Sunday, July 14, 2024

ಜೈ ಹಿಂದ್, ಜೈ ಕರ್ನಾಟಕ, ಜೈ ಸಿದ್ದರಾಮಯ್ಯ ಎಂದ ಡಿಸಿಎಂ ಡಿ ಕೆ ಶಿವಕುಮಾರ್

Most read

ಚಿತ್ರದುರ್ಗದಲ್ಲಿ ನಡೆದ ಐತಿಹಾಸಿಕವಾದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ತಮ್ಮ ಭಾಷಣದ ಕೊನೆಯಲ್ಲಿ ಜೈ ಹಿಂದ್, ಜೈ ಕರ್ನಾಟಕ ಎಂದು ಹೇಳಿ ಜೈ ಸಿದ್ದರಾಮಯ್ಯ ಎಂದು ಘೋಷಣೆ ಕೂಗುದ್ದಾರೆ.

ಸಧ್ಯ ಕರ್ನಾಟಕದ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಯವರನ್ನು ಎದುರು ಬದುರಾಗಿ ಇಟ್ಟು ನೋಡಲಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ಡಿಕೆಶಿ ಆಕಾಂಕ್ಷಿಯಾಗಿದ್ದು ಸಿದ್ದರಾಮಯ್ಯ ವಿರುದ್ಧ ಬಣದಲ್ಲಿದ್ದಾರೆ ಎಂದೇ ಊಹಿಸಲಾಗಿದೆ. ಆದರೆ ಡಿಕೆಶಿ ತಾವು ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿಕೊಂಡು ಹೋಗುತ್ತಿರುವ ಸಂದೇಶವನ್ನು ತಮ್ಮ ಘೋಷಣೆಯ ಮೂಲಕ ನೀಡಿದ್ದಾರೆಯೇ?

ನೆನ್ನೆ ಚಿತ್ರದುರ್ಗದಲ್ಲಿ ನಡೆದ ಬೃಹತ್ ಸಮಾವೇಶವು ಕಾಂಗ್ರೆಸ್ ಒಳಗೆ ಸಿದ್ದರಾಮಯ್ಯ ವಿರೋಧಿಗಳಿಗೆ ಮತ್ತು ಕಾಂತರಾಜ್ ವರದಿ ಜಾರಿಯ ವಿಷಯದಲ್ಲಿ ತಗಾದೆ ತಕರಾರು ತೆಗೆಯುತ್ತಿರುವವರಿಗೆ ಸಂದೇಶ ನೀಡಲು ಮತ್ತು ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತರಲು ಹಿಂದುಳಿದ ಜಾತಿಗಳ ಪ್ರಮುಖರು ಸಂಘಟಿಸಿದ್ದ ಸಮಾವೇಶವಾಗಿತ್ತು. ಒಂದು ರೀತಿಯಲ್ಲಿ ಇದು ಬಲಪ್ರದರ್ಶನವೂ ಆಗಿತ್ತು. ಕಳೆದ ವಿಧಾನಸಭಾ ಚುನಾವಣೆಗೆ ಪೂರ್ವದಲ್ಲಿ ಸಿದ್ದರಾಮಯ್ಯ ಅವರ ಜನ್ಮದಿನದ ನೆಪದಲ್ಲಿ ದಾವಣಗೆರೆಯಲ್ಲಿ ನಡೆದ ಬೃಹತ್ ಜನಸಮಾವೇಶದಂತೆಯೇ ಚಿತ್ರದುರ್ಗದಲ್ಲಿ ನಡೆದಿರುವ ಶೋಷಿತ ಜಾತಿವರ್ಗಗಳ ಸಮಾವೇಶವೂ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬಲಪಡಿಸುವ ಉದ್ದೇಶ ಹೊಂದಿತ್ತೆನ್ನಲಾಗಿದೆ.

ಕಾಂತರಾಜ್ ವರದಿಯ ಜಾರಿಯನ್ನೇ ಪ್ರಮುಖ ಆಗ್ರಹವಾಗಿಟ್ಟುಕೊಂಡು, ಸಿದ್ದರಾಮಯ್ಯನವರು ಕೈಗೊಳ್ಳುವ ತೀರ್ಮಾನಕ್ಕೆ ಬೆಂಬಲ ಸೂಚಿಸುವ ಸಲುವಾಗಿಯೇ ಹಮ್ಮಿಕೊಳ್ಳಲಾಗಿದ್ದ ಈ ಸಮಾವೇಶದಲ್ಲಿ  ಡಿ ಕೆ ಶಿವಕುಮಾರ್ ಸಹ ಭಾಗವಹಿಸಿದ್ದು ತಮ್ಮ ಮಾತಿನಲ್ಲಿ ತಾವು ‘ಕಾಂತರಾಜ್ ವರದಿ ಅನುಷ್ಟಾನಕ್ಕೆ ವಿರೋಧವಿಲ್ಲ’ ಎಂದು ತಿಳಿಸಿರುವ ಜೊತೆಗೆ ಸಿದ್ದರಾಮಯ್ಯನವರಿಗೂ ಜೈಕಾರ ಹಾಕಿರುವುದು ವಿಶೇಷವಾಗಿದೆ.

More articles

Latest article