ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ತಂತ್ರಜ್ಞಾನ ದಲ್ಲಿ ಕ್ರಾಂತಿ ಮಾಡಿದ ಮಹಾನ್ ನಾಯಕರಾಗಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮ ಲೋಕಾರ್ಪಣೆ ಮಾಡಿದೆ ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಹೇಳಿದರು.
ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನೀಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಜೀವಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡುತ್ತಿದ್ದರು.
ಇಂದಿರಾಗಾಂಧಿ ಈ ದೇಶದ ಐಕ್ಯತೆಗೆ ತನ್ನ ಸ್ವಂತ ಜೀವವನ್ನೇ ತ್ಯಾಗ ಮಾಡಿದ ಮಹಾನ್ ನಾಯಕಿ. ಅವರ ಪುತ್ರ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಹಲವಾರು ಬದಲಾವಣೆ ತಂದರು. ದೇಶದ ನಾಗರಿಕರಿಗೆ 18 ವರ್ಷಕ್ಕೆ ಮತದಾನದ ಹಕ್ಕು ಕೊಟ್ಟರು. ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ತಂದು ರಾಜಕೀಯ ವಿಕೇಂದ್ರಿಕರಣಕ್ಕೆ ಕಾರಣರಾದರು. ಪರಿಣಾಮ ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿ ಅಧಿಕಾರ ಅನುಭವಿಸುತ್ತಿದ್ದಾನೆ ಎಂದರು.
ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ಯಾವುದಾದರೂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದ ಡಿಸಿಎಂ, ಸಚಿವ ಶರಣಪ್ರಕಾಶ್ ಪಾಟೀಲ ಅವರ ಕನಸಿನಂತೆ ಜಯದೇವ ಆಸ್ಪತ್ರೆಯಲ್ಲಿ 371 ಬೆಡ್ ಗಳ ಆಸ್ಪತ್ರೆ ಆಗುತ್ತಿದೆ. ಇದರು ಹೆಮ್ಮೆಯ ಸಂಗತಿ ಎಂದರು.
ತಾವು ಜಿಪಂ ನಿಂದಲೇ ಬಂದು ಈಗ ರಾಜ್ಯದ ಡಿಸಿಎಂ ಆಗಿದ್ದೇನೆ ಎಂದ ಶಿವಕುಮಾರ ಪಂಚಾಯತ್ ರಾಜ್ ಅಡಿಯಲ್ಲಿ ವಿಕೇಂದ್ರಿಕರಣವಾಗಿದ್ದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಅನುಕೂಲವಾಗಲು ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 371 J ಜಾರಿಗೆ ತಂದರು. ಈ ಭಾಗ ರಾಜ್ಯದ ಬೇರೆ ಭಾಗಕ್ಕಿಂತಲೂ ಅಭಿವೃದ್ದಿ ಹೊಂದಲು ಸಹಕಾರಿಯಾಗುತ್ತಿದೆ. ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸ ಬೇಕಾಗಿತ್ತು. ಆದರೆ, ನಿಮ್ಮನ್ನೆಲ್ಲ ನೋಡಬೇಕೆಂದು ನಾನು ಇಂದು ಇಲ್ಲಿಗೆ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ ಎಂದರು.