ಗದಗ: ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಕಾರು ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುನಿಲ್ ಲಮಾಣಿ (25) ಆತ್ಮಹತ್ಯೆಗೆ ಶರಣಾದ ಚಾಲಕ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹD ಹಿನ್ನೆಲೆಯಲ್ಲಿ ಸುನೀಲ್ ಲಮಾಣಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಶಾಸಕ ಚಂದ್ರು ಲಮಾಣಿ ಅವರು ಇತ್ತೀಚೆಗೆ ಖರೀದಿಸಿದ್ದ ನಿವಾಸದಲ್ಲೇ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುನಿಲ್ ಅವರು ಶಾಸಕ ಚಂದ್ರು ಅವರ ಸಂಬಂಧಿ ಎಂದೂ ತಿಳಿದುಬಂದಿದೆ. ಯಾವುದೇ ಡೆತ್ನೋಟ್ ಸಹ ಸಿಕ್ಕಿಲ್ಲ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮನೆ ಕಟ್ಟುವ ವಿಷಯದಲ್ಲಿ ಸಹೋದರರ ನಡುವೆ ಜಗಳ ನಡೆದಿದ್ದು, ಈ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆ ಬಗ್ಗೆ ತನಿಖೆ ನಡೆಸಿದ್ದಾರೆ.