ನಮಸ್ತೆ ಸುದೀಪ್ ಸರ್,
ಈಗ ತಾನೆ ನಿಮ್ಮ ಬಿಗ್ ಬಾಸ್ 11ರ ಲಾಂಚಿಂಗ್ ಪ್ರೆಸ್ ಮೀಟ್ ನೋಡಿದೆ. ಅದರಲ್ಲಿ ಪ್ರೆಸ್ ನವರು ಒಬ್ಬರು A23 ಆನ್ಲೈನ್ ರಮ್ಮಿ ಕಂಪನಿಯವರು ಕೊಟ್ಟ ದುಡ್ಡಲ್ಲಿ ಬಿಗ್ ಬಾಸ್ ನಡೆಯುತ್ತ ಇದೆ. ಆನ್ಲೈನ್ ರಮ್ಮಿಯಿಂದ ಮನೆಗಳು ಹಾಳಾಗುತ್ತಿವೆ, ಪ್ರಾಣಗಳು ಹೋಗುತ್ತಿವೆ, ನಿಮ್ಮ ಪ್ರೋಗ್ರಾಮ್ ನಲ್ಲಿ ಬರೋ ಆನ್ಲೈನ್ ರಮ್ಮಿ ಜಾಹೀರಾತು ನೋಡಿ ಆಡದವರು ಸಹ ಹೊಸದಾಗಿ ಶುರು ಮಾಡುತ್ತಾರೆ, ಇಂಥ ವಂಚಕ ಇಸ್ಪೀಟ್ ಕಂಪನಿಗಳ ದುಡ್ಡಲ್ಲಿ ಬಿಗ್ ಬಾಸ್ ನಡೆಯಬೇಕಾ? ಎಂಬ ಅರ್ಥದ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ನೀವು ಕೊಟ್ಟ ಉತ್ತರ ಇತ್ತಲ್ಲ ಸರ್, ಸರ್ಕಾರವೇ ಆನ್ಲೈನ್ ಇಸ್ಪೀಟ್ ಆಟಕ್ಕೆ ಅನುಮತಿ ಕೊಟ್ಟಿದೆ, ಮೋದಿನ ಕೇಳಿ, ಸಿದ್ದರಾಮಯ್ಯನವರನ್ನ ಕೇಳಿ ಅಂತ. ಅಬ್ಬಬ್ಬಬ್ಬ.. ಮೈಯೆಲ್ಲಾ ಜುಮ್ ಅಂದೋಯ್ತು ಸರ್. ಎಂಥ ಆನ್ಸರ್ ಸರ್ ಅದು.
100% ಕರೆಕ್ಟ್ ಸರ್, ನೀವು ಹೇಳಿದ್ದು. ಸರ್ಕಾರವೇ ತನ್ನ ಪ್ರಜೆಗಳನ್ನು ಇಸ್ಪೀಟ್ ಆಡಿ ದುಡ್ಡು ಕಳೆದುಕೊಂಡು, ನಂಬಿದ ಹೆಂಡ್ತಿ ಮಕ್ಕಳನ್ನು ಬೀದಿಗೆ ತಳ್ಳಿ ಸತ್ತು ಹೋಗಿ ಅಂತ ಅನುಮತಿ ಕೊಟ್ಟಿರ ಬೇಕಾದರೆ ಪ್ರೆಸ್’ನವರದೇನು ಸರ್ ಮದ್ಯ ಕಿತಾಪತಿ? ಕರ್ನಾಟಕದ ಜನರಿಗೆ ನೀವು ಆನ್‌ಲೈನ್ ರಮ್ಮಿ ಆಡಿ ಹಾಳಾಗಿ ಹೋಗಿ ಅಂತ ಯಾರಾದರೂ ಕತ್ತಿನ ಪಟ್ಟಿ ಹಿಡಿದು ಕೇಳುತ್ತಿದ್ದಾರಾ? ಇವರ ಮನೆಯ ಮುಂದೆ ಪ್ರೊಟೆಸ್ಟ್ ಮಾಡುತ್ತಿದ್ದಾರಾ? ಅವರಿಗೆ ಪ್ರಜ್ಞೆ ಇರಬೇಕು ಅಲ್ವಾ ಸರ್? ಕರೆಕ್ಟ್ ಸರ್ ನೀವು ಹೇಳಿದ್ದು. ತಲೆಕೆಡಿಸಿಕೊಳ್ಳಬೇಡಿ ಸುದೀಪ್ ಸರ್.
ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಸಮಾಜದ ಅಭಿವೃದ್ಧಿಗೋಸ್ಕರ ಬಿಗ್ ಬಾಸ್ ಅನ್ನುವಂತ ಸಾಮಾಜಿಕ ಕಳಕಳಿಯ ಪ್ರೋಗ್ರಾಮ್ ಮಾಡ್ತಾ ಇದ್ದಾರಲ್ಲ ಕಲರ್ಸ್ ಟಿವಿಯವರು. ಅವರು ಪ್ರೋಗ್ರಾಮ್ ಮಾಡಕ್ಕೆ, ನಿಮಗೆ ಸಂಭಾವನೆ ಕೊಡಕ್ಕೆ ಏನು ಬ್ಯಾಂಕ್ ದರೋಡೆ ಮಾಡಿ ಹಣ ತರಬೇಕ? ಕಾರ್ಪೊರೇಟ್ ಕಂಪನಿಗಳ ಜಾಹೀರಾತು, ಸ್ಪಾನ್ಸರ್ ಶಿಪ್ ನಲ್ಲಿ ತಾನೆ ಹಣ ಬರುತ್ತೆ. ಅದರಲ್ಲೊಂದು ಈ A23 ರಮ್ಮಿ ಕಂಪನಿ ಇದ್ದರೆ ಭೂಮಿ ಏನು ಎರಡು ಭಾಗ ಆಗಿಬಿಡುತ್ತ? ಕಲರ್ಸ್ ಟಿವಿಯವರ ತಲೆಯಲ್ಲಿ ಮೆದಳು ತಾನೇ ಇದೆ, ಸೆಗಣಿ ಏನು ಇಲ್ಲವಲ್ಲ? ಯಾವ ಇಸ್ಪೀಟ್ ಕಂಪನಿನಾದ್ರೂ ಯಾರ ಮನೆಯನ್ನಾದರೂ ಹಾಳು ಮಾಡಲಿ, ಜೀವ ತೆಗೆಯಲಿ, ಅದನ್ನು ಕಟ್ಟಿಕೊಂಡು ಕಲರ್ಸ್ ಟಿವಿಯವರಿಗೆ ಏನಾಗಬೇಕು? ಇದೇನೇ ಆಗಿದ್ದರೂ ಇದಕ್ಕೆ ಕಲರ್ಸ್ ಟಿವಿಯವರೇ ಜವಾಬ್ದಾರಿ. ನೀವು ಪ್ರೋಗ್ರಾಮ್ ಹೋಸ್ಟ್ ಮಾಡ್ತೀರಿ ದುಡ್ಡು ತಗೋತೀರಿ, ಇದಕ್ಕೂ ನಿಮಗೂ ಯಾವ ಸಂಬಂಧವೂ ಇಲ್ಲ ಬಿಡಿ. ಯಾರೇನೇ ಅಂದ್ರು ತಲೆಕೆಡಿಸಿಕೊಳ್ಳಬೇಡಿ ಸುದೀಪ್ ಸರ್.
ಅಂದಹಾಗೆ ಹಿಂದೆ ರಾಜ್ಯ ಸರ್ಕಾರಗಳೇ ಲಾಟರಿ ನಡೆಸುತ್ತಿದ್ದವು. ಒಂದು ರೂಪಾಯಿಯಿಂದ ಹಿಡಿದು ನೂರು ರೂಪಾಯಿಗಳವರೆಗೆ ಲಾಟರಿಗಳ ಬೆಲೆ ಇರುತ್ತಿತ್ತು. ಇದು ಚಟಕ್ಕೆ ತಿರುಗಿ, ಮಟ್ಕಾ, ಸಿಂಗಲ್ ನಂಬರ್ ಅಂತ ಮುಂದುವರೆದು ಮನೆಮಠಗಳನ್ನು ಹಾಳು ಮಾಡುತ್ತಿತ್ತು. ರೇಸ್ ಕೋರ್ಸ್ ನಲ್ಲಿ ಕುದುರೆ ಬಾಲಕ್ಕೆ ದುಡ್ಡು ಕಟ್ಟಿ ದುಡ್ಡಿನ ಕುಳಗಳೆಲ್ಲ ದುಡ್ಡು ಕಳೆದುಕೊಳ್ಳುತ್ತಿರುವಾಗ ವೈ ಶುಡ್ ರಿಚ್ ಪೀಪಲ್ ಹ್ಯಾವ್ ಆಲ್ ದಿ ಫನ್ ಎಂಬ ಯೋಜನೆಯ ಕೆಳಗೆ ಸರ್ಕಾರವೇ ತನ್ನ ಸ್ವಂತ ಲಾಟರಿಯನ್ನು ತಂದಿತ್ತು. ನಂತರ ಇದರ ಅಡ್ಡ ಪರಿಣಾಮಗಳು ಬಡ ಕುಟುಂಬಗಳನ್ನು ಬುಡಮೇಲು ಮಾಡುತ್ತಿವೆ ಎಂದು ಲಾಟರಿಯನ್ನು ಇವರೇ ನಿಷೇಧಿಸಿದರು. ಈಗ ಮತ್ತೆ ಹಳೇ ಯೋಜನೆಯಾದ ‘ವೈ ಶುಡ್ ರಿಚ್ ಪೀಪಲ್ ಹ್ಯಾವ್ ಆಲ್ ದಿ ಫನ್’ ಅನ್ನು ಆನ್‌ಲೈನ್ ಇಸ್ಪೀಟ್ ಆಟದ ಮೂಲಕ ಮತ್ತೊಮ್ಮೆ ವಾಪಸ್ ತಂದಿದೆ. ಇದರಿಂದ A23 ತರದ ನೂರಾರು ಸಾಮಾಜಿಕ ಕಳಕಳಿಯ ಕಾರ್ಪೊರೇಟ್ ಇಸ್ಪೀಟ್ ಕಂಪನಿಗಳು ಎರಡು ಹೊತ್ತಿನ ಅನ್ನವನ್ನು ಉಣ್ಣುತಿವೆ. ಅವರ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕಿಂತ ಅತ್ಯದ್ಭುತ ಡೆವಲಪ್‌ಮೆಂಟ್ ನಮಗೆ ಬೇಕೇ? ಅದ್ಭುತ, ಪರಮಾದ್ಭುತ, ಯಾರು ಏನೇ ಹೇಳಲಿ, ತಲೆ ಕೆಡಿಸ್ಕೋಬೇಡಿ ಸುದೀಪ್ ಸರ್.
ನಮ್ಮದೇ ಹಾಸನದ ಚನ್ನರಾಯಪಟ್ಟಣದಲ್ಲಿ ಶ್ರೀನಿವಾಸ್ ಎಂಬಾತ ಆನ್ಲೈನ್ ರಮ್ಮಿ ಚಟಕ್ಕೆ ಬಿದ್ದು ಸಿಕ್ಕಸಿಕ್ಕವರಿಂದ ಸಾಲ ಮಾಡಿ, ಸಾಲ ತೀರಿಸಲು ಆಗದೆ ಸಂಸಾರವನ್ನು ನರಕ ಮಾಡಿಕೊಂಡು ಹೆಂಡತಿ ಶ್ವೇತ, 11 ವರ್ಷದ ಶಾಲೆ ಕಲಿಯುತ್ತಿದ್ದ ಮಗಳನ್ನು ಹೇಮಾವತಿ ನಾಲಿಗೆ ತಳ್ಳಿ ತಾನು ಜಿಗಿದು ಆತ್ಮ*ತ್ಯೆ ಮಾಡಿಕೊಂಡ.
ಸುಮ್ಮನೆ ‘ ಆನ್‌ಲೈನ್ ರಮ್ಮಿ ಸು*ಸೈಡ್’ ಅಂತ ಗೂಗಲ್ ಮಾಡಿದರೆ, ಯೂಟ್ಯೂಬ್ ನಲ್ಲಿ ಹುಡುಕಿದರೆ ಇಂಥ ನೂರಾರು ಕೇಸ್ ಗಳು ಸಿಗುತ್ತವೆ. ಇದಕ್ಕೆ ಏನು ಹೇಳೋಣ ಸರ್, ಕನ್ನಡದಲ್ಲಿ ಇಂಥವರಿಗೇ ಅಂತ ‘ ದಿನಾ ಸಾಯೋರಿಗೆ ಅಳೋರು ಯಾರು’ ಎಂಬ ಒಂದು ಗಾದೆ ಮಾತಿದೆ. ಆನ್‌ಲೈನ್ ಇಸ್ಪೀಟ್ ಚಟಕ್ಕೆ ಬಿದ್ದು ಸತ್ತ ಶ್ರೀನಿವಾಸನ 11 ವರ್ಷದ ಮಗಳು ಬೆಳೆದು ದೊಡ್ಡವಳಾದ ಮೇಲೆ ನಿಮ್ಮ ಮಗಳಂತೆಯೇ ತನ್ನದೇ ಭವಿಷ್ಯ ಕಟ್ಟಿಕೊಂಡು ಸಂಭ್ರಮದಿಂದ ಬದುಕುತ್ತಿದ್ದಳು. ಆಕೆಯ ಆಯುಸ್ಸು ಇಷ್ಟೇ ಎಂದು ದೇವರು ಬರೆದು ಕಳಿಸಿರುವಾಗ ಯಾರು ಏನು ಮಾಡಲಿಕ್ಕಾಗ್ತದೆ, ಸರ್? ಇದು ಶ್ರೀನಿವಾಸನ ತಪ್ಪು, ಆನ್‌ಲೈನ್ ಇಸ್ಪೀಟ್ ಆಟದ ತಪ್ಪಲ್ಲ. ಹಾಗಾಗಿ ಸರ್, ಯಾರು ಏನೇ ಅಂದ್ರು ತಲೆ ಕೆಡಿಸ್ಕೋಬೇಡಿ ಸುದೀಪ್ ಸರ್.
ಶ್ರೀನಿವಾಸ್ ಒಬ್ಬನೇ ಅಲ್ಲ, ಸ್ಟೂಡೆಂಟ್ಸ್ ಗಳು, ಟೆಕ್ಕಿಗಳು, ಸಂಸಾರಸ್ಥರು, ಮಧ್ಯಮ ವರ್ಗದವರು, ಬದುಕಿನ ಯಾವುದೋ ತುರ್ತಿಗೆ ಹಣ ಬೇಕಾದವರು, ಬಡವರು ಆಟೋ ಚಾಲಕರು, ಸಣ್ಣ ವ್ಯಾಪಾರಸ್ಥರು, ಇವರೆಲ್ಲರ ಹೆಣಗಳನ್ನು ಆನ್‌ಲೈನ್ ಇಸ್ಪೀಟ್ ಆಟದ ಕಂಪನಿಗಳು ನಿರ್ದಯವಾಗಿ ನೆಲಕ್ಕೆ ಕೆಡವುತ್ತಿವೆ. ಈ ಸಾವುಗಳ ಸಂಖ್ಯೆ ರಾಜ್ಯಗಳಲ್ಲಿ ವರ್ಷಕ್ಕೆ ನೂರರ ಸಂಖ್ಯೆಯಲ್ಲಿದ್ದರೆ, ಒಟ್ಟು ದೇಶದಲ್ಲಿ ಸಾವಿರಾರು ಸಂಖ್ಯೆಗಳಲ್ಲಿವೆ ಎಂದು ಹಲವಾರು ಅಧ್ಯಯನ ಸಂಸ್ಥೆಗಳ ಸಂಶೋಧನಕಾರರು ದಾಖಲೆಗಳ ಸಮೇತ ಇದನ್ನು ನಿಲ್ಲಿಸಿ ಎಂದು ಕೋರ್ಟಿನ ಕದ ತಟ್ಟುತ್ತಿದ್ದಾರೆ. ಅರೆ, ಇವರು ಯಾವ ಪುಟಗೋಸಿ ಸಂಶೋಧನಾಕಾರರು? ಅಷ್ಟು ಸಿನಿಮಾ ಮಾಡಿರುವ ನಿಮ್ಮ ಮುಂದೆ, ಹಲವಾರು ಪ್ರಶಸ್ತಿಗಳನ್ನು ಪಡೆದ ನಿಮ್ಮ ‘ ರೋಲ್ ಕೆಮೆರಾ, ಆಕ್ಷನ್’ ಜ್ಞಾನದ ಮುಂದೆ ಈ ಸಂಶೋಧಕರಿಗೆ ಯಾವ ಯೋಗ್ಯತೆ ಇದೆ ನೀವೇ ಹೇಳಿ? ಯಾರು ಏನೇ ಅಂದ್ರು ಸರ್, ತಲೆ ಕೆಡಿಸ್ಕೋಬೇಡಿ ಸುದೀಪ್ ಸರ್. ಯಾರೋ ಬಡ ಮಧ್ಯಮ ವರ್ಗದವರು ಸತ್ತರೆ ಯಾರಿಗೆ ನಷ್ಟ ಅಲ್ವ ಸರ್? ಅದರಿಂದ ನಿಮ್ಮಂತ ಸ್ಟಾರ್ ಗಳ ಅಭಿಮಾನಿಗಳ ಸಂಖ್ಯೆ ಏನಾದರೂ ಕಡಿಮೆ ಆಗಲು ಸಾಧ್ಯವಾ? ಸೊ ನೀವು ಮುಂದೆ ನಡೀರಿ ಸರ್.
ಸಾವು ನೋವು ಎಲ್ಲಾಗಲ್ಲ ಸರ್, ಎಲ್ಲಾ ಕಡೆಯೂ ಆಗ್ತದೆ. ಹಾಗೆಯೇ ಇಲ್ಲೂ ಆಗ್ತಿರಬಹುದು. ಭಾರತದ ಜನಸಂಖ್ಯೆ 140 ಕೋಟಿ ತಲುಪಿದೆ, ಚೀನಾವನ್ನು ಮೀರಿಸುತ್ತಿದೆ, ಹೀಗೆ ಮುಂದುವರೆದರೆ ಜನಸಂಖ್ಯಾ ಸ್ಫೋಟದಿಂದ ದೇಶ ಹಾಳಾಗಿ ಹೋಗುತ್ತದೆ ಎಂಬ ಮಾತನ್ನು ನಾವೆಲ್ಲ ಕೇಳಿಲ್ಲವೇ. ಈ ಜನಸಂಖ್ಯೆಯನ್ನು ಕಂಟ್ರೋಲ್ ಮಾಡಲೆಂದೇ ಕೇಂದ್ರ ಸರ್ಕಾರವು ಆನ್‌ಲೈನ್ ಜೂಜು ಕಂಪನಿ ಗಳಿಗೆ ಜನಸಂಖ್ಯೆ ನಿಯಂತ್ರಿಸಲು ಕಾಂಟ್ರಾಕ್ಟ್ ಸಹ ಕೊಟ್ಟಿರಬಹುದಲ್ಲ. ಏನು ಮಾಡಿದರು ನಿಯಂತ್ರಣವಾಗದ ಜನಸಂಖ್ಯೆ ಆನ್‌ಲೈನ್ ಜೂಜು ಕೋರ ಕಂಪನಿಗಳ ‘ಲೈಸೆನ್ಸ್ ಟು ಕಿಲ್’ ಸಾಮಾಜಿಕ ಚಿಂತನೆಯಿಂದ ಕಂಟ್ರೋಲ್ ಆಗುತ್ತದೆ ಎನ್ನುವುದಾದರೆ ಯಾಕಾಗಬಾರದು?. ಇಷ್ಟು ಒಳ್ಳೆಯ ಚಿಂತನೆಯನ್ನು ಬೆಂಬಲಿಸದೆ ಈ ಪ್ರೆಸ್ ನವರು ನಿಮ್ಮನ್ನೇ ಪ್ರಶ್ನೆ ಮಾಡುತ್ತಾರಲ್ಲ!! ತಮಿಳುನಾಡಿನ ರಿಟೈರ್ಡ್ ಚೀಫ್ ಜಸ್ಟಿಸ್ ಚಂದ್ರು ಎಂಬುವರ ನೇತೃತ್ವದಲ್ಲಿ ರಚನೆಯಾದ ‘ಇಂಪ್ಯಾಕ್ಟ್ ಆಫ್ ಆನ್‌ಲೈನ್ ಗ್ಯಾಂಬಲಿಂಗ್’ ಪ್ಯಾನೆಲ್ ಸ್ಟಡಿಯ ವರದಿಯನ್ನು ಒಮ್ಮೆ ಓದಿ ನೋಡಿ ಎಂದು ಯಾರಾದರೂ ನಿಮಗೆ ಹೇಳಿದರೆ ದಯವಿಟ್ಟು ಓದಬೇಡಿ ಸರ್. ಅವರಿಗೆ ಏನು ಗೊತ್ತು ಸರ್ ಮಣ್ಣು, ನಿಮಗಿಂತ ಬುದ್ದಿವಂತರೇ ಅವರು, ಈ ಬಿಗ್ ಬಾಸ್ 11 ಮುಗಿಯುವ ತನಕ ಯಾರು ಏನೇ ಅಂದ್ರು ಸರ್, ತಲೆ ಕೆಡಿಸ್ಕೋಬೇಡಿ ಸುದೀಪ್ ಸರ್.
ಕೊನೆಯದಾಗಿ..
ಆನ್‌ಲೈನ್ ಇಸ್ಪೀಟ್ ಆಟದ ವೆಬ್ ಸೈಟ್ ತೆಗೆಯಲು ಒಂದಷ್ಟು ಸಾವಿರ ಇನ್ವೆಸ್ಟ್ ಮಾಡಿ, ಅದರಲ್ಲಿ ಆಟ ಆಡುವವರು ಗೆಲ್ಲಲು ಸಾಧ್ಯವೇ ಆಗದಂತೆ Bots, AI ಇಂಪ್ಲಾಂಟ್‌ಗಳನ್ನು ಫಿಕ್ಸ್ ಮಾಡಿ, ಕೋಟ್ಯಂತರ ಜನಗಳಿಂದ ಅವರ ಯುಪಿಐ ಅಕೌಂಟ್ ಗಳಿಂದ ದಿನನಿತ್ಯ ಹಗಲು ದರೋಡೆ ನಡೆಸುತ್ತಿರುವ ವಂಚಕರು ಇವರು ಎಂದು ಯಾರು ಏನೇ ಹೇಳಲಿ, ಆನ್‌ಲೈನ್ ಜೂಜಿನಿಂದ ಸತ್ತ ಸಾವಿರಾರು ಜನರ ಲೆಕ್ಕ ಸಿಗುತ್ತಿದೆ, ಆದರೆ ಇದೇ ಆನ್‌ಲೈನ್ ಜೂಜಿನಲ್ಲಿ ಗೆದ್ದ ಒಬ್ಬನೇ ಒಬ್ಬನ ಲೆಕ್ಕ ಸಿಗುತ್ತಿಲ್ಲ, ಜೂಜಾಡಿ ಜೀವನದಲ್ಲಿ ಉದ್ಧಾರವಾದ ಒಬ್ಬನೇ ಒಬ್ಬನು ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಎಷ್ಟೇ ರಿಸರ್ಚ್ ಡೇಟಾಗಳು ಹೇಳಲಿ, ಆನ್ಲೈನ್ ಜೂಜು ಕಂಪನಿಗಳು ತಾವೇ ಮುಂದೆ ನಿಂತು ಜೀವ ತೆಗೆದ ನೂರಾರು ಜನರ ಪಾಪದ ದುಡ್ಡಲ್ಲಿ ಬಿಗ್ ಬಾಸ್ ನಡೆಯುತ್ತಿದೆ, ಅದೇ ಪಾಪದ ಹಣದಲ್ಲಿ ನಿಮಗೆ ಕೋಟಿಗಟ್ಟಲೆ ಪ್ಯಾಕೇಜ್ ಸಂಭಾವನೆ ಸಿಗುತ್ತಿದೆ, ಅನ್ನದ ತಟ್ಟೆಯ ಮುಂದೆ ಊಟ ಮಾಡುವಾಗ ಸತ್ತವರ ನೆನಪಾಗಿ ಪ್ರಶ್ನೆ ಕೇಳುವ ನಿಮ್ಮೊಳಗಿನ ಆತ್ಮಸಾಕ್ಷಿಗೆ ಏನೆಂದು ಉತ್ತರ ಕೊಡುತ್ತೀರಿ? ಎಂದು ಯಾರು ಏನೇ ಅಂದ್ರು ಸರ್, Vikkipedia ಅನ್ನೋ ಒಬ್ಬ ಯೂಟ್ಯೂಬರ್ ‘ಮುದ್ದು ಕುಮಾರ’ನ ಮೂಲಕ ಹರಡಿದ ಸಾಮಾಜಿಕ ಕಾಳಜಿಯಲ್ಲಿ ರವೆ ಕಾಳಷ್ಟು ಆದ್ರೂ ನಿಮಗೆ ಸಾಮಾಜಿಕ ಕಳಕಳಿ ಬೇಡ್ವಾ? ನಿಮ್ಮಂತ ಒಳ್ಳೆಯವರು ಒಳ್ಳೆಯದಕ್ಕೆ ಮಾಡೆಲ್ ಆಗಬೇಕೆ ಹೊರತು, ಅನಾಹುತಗಳಿಗೆ ಅಲ್ಲ.. ಅಂತ ತರಾಟೆ ತೆಗೆದುಕೊಂಡ್ರು, ತಲೆ ಕೆಡಿಸ್ಕೋಬೇಡಿ ಸುದೀಪ್ ಸರ್. ಆ ವಿಕ್ಕಿಪಿಡಿಯಾ ಬಿಡಿ ಒಬ್ಬ ಜುಜುಬಿ ನಟ, ನಿಮ್ಮ ಮುಂದೆ ಏನಿಲ್ಲ, ನೀವೊಂದು ಆವಾಜ್ ಹಾಕಿದ್ರು ಸಾಕು... ಉಫ್ ಅಂತ ಹಾರೋಯ್ತಾನೆ… ಅವನಿಗೆ ಇರೋ ಬುದ್ದಿ ನಟ ಸುದೀಪ್ ಗೆ ಇಲ್ಲ ಅಂತ ಯಾರಾದರೂ ಹೇಳಿದ್ರೆ ಕಿವಿಗೇ ಹಾಕೊಬೇಡಿ ಸರ್.
ಜಗತ್ತಿನಲ್ಲಿ ಬಿಗ್ ಬಾಸ್ ಒಂದೇ ಮುಖ್ಯ ಸರ್, ಮಿಕ್ಕಿದ್ದೆಲ್ಲ ಆ ದೇವರ ಲೀಲೆ ಅಷ್ಟೇ ಬಿಡಿ ಸರ್.
ಹರ್ಷಕುಮಾರ್ ಕುಗ್ವೆ
ಇದನ್ನೂ ಓದಿ- ರಮ್ಮಿ ಆಟ; ಆಧುನಿಕ ಕಾಟ