ಡಾ. ಸಿಂಗ್ ಅವರು ಸಮಾಜವಾದಿ ಆಶಯಗಳಿಗೆ ಒತ್ತು ನೀಡಿದ್ದ ಭಾರತದ ಮಿಶ್ರ ಅರ್ಥವ್ಯವಸ್ಥೆಯನ್ನು ಮುಕ್ತ ಮಾರುಕಟ್ಟೆ, ಜಾಗತೀಕರಣದ ಕಡೆಗೆ ಮುನ್ನಡೆಸಿದರು. ದೇಶದ ಆರ್ಥಿಕ ವಿನ್ಯಾಸದ ಈ ರೀತಿಯ ಪರಿವರ್ತನೆ ತಳವರ್ಗದ ಜನರ ಬದುಕಿನ ಬವಣೆಯನ್ನು ಹೆಚ್ಚಿಸಿದ ಕುರಿತು ಕಟು ಟೀಕೆಯನ್ನು ಅವರು ಎದುರಿಸ ಬೇಕಾಯಿತು. ಬದಲಾಗುತ್ತಿದ್ದ ವಿಶ್ವದ ಆರ್ಥಿಕ ಹವಾಮಾನದಲ್ಲಿ ಮನಮೋಹನ ಸಿಂಗ್ ಅವರು ಅನುಸರಿಸಿದ ದಾರಿ ಹೊರತುಪಡಿಸಿದರೆ ಬೇರೆ ಆಯ್ಕೆ ಯಾವುದಿತ್ತು? – ಡಾ.ಉದಯ ಕುಮಾರ ಇರ್ವತ್ತೂರು
ಜೀವನದಲ್ಲಿ ಅಧಿಕಾರ, ಅವಕಾಶ ಮತ್ತು ಸಮಾಜದ ಮೇಲೆ ಶಾಶ್ವತ ಪ್ರಭಾವ ಬೀರಬಲ್ಲಂತಹ “ಅಧಿಕಾರಕ್ಕೆ” ಆಸೆಪಟ್ಟರೆ ಅದನ್ನು ಪಡೆಯುವುದು ಬಹಳ ಕಷ್ಟ. ಒಂದು ವೇಳೆ ಅಂತಹ ಆಸೆ ಕೈಗೂಡಿದರೂ ಅದನ್ನು ನಿಗರ್ವದಿಂದ ನಿರ್ವಹಿಸುವುದಂತೂ ಅಸಾಧ್ಯವಾದ ಮಾತು. ಅಧಿಕಾರ ಅಂತಸ್ತಿನೊಂದಿಗೆ ಬೆಸೆದುಕೊಂಡಿರುವ ಇಂತಹ ಒಂದು ಅವಕಾಶವನ್ನು ಪಡೆದು ಅದನ್ನು ನಿರ್ಮೋಹಿಯಾಗಿ ನಿರ್ವಹಿಸಿದ ಡಾ. ಮನಮೋಹನ್ ಸಿಂಗ್ ಒಬ್ಬ ಅಪರೂಪದ ವ್ಯಕ್ತಿ. ಪಂಜಾಬಿನ (ಅವಿಭಜಿತ ಭಾರತ) ಗಾಹ್ ಗ್ರಾಮದಲ್ಲಿ ಗುರುಮುಖ್ ಸಿಂಗ್ ಕೊಹ್ಲಿ ಮತ್ತು ಅಮೃತ್ ಕೌರ್ ಅವರ ಪುತ್ರನಾಗಿ 1932 ನೇ ಇಸವಿ ಸೆಪ್ಟಂಬರ್ 26, ರಂದು ಮನಮೋಹನ ಸಿಂಗ್ ಜನಿಸಿದರು.
1954 ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಈ ತರುಣ ಮುಂದೆ ಕೇಂಬ್ರಿಡ್ಜ್, ಆಕ್ಸ್‌ಫರ್ಡ್‍ಗಳಲ್ಲಿ ತನ್ನ ಆಸಕ್ತಿಯ ವಿಷಯದಲ್ಲಿ ಇನ್ನಷ್ಟು ಅಧ್ಯಯನ ಮುಂದುವರೆಸಿ 1971 ರಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಭಾರತ ಸರಕಾರದ ಸೇವೆಯನ್ನು ಆರಂಭಿಸುತ್ತಾರೆ. ಕಾರ್ಯ ಮತ್ತು ಕಾರಣ ಎರಡರಲ್ಲೂ ಸ್ಪಷ್ಟತೆ ಹೊಂದಿದ ಮನಮೋಹನ್ ಸಿಂಗ್ ಸಾಗಿದ ದಾರಿ ತುಂಬಾ ಅವರದೇ ಹೆಜ್ಜೆ ಗುರುತುಗಳು. 1980–82 ರಲ್ಲಿ ಯೋಜನಾ ಆಯೋಗದ ಸದಸ್ಯರು, 1982–85 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್, 1990 ರಲ್ಲಿ ಪ್ರಧಾನ ಮಂತ್ರಿಯವರ ಮುಖ್ಯ ಆರ್ಥಿಕ ಸಲಹೆಗಾರ, 1991 ರಲ್ಲಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಮುಖ್ಯಸ್ಥರು ಮತ್ತು ಅದೇ ವರ್ಷ ರಾಜ್ಯ ಸಭೆಯ ಸದಸ್ಯರಾಗಿ ಆಯ್ಕೆ. 1991–96 ರ ಅವಧಿಯಲ್ಲಿ ಅಂದಿನ ಪ್ರಧಾನಿ ಪಿ. ವಿ. ನರಸಿಂಹ ರಾಯರ ಸರಕಾರದಲ್ಲಿ ವಿತ್ತ ಸಚಿವರಾದ ನಂತರ “ಕಾಲದ ಹೊಡೆತಕ್ಕೆ ಸಿಕ್ಕಿ ಜರ್ಜರಿತ”ವಾಗಿದ್ದ ಅರ್ಥವ್ಯವಸ್ಥೆಯನ್ನು ಮುನ್ನಡೆಸುವ ಸವಾಲನ್ನು ಎದುರಿಸಿ, ಭಾರತವನ್ನು ವಿಶ್ವ ಅರ್ಥವ್ಯವಸ್ಥೆಯ ಭಾಗವಾಗುವಂತೆ ಮಾಡುವ ಕೆಲಸವನ್ನು ನಿರ್ವಹಿಸಿದ ಪ್ರಭಾವೀ ಅರ್ಥ ಸಚಿವರಿವರು.
ಸಮಾಜವಾದಿ ಆಶಯಗಳಿಗೆ ಒತ್ತು ನೀಡಿದ್ದ ಭಾರತದ ಮಿಶ್ರ ಅರ್ಥವ್ಯವಸ್ಥೆಯನ್ನು ಮುಕ್ತ ಮಾರುಕಟ್ಟೆ, ಜಾಗತೀಕರಣದ ಕಡೆಗೆ ಇವರು ಮುನ್ನಡೆಸಿದರು. ದೇಶದ ಆರ್ಥಿಕ ವಿನ್ಯಾಸದ ಈ ರೀತಿಯ ಪರಿವರ್ತನೆ ತಳವರ್ಗದ ಜನರ ಬದುಕಿನ ಬವಣೆಯನ್ನು ಹೆಚ್ಚಿಸಿದ ಕುರಿತು ಕಟು ಟೀಕೆಯನ್ನು ಡಾ. ಸಿಂಗ್ ಎದುರಿಸ ಬೇಕಾಯಿತು. ಬದಲಾಗುತ್ತಿದ್ದ ವಿಶ್ವದ ಆರ್ಥಿಕ ಹವಾಮಾನದಲ್ಲಿ ಮನಮೋಹನ ಸಿಂಗ್ ಅವರು ಅನುಸರಿಸಿದ ದಾರಿ ಹೊರತುಪಡಿಸಿದರೆ ಬೇರೆ ಆಯ್ಕೆ ಯಾವುದಿತ್ತು? ಮುಕ್ತ ಅರ್ಥವ್ಯವಸ್ಥೆಯ ನಿರ್ವಹಣೆಯಲ್ಲಿ ಪರಿಣಿತರಾಗಿದ್ದ ಸಿಂಗ್ ಅವರಿಂದ ಬೇರೆ ಏನನ್ನಾದರೂ ನಿರೀಕ್ಷಿಸ ಬಹುದಾಗಿತ್ತೆ? ಉತ್ತರ ಸರಳವಲ್ಲ. ಒಂದು ಸಂಕೀರ್ಣ ಅರ್ಥವ್ಯವಸ್ಥೆಯನ್ನು ಮುನ್ನಡೆಸುವ ಚಾಲಕನ ಸ್ಥಾನದಲ್ಲಿ ಕುಳಿತಾಗ ಚುಚ್ಚುವ ಮಗ್ಗುಲ ಮುಳ್ಳು, ಮುಂದಿನ ಕಠಿಣ ಹಾದಿ, ಇತಿಹಾಸ ತನ್ನನ್ನು ಪರಿಗಣಿಸುವ ಪರಿ ಹೀಗೆ ಸವಾಲುಗಳು ಸಾವಿರಾರು..
ಎಲ್ಲ ಅಡೆತಡೆಗಳ ನಡುವೆಯೂ ಮುಗ್ಗರಿಸಲಿದ್ದ ಭಾರತದ ಆರ್ಥಿಕ ವ್ಯವಸ್ಥೆಯನ್ನು ಆದರಿಸಿ ಮುನ್ನಡೆಸಿದ್ದಂತೂ ನಿಜ (ಎಂಬತ್ತು ಮತ್ತು ತೊಂಭತ್ತರ ದಶಕದ ರಾಜಕೀಯ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆ ದೇಶದ ಮೇಲೆ ಉಂಟು ಮಾಡಿದ್ದ ಪರಿಣಾಮವು ಅರ್ಥವ್ಯವಸ್ಥೆಯನ್ನು ಸಂಕಟದ ಸ್ಥಿತಿಗೆ ದೂಡಿ ಬಿಟ್ಟಿತು.) 2004ನೇ ಇಸವಿಯಲ್ಲಿ ಕಾಂಗ್ರೆಸ್ ಎಡ ಪಕ್ಷಗಳ ಬೆಂಬಲ ಪಡೆದು ಸರಕಾರ ರಚಿಸುವ ಅವಕಾಶ ಪಡೆದಾಗ ಸೋನಿಯಾ ಗಾಂಧಿಯವರು ಪ್ರಧಾನಿಯಾಗೇ ಬಿಟ್ಟರು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಬಲಪಂಥೀಯರು ತೀವ್ರವಾಗಿ ವಿರೋಧಿಸಿದರು ಕೂಡಾ. ಆ ಸಂಕಟದ ಸಮಯದಲ್ಲಿ ಸಂವೇದನಾಶೀಲರಾದ ಸೋನಿಯಾ ಗಾಂಧಿಯವರು “ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದರು.
ಯುಪಿಎ ಒಕ್ಕೂಟ ಮೊದಲ ಅವಧಿಯಲ್ಲಿ (2004-09) ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸರಕಾರ ನಡೆಸುವ ಸವಾಲನ್ನು ನಿಭಾಯಿಸಿ ಉತ್ತಮ ಆಡಳಿತವನ್ನು ನೀಡುವಲ್ಲಿ ಯಶಸ್ವಿಯಾಯಿತು. ಯಾವುದೇ ಒಂದು ದೇಶ ಇಡೀ ವಿಶ್ವದ ಅರ್ಥವ್ಯವಸ್ಥೆಯ ಭಾಗವಾಗಿರುವಾಗ, ಸಂಪೂರ್ಣ ಭಿನ್ನವಾಗಿ ಉಳಿಯುವುದು ಸುಲಭದ ಮಾತಲ್ಲ. ಬಂಡವಾಳಶಾಹೀ ವ್ಯವಸ್ಥೆಯನ್ನು ವಿರೋಧಿಸಿ, ಸಮಾಜವಾದಿ ನೀತಿಯನ್ನು ಅನುಷ್ಠಾನ ಮಾಡುತ್ತಿದ್ದ ರಷ್ಯಾ ಮತ್ತಿತರ ರಾಷ್ಟ್ರಗಳ ಗುಂಪನ್ನು ಅಮೇರಿಕಾ ಸುದೀರ್ಘ ಕಾಲದ ಪ್ರಯತ್ನದಲ್ಲಿ ಹಿಂದಿಕ್ಕಿತು. ಇದರ ಪರಿಣಾಮವಾಗಿ ಚೀನಾದಂತಹ ಪ್ರಬಲ ಸಮಾಜವಾದಿ ರಾಷ್ಟ್ರಗಳೂ ಆರ್ಥಿಕ ಅಭಿವೃದ್ಧಿಯ ಕಾರಣಗಳಿಗಾಗಿ ಅಮೇರಿಕಾದಂತಹ ಬಂಡವಾಳಶಾಹೀ ದೇಶಗಳೊಂದಿಗೆ ಕೈ ಜೋಡಿಸುವಂತಾಗಿ ಅದಿನ್ನೂ ಮುಂದುವರಿಯುತ್ತಿದೆ. ಆರ್ಥಿಕ ನೀತಿಯಲ್ಲಿ ಇಂತಹ ಒಂದು ಬದಲಾವಣೆ ಸಹಜ ಬೆಳವಣಿಗೆಯೋ ಎಂಬಂತಾಗಿತ್ತು. ಸೀಮಿತ ಮತ್ತು ಕಠಿಣ ಆಯ್ಕೆಗಳಿರುವ ಇಂತಹ ಪರಿಸ್ಥಿತಿಯಲ್ಲಿ ಆಡಳಿತಗಾರರು, ಸರಕಾರಗಳು ಸುಲಭದ ದಾರಿಯನ್ನು ಆಯ್ದುಕೊಳ್ಳುವುದನ್ನು ಕಾಣಬಹುದು. ಅಂತಹ ಒಂದು ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಶ್ರೀ ನರಸಿಂಹರಾಯರಂತಹ ಪ್ರಧಾನಮಂತ್ರಿ ಮತ್ತು ಡಾ. ಮನಮೋಹನ್ ಸಿಂಗ್ ಅವರಂತಹ ವಿತ್ತ ಮಂತ್ರಿಯವರು ಅದನ್ನೇ ಮಾಡಿದರು. ಒಂದು ವೇಳೆ ಅವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಏನಾಗಬಹುದಿತ್ತು?
ಅಮೇರಿಕಾದೊಂದಿಗೆ ಪರಮಾಣು ಒಪ್ಪಂದದ ವಿಷಯ ಎಡ ಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು. ನಂತರದ ಅವಧಿಯಲ್ಲಿ ಯುಪಿಎ ಮರಳಿ ಅಧಿಕಾರದ ಗದ್ದುಗೆ ಏರಿತು. ಈ ಕಾರಣದಿಂದ ಎರಡನೆಯ ಅವಧಿಯಲ್ಲಿ ಎಡ ಪಕ್ಷಗಳಿಲ್ಲದೇ ಕಾಂಗ್ರೆಸ್ ಅಧಿಕಾರ ಗಳಿಸಿತು. ಮನಮೋಹನ್ ಸಿಂಗ್ ಅವರು ಸರಳ ಸಜ್ಜನ. ಸಾಕಷ್ಟು ಅಧ್ಯಯನ, ಸಂಶೋಧನೆ, ಅನುಭವ ಗಳಿಸಿದವರು. ಪ್ರಧಾನ ಮಂತ್ರಿಯ ಹುದ್ದೆಗೆ ಏರಿದರೂ ಅವರು ರಾಜಕೀಯದ ಭಾಷೆಯನ್ನು ಕಲಿಯಲೇ ಇಲ್ಲ. ಇದು ದೇಶದ ಪ್ರಜೆಗಳಾದ ನಮ್ಮ ಪುಣ್ಯವೆಂದೇ ಹೇಳಬಹುದು. ಪತ್ರಿಕಾಗೋಷ್ಠಿಗಳಲ್ಲಿ ಅವರು ನೀಡುತ್ತಿದ್ದ ಉತ್ತರಗಳು ಸದಾಕಾಲ ನೆನಪಿನಲ್ಲಿ ಉಳಿಯುವಂತಹವು. ಹತ್ತು ವರ್ಷಗಳಲ್ಲಿ ತಮ್ಮ ಅಧಿಕಾರದ ಅವಧಿಯ ಕೊನೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೇ ನಂತರದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿಯೋರ್ವರು ನಡೆಸಿದ ಕೊನೆಯ ಪತ್ರಿಕಾಗೋಷ್ಠಿಯಾಗಿ ಉಳಿದಿದೆ. ನಿಜವಾದ ಮೌನಮೋಹನ್ ಯಾರೆನ್ನುವುದಕ್ಕೆ ಉತ್ತರ ಇಲ್ಲೇ ಇದೆ.
ಹೊಸ ಆರ್ಥಿಕ ನೀತಿ, ಅಭಿವೃದ್ಧಿ ನೀತಿಯೆಡೆಗಿನ ದೇಶದ ಪಯಣದಲ್ಲಿ ಹೆಚ್ಚಿನ ಹೊರೆಯನ್ನು ದೇಶದ ಬಡ ಜನ, ರೈತಾಪಿ ವರ್ಗ ಹೊರಬೇಕಾಯಿತು ಎನ್ನುವುದು ಸತ್ಯವೇ. ಇಂತಹ ವ್ಯವಸ್ಥೆಯಲ್ಲಿಯೂ ಮಾಹಿತಿ ಹಕ್ಕು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತೆ ಕಾನೂನು ಮುಂತಾದ ಜನಪರ ಯೋಜನೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ತಳಸ್ತರದ ಜನವರ್ಗದ ದುಮ್ಮಾನ ಕಡಿಮೆ ಮಾಡುವಲ್ಲಿ ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಸರಕಾರದ ಆರ್ಥಿಕ ಉದಾರೀಕರಣ ನೀತಿಯನ್ನು ವಿರೋಧಿಸಿ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಅದಕ್ಕೆ ಓರ್ವ ಪ್ರಧಾನಿಯಾಗಿ ಅವರು ಪ್ರತಿಕ್ರಿಯೆ ನೀಡಿದ ರೀತಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹದ್ದು ಮಾತ್ರವಲ್ಲ ಇತರರಿಗೆ ಮಾದರಿಯಾಗುವಂತಿದೆ.
ಪಂಚಾಯತ್ ಸದಸ್ಯರಾದ ಕೂಡಲೇ ಕೋಟಿಗೆ ಬಾಳುವ ಈ ದೇಶದಲ್ಲಿ, ಪ್ರಧಾನಮಂತ್ರಿಯಾದಾಗಲೂ ಆದಷ್ಟು ಸರಳವಾಗಿ, ಅಧಿಕಾರ, ಜ್ಞಾನ, ಜಾತಿಯ ಅಮಲಿನಿಂದ ದೂರ ಉಳಿದ ಉದಾತ್ತ ವ್ಯಕ್ತಿಯಾಗಿಯೇ ಉಳಿದ ಡಾ. ಮನಮೋಹನ್ ಸಿಂಗ್ ಅವರನ್ನು ದೇಶ ಬಹಳ ಕಾಲ ನೆನೆಸಿಕೊಳ್ಳುತ್ತದೆ. ಪ್ರಧಾನಮಂತ್ರಿಗಳ ಆರ್ಥಿಕ ಸಲಹೆಗಾರರಾಗಿದ್ದ ಪ್ರೊ. ಕೌಶಿಕ್ ಬಸು ಅವರು ಬರೆದಿರುವಂತೆ, ಆರ್ಥಿಕ ತಜ್ಞರಾದ ಪ್ರಧಾನಿಯೋರ್ವರು ರಾಜಕೀಯದಲ್ಲಿಯೂ ನಿಷ್ಠೆಯಿಂದ ಬದುಕಲು ಶಕ್ತಿಮೀರಿ ಪ್ರಯತ್ನಿಸಿದ್ದರು ಎಂದು ತಿಳಿದು ಬರುತ್ತದೆ. 2014 ರ ನಂತರದ ವಿದ್ಯಮಾನಗಳನ್ನು ಗಮನಿಸಿದರೆ ಮನಮೋಹನ್ ಸಿಂಗ್ ಮೇಲಿನ ಗೌರವ ಇನ್ನಷ್ಟು ಹೆಚ್ಚುತ್ತದೆ, ಅವರದೇ ಮಾತಿನಂತೆ ಖಂಡಿತವಾಗಿಯೂ ಇತಿಹಾಸ ಅವರನ್ನು ವರ್ತಮಾನಕ್ಕಿಂತ ಹೆಚ್ಚು ಗೌರವದಿಂದ ನಡೆಸಿಕೊಳ್ಳುತ್ತದೆ.
ಡಾ.ಮನಮೋಹನ ಸಿಂಗ್ ಅವರೇ ಗೌರವ ಪೂರ್ವಕ ವಿದಾಯ.
ಡಾ.ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನು ಓದಿದ್ದೀರಾ- ಮಧ್ಯಮ ಮತ್ತು ಬಡವರ ಹಿತಕ್ಕಾಗಿ ಆರ್ಥಿಕತೆಯನ್ನು ರೂಪಿಸಿದ ತಜ್ಞ ಡಾ.ಸಿಂಗ್: ಸಿ.ಎಂ.ಸಿದ್ದರಾಮಯ್ಯ