ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಸಂಕ್ರಾಂತಿ ಶುಭಾಶಯದ ಜೊತೆಗೆ ತಮ್ಮ ಕಾರ್ಯಕರ್ತರಿಗೆ ಮೂರು ದೊಡ್ಡ ಟಾಸ್ಕ್ ಗಳನ್ನು ನೀಡಿದ್ದಾರೆ. ಅದಕ್ಕೆ ಮುಂದಿನ ವರ್ಷದ ಸಂಕ್ರಾಂತಿಯವರೆಗೆ ಕಾಲಾವಧಿಯನ್ನೂ ನಿಗದಿ ಪಡಿಸಿದ್ದಾರೆ. ಏನದು ಟಾಸ್ಕ್? ಏನಿದರ ಮಹತ್ವ? ಟ್ವಿಟರ್ ನಲ್ಲಿ ನಾರಾಯಣಗೌಡರು ಹಂಚಿಕೊಂಡಿರುವ ಪೋಸ್ಟ್ ನ ಪೂರ್ಣಪಾಠ ಇಲ್ಲಿದೆ.
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರ ಬದುಕು ಎಳ್ಳು, ಬೆಲ್ಲದ ಸಿಹಿಯಲ್ಲಿ ಅರಳಿಕೊಳ್ಳಲಿ ಎಂದು ಹಾರೈಸುತ್ತೇನೆ.
ಕನ್ನಡಿಗರೂ ಒಂದು ಸಂಕ್ರಮಣದ ಕಾಲಘಟ್ಟದಲ್ಲಿ ಹಾದುಹೋಗುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಮಕರ ಸಂಕ್ರಾಂತಿಯ ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ನನ್ನೆಲ್ಲ ಕಾರ್ಯಕರ್ತರಿಗೆ ದೊಡ್ಡ ಸವಾಲೊಂದನ್ನು ನೀಡುತ್ತಿದ್ದೇನೆ. ಮುಂದಿನ ಸಂಕ್ರಾಂತಿಯೊಳಗೆ ಮೂರು ಮುಖ್ಯ ವಿಷಯಗಳು ನಿಮ್ಮ ಚಳವಳಿಯ ವಿಷಯವಾಗಬೇಕು. ಈ ಮೂರು ಹಕ್ಕೊತ್ತಾಯಗಳು ಈಡೇರುವವರೆಗೆ ನೀವು ವಿರಮಿಸಬಾರದು. ಈ ಚಳವಳಿಯಿಂದ ಏನೇ ಸಮಸ್ಯೆ ಬಂದರೂ ಧೃತಿಗೆಡದೆ ಕನ್ನಡಿಗರ ಬಹುಕಾಲದ ಬೇಡಿಕೆಗಳು ಈಡೇರುವಂತೆ ನೋಡಿಕೊಳ್ಳಬೇಕು.
ಕರ್ನಾಟಕದಲ್ಲಿ ಮಾರಾಟವಾಗುವ/ ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಪರಭಾಷಿಕರ ಪಾಲಾಗುತ್ತಿದೆ. ಇದು ಸಾರಾಸಗಟಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಅಪಮಾನ. ಹೀಗಾಗಿ ಎಲ್ಲ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು.
ಕರ್ನಾಟಕದಲ್ಲಿ ಮಾರಾಟವಾಗುವ/ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರೆಹಗಳು ಕನ್ನಡದಲ್ಲಿಯೇ ಇರಬೇಕು. ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು, ಪ್ರಮಾಣವೇನು, ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬೆಲ್ಲ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಗೊತ್ತಾಗಬೇಕು.
ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ/ ಖಾಸಗಿ/ ಗ್ರಾಮೀಣ /ಸಹಕಾರಿ ಬ್ಯಾಂಕ್ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ. 100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ. 60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ/ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು.
ಈ ಮೂರು ಹಕ್ಕೊತ್ತಾಯಗಳು ಈಡೇರಲು ಗ್ರಾಮಮಟ್ಟದಿಂದ, ರಾಜಧಾನಿಯವರೆಗೆ ದೊಡ್ಡ ಮಟ್ಟದ ಚಳವಳಿ ಹಮ್ಮಿಕೊಳ್ಳಲು ನನ್ನ ಕಾರ್ಯಕರ್ತರಿಗೆ ಕರೆ ನೀಡುತ್ತೇನೆ. ಕನ್ನಡದ ಸಮಸ್ತ ಜನತೆ ಈ ಚಳವಳಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. 2023ರ ಡಿಸೆಂಬರ್ 27ರಂದು ಕರವೇ ಸಂಘಟಿಸಿದ ಐತಿಹಾಸಿಕ ನಾಮಫಲಕ ಚಳವಳಿಯನ್ನು ಯಶಸ್ವಿಗೊಳಿಸಿದ ಹಾಗೆಯೇ ಕರವೇ ಕಟ್ಟಾಳುಗಳು ಜೀವದ ಹಂಗು ತೊರೆದು ಹೋರಾಡಿ ಈ ಹೋರಾಟವನ್ನೂ ಯಶಸ್ವಿಗೊಳಿಸುತ್ತಾರೆ ಎಂಬ ವಿಶ್ವಾಸ ನನ್ನದು.
ನಮ್ಮ ಈ ಮೂರು ಹಕ್ಕೊತ್ತಾಯಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಸೂಕ್ತ ಕಾಯ್ದೆ ರೂಪಿಸಬೇಕು, ಶಾಸನಬದ್ಧವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸೋಣ. ಮುಂದಿನ ಮಕರ ಸಂಕ್ರಾಂತಿಯೊಳಗೆ ಈ ಹಕ್ಕೊತ್ತಾಯಗಳು ಈಡೇರುವಂತೆ ನೋಡಿಕೊಳ್ಳೋಣ.
ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಕರ್ನಾಟಕ ಹೆಸರು ನಾಮಕರಣದ ನೆನಪಿನ “ಹೆಸರಾಯಿತು ಕರ್ನಾಟಕ” ಸಮಾವೇಶದಲ್ಲಿ ನನ್ನ ಎಲ್ಲ ಮುಖಂಡರಿಗೆ ಕನ್ನಡಕ್ಕಾಗಿ, ಕನ್ನಡಿಗರ ಏಳಿಗೆಗಾಗಿ, ಕರ್ನಾಟಕದ ರಕ್ಷಣೆಗಾಗಿ ಎಂಥದ್ದೇ ಕಷ್ಟ ಬಂದರೂ ಎದೆಗುಂದದೆ ಎದುರಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಬೋಧಿಸಿದ್ದೆ. ಆ ಪ್ರತಿಜ್ಞೆಯಂತೆ ಎಲ್ಲರೂ ನಡೆಯೋಣ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ