ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಆರು ದಿನಗಳ ‘ಹೊನ್ನಾರು’ ನಾಟಕೋತ್ಸವದಲ್ಲಿ ಫೆ.23 ರಂದು ಪ್ರದರ್ಶನಗೊಂಡ ನಾಟಕ “ನೀರಗನ್ನಡಿ’. ಡಾ.ಕೆ.ವೈ.ನಾರಾಯಣಸ್ವಾಮಿಯವರು ಜಾನಪದ ಕಥೆಯನ್ನಾಧರಿಸಿ ಬರೆದ ಈ ನಾಟಕವನ್ನು ‘ನಟರಂಗ” ರಂಗತಂಡವು ನಿರ್ಮಿಸಿದ್ದು ಸೂಕ್ಷ್ಮಸಂವೇದನೆಯ ಬಹುಮುಖಿ ಪ್ರತಿಭೆಯಾದ ಬಿ.ಸುರೇಶರವರು ನಿರ್ದೇಶಿಸಿದ್ದಾರೆ.
“ಕೇಡು ಮತ್ತು ಸೇಡಿಗೆ ಯಾವ ಮಹಿಳೆಯೂ ಎಂದೂ ಕಾರಣರಲ್ಲ. ಎಲ್ಲಾ ಕೇಡಿಗೂ ಪುರುಷರೇ ಕಾರಣ” ಎನ್ನುವ ಸಿದ್ಧಾಂತವನ್ನು ಸದಾ ಪ್ರತಿಪಾದಿಸುವ ಹೆಂಗರುಳಿನ ನಾಟಕಕಾರರಾದ ಕೆವೈಎನ್ ರವರ ಕೆಲವಾರು ನಾಟಕಗಳು ಸ್ತ್ರೀ ಕೇಂದ್ರಿತವಾಗಿದ್ದು ಅದಕ್ಕೆ ‘ನೀರಗನ್ನಡಿ’ ಹೊಸ ಸೇರ್ಪಡೆಯಾಗಿದೆ. ಆದರೆ ತಮ್ಮ ಸ್ತ್ರೀ ಪರ ಖಟ್ಟರ್ ಸಿದ್ಧಾಂತಕ್ಕೆ ವಿರುದ್ಧವಾಗಿ ಕ್ರೂರ ಮನಸ್ಸಿನ ಅತ್ತೆ ಪಾತ್ರವನ್ನು ‘ನೀರಗನ್ನಡಿ’ಯಲ್ಲಿ ಕೆವೈಎನ್ ರವರು ಸೃಷ್ಟಿಸಿದ್ದಾರೆ. ಅಪಶಕುನ ಎಂದು ಮನೆಗೆ ಸೇರಿಸದೇ ನಿಂದಿಸುವ ಅತ್ತೆ ಸೊಸೆಗೆ ಕೊಡಬಾರದ ತೊಂದರೆ ಕೊಟ್ಟು ನರಕ ದರ್ಶನ ಮಾಡಿಸುತ್ತಾಳೆ. ಪ್ರಮಾಣಿಸಿ ನೋಡದೇ ಸೊಸೆಯನ್ನು ಅನುಮಾನಿಸಿ ಯುದ್ಧಭೂಮಿಯಿಂದ ಮಗನನ್ನು ಕರೆಯಿಸಿ ಸೊಸೆಯ ಶೀಲದ ಬಗ್ಗೆ ಆರೋಪಿಸಿ ಕೊಲ್ಲಿಸಲು ಪ್ರೇರೇಪಿಸುತ್ತಾಳೆ. ಹೀಗಾಗಿ ಈ ನಾಟಕದಲ್ಲಿ ಅತ್ತೆ ಪಾತ್ರದಲ್ಲಿರುವ ಮಹಿಳೆಯೇ ಖಳನಾಯಕಿಯಾಗಿ ಕೇಡಿಗೂ ಸೇಡಿಗೂ ಕಾರಣಳಾಗುತ್ತಾಳೆ. ನಾಟಕಕಾರರ ಸ್ತ್ರೀಪರ ಧೋರಣೆಗೆ ವಿರುದ್ಧವಾಗಿ ಈ ಪಾತ್ರ ಮೂಡಿಬಂದಿದೆ. ಕೇಡಿಗೆ ಲಿಂಗಬೇಧ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.

ಈ “ನೀರಗನ್ನಡಿ”ಯ ಹುಟ್ಟಿಗೂ ಒಂದು ಹಿನ್ನೆಲೆ ಇದೆ. ಕಳೆದ ವರ್ಷ ಕಲಾಗ್ರಾಮದಲ್ಲಿ ನಡೆದ ಭಾರತ್ ರಂಗಮಹೋತ್ಸವದಲ್ಲಿ ದೆಹಲಿಯ ಎನ್ ಎಸ್ ಡಿ ಯವರು ಜಾನಪದ ನಾಟಕವೊಂದನ್ನು ಅದ್ಬುತವಾಗಿ ಪ್ರಯೋಗಿಸಿ ಗಮನಸೆಳೆದಿದ್ದರು. ನಾಟಕದ ನಂತರ ಮಾತಾಡುತ್ತಾ ನಟರಂಗದ ಕಪ್ಪಣ್ಣನವರು ನಾವೂ ಕನ್ನಡದಲ್ಲಿ ಇಂತಹ ನಾಟಕ ಮಾಡಬೇಕಲ್ಲಾ ಎಂಬ ಆಸೆ ವ್ಯಕ್ತಪಡಿಸಿದರು. ಕೆ.ವೈ.ನಾರಾಯಣಸ್ವಾಮಿಯವರು ನಾಟಕ ಬರೆದರೆ ತಾವು ನಿರ್ದೇಶಿಸುವುದಾಗಿ ಬಿ.ಸುರೇಶರವರು ಮುಂದೆ ಬಂದರು. ನಾಟಕ ನಿರ್ಮಾಣವನ್ನು ತಾವು ಮಾಡುವುದಾಗಿ ಕಪ್ಪಣ್ಣನವರು ಒಪ್ಪಿಕೊಂಡರು. ಇದೆಲ್ಲಾ ನಡೆದು ಒಂದು ವರ್ಷವಾಗಿರುವಾಗ ಈಗ ಈ ತ್ರಿಮೂರ್ತಿಗಳ ಆಸೆ ನೆರವೇರಿದೆ. ಆದರೆ ಅವರ ಆಶಯ? ಹತ್ತಾರು ಲಕ್ಷ ಖರ್ಚು ಮಾಡಿ ರೆಪರ್ಟರಿಯ ವೃತ್ತಿಪರ ಕಲಾವಿದರಿಗೆ ಎನ್ ಎಸ್ ಡಿ ನಾಟಕ ಮಾಡಿಸಿತ್ತು. ಆದರೆ ಇರುವ ಇತಿಮಿತಿಯಲ್ಲೇ ಸೀಮಿತ ಸಂಪನ್ಮೂಲಗಳನ್ನು ಬಳಸಿ ಕಾಲೇಜಿನ ವಿದ್ಯಾರ್ಥಿಗಳ ಸಮಯವನ್ನು ಹೊಂದಿಸಿಕೊಂಡು, ತಮ್ಮ ಬ್ಯೂಸಿ ಶೆಡ್ಯೂಲಿನಲ್ಲಿ ಬಿ.ಸುರೇಶರವರು ಟೈಂ ಮಾಡಿಕೊಂಡು ನಾಟಕ ಕಟ್ಟಿದರೆ ಎನ್ ಎಸ್ ಡಿ ಎತ್ತರಕ್ಕೆ ನಾಟಕ ಕಟ್ಟಲು ಸಾಧ್ಯವೇ? ಆದರೂ ಅಂತಹುದೊಂದು ಪ್ರಯತ್ನವನ್ನು ಮಾಡಿದ್ದಕ್ಕಾಗಿ ಸಂಘಟಕ, ನಾಟಕಕಾರ, ನಿರ್ದೇಶಕರಾದ ಈ ಮೂವರೂ ಅಭಿನಂದನಾರ್ಹರು.
ಜಾನಪದ ಕಥೆ ಎಂದರೆ ತರ್ಕ ಸಿದ್ಧಾಂತಗಳ ಹಂಗು ತೊರೆದು, ಆಶಯ ಹಾಗೂ ಆಕೃತಿಯನ್ನು ಮಾತ್ರ ಪರಿಗಣಿಸಬೇಕಿದೆ. ಇಲಿಗಳು ಮನುಷ್ಯರಂತೆ ಮಾತಾಡುವುದು, ಸೇಡು ತೀರಿಸಿಕೊಳ್ಳುವುದೂ ಈ ನಾಟಕದಲ್ಲಿ ಸಾಧ್ಯ. ಅದರ ಜೊತೆಗೆ ನಾಟಕಕಾರ ಹಾಗೂ ನಿರ್ದೇಶಕರು ಅಳವಡಿಸಿಕೊಂಡ ರೂಪಕಗಳೂ ಸೇರಿ ನಾಟಕದ ಅಂದವನ್ನು ಹೆಚ್ಚಿಸಿವೆ.
ಆತ ವೀರಕುಮಾರ. ಮದುವೆಗೆ ಹೆಣ್ಣು ಗೊತ್ತಾಗಿದೆ. ವರನಿಗೆ ಅರಿಶಿನ ಶಾಸ್ತ್ರ ಆರಂಭವಾಗಿದೆ. ಅಷ್ಟರಲ್ಲಿ ಯುದ್ಧಕ್ಕಾಗಿ ಯುವಕರನ್ನು ಸೆಳೆದೊಯ್ಯಲು ಸೈನಿಕರು ಬಂದು ವರನನ್ನೂ ಬಲವಂತವಾಗಿ ಕರೆದೊಯ್ಯುತ್ತಾರೆ. “ನವವಧುವಿನ ಕೆಟ್ಟ ಕಾಲ್ಗುಣದಿಂದ ಹೀಗಾಯ್ತು” ಎನ್ನುವ ವರನ ತಾಯಿ ಮದುವೆಗೆ ನಿರಾಕರಿಸುತ್ತಾಳೆ. ಅತ್ತ ಮದುವೆಗೆ ಬಂದ ಹೆಣ್ಣಿನ ಕಡೆಯವರ ದಿಬ್ಬಣದ ಗುಂಪಿಗೆ ವಿಷಯ ತಿಳಿಯುತ್ತದೆ. ಹುಡುಗಿಯ ಜಾತಕವೇ ಸರಿ ಇಲ್ಲವೆಂದು ಆರೋಪಿಸಿದ ಮಲತಾಯಿ ಮದುವೆ ಹೆಣ್ಣನ್ನು ಒಂಟಿಯಾಗಿ ಬಿಟ್ಟು ದಿಬ್ಬಣಿಗರ ಜೊತೆ ತೆರಳುತ್ತಾಳೆ. ನೊಂದ ಹುಡುಗಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ನಿರೂಪಕರಾದ ಜ್ಯೋತಿಗಳು ಬಂದು ಊರ ಪಂಚಾಯತಿಯಲ್ಲಿ ನ್ಯಾಯ ಕೇಳಲು ಆಗ್ರಹಿಸುತ್ತಾರೆ. ಪಂಚಾಯತಿಯಲ್ಲಿ “ವರನ ಬದಲಾಗಿ ಕತ್ತಿಯನ್ನಿಟ್ಟು ಮದುವೆ ಮಾಡಬೇಕು ಹಾಗೂ ವರನ ತಾಯಿ ಸೊಸೆ ಎಂದು ಒಪ್ಪಿ ಮನೆ ಸೇರಿಸಿಕೊಳ್ಳಬೇಕು” ಎಂದು ತೀರ್ಮಾನವಾಗುತ್ತದೆ. ಹಿರಿಯರ ಒತ್ತಾಯದ ನಿರ್ಣಯವನ್ನು ಒಪ್ಪಿದ ಅತ್ತೆ ಸೊಸೆಯನ್ನು ಕರೆತಂದು ದುಡಿಸಿಕೊಂಡು ಊಟ ಕೊಡದೇ ಕಿರುಕುಳ ಕೊಡುತ್ತಾಳೆ. ಜ್ಯೋತಿಷಿಗಳ ಸಲಹೆಯಂತೆ ಕದ್ದು ಊಟ ಮಾಡುವ ಸೊಸೆ ‘ಇಲಿಗಳೇ ತಿಂದವೆಂದು’ ಸುಳ್ಳು ಹೇಳುತ್ತಾಳೆ. ಇದರಿಂದ ಸಿಟ್ಟಿಗೆದ್ದ ಇಲಿಗಳು ಸೇಡು ತೀರಿಸಿಕೊಳ್ಳಲು ಸಮಯಕ್ಕಾಗಿ ಕಾದಿರುತ್ತವೆ.
ಅದೊಂದು ದಿನ ಭವಿಷ್ಯ ಹೇಳುವ ಬುಡುಬುಡುಕೆಯವ ಬಂದು “ಮನೆ ಮಗ ಯುದಗ್ಧದಿಂದ ಬದುಕಿ ಬರಬೇಕಾದರೆ ರಾತ್ರಿ ಪೂಜೆ ಮಾಡಿ ಯಂತ್ರ ಕಟ್ಟಿಕೊಳ್ಳಬೇಕು” ಎನ್ನುತ್ತಾನೆ. ಪೂಜೆಯ ನಂತರ ಪಡಸಾಲೆಯಲ್ಲಿ ಮಲಗಿರುತ್ತಾನೆ. ಸೇಡಿಗಾಗಿ ಕಾದಿದ್ದ ಇಲಿಗಳು ಆತನ ಮುಂಡಾಸು ಹಾಗೂ ಬಟ್ಟೆಗಳನ್ನು ಒಳಮನೆಯಲ್ಲಿದ್ದ ಸೊಸೆಯ ಬಳಿ ಹಾಗೂ ಆಕೆ ಮುಡಿದ ಹೂಮಾಲೆಯನ್ನು ಅಲೆಮಾರಿ ಬಳಿ ಅದಲು ಬದಲು ಮಾಡುತ್ತವೆ. ಬೆಳಿಗ್ಗೆ ಇದನ್ನು ನೋಡಿ ಸಂದೇಹ ಪಟ್ಟ ಅತ್ತೆ ತನ್ನ ಮಗನನ್ನು ರಣಭೂಮಿಯಿಂದ ಕರೆಸಿಕೊಂಡು ಸೊಸೆಯ ಮೇಲೆ ಅನೈತಿಕ ಸಂಬಂಧದ ಆರೋಪ ಹೊರೆಸಿ ಆಕೆಯನ್ನು ಸಾಯಿಸಲು ಪ್ರೇರೇಪಿಸುತ್ತಾಳೆ. ಹೆಂಡತಿಯ ಮೇಲೆ ಪ್ರೀತಿ ಇದ್ದರೂ ಅನುಮಾನಪೀಡಿತನಾದ ವೀರಕುಮಾರನು ಆಕೆಯನ್ನು ಕೊಲೆ ಮಾಡಲು ಕತ್ತಿ ಮಸೆಯುತ್ತಾನಾದರೂ ಅತನ ಮನಸ್ಸು ಒಪ್ಪುವುದಿಲ್ಲ. ದಂಡಿನಿಂದ ಬಂದ ಗಂಡನ ಸಂದೇಹ ಹಾಗೂ ಸಾಯಿಸುವ ಮನೋಭಾವ ಗೊತ್ತಾಗಿ ಅನುಮಾನದ ಅವಮಾನಕ್ಕಿಂತ ಸ್ವಾಭಿಮಾನವೇ ಮುಖ್ಯವೆಂದುಕೊಂಡ ಆಕೆ ಗಂಡನ ಮನೆಯನ್ನು ತೊರೆಯುತ್ತಾಳೆ. ಇದು ಈ ಜಾನಪದ ನಾಟಕದ ತಿರುಳು. ಜಾನಪದ ಕಥಾಸಕ್ತರಿಗೆ ಈ ಕಥೆ ಗೊತ್ತಿರುವಂತಹುದೇ ಆದರೂ ಈ ನಾಟಕದ ‘ನೀರಗನ್ನಡಿ’ಯಲ್ಲಿ ಗಂಡಾಳ್ವಿಕೆಯ ಅಹಂಕಾರ ಹಾಗೂ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಕಾಣಬಹುದಾಗಿದೆ.

ಆಗಬಹುದಾದ ದುರಂತವನ್ನು ತಪ್ಪಿಸಲು ಜ್ಯೋತಿಗಳು ಪ್ರಯತ್ನಿಸುತ್ತವೆ. ಎಲ್ಲರಿಂದ ಪರಿತ್ಯಕ್ತ ಹೆಣ್ಣಿಗೆ ಬೆಂಗಾವಲಾಗಿ ನಿಲ್ಲುತ್ತವೆ. ಸಂದೇಹಕ್ಕೆ ಬಲಿಯಾಗುತ್ತಿದ್ದ ಮಹಿಳೆಗೆ ಸಾಂತ್ವನ ಹೇಳಿ ಸ್ವಾಭಿಮಾನವನ್ನೂ ತುಂಬುತ್ತವೆ. ಕೊನೆಗೆ ಪ್ರಕೃತಿ ಮತ್ತು ಪುರುಷ ಸಂಬಂಧಗಳಲ್ಲಿ ಸಹಜೀವನ ಸಹಬಾಳ್ವೆಗಳೇ ಕೌಟುಂಬಿಕ ಸಮತೋಲನ ಕಾಪಾಡಬಲ್ಲವು ಎಂಬ ಸಂದೇಶವನ್ನು ಹಾಡಿನ ಮೂಲಕ ಕೊಡುತ್ತವೆ. ದಾಂಪತ್ಯಗಳು ವಿಪತ್ತಿನಲ್ಲಿರುವ ಪ್ರಸ್ತುತ ಕಾಲಘಟ್ಟದಲ್ಲಿ ನೊಂದು ತಮ್ಮನ್ನು ತಾವೇ ಕೊಂದುಕೊಳ್ಳಲು ನಿರ್ಧರಿಸುವ ಮಹಿಳೆಯರಿಗೆ ಈ ನಾಟಕ ಕಷ್ಟಗಳನ್ನು ದಿಟ್ಟವಾಗಿ ಎದುರಿಸಿ ಬದುಕುವ ಧೈರ್ಯವನ್ನು ಕೊಡುತ್ತದೆ. ಅವಮಾನಕ್ಕೊಳಗಾಗಿ ಆತ್ಮಾಭಿಮಾನಕ್ಕೆ ಧಕ್ಕೆಯಾದಾಗ ಮಹಿಳೆ ತನ್ನ ಸ್ವಾಭಿಮಾನದ ಉಳಿವಿಗಾಗಿ ದಮನವನ್ನು ಧಿಕ್ಕರಿಸಿ ಸ್ವತಂತ್ರವಾಗಿ ಬದುಕುವ ನಿರ್ಧಾರ ತೆಗೆದುಕೊಳ್ಳುವ ಆತ್ಮಸ್ಥೈರ್ಯವನ್ನೂ ‘ನೀರಗನ್ನಡಿ’ ನೀಡುತ್ತದೆ. ಇದನ್ನೇ ಅಕ್ಕಮಹಾದೇವಿ ಮಾಡಿದ್ದು, ಇದನ್ನೇ ಮಹಾಭಾರತದ ಮಾಧವಿ ಪಾತ್ರ ತೋರಿಸಿದ್ದು.
ಪುರುಷಪ್ರಧಾನ ವ್ಯವಸ್ಥೆ ಪ್ರಬಲವಾಗಿರುವ ಕಾಲಘಟ್ಟದಲ್ಲಿ ನಮ್ಮ ಜನಪದರು ಗಂಡಾಳ್ವಿಕೆಯ ಬಂಡತನವನ್ನು ಪ್ರಶ್ನಿಸಿ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ಹಾಗೂ ಸ್ವಾಭಿಮಾನದ ಬದುಕನ್ನು ಬಾಳುವ ಅವಕಾಶವನ್ನು ಕಥೆಯ ಮೂಲಕ ಕಟ್ಟಿ ಕೊಟ್ಟಿದ್ದು ಮಹಿಳಾ ಸಬಲೀಕರಣದ ದ್ಯೋತಕವಾಗಿದೆ.
ಯುದ್ದವೆಂಬುದು ಸೃಷ್ಟಿಸುವ ಸಾಮಾಜಿಕ ತಲ್ಲಣವನ್ನೂ ಈ ‘ನೀರಗನ್ನಡಿ’ ಪ್ರತಿಫಲಿಸುತ್ತದೆ. ಮದುವೆಯ ಮಂಟಪದಿಂದಲೇ ವರನನ್ನು ಬಲವಂತವಾಗಿ ಎತ್ತಿಕೊಂಡು ಹೋಗುವಂತಹ ಅಮಾನವೀಯ ಕ್ರೌರ್ಯವನ್ನು ಯುದ್ದ ಸೃಷ್ಟಿಸುತ್ತದೆ. ಯಾರು, ಯಾರಿಗಾಗಿ, ಯಾರ ಪರ, ಯಾರ ವಿರುದ್ಧ ಯುದ್ದ ಮಾಡಬೇಕು ಎಂಬುದನ್ನು ಅರಿಯದೇ ಕಾದಾಡುವ ಕಾಲಾಳುಗಳ ದಮನೀಯ ಸ್ಥಿತಿಗೆ ಕುಮಾರವೀರನಂತಹ ಯುವಕರು ಸಾಕ್ಷಿಯಾಗುತ್ತಾರೆ ಎಂಬುದನ್ನು ಈ ನಾಟಕ ಸೂಕ್ಷ್ಮವಾಗಿ ಹೇಳುತ್ತದೆ.
ಈ ನಾಟಕ, ಅದರ ನಿರೂಪಣಾ ತಂತ್ರಗಳನ್ನು ನೋಡಿದಾಗ ಈ ಹಿಂದೆ ಕನ್ನಡ ರಂಗಭೂಮಿಯಲ್ಲಿ ಮೂಡಿಬಂದ ಜಾನಪದ ಶೈಲಿಯ ನಾಟಕಗಳು, ಕುಸುಮಬಾಲೆ ನಾಟಕದ ನಿರೂಪಣೆ ನೆನಪಾಗುತ್ತವೆ. ಅದೇ ಪಾರಂಪರಿಕ ಜಾಡಿನಲ್ಲೇ ನೀರಗನ್ನಡಿ ಪ್ರತಿಫಲನಗೊಂಡಿದೆ. ಏನೇ ಆಗಲಿ ಜಾನಪದ ಕಥಾನಕಕ್ಕೆ ಮಾಂತ್ರಿಕ ಸ್ಪರ್ಷ ನೀಡಲು ನಿರ್ದೇಶಕರು ಕೆಲವಾರು ರಂಗತಂತ್ರಗಳನ್ನು ಬಳಸಿಕೊಂಡಿದ್ದಾರೆ. ಸ್ಟೇಜ್ ಹಿಂದೆ, ಸೈಕ್ ಮುಂದೆ ಇಳಿಬಿಟ್ಟ ತುಂಡು ಪರದೆಗಳು ಹಾಗೂ ಅವುಗಳ ಮೇಲೆ ಸನ್ನಿವೇಶಕ್ಕೆ ತಕ್ಕಂತೆ ಮೂಡುವ ಒಡಕಲು ಬಿಂಬಗಳ ಚಿತ್ರಗಳು ನೋಡುಗರ ಚಿತ್ತವನ್ನು ಸೆಳೆಯುತ್ತವೆ. ಗುಂಪು ನಿರ್ವಹಣೆ ಹಾಗೂ ಸಂಭ್ರಮದ ಸನ್ನಿವೇಶಗಳು ಸೊಗಸಾಗಿ ಮೂಡಿಬಂದಿವೆ.

ನಾಟಕದ ಸೊಬಗನ್ನು ಹೆಚ್ಚಿಸಿ ಕನಸಿನ ಲೋಕವನ್ನು ಸೃಷ್ಟಿಸಿದ್ದು ಅಕ್ಷರ ವೇಣುಗೋಪಾಲರವರ ಬೆಳಕಿನ ವಿನ್ಯಾಸ. ಮಂದವಾದ ಬೆಳಕಿನ ಸಂಯೋಜನೆ, ಹಿನ್ನೆಲೆಯಲ್ಲಿದ್ದ ಬಿತ್ತಿ ಚಿತ್ರಗಳ ಮೇಲಿನ ಬಣ್ಣಗಳ ಬದಲಾವಣೆಗಳು ನಾಟಕವನ್ನು ಆಕರ್ಷಣೀಯವಾಗಿಸಿವೆ. ಎಂಡಿ ಪಲ್ಲವಿಯವರ ಸಂಗೀತ ಸಂಯೋಜನೆ ಹಾಗೂ ಹಾಡುಗಳು ನಾಟಕದ ಹೈಲೈಟ್ ಆಗಿವೆಯಾದರೂ ಕಲಾಕ್ಷೇತ್ರದ ಕರ್ಕಶ ಸೌಂಡ್ ವ್ಯವಸ್ಥೆಯಿಂದಾಗಿ ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಮೂಡಿ ಬರಲಿಲ್ಲ, ಅಗತ್ಯವಾದ ಮೂಡನ್ನೂ ಹುಟ್ಟಿಸಲಿಲ್ಲ. ಈ ರಿಕಾರ್ಡೆಡ್ ಹಾಡು ಸಂಗೀತಗಳಿಗಿಂತಾ ಲೈವ್ ಆಗಿ ಬಳಸಿದ್ದರೆ ನಾಟಕದ ಲೇವಲ್ ಇನ್ನೂ ಎತ್ತರಕ್ಕೇರುತ್ತಿತ್ತು.
ಬಿ.ಸುರೇಶರವರ ನಿರ್ದೇಶನದ ನಾಟಕಗಳಲ್ಲಿ ಸೆಟ್ ಹಾಗೂ ಪ್ರಾಪರ್ಟಿಗಳ ಬಳಕೆ ಅಗತ್ಯ ಇರುವಷ್ಟು ಮಾತ್ರವೇ ಬಳಕೆಯಾಗಿರುತ್ತವೆ. ಈ ನಾಟಕದಲ್ಲೂ ಸಹ ಮಿತವಾಗಿವೆ. ಇಂಟಿಮೇಟ್ ಥಿಯೇಟರ್ಗೆ ಸರಿಹೊಂದಬಹುದಾದ ಸೆಟ್ ವಿನ್ಯಾಸವು ಸೆಂಟರ್ ಸ್ಟೇಜಿಗೆ ಸೀಮಿತವಾಗಿ ಕಲಾಕ್ಷೇತ್ರದ ದೊಡ್ಡ ವೇದಿಕೆ ಖಾಲಿ ಖಾಲಿ ಎನ್ನಿಸುವಂತಿತ್ತು. ಆದರೂ ಶಶಿಧರ್ ಅಡಪರವರ ಸೆಟ್ ಪ್ರಾಪ್ಸ್ ವಿನ್ಯಾಸ ಅತ್ಯಂತ ಸರಳವೂ ಹಾಗೂ ಆಕರ್ಷಣೀಯವಾಗಿಯೂ ಮೂಡಿಬಂದಿದೆ.
ಅದ್ಯಾಕೋ ಆರಂಭ ಹಾಗೂ ಅಂತ್ಯದಲ್ಲಿ ಕಲಾವಿದರುಗಳು ಬೀದಿ ನಾಟಕದ ಮಾದರಿಯಲ್ಲಿ ಬಳಸಿದ ಒಂದೇ ರೀತಿಯ ಕಾಸ್ಟ್ಯೂಮ್ ಗಳು ಇಂತಹ ಪ್ರಿಸೀನಿಯಮ್ ನಾಟಕಕ್ಕೆ ಸರಿಹೊಂದಿಲ್ಲ. ಕಾಲ ಸನ್ನಿವೇಶಗಳಿಗೆ ಅನುಗುಣವಾಗಿ ಎನ್.ಮಂಗಳರವರು ಇನ್ನೂ ವಿಭಿನ್ನವಾಗಿ ವಸ್ತ್ರ ವಿನ್ಯಾಸ ಮಾಡಬಹುದಾಗಿತ್ತು. ಮದುವೆ ದಿಬ್ಬಣದ ಮಹಿಳೆಯರಿಗೆ ರೇಷ್ಮೆ ಸೀರೆ ಬದಲಾಗಿ ಕರೆಂಟ್ ಇಲ್ಲದ ಆ ಕಾಲದ ವಸ್ತ್ರಗಳನ್ನು ಬಳಸಬಹುದಾಗಿತ್ತು.
ಇಂತಹ ನಾಟಕಕ್ಕೆ ಹೆಚ್ಚು ಅನುಭವ ಹೊಂದಿರುವ ಕಲಾವಿದರುಗಳು ಬೇಕಾಗುತ್ತಾರೆ. ‘ನಟರಂಗ’ ದಂತಹ ಹಿರಿಯ ತಂಡದ ನಾಟಕ ನೋಡಲು ಬರುವವರ ನಿರೀಕ್ಷೆ ಹೆಚ್ಚೇ ಆಗಿರುತ್ತದೆ. ಆದರೆ ಸುರಾನಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನೇ ಹೆಚ್ಚಾಗಿ ಪಾತ್ರವಾಗಿಸಿದ್ದು ತಪ್ಪೇನಲ್ಲವಾದರೂ ನಟನೆಯಲ್ಲಿ ವೃತ್ತಿಪರತೆಯನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ. ಈ ಯುವ ಕಲಾವಿದರು ಗಟ್ಟಿಯಾದ ನಾಟಕ ಕಟ್ಟಲು ಇನ್ನೂ ಪಳಗಬೇಕಿದೆ. ಮೊದಲ ಪ್ರದರ್ಶನವಾಗಿದ್ದರಿಂದಲೋ ಏನೋ ಈ ನಾಟಕ ಸ್ಟೇಜ್ ರಿಹರ್ಸಲ್ ನಂತೆ ಗೋಚರವಾಯಿತೇ ಹೊರತು ಫೈನ್ ಪ್ರೊಡಕ್ಟ್ ಆಗಿ ಅಲ್ಲ. ಅಪಾರ ನಿರೀಕ್ಷೆ ಇಟ್ಟು, ಇನ್ನೂರು ಮುನ್ನೂರು ರುಪಾಯಿಯ ಟಿಕೆಟ್ ದರ ಕೊಟ್ಟು ಹೋದವರಲ್ಲಿ ಈ ಪ್ರದರ್ಶನ ತುಂಬಾ ನಿರಾಸೆಯನ್ನುಂಟುಮಾಡಿದ್ದಂತೂ ಸತ್ಯ. ಈ ಯುವ ನಟ ನಟಿಯರು ಪ್ರಯತ್ನಿಸಿದರೆ, ನಿರ್ದೇಶಕರು ಇನ್ನಷ್ಟು ಶ್ರಮ ಹಾಕಿದರೆ ಮುಂದಿನ ಪ್ರದರ್ಶನಗಳಲ್ಲಿ ಈ ನಾಟಕ ಕಳೆಗಟ್ಟಬಹುದಾಗಿದೆ. ಅಲ್ಲಿವರೆಗೂ ಟಿಕೆಟ್ ಇಟ್ಟು ಪ್ರದರ್ಶನ ಮಾಡುವುದನ್ನು ನಿಲ್ಲಿಸಬಹುದಾಗಿದೆ.

ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- http://ರಂಗ ವಿಮರ್ಶೆ | ಮನುಷ್ಯರಿಗಾಗಿ ‘ಭಗವಂತನ ಮರಣ’ https://kannadaplanet.com/theatre-review-gods-death-for-humans/


