Saturday, September 14, 2024

ಕೆರೆ ತುಂಬಿಸುವ ಯೋಜನೆ: ವಿಸ್ತ್ರತ ವರದಿ ಸಲ್ಲಿಸಲು ಸಚಿವ ಎನ್ ಎಸ್ ಭೋಸರಾಜು ಸೂಚನೆ

Most read

ಬೆಂಗಳೂರು: ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆಗಳಿಂದ ಅಂತರ್ಜಲದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಸ್ತ್ರತ ವರದಿಯನ್ನ ನೀಡುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ವಿಕಾಸಸೌಧದಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ, ಅಂತರ್ಜಲ ಇಲಾಖೆ ಹಾಗೂ ಅಟಲ್ ಭೂಜಲ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಕಳೆದ 10 ವರ್ಷಗಳಿಗೆ ಹೋಲಿಸಿದರೆ ಕಳೆದ ಕೆಲವು ವರ್ಷಗಳಲ್ಲಿ117 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. 119 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿರುವುದು ಅಂಕಿ ಸಂಖ್ಯೆಗಳಿಂದ ತಿಳಿದುಬಂದಿದೆ. ಕೆರೆ ತುಂಬುವ ಯೋಜನೆಗಳನ್ನ ಕೈಗೊಳ್ಳಲಾಗಿರುವಂತಹ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಕೆರೆ ತುಂಬುವ ಯೋಜನೆಗಳಿಂದ ಆಗಿರುವಂತಹ ಪರಿಣಾಮದ ಬಗ್ಗೆ ವಿಸ್ತ್ರುತ ಅಧ್ಯಯನ ಅಗತ್ಯವಿದೆ. ಬರಗಾಲದ ತೀವ್ರತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಧೀರ್ಘಕಾಲೀನ ಯೋಜನೆಗಳನ್ನು ಕೈಗೊಳ್ಳಲು ಇದು ನೆರವಾಗಲಿದೆ. ಈ ಬಗ್ಗೆ ಅಧ್ಯಯನ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಕೆರೆ ಸಂಘಗಳ ನಿಶ್ಚಿತ ಠೇವಣಿ ಮಾಹಿತಿ ನೀಡದ ಅಧಿಕಾರಿಗಳ ತರಾಟೆ:

ಜಲ ಸಂವರ್ಧನೆ ಯೋಜನೆಯ ಅಡಿಯಲ್ಲಿ ರಚಿಸಲಾಗಿರುವಂತಹ ಕೆರೆ ಸಂಘಗಳ ಮೂಲಕ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಇಡಲಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಕೆರೆ ಸಂಘಗಳ ಮೂಲಕ ಇರಿಸಲಾದ ಠೇವಣಿಗಳ ಸರಿಯಾದ ನಿರ್ವಹಣೆ ಅಗದೇ ಇರುವುದು ಸಚಿವರ ಗಮನಕ್ಕೆ ಬಂದಿತು. ಈ ಬಗ್ಗೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ದೊರೆಯದೇ ಇರುವ ಬಗ್ಗೆ ಸಚಿವರು ಕೋಪಗೊಂಡರು. ನಿಶ್ಚಿತ ಠೇವಣಿಯ ಸರಿಯಾದ ನಿರ್ವಹಣೆ ಮಾಡುವುದು ಅಯಾ ಅಧಿಕಾರಿಗಳ ಕರ್ತವ್ಯವಾಗಿದೆ. ಇದರಲ್ಲಿ ವಿಫಲರಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದರು.

ಕೆರೆ ಸಂಜೀವಿನಿ ಯೋಜನೆಯ ಬಗ್ಗೆ ಪ್ರಚಾರ ನೀಡಿ:

ಕೆರೆ ಸಂಜೀವಿನಿ ಯೋಜನೆಯ ಅಡಿಯಲ್ಲಿ ಕೆರೆಯಿಂದ ತೆಗೆಯಲಾಗುವ ಹೂಳಿನ ಬಗ್ಗೆ ಮೊದಲೇ ರೈತರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು. ಬೀಜ ಬಿತ್ತುವಂತಹ ಸಮಯದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಲ್ಲಿ ಹೆಚ್ಚಿನ ರೈತರು ಹೂಳನ್ನ ತಗೆದುಕೊಂಡು ಹೋಗುತ್ತಾರೆ. ಆದರೆ, ಕಾಲೋಚಿತವಲ್ಲದ ಅನುಷ್ಠಾನಕ್ಕೆ ಸರಿಯಾದ ಪ್ರತಿಕ್ರಿಯೆ ದೊರಕುವುದಿಲ್ಲ. ಈ ಹಿನ್ನಲೆಯಲ್ಲಿ ಕೆರೆ ಸಂಜೀವಿನಿ ಯೋಜನೆಯ ಪ್ರಾರಂಭಕ್ಕೂ ಮುನ್ನ ರೈತರಿಗೆ ಮಾಹಿತಿ ನೀಡಬೇಕು. ಹಾಗೂ ಕೆರೆ ಯಲ್ಲಿ ಹೂಳನ್ನ ತಗೆಯುವ ಮೂಲಕ ಆಯಾ ಕೆರೆಗಳ ನೀರು ತುಂಬುವ ಸಾಮರ್ಥ್ಯವೂ ಹೆಚ್ಚಾಗುವಂತೆ ನೋಡಿಕೋಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳಾದ ಯತೀಶ್ ಚಂದ್ರ, ಕೆರೆ ಅಭಿವೃದ್ದಿ ಪ್ರಾಧಿಕಾರದ ನಿರ್ದೇಶಕರಾದ ಶಿವಸ್ವಾಮಿ, ಅಂತರ್ಜಲ ಇಲಾಖೆಯ ನಿರ್ದೇಶಕರಾದ ರಾಮಚಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

More articles

Latest article