾಗಿ ಮೆರೆಸುತ್ತಿದ್ದಾರೆ; ಗಹನವಾದ  ಬೇರೆಲ್ಲದನ್ನೂ  ಮರೆಸುತ್ತಿದ್ದಾರೆ.

ಬಾನು  ಮುಷ್ತಾಕರ  ವಿಚಾರಗಳನ್ನು ಒಪ್ಪದಿದ್ದರೂ ಆ ಪ್ರಶಸ್ತಿಯ ಘನತೆಯ ಕಾರಣಕ್ಕಾಗಿ ಅವರನ್ನು ಗೌರವಿಸುತ್ತೇವೆ ಎನ್ನುವವರಿದ್ದಾರೆ.  ಇದೊಂದು ಢಾಂಬಿಕತೆಯೇ. ಕೃತಿಕಾರರ ಜೀವಪರ ಮೌಲ್ಯಗಳು ಮತ್ತು ಅವುಗಳನ್ನು ಕಥೆಗಳಲ್ಲಿ  ಅಭಿವ್ಯಕ್ತಿಗೊಳಿಸಿದ ಸೃಜನಶೀಲತೆ ಗಹನವಾಗಿವೆ. ಪ್ರಶಸ್ತಿಗೆ ಕೃತಿಯನ್ನು ಪರಿಗಣಿಸುವಾಗ – ಜನಸಾಮಾನ್ಯರ ಅದರಲ್ಲೂ ದಮನಿತ  ಮಹಿಳೆಯರ ಬದುಕು, ಬವಣೆ, ಚೈತನ್ಯ, ಮೌಲ್ಯ ಬದ್ಧತೆಯ ಚಿತ್ರಣ  ಮುಖ್ಯವಾಗಿದೆ. ಸಾಮಾನ್ಯರೊಳಗಿನ ಅಸಾಮಾನ್ಯತೆಯನ್ನು ಕಲೆಯಾಗಿಸಿರುವ  ಕೃತಿಯ ಈ ಒಳಗಣ್ಣು ದೊಡ್ಡದೇ ಹೊರತು ಅದಕ್ಕೆ ದಕ್ಕಿದ ಪ್ರಶಸ್ತಿ ದೊಡ್ಡದಲ್ಲ. ಕೃತಿಯಲ್ಲಿರುವ ಮೌಲ್ಯಗಳಿಗೆ ಪ್ರಶಸ್ತಿ ಸಂದಿದೆ; ಪ್ರಶಸ್ತಿಯ ಕಾರಣಕ್ಕಾಗಿಯೇ  ಕೃತಿಗಾಗಲಿ ಅಥವಾ ಲೇಖಕಿಗಾಗಲಿ ಗೌರವ ಬಂದಿಲ್ಲ.       ಅಷ್ಟೇ ಅಲ್ಲ. ಇದುವರೆಗಿನ ಅವರ ಹೋರಾಟದ ಬದುಕು, ಸಾಮಾಜಿಕ ಕಾಳಜಿ, ಚಳುವಳಿಯ ಒಡನಾಟ, ಜನಪರ ಚಿಂತನೆ- ಎಲ್ಲವೂ  ಕೇವಲ ಬೂಕರ್  ಪ್ರಶಸ್ತಿಯ  ಕಾರಣಕ್ಕಾಗಿಯಷ್ಟೇ ಗಣನೆಗೆ ಬರುವುದಿಲ್ಲ. ದೀಪಾ ಭಾಸ್ತಿಯವರನ್ನೇಕೆ ಜೊತೆಗೆ ಆಹ್ವಾನಿಸಲಿಲ್ಲ ಎನ್ನುವವರು ಇದನ್ನು ಗಮನಿಸಬೇಕಿತ್ತು. ಬರೀ  ಈ ಪ್ರಶಸ್ತಿಯೊಂದರ  ಬಲದಿಂದಲೇ ಬಾನು ಮುಷ್ತಾಕರನ್ನು  ದಸರಾದ ಉದ್ಘಾಟನೆಗೆ ಆಹ್ವಾನಿಸಿರಲಿಲ್ಲ.   

ನಾಡಸಂಸ್ಕೃತಿಯಲ್ಲಿ ಶೋಷಿತರ ಚಹರೆ ಎಲ್ಲಿದೆ? ಮಾನವೀಯಗೊಳಿಸುವ ಪ್ರಶ್ನೆ :

ಶಿರಹಟ್ಟಿಯ ಫಕೀರೇಶ್ವರ ಕಡಕೋಳದ ಮಡಿವಾಳಪ್ಪ ಯತಿ ನಾಗಲಿಂಗಪ್ಪ ಮಂಟೇಸ್ವಾಮಿ ಶಿಶುನಾಳ ಶರೀಫರಂಥ ಅಸಂಖ್ಯಾತ ಸಾಂಸ್ಕೃತಿಕ ವ್ಯಕ್ತಿತ್ವಗಳು ನಮ್ಮ ಶಾಲಾ ಕಾಲೇಜುಗಳ ಪಠ್ಯಗಳನ್ನು ಪ್ರವೇಶಿಸಿ ಮಾನ್ಯಗೊಳ್ಳದಿರಲು ಕಾರಣವೇನು? ಬೇಡವೆಂದರೂ ನಮ್ಮ ಮಕ್ಕಳ ಮೆದುಳಿಗೆ ಅಸಮಾನತೆಯನ್ನು ಸಹಜೀಕರಿಸುವ  ಪರಿಕಲ್ಪನೆಗಳು  ಅಪ್ಪಳಿಸುತ್ತಿವೆ.  ಗಾಬರಿಗೊಳ್ಳುವಂತೆ,  ನೂರಾರು ದಾರಿಗಳಲ್ಲಿ  ಸಾಮಾಜಿಕ ಸಾಂಸ್ಕೃತಿಕ ಪಠ್ಯಗಳಲ್ಲಿ ನುಸುಳಿ ಸಾರ್ವಜನಿಕ ಸಮ್ಮತಿ ಗಳಿಸುತ್ತಿವೆ. ಇದು ಹೇಗೆ ಸಾಧ್ಯವಾಯಿತೆಂದರೆ,  ರಾಜಕೀಯ ಆಳ್ವಿಕೆಯಷ್ಟೇ ಪ್ರಭುತ್ವವಲ್ಲ. ಅನೌಪಚಾರಿಕವಾದ ಆದರೆ ಅತ್ಯಂತ ಬಲವಾದ ಇನ್ನೊಂದು  ಪ್ರಭುತ್ವವಿದೆ. ಬಲಿಷ್ಠ ಬೇರುಗಳಿರುವ ಈ ಸಾಮಾಜಿಕ ಆರ್ಥಿಕ ಪ್ರಭುತ್ವ ರಾಜಕೀಯ ಪ್ರಭುತ್ವವನ್ನೇ ನಿಯಂತ್ರಿಸುತ್ತಿದೆ.  ಹೇಳಿದ ಹಾಗೆ ಕೇಳಿಕೊಂಡು ತನ್ನ ಯಾಜಮಾನ್ಯದ ಧೋರಣೆಗಳನ್ನು ಒಪ್ಪಿಕೊಂಡು ತಮ್ಮ ಪಾಡಿಗೆ ತಾವಿದ್ದಾಗ  ಮಾತ್ರ  ಅಲ್ಪಸಂಖ್ಯಾತರು ಕೆಳಜಾತಿಗಳು ದಲಿತರು ಅಲೆಮಾರಿಗಳನ್ನು ಇದು ಒಪ್ಪಿಕೊಳ್ಳುತ್ತದೆ. ಅವರ ವಿಧೇಯತೆಯನ್ನು ಮನ್ನಿಸಿ ರಾಷ್ಟ್ರಪತಿಯಾಗಿಯೋ ರಾಜ್ಯಪಾಲರಾಗಿಯೋ ಮಂತ್ರಿಯಾಗಿಯೋ ಮಾಡುತ್ತದೆ. ನಾಡಸಂಸ್ಕೃತಿಯಲ್ಲಿ ನಮ್ಮವರ ಪ್ರಾತಿನಿಧ್ಯವೇನು ಎಂದು ಕೇಳಿದರೆ ಈ ಪ್ರಭುತ್ವ  ಬೆಚ್ಚಿ ಬೀಳುತ್ತದೆ. 

ಪರಮಾಣು  ವಿಜ್ಞಾನಿ  ಅಬ್ದುಲ್ ಕಲಾಮರನ್ನು ರಾಷ್ಟ್ರಪತಿ ಹುದ್ದೆಯಲ್ಲಿ ಕೂಡಿಸಿ ಸಲೀಸಾಗಿ ಒಪ್ಪಿಕೊಂಡವರು ಒಬ್ಬ ಸೃಜನಶೀಲ ಕಥೆಗಾರ್ತಿ ಬಾನು ಮುಷ್ತಾಕರಿಗೆ ಹೆದರಿ ಬೆಚ್ಚಿ ಬೀಳುತ್ತಾರೆ ಎಂದರೆ ಏನರ್ಥ? ಹೆದರುತ್ತಿರುವುದು ಅವರು ಕೇಳುತ್ತಿರುವ ಪ್ರಶ್ನೆಗಳಿಗೆ. ಆ ಪ್ರಶ್ನೆಗಳ ಆಳ ಮತ್ತು ಅಗಲ ದೊಡ್ಡದಿದೆ. ಸಂಸ್ಕೃತಿಯೊಂದನ್ನು ಪ್ರಶ್ನಿಸುವುದೆಂದರೆ ಆ ಸಮಾಜವನ್ನೇ ಪ್ರಶ್ನಿಸಿದಂತೆ. ಸಂಸ್ಕೃತಿಯೊಂದು ಹುಟ್ಟಿಸುವ ಅರ್ಥಗಳು ಮೌಲ್ಯಗಳು ನಂಬಿಕೆಗಳು ಆ ಸಮಾಜದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ. ಹಾಗಾಗಿ, ಬೀಜರೂಪದ  ಬಾನು ಮುಷ್ತಾಕರ  ಪ್ರಶ್ನೆಗಳಲ್ಲಡಗಿರುವ ತಾತ್ವಿಕತೆಯನ್ನು – ಅದು ಯಾರನ್ನು ವಿಮೋಚನಗೊಳಿಸುತ್ತದೆಯೋ ಅವರು ತಿಳಿಯುವುದಕ್ಕಿಂತ  ಮೊದಲೇ – ಶೋಷಕರು   ಸರಿಯಾಗಿ ತಿಳಿದುಕೊಳ್ಳುತ್ತಾರೆ.  ಪ್ರಶ್ನೆಯ ನಿಜಾರ್ಥ ಮುಚ್ಚಿಟ್ಟು ಅಪಾರ್ಥವನ್ನು ಹಬ್ಬಿಸುತ್ತಾರೆ.  ನಾಡಸಂಸ್ಕೃತಿಯಲ್ಲಿ ಎಲ್ಲರ ಪ್ರಾತಿನಿಧ್ಯ ಕಾಣುತ್ತಿಲ್ಲ  ಎಂಬರ್ಥದ  ಅವರ ಹೇಳಿಕೆಯ ಹೊಟ್ಟೆಯೊಳಗಿಂದ   ಹಲವಾರು  ಪ್ರಶ್ನೆಗಳ ಸರಣಿಯೇ ಹುಟ್ಟುತ್ತದೆ. 

ಮಹಿಳೆಯನ್ನು ನಾಡದೇವತೆಯೆಂದು ಮಂದಾಸನದ ಮೇಲೆ ಕೂರಿಸುವ ಈ  ಸಂಸ್ಕೃತಿ, ಸರ್ಕಾರದ ಕ್ಯಾಬಿನೆಟ್ಟಲ್ಲಿ ಕನಿಷ್ಠ ಕಾಲುಭಾಗದಷ್ಟು ಮಹಿಳೆಯರನ್ನು ಕಾಣುವುದು ಯಾವಾಗ? ಅತ್ಯಂತ ವೈಜ್ಞಾನಿಕವಾದದ್ದೆಂದು ತಾವೇ ಹೇಳುತ್ತಿದ್ದ ಜಾತಿಗಣತಿ ವರದಿಯನ್ನು ಶೋಷಿತರ ಗಟ್ಟಿಧ್ವನಿ ಎಂದು ಹೇಳಿಕೊಳ್ಳುವ ರಾಜ್ಯದ ಮುಖ್ಯಮಂತ್ರಿ ಜನಕಲ್ಯಾಣಕ್ಕಾಗಿ ಅಳುಕಿಲ್ಲದೇ ಸ್ವೀಕರಿಸುವಂಥಾಗುವುದು ಇನ್ನೂ ಯಾವಾಗ? ʼಬಂಡವಾಳವಾದ ಸೆ ಆಜಾದಿʼ ಎಂದು ಘೋಷಣೆ ಹಾಕಬಲ್ಲ  ಬಡವರ ಪ್ರತಿನಿಧಿಯಾದ ಸುಶಿಕ್ಷಿತನೊಬ್ಬ ಕನಿಷ್ಠಪಕ್ಷ ಮಂತ್ರಿಯಾಗುವುದು ಯಾವಾಗ? ಬೌದ್ಧಿಕ ಪಕ್ವತೆಯುಳ್ಳ ಚಿಂತನಶೀಲ ಅಂಬೇಡ್ಕರ್‌ವಾದಿ ದಲಿತ ರಾಜಕಾರಣಿ ಕರ್ನಾಟಕದ ಮುಖ್ಯಮಂತ್ರಿಯಾಗುವುದು ಇನ್ನೂ ಅದ್ಯಾವ ಕಾಲದಲ್ಲಿ?  ವೈಚಾರಿಕ ಸ್ಪಷ್ಟತೆಯುಳ್ಳ  ರಾಯಚೂರಿನ ಯುವಕ  ಟಿವಿ ಸುದ್ದಿ ಮಾಧ್ಯಮದಲ್ಲಿ ನಿರೂಪಕನಾಗಿ ಅಥವಾ ಸಂಪಾದಕನಾಗಿ ತನ್ನದೇ ಸಹಜ ಪ್ರಾದೇಶಿಕ  ನುಡಿಗಟ್ಟಿನಲ್ಲಿ ಮಾತನಾಡುತ್ತಾ  ಅದರ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಯಾವಾಗ? ಕೈಗಾರಿಕೆಗಳು ಮತ್ತು ಉದ್ಯಮಗಳು ಬೆಂಗಳೂರಿಗೆ ಬಂದಂತೆ  ಬಿಜಾಪುರ ರಾಯಚೂರಿಗೆ ಹುಡುಕಿಕೊಂಡು ಬರುವುದು ಯಾವಾಗ? ಕರ್ನಾಟಕ ರತ್ನದಂತಹ ಪ್ರಶಸ್ತಿಗೆ ದಲಿತರೂ ಅರ್ಹರೆಂದು ಅನ್ನಿಸುವುದು ಯಾವಾಗ ? ತಮ್ಮಿಷ್ಟದ ಆಹಾರವನ್ನು ಜನ ಆತಂಕ ಮುಜುಗರವಿಲ್ಲದೆ ತಿನ್ನುವಂತಾಗುವುದು ಯಾವಾಗ? ಪರಸ್ಪರ ಪ್ರೀತಿಸಿದ ಜೀವಗಳು ಜಾತಿ ಧರ್ಮದ ಹಂಗಿಲ್ಲದೆ ವಿವಾಹವಾಗುವಷ್ಟು ಮುಕ್ತ ಸ್ವಾತಂತ್ರ್ಯವಾದರೂ ಏರ್ಪಡುವುದು ಯಾವಾಗ? ಬಾನು ಮುಷ್ತಾಕರ ಪ್ರಶ್ನೆಯನ್ನ ಅಲಕ್ಷಿತರ ಧ್ವನಿ ಎಂದು ಭಾವಿಸಿ ವಿಸ್ತರಿಸಿಕೊಂಡಲ್ಲಿ  ಇಂತಹ ಇನ್ನೂ ಹಲವಾರು ಪ್ರಶ್ನೆಗಳು ಅನುರಣಿಸುತ್ತವೆ. ಹೀಗೆ ನೋಡಿದರೆ, ಬಾನು  ಮುಷ್ತಾಕರು  ಎತ್ತಿದ ಪ್ರಶ್ನೆಗಳು ಮತ್ತು ಅವು ಬೇಡುವ ಸಾಂಸ್ಕೃತಿಕ ಪರಾಮರ್ಶನ  ಸದಾ ಪ್ರಸ್ತುತವಾಗುತ್ತವೆ.

ಈ ಪರಿಪ್ರೇಕ್ಷೆಯಲ್ಲಿಟ್ಟು  ನೋಡಿದಾಗ ಬಾನು ಮುಷ್ತಾಕರು ಭುವನೇಶ್ವರಿ ಪ್ರತಿಮೆಯಲ್ಲಿ ತಮ್ಮ ಪ್ರಾತಿನಿಧ್ಯದ ಗೈರನ್ನು ಕುರಿತು ಎತ್ತಿದ ತಕರಾರು – ನಾಡಿನ ಸಂಸ್ಕೃತಿಯನ್ನು ಅವಮಾನಿಸುತ್ತಿಲ್ಲ : ಬದಲಾಗಿ ಇನ್ನಷ್ಟು  ಮಾನವೀಯಗೊಳಿಸುತ್ತಿದೆ. ನಾಡಿನ ಸಂಸ್ಕೃತಿಯು ತನ್ನನ್ನು ತಾನು ಮರು ವ್ಯಾಖ್ಯಾನಿಸಿಕೊಂಡು ಇನ್ನಷ್ಟು  ಅರ್ಥಪೂರ್ಣವಾಗಬೇಕಾದ ಅಗತ್ಯತೆಯನ್ನು ಒತ್ತಿ ಹೇಳುತ್ತಿದೆ.   ದಮನಿತರ ಪರವಾದ ಇಂತಹ ಸಂಕಥನವನ್ನು ಮುಖ್ಯವಾಹಿನಿಯ ಮಾಧ್ಯಮಗಳು ನಿರಾಕರಿಸುತ್ತವೆ. ಪ್ರಬಲ ಪರ್ಯಾಯ ಮಾಧ್ಯಮಗಳಿಲ್ಲದೆ ಹೋದಲ್ಲಿ  ಅವರ ಧ್ವನಿಗೆ ಸಾರ್ವಜನಿಕ ಸಮ್ಮತಿ ಇಲ್ಲವಾಗುತ್ತದೆ. ಮೂಕ ಹಕ್ಕಿಗಳಂತೆ ತಮ್ಮ ಕಥೆಗಳನ್ನು ತಾವೇ ನುಂಗಿಕೊಳ್ಳಬೇಕಾಗುತ್ತದೆ. ಪಾರ್ಕಿನಲ್ಲಿ ನಡೆಯುತ್ತಿದ್ದ  ಚರ್ಚೆಯಿಂದ ( ಲೇಖನದ ಪ್ರಾರಂಭದಲ್ಲಿ ಹೇಳಿದ್ದೆ) ಹಿಂದೆ ಸರಿದು ಹೊರಟುಹೋದ  ಹಿರಿಯರು  ಎಲ್ಲಾ ತಿಳಿದೂ  ಸುಮ್ಮನಿರಬೇಕಾದ ಮೂಕಹಕ್ಕಿಯಂತೆ ನನಗೆ ಕಂಡರು.

ನಿಜವಾದ ನಾಡಸಂಸ್ಕೃತಿ ಎಂದರೆ

ಇಲ್ಲಿ ಬಾಳಿ ಬೆವರು ಸುರಿಸಿ ಬದುಕು ಕಟ್ಟಿಕೊಂಡ ಮತ್ತು ಸಹಜೀವಿಗಳ ಬದುಕು ಕಟ್ಟಲು  ನೆರವಾದ  ಎಲ್ಲರಿಗೂ  ನಾಡು ನುಡಿ ಸಂಸ್ಕೃತಿಗಳನ್ನು ವ್ಯಾಖ್ಯಾನಿಸುವ ಹಕ್ಕು ಇದೆ. ಈ ನಾಡಿನ ಸಂಸ್ಕೃತಿ ಕಲೆ ಭಾಷೆ ವೈಚಾರಿಕತೆ ಇತ್ಯಾದಿಗಳನ್ನ ವ್ಯಾಖ್ಯಾನಿಸುವಾಗ, ಸಾಂಕೇತಿಕವಾಗಿ ಪ್ರತಿನಿಧಿಸುವಾಗ, ಶೋಷಿತ ಬಹುಜನರ ಪ್ರಾತಿನಿಧ್ಯ ಅದರಲ್ಲಿ ಕಾಣುತ್ತಿಲ್ಲವೆಂದರೆ, ಖಂಡಿತ ಅದು ಜೀವಂತಿಕೆಯುಳ್ಳ  ನಾಡಿನ ಲಕ್ಷಣವಲ್ಲ. ಅದೊಂದು ಬೂಸಾ ಸಂಸ್ಕೃತಿ ಎಂದೇ ಹೇಳಬೇಕು.

ದಸರಾ ಉದ್ಘಾಟನೆಯ ಕ್ಷಣಗಳು

ನಿಜವಾದ ನಾಡಸಂಸ್ಕೃತಿಯು ಭಿನ್ನ ಜಾತಿ, ಧರ್ಮ, ಲಿಂಗ, ವರ್ಗ, ವಿಚಾರಧಾರೆ,  ಪ್ರದೇಶ, ಚಹರೆಗಳನ್ನು ಪ್ರತಿನಿಧಿಸುವ ಸಮುದಾಯಗಳ ನಡುವಿನ ನ್ಯಾಯಸಮ್ಮತ ಸಂಧಾನದ ಫಲವಾಗಿ ರೂಪುತಾಳಬೇಕು. ಇಲ್ಲಿನ ಎಲ್ಲಾ ಜನರ ಅಂತರಂಗದ ಆಕಾಂಕ್ಷೆಗಳ ಸಂಯೋಜಿತ ಅಭಿವ್ಯಕ್ತಿಯಾಗಿರಬೇಕು. ಬಹು ಮುಖ್ಯವಾಗಿ, ಸತ್ಯ ಪ್ರೀತಿ ಕರುಣೆಯ ಮೌಲ್ಯಗಳ ನ್ನೊಳಗೊಂಡು ಎಲ್ಲರ ಮಾನವ ಘನತೆಯನ್ನು ಎತ್ತಿ ಹಿಡಿಯುವ ನೈತಿಕ ಬದ್ಧತೆಯನ್ನು    ಪ್ರದರ್ಶಿಸಬೇಕು. ಸಮುದಾಯಗಳೆಂದರೆ ವಿವಿಧ ಜಾತಿಗಳಷ್ಟೇ ಅಲ್ಲ. ಲೈಂಗಿಕ ಅಲ್ಪಸಂಖ್ಯಾತರು, ನಾಸ್ತಿಕರು ,ಜಾತಿಗಳ ಬಿಟ್ಟು ತಾಂತ್ರಿಕವಾಗಿಯಷ್ಟೇ ಒಂದು ಜಾತಿಯಲ್ಲಿ ನಮೂದಿಸಿ ಕೊಂಡವರೂ ಒಂದೊಂದು ಸಮುದಾಯಗಳೇ. ಇವೆಲ್ಲವುಗಳ ನಡುವಿನ ನ್ಯಾಯಸಮ್ಮತ ಸಂಧಾನ ಈಗ ನಾವು ಹೇಳಿಕೊಳ್ಳುತ್ತಿರುವ ನಾಡ ಸಂಸ್ಕೃತಿಯಲ್ಲಿ ಕಾಣುತ್ತದೆಯೇ?  ಖಂಡಿತ ಇಲ್ಲ. ಅದು ಮೇಲಿನಿಂದ ಬಲಾಢ್ಯರು ಹೇರಿ ನಾಡ ಸಂಸ್ಕೃತಿಯೆಂದು ಘೋಷಿತವಾದದ್ದು. ಇಂಥ ನಾಡಿನಲ್ಲಿ ಕಲೆ ಸಂಸ್ಕೃತಿ ಸಮಾಜಸೇವೆ ಈ ಎಲ್ಲಾ ಪರಿಕಲ್ಪನೆಗಳನ್ನು ವ್ಯಾಖ್ಯಾನಿಸಿರುವ ರೀತಿ ಸಹಜವಾಗಿಯೇ ಸಮಸ್ಯಾತ್ಮಕವಾಗಿರುತ್ತದೆ. ಹಾಗಾಗಿ ಈ ಪರಿಕಲ್ಪನೆಗಳನ್ನೆಲ್ಲಾ ಪರಿಷ್ಕರಿಸುವ ಮತ್ತು ಮರುವ್ಯಾಖ್ಯಾನಿಸುವ  ಅಗತ್ಯವಿದೆ.  ಬಾನು ಮುಷ್ತಾಕರ  ಪ್ರಶ್ನೆ ಇಂಥ ಮರುವ್ಯಾಖ್ಯಾನದ ಅಗತ್ಯವನ್ನು ಮಾರ್ದನಿಸುತ್ತದೆ. ಇದು ಶೋಷಕ ಶಕ್ತಿಗಳಲ್ಲಿ ಒಮ್ಮೆಲೇ ಆತಂಕ ಮತ್ತು ಕೋಪ ಎರಡನ್ನೂ  ಹುಟ್ಟಿಸುತ್ತದೆ. ಐತಿಹಾಸಿಕ ಕಾರಣಗಳಿಂದ ಸಾಮಾಜಿಕವಾಗಿ ಆಳುವ ವರ್ಗಗಳಾಗಿರುವ ಸಮುದಾಯಗಳ ಪ್ರಜ್ಞಾವಂತರು ಈಗ ಈ ಮರುವ್ಯಾಖ್ಯಾನದ ಕ್ರಿಯೆಯಲ್ಲಿ ಅಂಚಿನ ಸಮುದಾಯಗಳಿಗೆ ಬೆಂಬಲವನ್ನು  ನೀಡಬೇಕು. ಆ ಮೂಲಕ ತಮ್ಮ ಸಮುದಾಯಗಳಿಗೆ ಅಂಟಿಕೊಂಡಿರುವ ಪ್ರತಿಗಾಮಿತನದ ವಿಚಾರಗಳನ್ನು ಧಿಕ್ಕರಿಸಬೇಕು. ಇದು ಅವರ ನೈತಿಕ ಹೊಣೆ. ಆಗ ನಾಡಿನ  ಘನತೆಯೂ ಹೆಚ್ಚಿದಂತಾಗುತ್ತದೆ. ಇದಾಗದ ಹೊರತು  ಬಸವಣ್ಣನವರನ್ನಾಗಲಿ ಕುವೆಂಪುರನ್ನಾಗಲೀ ಸಾಂಸ್ಕೃತಿಕ ನಾಯಕರೆಂದು ಒಪ್ಪಿಕೊಳ್ಳುವುದು ಅವರ ವಿಚಾರಗಳಿಗೆ ಮಾಡುವ  ಅಪಚಾರವಷ್ಟೇ.    

ಸ್ವವಿಮರ್ಶೆಯ ಪ್ರಬುದ್ಧತೆ ಮತ್ತು ದಸರಾದಾಚೆ ಈ ಚರ್ಚೆಯ  ಪ್ರಸ್ತುತತೆ:    

ತಮ್ಮನ್ನು ವಿರೋಧಿಸಿದವರಿಗೆ ಪ್ರತಿಕ್ರಿಯಿಸುತ್ತಾ  ಬಾನು ಮುಷ್ತಾಕರು ಹೀಗೆಂದಿದ್ದರು –  ‘ನೀವು ಕನ್ನಡವನ್ನು ನನ್ನಂತೆ ಅಂತರಾಷ್ಟ್ರೀಯ ಮಟ್ಟಕ್ಕೆ ಎತ್ತಿಕೊಂಡು ಹೋಗಿ ; ನಂತರ ನನ್ನನ್ನು ಟೀಕಿಸಿರಿ’. ಅವರ ವಿರುದ್ಧ ನಿಷ್ಕಾರಣವಾಗಿ ಹರಡಲಾದ ದ್ವೇಷದ  ಸುದ್ದಿಗಳಿಗೆ ಬೇಸತ್ತು ತಾಳ್ಮೆಯ  ಕಟ್ಟೆಯೊಡೆದಿರಬಹುದು. ಆದರೂ,    ಆ ಮಾತು ಅಷ್ಟೊಂದು ಸಮಂಜಸವಾಗಿರಲಿಲ್ಲ.  ಅಂತಾರಾಷ್ಟ್ರಿಯ ಮಟ್ಟಕ್ಕೆ ಎತ್ತಿಕೊಂಡು ಹೋಗುವುದೇ ನಿಜಕ್ಕೂ ಸಾಧನೆ ಎನ್ನುವುದಾದರೆ, ಅದರ ಶ್ರೇಯ ಅನುವಾದಕಿಗೇ ಸಲ್ಲಬೇಕು ಎಂದಾಗುವುದಿಲ್ಲವೇ? ಅದಿರಲಿ. ಈ  ಮಾತು ಇನ್ನೂ ಅಘಾತಕಾರಿ ಏಕೆಂದರೆ  ತಮ್ಮ ಸಾಹಿತ್ಯ ಕೃತಿಗಳು ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಯಾರ ಪರವಾಗಿ ಇದುವರೆಗೆ ಮಾತನಾಡಿದ್ದಾರೆಯೋ ಅವರನ್ನೇ ಒಂದು ರೀತಿಯಲ್ಲಿ   ಅವಮಾನಿಸಿದಂತಾಗುತ್ತದೆ. ನಿಜಕ್ಕೂ ಅವರನ್ನು ವಿರೋಧಿಸಿದವರಿಗೆ ಮತ್ತು ಅದನ್ನು ಬೆಂಬಲಿಸುತ್ತಿದ್ದ  ಮಾಧ್ಯಮಗಳಿಗೆ ಜನಪರ ಕಾಳಜಿಯಿದ್ದರೆ ಈ ಮಾತನ್ನು ವಿಮರ್ಶಿಸಬಹುದಿತ್ತು. ಆದರೆ, ಜನಸಾಮಾನ್ಯರ ಹಿತವನ್ನು ಯಾವತ್ತೋ ಮರೆತಿರುವ ಮಾಧ್ಯಮಗಳಿಗೆ ಇದೊಂದು ವಿಚಾರವೇ ಆಗಲಿಲ್ಲ. ಆದರೆ,   ಜನಚಳುವಳಿಯ ಭಾಗವಾಗಿಯೇ ರೂಪುಗೊಂಡ ಲೇಖಕಿ ದಸರಾ ಉದ್ಘಾಟಿಸಿ ಆಡಿದ ಮಾತುಗಳಲ್ಲಿ  ಅಂತರಾವಲೋಕನದ ಮೂಲಕ ಪ್ರಬುದ್ಧತೆಯನ್ನು ಮೆರೆದರು. ಬೂಕರ್  ಪ್ರಶಸ್ತಿ ತಮ್ಮೊಬ್ಬರ ಜಯವಾಗಿರದೆ ಕನ್ನಡ ಭಾಷೆಯ ಪರಂಪರೆಗೆ ಮತ್ತು ಈ ಮಣ್ಣಿನ ಕಸುವಿಗೆ ಸಂದ ಜಯ ಎಂದರು. ತಮ್ಮದೇ ಹಿಂದಿನ ಮಾತನ್ನು  ಸ್ವವಿಮರ್ಶೆಗೆ ಒಳಪಡಿಸಿಕೊಂಡರು.   ತಾನು ಹೊತ್ತು ಸಾಗುತ್ತಿರುವ ಪ್ರೀತಿಯ ದೀಪವನ್ನ ದ್ವೇಷದ ಬಿರುಗಾಳಿ ತಡೆಯಲಾರದೆಂದು ಹೇಳಿ ದ್ವೇಷದ ವ್ಯಾಪಾರಿಗಳಿಗೆ ವಹಿವಾಟು ಇಲ್ಲದಂತೆ ಮಾಡಿದರು. ಶಾಂತಿ ಪ್ರೀತಿ ನ್ಯಾಯದ ಮೌಲ್ಯಗಳ ಮಹತ್ವವನ್ನು  ಎತ್ತಿ ಹಿಡಿದರು.

ಇರಲಿ. ದಸರಾ ಉದ್ಘಾಟನೆಯೇ ನಮ್ಮ ಚರ್ಚೆಯ ಕೇಂದ್ರವಲ್ಲ. ಬಾನು ಮುಷ್ತಾಕರ ಪ್ರಶ್ನೆಗಳೂ ಈ ಸಂದರ್ಭದವಲ್ಲ ; ಎರಡು ವರ್ಷಗಳ ಹಿಂದಿನವು. ಆದರೆ, ಜನ ಸಮುದಾಯಗಳ ಬದುಕಿನ ಒಳಹೊರಗನ್ನು ರೂಪಿಸುವ ನಾಡ ಸಂಸ್ಕೃತಿಯ ಪರಾಮರ್ಶನವನ್ನು ಬಯಸುವ ಇಂಥ ಪ್ರಶ್ನೆಗಳು ಮತ್ತು ಅವು ಹುಟ್ಟು ಹಾಕುವ ಚರ್ಚೆ  ಸದಾ ಜೀವಂತವಾಗಿರುತ್ತವೆ . ಈ ಚರ್ಚೆ ದಸರಾ ಉದ್ಘಾಟನೆಗೆ ಬಂದ ವಿರೋಧದ ವಿಶ್ಲೇಷಣೆಯಾಗಿ  ರೂಪುಗೊಂಡಿದ್ದರೂ, ಅದು ಒಳಗೊಂಡ ವಿಚಾರಗಳು ಆ ನಿರ್ದಿಷ್ಟ  ಸಂದರ್ಭದಾಚೆಗೂ ದೀರ್ಘಕಾಲ ಪ್ರಸ್ತುತವಾಗಿರಬಲ್ಲವು.

ಡಾ. ಸಿ.ಬಿ.ಐನಳ್ಳಿ

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ವಿಮರ್ಶಾ ಬರಹ ಮತ್ತು ಕಾವ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.   ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ ಎಂಬ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ನೀಡಿದೆ.

ಇದನ್ನೂ ಓದಿ- ಅದೊಂದ್ ದೊಡ್ಡ ಕಥೆ‌, ಆತ್ಮಕಥೆ ಸರಣಿ- 8 |ಅಪ್ಪನ ಗೀತಾ ಪಠಣ

More articles

Latest article