ಬೆಂಗಳೂರು, ಆ.26: ರಾಜ್ಯದ ಮೊದಲ ಹಂತದಲ್ಲಿ 102 ತಾಲೂಕುಗಳಲ್ಲಿ ಬರದ ಛಾಯೆ ಇರುವುದು ಗೊತ್ತಾಗಿದ್ದು, ವಿವಿಧ ತಾಲೂಕುಗಳಲ್ಲಿ ಮಳೆ ಅಭಾವದ ವರದಿ ಆಧರಿಸಿ ನಾಳೆ ಅಥವಾ ನಾಡಿದ್ದು ಬರ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದ ಸಾಕಷ್ಟು ಸಮಸ್ಯೆ ಆಗಿದೆ. ಮೊದಲ ಹಂತದ ಬರ ತಾಲ್ಲೂಕುಗಳನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.
ಕುಡಿಯುವ ನೀರಿನ ಅಭಾವ ನೀಗಿಸಲು ಪ್ರತಿ ತಾಲೂಕಿಗೆ ಈಗಾಗಲೇ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲೂ ಹಣವಿದೆ. ಅಗತ್ಯ ಕೆಲಸಗಳಿಗೆ ಬಳಸಲು ಶಾಸಕರಿಗೂ ಸೂಚನೆ ನೀಡಲಾಗಿದೆ. ಜನರ ವಲಸೆ ತಪ್ಪಿಸಲು ಕ್ಷೇತ್ರವಾರು ಕೈಗಾರಿಕಾ ಉದ್ಯೋಗ ಸೃಷ್ಟಿಗೂ ಸಲಹೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರುಗಳು ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿಗೆ ತೆರಳಿ ಜನರ ಅಹವಾಲು ಆಲಿಸುವಂತೆ ಸೂಚನೆ ನೀಡಲಾಗಿದೆ. ಇದಲ್ಲದೆ, ಪ್ರಜಾಸೇವೆ ಇಲಾಖೆಯಿಂದಲೂ ಸಹ ಪ್ರತಿ ಶಾಸಕರಿಗೂ ಜನರ ಅಹವಾಲು ಆಲಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
ಜಿಲ್ಲಾವಾರು ಬಡವರಿಗೆ ನಿವೇಶನ
ಕಂದಾಯ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಲು ಕಂದಾಯ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಅವರು ಆದೇಶ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿಯೂ ಜಾಗ ಗುರುತಿಸಲಾಗುತ್ತಿದೆ. ಬಡವರು, ಸೂರಿಲ್ಲದವರಿಗೆ ನಿವೇಶನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸೂಕ್ತ ನಿವೇಶನ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
ಇನ್ನು ಪಾರ್ಕ್ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಕುರಿತು ಉದ್ಭವಿಸಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪಾರ್ಕ್‌ಗಳನ್ನು ಯಾರೂ ಬಳಸಲು ಬಿಡುವುದಿಲ್ಲ. ಯಾವ ಅದಾನಿಗೂ ಕೊಡುವುದಿಲ್ಲ. ಸಾರ್ವಜನಿಕ ರಸ್ತೆ ಅಗಲೀಕರಣಕ್ಕೆ ಮಾತ್ರ ಗರಿಷ್ಠ ಶೇ 5ರಷ್ಟು ಜಾಗ ಬಳಸಲಾಗುವುದು. ಖಾಸಗಿಯವರಿಂದ ಪಡೆದರೆ ಅದಕ್ಕೆ 1:2 ಪರಿಹಾರ ಅಥವಾ ಟಿಡಿಆರ್ ಕೊಡಬೇಕಾಗುತ್ತದೆ. ಈ ಪ್ರಮೇಯ ತಪ್ಪಿಸಲು ಸರ್ಕಾರ ಈ ಮಸೂದೆ ತಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಸುತ್ತಮುತ್ತ ತುರಹಳ್ಳಿ, ಬಿ.ಎಂ. ಕಾವಲ್, ಬಸವತಾರ, ಮಂಡೂರು, ಜ್ಯೋತಿಪುರ ಸೇರಿದಂತೆ ಒಟ್ಟು 5 ಕಡೆ 5000 ಎಕರೆ ಜಾಗದಲ್ಲಿ ಲಾಲ್ಬಾಗ್ ಮಾದರಿ ಟ್ರೀ ಪಾರ್ಕ್ ನಿರ್ಮಿಸಲಾಗುವುದು. ಅದೇ ರೀತಿ ಅಂತರ್ಜಲ ಸಂರಕ್ಷಣೆಗಾಗಿ ಹೆಸರುಘಟ್ಟ, ಹೊಸಕೋಟೆ ಸೇರಿದಂತೆ ಐದಾರು ಕೆರೆಗಳನ್ನು ಗುರುತಿಸಿ ಒತ್ತುವರಿ ಮುಕ್ತಗೊಳಿಸಲಾಗುವುದು. ಕೆರೆಗಳಿಗೆ ತ್ಯಾಜ್ಯ ನೀರು ಸೇರದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಸಂಪುಟ ಮುಂದೆ ಕಸ್ತೂರಿ ರಂಗನ್ ವರದಿ
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಾದ ಡಾ.ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ತಿರಸ್ಕರಿಸುವ ಸಂಬಂಧ ಮುಂದಿನ ತಿಂಗಳು ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರ ರಾಜ್ಯದ ಅಭಿಪ್ರಾಯ ಆಲಿಸದೇ ಏಕಪಕ್ಷಿಯವಾಗಿ ಕರಡು ಅಧಿಸೂಚನೆ ಜಾರಿಗೆ ಗಡುವು ನೀಡಿದೆ. ಎರಡು ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದು, ಅಷ್ಟರಲ್ಲಿ ಪಶ್ಚಿಮಘಟ್ಟ ಭಾಗದ ಜನರು ಹಾಗೂ ತಜ್ಞರು ಅಭಿಪ್ರಾಯ ಆಲಿಸಲಾಗುವುದು. ಯಾವುದೇ ಕಾರಣಕ್ಕೂ ಕೇಂದ್ರದ ನಿರ್ಧಾರವನ್ನು ಒಪ್ಪುವುದಿಲ್ಲ. ಇಡೀ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ಸಾಧಕ –ಬಾಧಕ, ಕಾನೂನು ಹೋರಾಟದ ಕುರಿತಾಗಿಯೂ ಚರ್ಚಿಸಲಾಗುವುದು ಎಂದು ವಿವರಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಕರ್ನಾಟಕದ 10 ಜಿಲ್ಲೆಗಳ 33 ತಾಲೂಕುಗಳು ಹಾಗೂ 1,649 ಗ್ರಾಮಗಳ ಒಟ್ಟು 22,600 ಚದರ ಕಿಲೋಮೀಟರ್ ಪ್ರದೇಶ ಅಧಿಸೂಚನೆಯ ವ್ಯಾಪ್ತಿಗೆ ಬರಲಿದೆ. ವರದಿ ಜಾರಿಯಾದರೆ ಕಲ್ಲು, ಮರಳು ಗಣಿಗಾರಿಕೆ, ವಿದ್ಯುತ್ ಯೋಜನೆಗಳು ಹಾಗೂ ಹೊಸ ಟೌನ್ಶಿಪ್ಗಳ ನಿರ್ಮಾಣಕ್ಕೆ ನಿರ್ಬಂಧ ಇರಲಿದೆ. ಇದರಿಂದ ಸ್ಥಳೀಯ ಜನರ ಬದುಕಿಗೂ ತೊಂದರೆ ಆಗಲಿದೆ. 2025 ಸೆಪ್ಟೆಂಬರ್ 26 ರಂದು ನಡೆದ ಸಂಪುಟದಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಮತದಾರರ ಹಕ್ಕು ಕಾಪಾಡಲು ಕ್ರಮ
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಸುಮಾರು 1 ಕೋಟಿ 7 ಲಕ್ಷ ಜನರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಕಂಡುಬಂದಿದೆ. ರಾಜ್ಯ ಸರ್ಕಾರ ಮತದಾರರ ಹಕ್ಕು ರಕ್ಷಿಸಲು ಈಗಾಗಲೇ ಪಿಆರ್ಸಿ ಹಾಗೂ ಜಾತಿ ಪ್ರಮಾಣ ಪತ್ರ ನೀಡುತ್ತಿದೆ. ಈಗಾಗಲೇ 43ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ. ಪಕ್ಷದ ಶಾಸಕರು ಬಿಎಲ್ಎಗಳ ಮೂಲಕ ಸೂಕ್ತ ದಾಖಲೆ ಒದಗಿಸಿ ಮತದಾರರ ಹಕ್ಕು ರಕ್ಷಿಸಲು ಮುಂದಾಗಬೇಕು ಎಂದು ಸೂಚಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಬೈರತಿ ಸುರೇಶ್, ಯು.ಟಿ. ಖಾದರ್ ಹಾಜರಿದ್ದರು.

