ಅಂಬೇಡ್ಕರ್‌ ಅಂದರೆ ಒಂದು ಜಾತಿಯೇ???

Most read

ಹಿಂದೂ ಸಮಾಜದ ಅತ್ಯಂತ ಶೋಷಿತ ಗುಂಪಿಗೆ ಸೇರಿದವಳು ಹೆಣ್ಣು. ಅವಳ ಉದ್ಧಾರಕ್ಕಾಗಿ ಅವಳ ಸ್ಥಿತಿಗತಿಯನ್ನು ಬದಲುಗೊಳಿಸಲು ಪಣತೊಟ್ಟವರು ಅಂಬೇಡ್ಕರ್. ಆದರೆ ವಿಪರ್ಯಾಸವೆಂದರೆ ಈ ಯಾವುದನ್ನು ಅರಿಯದ ನಾವುಗಳು ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಅವರ ತತ್ವ ಸಿದ್ಧಾಂತಗಳಿಗೆ, ಅವರ ತ್ಯಾಗ ಹೋರಾಟಗಳಿಗೆ ಅವಮಾನ ಮಾಡುತ್ತಿದ್ದೇವೆ ಶೃಂಗಶ್ರೀ, ಉಪನ್ಯಾಸಕಿ.

 ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಸಮಾಜ ಸುಧಾರಕ, ಮಹಾದಾರ್ಶನಿಕ ಚೈತನ್ಯದ ಚಿಲುಮೆ, ಭಾರತ ರತ್ನ, ಅರಿವು, ಬೆಳಕು, ದೀನದಲಿತರ ಬಂಧು ಇನ್ನೂ ಏನೇನೋ ಶಿರೋನಾಮೆಗಳಿಂದ ಕರೆಯಲ್ಪಡುವ ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರು ಯಾರಿಗೆ ತಾನೇ ಗೊತ್ತಿಲ್ಲ !?

ಸಾಮಾಜಿಕ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಭಾರತದ ಸಂವಿಧಾನವನ್ನ ರಚಿಸಿದ ಮಹಾನ್ ನಾಯಕ. ದಮನಿತರ, ದಲಿತರ, ಹಿಂದುಳಿದವರ, ಮಹಿಳೆಯರ, ಅಲ್ಪಸಂಖ್ಯಾತರ, ತಳ ಸಮುದಾಯದವರ ಬದುಕನ್ನ ದೃಢಗೊಳಿಸುವಲ್ಲಿ ಅವರ ಅಸ್ತಿತ್ವಕ್ಕೆ ಬೆಲೆ ತರುವಲ್ಲಿ ಅವರ ಹಕ್ಕುಗಳಿಗಾಗಿ, ನ್ಯಾಯಯುತ ಬದುಕಿಗಾಗಿ ಹೋರಾಡುವಲ್ಲಿ ಅವರ ವಿಮೋಚನೆಗಾಗಿ ಶ್ರಮಿಸಿದ ತನ್ನ ಬದುಕನ್ನೇ ಅರ್ಪಿಸಿದಂತಹ ಮಹಾನ್ ದಾರ್ಶನಿಕನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ?

ಬಾಬಾ ಸಾಹೇಬರು

ನಿಜಕ್ಕೂ ಗೊತ್ತಿರುವುದು ಅವರನ್ನೇ ಬದುಕುತ್ತಿರುವವರಿಗೆ, ಅವರನ್ನೇ ಜೀವಿಸುತ್ತಿರುವವರಿಗೆ, ಅವರನ್ನು ಅರೆದು ಕುಡಿದವರಿಗೆ ಮಾತ್ರ. ಇನ್ನುಳಿದವರಿಗೆ ಅವರು ದಲಿತರು ಕೆಳಜಾತಿಗೆ ಸೇರಿದವರು ಅನ್ನುವುದಷ್ಟೇ. ಹೌದು ದುರಂತವೆಂದರೆ ಹಲವರಿಗೆ ಗೊತ್ತಿರುವುದು ಇಷ್ಟೇ.

ಹೀಗೆ ಹೇಳುವುದಕ್ಕೆ ಕಾರಣವಿದೆ, ಅಂಬೇಡ್ಕರ್ ಅವರನ್ನು ಓದಿದವರಿಗೆ ಅವರ ಬದುಕನ್ನ ಅರ್ಥೈಸಿಕೊಂಡವರಿಗೆ ಮಾತ್ರವೇ ಅವರೆಂತಹ ಅಮೂಲ್ಯ ರತ್ನ ಎಂಬುದು ಅರಿವಾಗಿರುವುದಕ್ಕೆ ಸಾಧ್ಯ. ಉಳಿದವರಿಗೆ ಅಂಬೇಡ್ಕರ್ ಕೇವಲ ದಲಿತರಾಗಿ ಕೆಳಜಾತಿಗೆ ಸೇರಿದವರೆಂದು ಮಾತ್ರವೇ ಗೊತ್ತು. ಹೀಗೆ ಹೇಳುವುದಕ್ಕೆ ಕಾರಣ ನಾನು ನನ್ನ ವಾಟ್ಸಪ್ ಫೇಸ್ಬುಕ್ ಮತ್ತು ಇನ್ಸ್ಟಾ ಅಕೌಂಟ್‌ಗಳ ಪ್ರೊಫೈಲ್ ಗಳಲ್ಲಿ ಅಂಬೇಡ್ಕರ್ ಅವರ ಫೋಟೋಗಳನ್ನು ಹಾಕಿದ್ದೇನೆ. ನನ್ನ ಮೊಬೈಲ್ ನ ವಾಲ್‌ ಪೇಪರ್ ನಲ್ಲೂ ಅಂಬೇಡ್ಕರ್ ಅವರ ಫೋಟೋವನ್ನು ಹಾಕಿಕೊಂಡಿದ್ದೇನೆ. ಅದನ್ನು ನೋಡಿದ ಎಷ್ಟೋ ಜನ ಕೇಳುವುದು ನೀನು ಕೆಳಜಾತಿಗೆ ಸೇರಿದವಳಾ? ದಲಿತಳಾ? ನಿಮ್ಮ ಜಾತಿ ಯಾವುದು ?  ಅಂಬೇಡ್ಕರ್ ಅವರ ಜಾತಿಯಾ ? ಎನ್ನುವ ಪ್ರಶ್ನೆಗಳು. ಎಷ್ಟೋ ಹುಡುಗರು ನನ್ನ ಪ್ರೊಫೈಲ್‌ ಗಳನ್ನು ನೋಡಿ ನೀವು ಎಸ್ಸಿ ಎಸ್ಟಿ ಇರಬಹುದು, ನಾನು ಎಸ್ಸಿ ಎಸ್ಟಿ ಜಾತಿಯವನೇ, ಮದುವೆ ಆಗ್ತೀರಾ ಅಂತ ಕೇಳಿದವರಿದ್ದಾರೆ.  ಇನ್ನು ಕೆಲವರು ಬಹುಶಃ ಹುಡುಗಿ ಎಸ್ಸಿ ಎಸ್ಟಿ ಜಾತಿ ಎಂದು ಸಂಬಂಧ ಕೇಳುವುದಕ್ಕೆ ಬಂದು ವಾಪಸ್ ಹೋದವರು ಇದ್ದಾರೆ.

ನೀವ್ಯಾಕೆ ಯಾವಾಗಲೂ ಅವರದೇ ಪೋಸ್ಟ್‌ಗಳನ್ನು ಹಾಕ್ತಿರಾ ಅಂತ ಕೇಳ್ತಾರೆ. ಇವರೆಲ್ಲರ ಪ್ರಶ್ನೆಗಳನ್ನ ಅವರ  ನಡವಳಿಕೆಗಳನ್ನು ಕಂಡು ನಗಬೇಕೋ ಅಳಬೇಕೋ ಅಥವಾ ಅಸಹ್ಯ ಪಡಬೇಕೋ ತಿಳಿಯುವುದೇ ಇಲ್ಲ. ತನ್ನ ಜಾತಿಯ ಕಾರಣಕ್ಕಾಗಿ ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾದ ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದು ಜಾತಿ ನಿವಾರಣೆಗಾಗಿ ಬದುಕನ್ನೇ ಮೀಸಲಿಟ್ಟವರು. ಅವರ ಶ್ರಮ ಹೋರಾಟ ಬದುಕಿನ ಕ್ರಮವನ್ನ ಅರಿಯದಂತಹ ದಡ್ಡರು ಬುದ್ಧಿಹೀನರು ಇವತ್ತಿಗೂ ಕೂಡ ಕೇವಲ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಬದುಕಿದ್ದಾಗಲೂ, ಅವರು ನಿರ್ವಾಣಗೊಂಡ ಮೇಲೂ ಅವರನ್ನು ಇನ್ನಷ್ಟು ತುಳಿಯುತ್ತಲೇ ಇರುವ ಜನರಿಗೆ ಅವರ ಕೊಡುಗೆಗಳು ಹೋರಾಟಗಳು ತ್ಯಾಗಗಳು ಅವರ ಬದುಕು ಅರ್ಥವಾಗುವುದಕ್ಕೆ ಸಾಧ್ಯವೇ ಇಲ್ಲ.

ಬಹಳ ಮುಖ್ಯವಾಗಿ ನಾನು ಹೀಗೆ ಓದು ಕಲಿತು ಒಳ್ಳೆಯ ಬದುಕನ್ನ, ಸ್ವಾಭಿಮಾನದ ಬದುಕನ್ನ ನಡೆಸುತ್ತಿದ್ದೇನೆ ಅಂದರೆ ಅದಕ್ಕೆ ಕಾರಣ ಅಂಬೇಡ್ಕರ್. ನಮ್ಮೆಲ್ಲರ ಬದುಕು ಅಂಬೇಡ್ಕರ್ ಕೊಟ್ಟ ಭಿಕ್ಷೆ. ಸಂವಿಧಾನ ನಮಗೆ ಕೊಟ್ಟ ಬದುಕಿನಿಂದಾಗಿ ನಾವುಗಳು ತಲೆಯೆತ್ತಿ ಬದುಕುವಂತೆ ಆಗಿದೆ. ಶುದ್ಧ ನೀರನ್ನ ಕುಡಿಯುವಂತಾಗಿದೆ. ಎಲ್ಲಾ ಜಾತಿ ಧರ್ಮದವರ ಜನರೊಟ್ಟಿಗೆ ಕುಳಿತು ವಿದ್ಯೆ ಕಲಿಯುವ, ಕೆಲಸ ಮಾಡುವ ಬದುಕು ಸಿಕ್ಕಿದೆ. ಇವತ್ತು ನಾವು ಉಸಿರಾಡುತ್ತಿರುವ ನೀರು, ಗಾಳಿ, ಆಹಾರ, ವಸತಿ ಎಲ್ಲದಕ್ಕೂ ಅಂಬೇಡ್ಕರ್ ಕಾರಣ. ಅವರ ಹೋರಾಟದ ಫಲವನ್ನ ನಾವಿವತ್ತು ತಿಂದು ತೇಗಿ ಅವರನ್ನೇ ಮರೆತು ಅವರನ್ನೇ ತುಳಿಯುವ ಕೆಟ್ಟ ಕಾಲದಲ್ಲಿ ಇದ್ದೇವೆ.

ಬಹಳ ಮುಖ್ಯವಾಗಿ ಹೆಣ್ಣಾಗಿ ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಅನುಭವಿಸಿದಂತಹ ದೌರ್ಜನ್ಯ, ಬಾಲ್ಯ ವಿವಾಹ, ಸತಿ ಪದ್ಧತಿ, ಬಹುಪತ್ನಿತ್ವ, ಅಂತಹ ಕ್ರೌರ್ಯಗಳನ್ನ ತಡೆದು ನಮಗೆ ವಿಧವಾ ಪದ್ಧತಿ, ಸಮಾನತೆಯ ಹಕ್ಕು, ಶಿಕ್ಷಣದ ಹಕ್ಕು, ಮತದಾನದ ಹಕ್ಕು ಕೊಟ್ಟು ಆಸ್ತಿಯಲ್ಲಿ ಪಾಲು ನೀಡಿ ಸಮಾನ ವೇತನವನ್ನು ಸಿಗುವಂತೆ ಮಾಡಿ ವಿಚ್ಛೇದನದ ಹಕ್ಕುಗಳನ್ನ ಕೊಟ್ಟು ನಮಗೆ ಇಷ್ಟವಾದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವಂತಹ ಹಕ್ಕುಗಳನ್ನು ನೀಡಿ ಸ್ವಾವಲಂಬಿಯಾಗಿ ಬದುಕುವಂತಹ ಬದುಕನ್ನ ನೀಡಿದವರು ಡಾ. ಬಿಆರ್ ಅಂಬೇಡ್ಕರ್ ಅವರು. ಹೆಣ್ಣು ಮಕ್ಕಳ ಅಸ್ತಿತ್ವಕ್ಕಾಗಿ ಬೆಲೆ ತರುವಲ್ಲಿ ಹೋರಾಡಿದ್ದಾರೆ. ಇನ್ನು ಸಮಸಮಾಜದ ಒಳಿತಿಗಾಗಿ ಸಮಾನತೆಗಾಗಿ ಸ್ವಾತಂತ್ರ್ಯಕ್ಕಾಗಿ ಬದುಕು ಸವೆಸಿದ್ದಾರೆ.

ಕಾರ್ಮಿಕರ ಹಕ್ಕುಗಳನ್ನು ನೀಡಿ, ಆರೋಗ್ಯ ಸೇವೆಗಳನ್ನ ನೀಡಿ, ಕಾರ್ಮಿಕರ ಸುಧಾರಣೆಗಳಿಗಾಗಿ ಶ್ರಮಿಸಿ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತೆ ಮಾಡಿ, ಕೈಗಾರಿಕಾ ವಲಯಗಳಲ್ಲಿ ಸುಧಾರಣೆಗಳನ್ನ ತಂದು, ಗ್ರಾಮೀಣ ಅಭಿವೃದ್ಧಿಗಳಿಗಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯಗಳನ್ನು ಹಕ್ಕುಗಳನ್ನು ನೀಡಿದ್ದಾರೆ. ಅಂತರಧರ್ಮೀಯ ಏಕತೆಗಾಗಿ ಹೋರಾಡಿದ್ದಾರೆ.

ಸಂವಿಧಾನ ಶಿಲ್ಪಿ

ಇವತ್ತು ಒಂದು ಅರ್ಥದಲ್ಲಿ ನಾವು ಬದುಕುತ್ತಿರುವುದಕ್ಕೆ ಕಾರಣ ಅಂಬೇಡ್ಕರ್. ಎಲ್ಲಾ ತರಹದ ರಾಜಕೀಯ, ಆರ್ಥಿಕ, ಧಾರ್ಮಿಕ, ಸಾಮಾಜಿಕ ವಲಯಗಳಲ್ಲಿ ಸ್ಥಾನಮಾನಗಳನ್ನು ಹೊಂದುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟವರು ಅಂಬೇಡ್ಕರ್. “ಯಾವುದೇ ಸಮುದಾಯದ ಏಳಿಗೆಯನ್ನು ಅಳಿಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳಿಗೆಯನ್ನು ಪರಿಗಣಿಸಬೇಕು” ಎಂದು ಹೇಳಿದವರು ಅಂಬೇಡ್ಕರ್.

 ಹಿಂದೂ ಸಮಾಜದ ಅತ್ಯಂತ ಶೋಷಿತ ಗುಂಪಿಗೆ ಸೇರಿದವಳು ಹೆಣ್ಣು. ಅವಳ ಉದ್ಧಾರಕ್ಕಾಗಿ ಅವಳ ಸ್ಥಿತಿಗತಿಯನ್ನು ಬದಲುಗೊಳಿಸಲು ಪಣತೊಟ್ಟವರು ಅಂಬೇಡ್ಕರ್. ಆದರೆ ವಿಪರ್ಯಾಸವೆಂದರೆ ಈ ಯಾವುದನ್ನು ಅರಿಯದ ನಾವುಗಳು ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಅವರ ತತ್ವ ಸಿದ್ಧಾಂತಗಳಿಗೆ, ಅವರ ತ್ಯಾಗ ಹೋರಾಟಗಳಿಗೆ ಅವಮಾನ ಮಾಡುತ್ತಿದ್ದೇವೆ.

ಬಹಳ ಮುಖ್ಯವಾಗಿ ಎಷ್ಟೋ ಹೆಣ್ಣು ಮಕ್ಕಳಿಗೆ ಈ ಯಾವುದರ ಪರಿವೆಯೂ ಇಲ್ಲದೆ, ನಮ್ಮ ಬದುಕು ಅವರ ಭಿಕ್ಷೆ ಅನ್ನುವುದನ್ನು ಮನಗಾಣದೆ ಅವರ ಫೋಟೋಗಳನ್ನು ಹಾಕಿದ ತಕ್ಷಣ, ಅವರನ್ನು ಪೂಜಿಸಿದ ತಕ್ಷಣ ನಮ್ಮನ್ನು ಎಸ್ಸಿ ಎಸ್ಟಿಗೆ ಸೇರಿದವರು ಎಂದು ಕುಹಕವಾಡಿ ಗೇಲಿ ಮಾಡಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ನೋಡುತ್ತಿರುವ ಜನರ ಕೆಟ್ಟ ಮನಸ್ಥಿತಿಗಳು ಬದಲಾಗದ ಹೊರತು ಅಂಬೇಡ್ಕರ್ ಮತ್ತು ಅವರ ಬದುಕಿನ ಕೊಡುಗೆಗಳು ಸಾಮರ್ಥ್ಯಗಳು ಯಾರಿಗೂ ಅರ್ಥವಾಗುವುದಿಲ್ಲ.

ಶೃಂಗಶ್ರೀ.ಟಿ, ಶಿವಮೊಗ್ಗ

ಅತಿಥಿ ಉಪನ್ಯಾಸಕಿ

ಇದನ್ನೂ ಓದಿಅಂಬೇಡ್ಕರ್‌ ಹೇಗೆ ಓದುತ್ತಿದ್ದರು ಗೊತ್ತೆ?

More articles

Latest article