ಪ್ರಶಸ್ತಿ ಪಡಕೊಂಡವರಿಗಿಂತ ಹೊಡಕೊಂಡವರೇ ಹೆಚ್ಚಾಗಿರುವಾಗ, ಅಧ್ಯಕ್ಷರಾದವರು ಸ್ವಜನ ಪಕ್ಷಪಾತಿಯಾದಾಗ, ಲಾಭಿಕೋರರ ಹಾವಳಿ ಹೆಚ್ಚಾಗಿರುವಾಗ, ಕೆಲವು ಸದಸ್ಯರುಗಳು ‘ಪ್ರಶಸ್ತಿ ನಿಮಗೆ ಪ್ರಶಸ್ತಿಯ ಮೊತ್ತ ನಮಗೆ’ ಎನ್ನುವ ಡೀಲ್ ಗೆ ಇಳಿದಾಗ ಅಕಾಡೆಮಿಯ ಪ್ರಶಸ್ತಿಗಳಿಗೆ ಘನತೆ ಗೌರವ ಬೆಲೆಯೇ ಇಲ್ಲದಂತಾಗುತ್ತದೆ. ಇದೆಲ್ಲಾ ಬದಲಾಗಬೇಕಿದೆ- ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಜುಲೈ 24 ರಂದು ಪ್ರಕಟವಾಗಿದೆ. ಯಥಾ ಪ್ರಕಾರ ವಿರೋಧ, ಅಪಸ್ವರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸರಕಾರಿ ಕೃಪಾ ಪೋಷಿತ ಸಂಸ್ಥೆಗಳ ಪ್ರಶಸ್ತಿಗಳು ಪ್ರಕಟವಾದಾಗಲೆಲ್ಲಾ ಈ ರೀತಿಯ ಅಸಮಾಧಾನ ನಿರೀಕ್ಷಿತವಾಗಿರುವಂತಹುದೆ. ಇವರಿಗಿಂತಾ ಅವರಿಗೆ ಪ್ರಶಸ್ತಿ ಕೊಡಬೇಕಿತ್ತು, ಅವರಿಗಿಂತಾ ಇವರಿಗೆ ಪ್ರಶಸ್ತಿ ಕೊಟ್ಟಿದ್ದರೆ ಚೆನ್ನಾಗಿತ್ತು. ಪ್ರಶಸ್ತಿ ಪಡೆಯಲು ಅವರ ಅರ್ಹತೆ ಏನು? ಪ್ರಶಸ್ತಿಗೆ ಆಯ್ಕೆಯಾದವರು ರಂಗಭೂಮಿಗೆ ಕೊಟ್ಟ ಕೊಡುಗೆಯಾದರೂ ಏನು? ಈ ಪ್ರಶಸ್ತಿಗಳ ಅಯ್ಕೆಗೆ ಮಾನದಂಡಗಳಾದರೂ ಏನಿವೆ? ಹೀಗೆ ಇನ್ನೂ ಅನೇಕಾನೇಕ ಪ್ರಶ್ನೆಗಳು ಕೇಳಲ್ಪಡುತ್ತವೆ. ಪ್ರಶಸ್ತಿ ಪಡಕೊಂಡವರು ಹಾಗೂ ಹೊಡಕೊಂಡವರು ಸಂಭ್ರಮಿಸಿದರೆ, ಪ್ರಶಸ್ತಿ ದೊರಕದ ಆಕಾಂಕ್ಷಿಗಳು ಸಂಕಟ ಪಡುವುದು ಸಹಜವಾಗಿದೆ.
ಈ ಸಲದ ನಾಟಕ ಅಕಾಡೆಮಿಯ ಪ್ರಶಸ್ತಿಗಳ ಕುರಿತು ಅಸಮಾಧಾನ ತುಸು ಹೆಚ್ಚೇ ಆಗಿದೆ. ಅದರಲ್ಲೂ ಮಹಿಳಾ ರಂಗಕರ್ಮಿಗಳ ಪರವಾದ ಆಕ್ಷೇಪಣೆ ಪ್ರಮುಖವಾಗಿವೆ. ಯಾಕೆಂದರೆ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಲಿಂಗಬೇಧ ಮಾಡಲಾಗಿದ್ದು ಮಹಿಳಾ ರಂಗಕರ್ಮಿಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಪ್ರತಿಧ್ವನಿಸುತ್ತಿದೆ. ಒಟ್ಟು ಇರುವ 34 ಪ್ರಶಸ್ತಿಗಳ ಪಟ್ಟಿಯಲ್ಲಿ ಕೇವಲ ಮೂವರು ಮಹಿಳೆಯರ ಹೆಸರು ಮಾತ್ರ ಇರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ನಾಟಕ ಅಕಾಡೆಮಿಯಲ್ಲಿ ಒಟ್ಟು 18 ಜನ ಸದಸ್ಯರಿದ್ದು ಅದರಲ್ಲಿ ಐವರು ಮಹಿಳಾ ಸದಸ್ಯೆಯರಿದ್ದಾರೆ. ಪುರುಷ ಸದಸ್ಯರನ್ನು ಬಿಟ್ಟಾಕಿದರೂ ಮಹಿಳಾ ಸದಸ್ಯರಾದರೂ ಕಲಾವಿದೆಯರಿಗೆ ಪ್ರಶಸ್ತಿ ಕೊಡಿಸಬಹುದಿತ್ತಲ್ವಾ ಎನ್ನುವ ಪ್ರಶ್ನೆ ಕೇಳಲ್ಪಡುತ್ತಿದೆ. ಆದರೆ ಇರುವ ಎಲ್ಲಾ ಸದಸ್ಯರುಗಳಲ್ಲಿ ಒಬ್ಬ ಮಹಿಳಾ ಸದಸ್ಯೆ ಮಾತ್ರ ಮಹಿಳೆಯೊಬ್ಬರ ಹೆಸರನ್ನು ಹೆಸರಿಸಿದ್ದರು. ಇನ್ನಿಬ್ಬರು ಮಹಿಳೆಯರು ಅಧ್ಯಕ್ಷರ ಆಯ್ಕೆ. ಮತ್ತೆ ಯಾವುದೇ ಸದಸ್ಯರೂ ಯಾವುದೇ ಮಹಿಳೆಯರ ಹೆಸರನ್ನು ಪ್ರಸ್ತಾಪಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಅಧ್ಯಕ್ಷರೂ ಸಹ ಹೆಚ್ಚು ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸುವ ಪ್ರಯತ್ನಕ್ಕೂ ಹೋಗಲಿಲ್ಲ.
ಇದೇನಾ ಗಂಡಾಳ್ವಿಕೆಯ ಪುರುಷಹಂಕಾರ? ಅಕಾಡೆಮಿ ಎನ್ನುವುದು ಕೇವಲ ಪುರುಷ ಪುಂಗವರ ಪಾರಮ್ಯದ ಪ್ರತೀಕವಾ? ಯಾವ ಪುರುಷ ಸದಸ್ಯರೂ ಯಾವೊಬ್ಬ ಕಲಾವಿದೆಯ ಹೆಸರನ್ನೂ ಪ್ರಸ್ತಾಪಿಸಿಲ್ಲ? ಮಹಿಳೆಯರೇ ಇಲ್ಲದೇ ರಂಗಕ್ರಿಯೆ ಪೂರ್ಣಗೊಳ್ಳಲು ಸಾಧ್ಯವೇ? ನಟಿಯರೇ ಇಲ್ಲದೇ ನಾಟಕ ಕಟ್ಟಲು ಆಗುವುದೇ? ಸಾಧ್ಯವಿಲ್ಲ ಎನ್ನುವುದಾದರೆ ಕಲಾವಿದೆಯರನ್ನು ಯಾಕೆ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ನಿರ್ಲಕ್ಷಿಸಲಾಗಿದೆ? ಯಾಕೆ ಯಾಕೆಂದರೆ ಇಡೀ ನಾಟಕ ಅಕಾಡೆಮಿಯೇ ರಂಗಭೂಮಿಯಲ್ಲಿ ಮಹಿಳೆಯರ ಅಸ್ತಿತ್ವವನ್ನೇ ಮರೆತಂತಿದೆ. ನಾಟಕ ನಿರ್ಮಿತಿಯ ಪ್ರಕ್ರಿಯೆಯಲ್ಲಿ ಮಹಿಳೆಯರು ಬೇಕು, ಪ್ರಶಸ್ತಿಗಳ ಹಂಚಿಕೆಯಲ್ಲಿ ಮಾತ್ರ ಅವರ ಅಗತ್ಯವಿಲ್ಲ ಎನ್ನುವ ಧೋರಣೆ ಅಕಾಡೆಮಿಯದ್ದಾದಂತಿದೆ. ಇದು ಖಂಡಿತಾ ಖಂಡನೀಯ ಹಾಗೂ ಲಿಂಗ ಅಸಮಾನತೆ ತೋರಿದ ಅಕಾಡೆಮಿಯ ಮಹಿಳಾ ವಿರೋಧಿತನಕ್ಕೆ ಧಿಕ್ಕಾರ ಹೇಳಲೇಬೇಕಿದೆ.
ಇದರ ಜೊತೆಗೆ ಪ್ರತಿ ಸಲದಂತೆ ಘೋಷಿತ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಅಸಮಾನತೆಯ ಪ್ರಶ್ನೆಯೂ ಕೇಳಿಬರುತ್ತಿದೆ. ಅಕಾಡೆಮಿ ಕೊಡಮಾಡುವ ಪ್ರಶಸ್ತಿಗಳಲ್ಲಿ ಒಂದು ಜೀವಮಾನದ ಸಾಧನೆ ಪ್ರಶಸ್ತಿ ಹಾಗೂ 24 ವಾರ್ಷಿಕ ಪ್ರಶಸ್ತಿ, ಒಂದು ಯುವ ಪ್ರಶಸ್ತಿ ಮತ್ತು 8 ದತ್ತಿ ನಿಧಿ ಪ್ರಶಸ್ತಿ. ಒಟ್ಟು ಸೇರಿದರೆ 34 ಪ್ರಶಸ್ತಿಗಳು. ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳಿವೆ. ಕೆಲವು ಜಿಲ್ಲೆಗಳಲ್ಲಿ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿರದೇ ಇದ್ದರೂ ಅಂತಹ ಜಿಲ್ಲೆಯ ಕಲಾವಿದರು ಬೇರೆ ಕಡೆ ರಂಗಭೂಮಿಯಲ್ಲಿ ತೊಡಗಿಸಿ ಕೊಂಡಿರುತ್ತಾರೆ. ಅಂತವರನ್ನು ಅಕಾಡೆಮಿ ಗುರುತಿಸಬೇಕಾಗುತ್ತದೆ. ಪ್ರತಿ ಜಿಲ್ಲೆಗೆ ತಲಾ ಒಬ್ಬರು ರಂಗಕರ್ಮಿಗಳಿಗೆ ಪ್ರಶಸ್ತಿ ಕೊಟ್ಟರೂ ಇನ್ನೂ ಮೂರು ಪ್ರಶಸ್ತಿಗಳು ಉಳಿಯುತ್ತವೆ. ಆದರೆ ಈ ಮಾನದಂಡ ಅನುಸರಿಸುವುದು ವಾಸ್ತವದಲ್ಲಿ ಕಷ್ಟಸಾಧ್ಯ. ಯಾಕೆಂದರೆ ಬೆಂಗಳೂರು ಮೈಸೂರು ಧಾರವಾಡ ಕಲಬುರ್ಗಿಯಂತಹ ಪಟ್ಟಣಗಳಲ್ಲಿ ರಂಗ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಎಲ್ಲಿ ಚಟುವಟಿಕೆಗಳಿರುತ್ತವೋ ಅಲ್ಲಿ ರಂಗಕರ್ಮಿಗಳು ಹೆಚ್ಚಾಗಿರುತ್ತಾರೆ. ಹೀಗೆ ರಂಗಕ್ರಿಯೆಯಲ್ಲಿ ಕ್ರಿಯಾಶೀಲರಾಗಿರುವವರನ್ನು ಪ್ರಶಸ್ತಿಗೆ ಪರಿಗಣಿಸಲೇಬೇಕಾಗುತ್ತದೆ. ಹಾಗಂತ ಈ ಸಲದಂತೆ ಬೆಂಗಳೂರಿನವರಿಗೇ ಸಿಂಹಪಾಲು ಕೊಟ್ಟಿರುವುದು ಪ್ರಶ್ನಾರ್ಹವಾಗಿದೆ. ಈ ಪ್ರಾದೇಶಿಕ ಅಸಮಾನತೆಯನ್ನು ಬ್ಯಾಲನ್ಸ್ ಮಾಡುವ ನಿಟ್ಟಿನಲ್ಲಿ ಅಕಾಡೆಮಿಯ ಅಧ್ಯಕ್ಷರು ಯೋಚಿಸಬೇಕಿತ್ತು. ಆದರೆ ತಮ್ಮ ರಂಗತಂಡದ ಕಲಾವಿದರಿಗೆ ಹಾಗೂ ತಮಗೆ ಬೇಕಾದವರಿಗೆ ಮಾತ್ರ ಪ್ರಶಸ್ತಿ ಕೊಡುವುದನ್ನೇ ತಮ್ಮ ಆದ್ಯತೆ ಆಗಿಸಿಕೊಂಡಿರುವ ಹಾಲಿ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿಯವರಿಗೆ ಈ ಲಿಂಗ ಸಮಾನತೆ, ಪ್ರಾದೇಶಿಕ ಮಾನ್ಯತೆ ಅರ್ಥವಾಗುವುದೂ ಇಲ್ಲಾ, ಅರ್ಥವಾದರೂ ಅನುಸರಿಸುವುದಿಲ್ಲ. ಯಾಕೆಂದರೆ ಸರ್ವಾಧಿಕಾರಿ ಮನೋಭಾವದ ಅಧ್ಯಕ್ಷನಿಗೆ ಯಾರ ಸಲಹೆ ಸೂಚನೆಗಳೂ ಅನ್ವಯಿಸುವುದಿಲ್ಲ. ಸಾವಿರಾರು ಟೀಕೆಗಳೂ ಬಾಧಿಸುವುದಿಲ್ಲ.
ಸರಕಾರಿ ಕೃಪಾ ಪೋಷಿತ ಅಕಾಡೆಮಿಗಳಲ್ಲಿ ಪ್ರಶಸ್ತಿಯ ಆಯ್ಕೆ ಮಾನದಂಡಗಳೇ ಸರಿಯಾಗಿಲ್ಲ. ಅಕಾಡೆಮಿಯ ಪ್ರತಿ ಸದಸ್ಯರು ತಮಗೆ ಬೇಕಾದ ಒಬ್ಬರು ಇಲ್ಲವೇ ಇಬ್ಬರ ಹೆಸರನ್ನು ಪ್ರಶಸ್ತಿಗೆ ಸೂಚಿಸುತ್ತಾರೆ. ಎಲ್ಲಾ ಸದಸ್ಯರನ್ನು ಸಮಾಧಾನ ಪಡಿಸಲು ಒಬ್ಬರಿಗೆ ಒಂದು ಪ್ರಶಸ್ತಿ ಕೋಟಾ ಹಂಚಿಕೆ ಮಾಡಲಾಗುತ್ತದೆ. 18 ಜನ ಸದಸ್ಯರಿದ್ದರೆ ಅವರ ಆಯ್ಕೆಯ 18 ಜನರಿಗೆ ಪ್ರಶಸ್ತಿ ಫಿಕ್ಸ್ ಮಾಡಲಾಗುತ್ತದೆ. ಬಾಕಿ ಇರುವ ಪ್ರಶಸ್ತಿಗಳು ಅಧ್ಯಕ್ಷರ ಕೋಟಾ ಆಗಿದ್ದು ಅವರು ತಮಗೆ ಬೇಕಾದವರಿಗೆ ಪ್ರಶಸ್ತಿಗಳನ್ನು ಹಂಚಿಕೆ ಮಾಡಿಕೊಳ್ಳುತ್ತಾರೆ. ಯಾರಾದರೂ ಸದಸ್ಯರು ಅಧ್ಯಕ್ಷರ ಕೋಟಾ ಕುರಿತು ಆಕ್ಷೇಪ ವ್ಯಕ್ತಪಡಿಸಿದರೆ “ಮಂತ್ರಿಗಳಿಂದ ಒತ್ತಡವಿದೆ, ಹೈಲೆವಲ್ ನಿಂದ ರೆಕಮೆಂಡೇಶನ್ ಬಂದಿದೆ, ಹೀಗಾಗಿ ಅವರ ಬೇಡಿಕೆಗಳನ್ನೂ ಈಡೇರಿಸಬೇಕಾಗುತ್ತದೆ” ಎಂದು ಹೇಳಿ ಸದಸ್ಯರುಗಳ ಬಾಯನ್ನು ಅಧ್ಯಕ್ಷರಾದವರು ಮುಚ್ಚಿಸಿ ಬಿಡುತ್ತಾರೆ. ಸಧ್ಯ ನಾವು ಸೂಚಿಸಿದ ಒಬ್ಬರಿಗಾದರೂ ಪ್ರಶಸ್ತಿ ದಕ್ಕಿತಲ್ಲಾ ಎಂದು ಸದಸ್ಯರು ಸಮಾಧಾನ ಪಟ್ಟುಕೊಳ್ಳುತ್ತಾರೆ.
ಯಾವುದೇ ಸಿದ್ಧ ಮಾನದಂಡಗಳಿಲ್ಲದ ಪ್ರಶಸ್ತಿ ಆಯ್ಕೆಯ ಈ ಮಾದರಿಯೇ ಈ ರೀತಿಯ ಅಸಮಾನತೆಗಳಿಗೆ, ಅಸಮಾಧಾನಗಳಿಗೆ ಮುಖ್ಯ ಕಾರಣಗಳಾಗಿವೆ. ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯ ಮಾನದಂಡಗಳನ್ನೇ ಅಕಾಡೆಮಿಗಳಿಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಡ್ಡಾಯ ಮಾಡುವುದು ಉತ್ತಮ. ರಾಜ್ಯೋತ್ಸವ ಪ್ರಶಸ್ತಿಗಳೂ ಮೊದಲು ಸಿಕ್ಕವರಿಗೆ ಸೀರುಂಡೆ ಎನ್ನುವ ಹಾಗೆಯೇ ಇದ್ದವು. ಆದರೆ 2013 ರ ನಂತರ ಆ ಪ್ರಶಸ್ತಿಗಳ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಯ್ತು. ಆಯಾ ರಂಗದಲ್ಲಿ ಅನುಭವ ಇರುವವರನ್ನು ಆಯ್ಕೆ ಮಾಡಿ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಲಾಗುತ್ತದೆ. ಅದಕ್ಕೊಬ್ಬ ಅಧ್ಯಕ್ಷರೂ ಇರುತ್ತಾರೆ. ಇವರೆಲ್ಲಾ ಸೇರಿ ಆಯಾ ಕ್ಷೇತ್ರದ ಸಾಧಕರ ವಿವರಗಳನ್ನು ಪರಿಶೀಲಿಸಿ ಸಭೆಗಳಲ್ಲಿ ಚರ್ಚಿಸಿ ಸೂಕ್ತವಾದ ಸಾಧಕರಿಗೆ ಪ್ರಶಸ್ತಿ ಕೊಡಬೇಕೆಂದು ಸರಕಾರಕ್ಕೆ ರೆಕಮೆಂಡ್ ಮಾಡಲಾಗುತ್ತದೆ. ಸರಕಾರದ ಹಾಗೂ ಪ್ರಭಾವಿಗಳ ಹಸ್ತಕ್ಷೇಪವಾದರೆ ಸಮಿತಿಯ ಆಯ್ಕೆಗಳನ್ನೂ ಬದಲಾಯಿಸಲಾಗುತ್ತದೆ. ಆದರೂ ಹಲವು ಅರ್ಹರಿಗೆ ಪ್ರಶಸ್ತಿ ದೊರಕಿರುತ್ತದೆ.
ಹಾಗೆಯೇ ಈ ಅಕಾಡೆಮಿಗಳೂ ತನ್ನ ಸದಸ್ಯರನ್ನು ಹೊರತು ಪಡಿಸಿ ಎಕ್ಸ್‌ಪರ್ಟ್ ಕಮಿಟಿಯೊಂದನ್ನು ಪ್ರಶಸ್ತಿಗಳ ಆಯ್ಕೆಗಾಗಿಯೇ ನೇಮಿಸಬೇಕಿದೆ. ಅಕಾಡೆಮಿಯ ಸದಸ್ಯರುಗಳು ತಮ್ಮ ಆಯ್ಕೆಯ ಮೂರು ಸಾಧಕರ ಹೆಸರನ್ನು ಅವರ ಸಾಧನೆಯ ವಿವರಗಳ ಜೊತೆಗೆ ಆಯ್ಕೆ ಸಮಿತಿಯ ಮುಂದೆ ಪ್ರಸ್ತುತ ಪಡಿಸಿ ಸಮರ್ಥಿಸಿಕೊಳ್ಳುವಂತೆ ಮಾಡಬೇಕಿದೆ. ಸದಸ್ಯರುಗಳ ರೆಕಮೆಂಡೇಶನ್ ಜೊತೆಗೆ ಇನ್ನಿತರ ಅರ್ಹ ಸಾಧಕರ ಪಟ್ಟಿಯನ್ನು ಪರಿಶೀಲಿಸಿ, ಲಿಂಗ ಸಮಾನತೆ, ಪ್ರದೇಶಿಕತೆ ಹಾಗೂ ಸಾಮಾಜಿಕ ನ್ಯಾಯದ ಆಧಾರದಲ್ಲಿ ಪ್ರಶಸ್ತಿ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವನ್ನು ಪ್ರಶಸ್ತಿ ಆಯ್ಕೆ ಸಮಿತಿ ಮಾಡಬೇಕಾಗುತ್ತದೆ. ಹೀಗೊಂದು ವ್ಯವಸ್ಥೆ ರೂಪು ಗೊಂಡಾಗ, ಆಯ್ಕೆಯ ಮಾನದಂಡಗಳು ನಿಗದಿಯಾದಾಗ ನಿಜವಾಗಿಯೂ ಅರ್ಹರಾದವರಿಗೆ ಪ್ರಶಸ್ತಿ ದಕ್ಕುವ ಸಾಧ್ಯತೆಗಳು ಹೆಚ್ಚಾಗಿವೆ.
ಆದರೆ ಇಂತಹುದೊಂದು ವ್ಯವಸ್ಥೆಗೆ ಯಾವ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲಿ ಇಲ್ಲವೇ ಸದಸ್ಯರಾಗಲಿ ಒಪ್ಪುವುದಿಲ್ಲ. ರಾಜಕೀಯ ಹಸ್ತಕ್ಷೇಪಕ್ಕೆ ಆಸ್ಪದ ಇಲ್ಲದೇ ಹೋದರೆ ಯಾವ ಮಂತ್ರಿ ಮಾನ್ಯ ಪ್ರಭಾವಿಗಳೂ ಅನುಮತಿಸುವುದಿಲ್ಲ. ಯಾಕೆಂದರೆ ಇಲ್ಲಿ ಬಹುತೇಕರಿಗೆ ರಂಗಭೂಮಿಯ ಹಿತಾಸಕ್ತಿಗಿಂತ ತಮ್ಮ ತಮ್ಮ ಹಿತಾಸಕ್ತಿಗಳೇ ಮುಖ್ಯವಾಗಿರುತ್ತವೆ. ಪ್ರಶಸ್ತಿಯ ಆಯ್ಕೆ ಎನ್ನುವುದು ಸ್ವಜನ ಪಕ್ಷಪಾತ ಹಾಗೂ ಡೀಲ್ ಎನ್ನುವ ಅಪಖ್ಯಾತಿಗೆ ಒಳಗಾಗಿದೆ. ಪ್ರಶಸ್ತಿ ಆಯ್ಕೆಗೆ ಯಾವುದೇ ನಿರ್ದಿಷ್ಟ ಮಾನದಂಡಗಳಾಗಲೀ ಇಲ್ಲವೇ ಮಾರ್ಗದರ್ಶಿ ಸೂತ್ರಗಳಾಗಲೀ ಇಲ್ಲದೇ ಇರುವುದರಿಂದ ಪ್ರತಿ ಸಲ ಪ್ರಶಸ್ತಿಗಳು ಘೋಷಣೆಯಾದಾಗಲೂ ಅಸಮಾಧಾನ ಹಾಗೂ ಅಪಸ್ವರ ತಪ್ಪಿದ್ದಲ್ಲ.
ಪ್ರಶಸ್ತಿ ಪಡಕೊಂಡವರಿಗಿಂತ ಹೊಡಕೊಂಡವರೇ ಹೆಚ್ಚಾಗಿರುವಾಗ, ಅಧ್ಯಕ್ಷರಾದವರು ಸ್ವಜನ ಪಕ್ಷಪಾತಿಯಾದಾಗ, ಲಾಭಿಕೋರರ ಹಾವಳಿ ಹೆಚ್ಚಾಗಿರುವಾಗ, ಕೆಲವು ಸದಸ್ಯರುಗಳು ‘ಪ್ರಶಸ್ತಿ ನಿಮಗೆ ಪ್ರಶಸ್ತಿಯ ಮೊತ್ತ ನಮಗೆ’ ಎನ್ನುವ ಡೀಲ್ ಗೆ ಇಳಿದಾಗ ಅಕಾಡೆಮಿಯ ಪ್ರಶಸ್ತಿಗಳಿಗೆ ಘನತೆ ಗೌರವ ಬೆಲೆಯೇ ಇಲ್ಲದಂತಾಗುತ್ತದೆ. ಇದೆಲ್ಲಾ ಬದಲಾಗಬೇಕಿದೆ. ಆದರೆ ಹೇಗೆ? ಎನ್ನುವುದೇ ಪ್ರಶ್ನೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಬಹುತ್ವ ಭಾರತ ಬಲಿಷ್ಠ ಭಾರತ- ಆಯ್ಕೆ ನಮ್ಮ ಮುಂದಿದೆ