ದೀಪಾವಳಿ ಹಬ್ಬದ ಬೆಳಕಾದರೂ ನಮ್ಮ ಜನರ ಕಣ್ಣುಗಳನ್ನು ತೆರೆಸುವಂತಾಗಬೇಕಾಗಿದೆ. ಜಾತಿ ಧರ್ಮದ ಹಿಂಸೆಯಲ್ಲಿ ನೊಂದವರ, ಬೆಂದವರ, ಬಳಲಿದವರ, ವಂಚಿತರ, ಶೋಷಿತರ ಬದುಕು ಬೆಳಗಲು ಭಾರತಕ್ಕೆ ಬೇಕು ಬೆಳಕು. ಅದು ಧರ್ಮದ ಬೆಳಕಲ್ಲ. ಜ್ಞಾನ, ವಿವೇಕ, ವಿವೇಚನೆಗಳ ಬೆಳಕು -ರೋಶ್ನಿ ಅನಿಲ್ ರೊಜಾರಿಯೊ, ಬಜ್ಪೆ
ಸಂತಸ, ಸಡಗರ, ಸಂಭ್ರಮದ ಬೆಳಕಿನ ಹಬ್ಬ ದೀಪಾವಳಿ.
‘ದೀಪಂ ಜ್ಯೋತಿ ಪರಬ್ರಹ್ಮ | ದೀಪಂ ಜ್ಯೋತಿ ಪರಾಯಣೆ | ದೀಪೇನಾ ಹರತೇ ಪಾಪಂ | ಸಂಧ್ಯಾ ದೀಪಂ ಸರಸ್ವತೀʼ
ಹಿಂದೂ ಧರ್ಮವು ಬೆಳಗುವ ದೀಪದ ಜ್ಯೋತಿಯು ಭಗವಂತನ ಸ್ವರೂಪ, ಆ ಬೆಳಕು ಪರಮಾತ್ಮನಾಗಿ ಪೂಜಿಸಲರ್ಹ, ದೀಪದ ಬೆಳಕಿನಿಂದ ಪಾಪಗಳು ನಾಶವಾಗುತ್ತವೆ. ಮುಸ್ಸಂಜೆ ಬೆಳಗಿಸುವ ದೀಪವು ಸರಸ್ವತಿಯ ಸ್ವರೂಪ ಎಂದು ಬಹು ಸುಂದರವಾಗಿ ಅರ್ಥಪೂರ್ಣವಾಗಿ ಈ ಶ್ಲೋಕವು ವ್ಯಾಖ್ಯಾನಿಸಿದೆ.
ಪ್ರಪಂಚದ ಸರ್ವಧರ್ಮಗಳಲ್ಲೂ ಬೆಳಕಿಗೆ ಇಂಥಹುದೇ ಮಹತ್ವ ಇದೆ. ಬೆಳಕಿಗೆ ಇದಕ್ಕಿಂತ ಸುಂದರ ಅರ್ಥ ಬೇರಾವುದೂ ಇರದು. ಬೆಳಕು ಇಲ್ಲದ ಮನೆ ಮಂದಿರ ಚರ್ಚು ಮಸೀದಿ ಕಛೇರಿ ಕಾರ್ಖಾನೆ ಕಾರ್ಯಾಗಾರಗಳೇ ಇಲ್ಲ. ಬೆಳಕು ಇಲ್ಲದ ತಾಣ ಕಗ್ಗತ್ತಲ ಸ್ಮಶಾನ.
ಬೆಳಕು ದೀಪದ ರೂಪದಲ್ಲಿರಲಿ, ವಿದ್ಯುತ್ ಬಲ್ಬ್, ಮೊಂಬತ್ತಿಯ ರೂಪದಲ್ಲಿರಲಿ, ಸೂರ್ಯ ಚಂದ್ರ ನಕ್ಷತ್ರಗಳ ರೂಪದಲ್ಲಿರಲಿ …. ಅದು ಕವಿದ ಕತ್ತಲೆಯನ್ನು ಓಡಿಸಿ ಪಾರದರ್ಶಕತೆಯನ್ನು ಪಸರಿಸುತ್ತದೆ. ಬೆಳಕಿನಿಂದ ಬಾಹ್ಯಾಕಾಶ ಪ್ರಕಾಶಿತವಾಗಿದೆ. ಬ್ರಹ್ಮಾಂಡ ವಿಕಸಿತವಾಗಿದೆ. ಬೆಳಕು ಬ್ರಹ್ಮಾಂಡವನ್ನು ಪಾರದರ್ಶಕ ಮಾಡಿದ ಮಹಾಶಕ್ತಿ. ಬೆಳಕಿಲ್ಲದಿದ್ದರೆ ಬ್ರಹ್ಮಾಂಡವೇ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಪ್ರತೀ ಮಳೆಹನಿಗೂ ಅನಂತ ಸಾಗರವನ್ನು ಸೇರುವ ತವಕವಿರುವಂತೆ ಪ್ರತೀ ಬೆಳಕಿನ ಕಿರಣಕ್ಕೂ ಲೋಕದ ಕತ್ತಲನ್ನು ಓಡಿಸುವ ತುಡಿತವಿರುತ್ತದೆ.
ಬೆಳಕು ಧಾರ್ಮಿಕವಾಗಿ ಜ್ಞಾನ, ಶಾಂತಿ, ಶುಭ್ರತೆಯ ಸಂಕೇತವಾದರೆ, ವೈಜ್ಞಾನಿಕವಾಗಿ ಭೂಮಿ ಮೇಲಿನ ಎಲ್ಲಾ ಚರಾಚರ ಜೀವಿಗಳ ಶಕ್ತಿಯ ಮೂಲ. ಸೂರ್ಯನ ಬೆಳಕಿಲ್ಲದೆ ಭೂಮಿಯ ಮೇಲೆ ಒಂದು ಹುಲುಕಡ್ಡಿಯೂ ಬೆಳೆಯದು. ವೈರಸ್ ಗಳು ನಾಶವಾಗವು. ಜೀವಚರಗಳ ಅಸ್ತಿತ್ವವೇ ಇರದು.
ಅಷ್ಟು ಮಹತ್ವದ ಬೆಳಕು, ಧಾರ್ಮಿಕ ಹಬ್ಬ ದೀಪಾವಳಿಯ ರೂಪದಲ್ಲಿ ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿ ಜನಮನಗಳಲ್ಲಿ ಪ್ರೀತಿ ಸ್ನೇಹ ಸೌಹಾರ್ದ ಸಾಮರಸ್ಯಗಳನ್ನು ಬೆಸೆದಿದೆ. ಹಿಂದೂಗಳ ದೀಪಾವಳಿ ಅಂದರೆ ಅನ್ಯಧರ್ಮೀಯರಾದ ನಮಗೂ ಅಷ್ಟೇ ಸಂತಸ, ಸಂಭ್ರಮ. ಆದರೆ ಇಂದು ಅನೇಕ ಹಬ್ಬಗಳಲ್ಲಿ ಹಿಂದೂ ಧಾರ್ಮಿಕ ಸಂಘಟನೆಗಳು ಮತ್ತು ಅವುಗಳ ಕೃಪಾಪೋಷಿತ ಅಧಿಕಾರರೂಢ ಬಿಜೆಪಿ ಪಕ್ಷ ಧರ್ಮದ್ವೇಷಗಳನ್ನು ತಂದು ಹಾಕಿದ್ದನ್ನು ನೋಡುವಾಗ ಮನ ದುಃಖಿತವಾಗುತ್ತದೆ. ರಾಜಕೀಯ ಪಕ್ಷಗಳ ಸಮರದಲ್ಲಿ ದೇಶದ ಜನತೆ ಭಯದಿಂದ ಬದುಕುವಂತಾಗಿದೆ.
ಕಾಂಗ್ರೆಸನ್ನು ಬದಿಗೆ ಸರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹಿಂದೂ ಪ್ರಾಬಲ್ಯದ ಬಿಜೆಪಿಗೆ ಸಿಕ್ಕಿದ ಅಸ್ತ್ರ ಧರ್ಮದ್ವೇಷದ ಕೋಮು ದಳ್ಳುರಿ. ಹಿಂದೂ ಧರ್ಮದವರನ್ನು ಕಾಂಗ್ರೆಸ್ ನಿಂದ ಹೊರತರಲು ಬಿಜೆಪಿಗೆ ಧರ್ಮಗಳನ್ನು ಒಡೆಯುವುದರ ವಿನಹ ಬೇರೆ ದಾರಿ ಇರಲಿಲ್ಲ. ಅದಕ್ಕೆ ಸರಿಯಾಗಿ ಮುಸಲ್ಮಾನ ಮತ್ತು ಕ್ರೈಸ್ತ ಸಮುದಾಯದ ತಲೆಕೆಟ್ಟ ನಾಲಾಯಕ್ ವಿಕೃತ ಮನಸ್ಥಿತಿಗಳ ದುಷ್ಕೃತ್ಯಗಳು, ಕುಕೃತ್ಯಗಳು, ಅನಾಚಾರಗಳು ತುಪ್ಪ ಸುರಿದವು. ಆದರೆ ಅಪರಾಧಗಳನ್ನು ಧರ್ಮದ ಆಧಾರದಲ್ಲಿ ನೋಡುವುದು ಸರಿಯೇ?
ಭಾರತ ದೇಶದಲ್ಲಿ ಬಹುಸಂಖ್ಯಾತರಿಂದಲೇ ಬಹು ದೊಡ್ಡ ಮಟ್ಟದಲ್ಲಿ ತಮ್ಮದೇ ಸ್ವ ಧರ್ಮದವರ ಮೇಲೆ ಘೋರಾತಿಘೋರ ಕೃತ್ಯಗಳು ನಡೆದರೂ, ಅನ್ಯ ಧರ್ಮದವರ ಬೆರಳೆಣಿಕೆಯ ಅಪರಾಧಗಳು ಮಾತ್ರ ಫ್ರಂಟ್ ಲೈನ್ ಗೆ ಬರುತ್ತವೆ.. ದೇಶದ ಪ್ರಧಾನಿಯವರೇ ತಾನು ಅಧಿಕಾರಕ್ಕೆ ಬರಲು ಚುನಾವಣಾ ಪ್ರಚಾರದ ಆರಂಭದ ಹಂತದಲ್ಲೇ ”ಹಿಂದೂ ಖತ್ರೇ ಮೇ ಹೇ’ ಎಂದು ಮೊಳಗಿಸಿದ ರಣಘೋಷಗಳು ಹಿಂದೂ ಧರ್ಮದವರಲ್ಲಿ ಭಯದ ಮನೋವಿಕಾರತೆಯನ್ನು ಸೃಷ್ಟಿಸಲು ಯಶಸ್ವಿಯಾದವು.
‘ಮುಸಲ್ಮಾನರು ಲವ್ ಜಿಹಾದ್, ಭೂ ಜಿಹಾದ್, ಅಧಿಕಾರ ಜಿಹಾದ್ ಮಾಡುತ್ತಾರೆ’, ‘ಕ್ರೈಸ್ತರು ಮತಾಂತರ ಮಾಡುತ್ತಾರೆ’ ಎಂಬ ಹಿಂದುತ್ವದ ಫ್ಯಾಂಟಸಿ ಪ್ರಪಂಚ ಸೃಷ್ಟಿಸಿದ ಅನ್ಯಧರ್ಮೀಯರ ಬಗೆಗಿನ ಸುಳ್ಳುಗಳು ಬಹುಸಂಖ್ಯಾತ ಹಿಂದೂ ಸಮುದಾಯದ ಮನೋಸ್ಥೈರ್ಯವನ್ನೇ ಕುಸಿಯುವಂತೆ ಮಾಡಿದವು. ಕೋಮುವಾದಿ ಬಲಪಂಥೀಯ ಶಕ್ತಿಗಳ ಉದ್ದೇಶವೂ ಅದೇ ಆಗಿತ್ತು. ಚುನಾವಣೆಯಲ್ಲಿ ವಿಜಯ ಸಾಧಿಸಿದ ಬಿಜೆಪಿ ಕೋಮುದ್ವೇಷದಿಂದ ಹೊರಬರಲಿಲ್ಲ. ಅದು ಮಾಧ್ಯಮಗಳನ್ನೂ ಖರೀದಿಸಿತು. ಸಾಮಾಜಿಕ ನ್ಯಾಯ ಕಾಪಾಡಬೇಕಾದ ಮಾಧ್ಯಮಗಳು ಆಡಳಿತ ಪಕ್ಷ ಎಸೆಯುವ ಬಿಸ್ಕಿಟ್ ತಿಂದು ಅವರ ಸಾಕುನಾಯಿಗಳಂತಾಗಿ ಕೋಮುಪ್ರಚಾರ ಮತ್ತು ದ್ವೇಷಭಾಷಣಗಳನ್ನು ಬಿಡುವಿಲ್ಲದಂತೆ ಹರಡಿ, ಕಪೋಲಕಲ್ಪಿತ ಧರ್ಮದ್ವೇಷಗಳ ಕಥೆಗಳನ್ನು ಸೃಷ್ಟಿಸಿ ಹಿಂದೂ ಧರ್ಮದವರನ್ನು ಇನ್ನೂ ಕಂಗೆಡಿಸಿಬಿಟ್ಟವು. ಭಾರತದ ಚಲನಚಿತ್ರರಂಗವು ತಾನೂ ಏನು ಕಡಿಮೆ ಇಲ್ಲ ಎಂದು ಇತಿಹಾಸದಲ್ಲಿ ಎಂದೋ ಆಗಿ ಹೋದ ಘಟನೆಗಳಿಗೆ ರೆಕ್ಕೆಪುಕ್ಕ ಬರಿಸಿ ಚಲನಚಿತ್ರಗಳನ್ನು ರಚಿಸಿ ಭಯಾನಕ ಧರ್ಮದ್ವೇಷಗಳನ್ನು ದ್ವಿಗುಣ ಮಾಡಿತು. ಸಹನೆ, ಸ್ನೇಹಮಯ, ಸಹಿಷ್ಣುತಾಭಾವದ ಹಿಂದೂ ಸಮಾಜ ಅನ್ಯಧರ್ಮದವರಿಂದ ಆಂತರಿಕವಾಗಿ ವಿಮುಖವಾಗತೊಡಗಿತು. ಹಬ್ಬಗಳು ಭಯದ ವಾತಾವರಣವನ್ನು ಸೃಷ್ಟಿಸಿದವು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವಾರ್ತಾಪತ್ರಿಕೆ ಒಂದರಲ್ಲಿ ನಾನು ಓದಿದ ಸುದ್ದಿ….. ‘ಗಣೇಶೋತ್ಸವ ಸಂದರ್ಭದಲ್ಲಿ 145 ಪ್ರದೇಶಗಳನ್ನು ಕೋಮುಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ’. ಅದನ್ನು ಓದಿ ಮನಸ್ಸಿಗೆ ತುಂಬಾ ಖೇದವಾಗಿತ್ತು.
ಆದರೆ ಬೆಳಕಿನ ಹಬ್ಬ ದೀಪಾವಳಿ ಕೋಮುದ್ವೇಷಕ್ಕೆ ಒಂದು ಅಪವಾದವಾಗಿದೆ. ದೀಪಾವಳಿ ಹಬ್ಬದಲ್ಲಿ ಧರ್ಮದ್ವೇಷಗಳು ವಿಜೃಂಭಿಸದೆ ಹಬ್ಬವು ತನ್ನ ಸಂಭ್ರಮವನ್ನು ಕಾಯ್ದುಕೊಂಡಿದೆ ಎನ್ನಬಹುದು. ದೀಪಾವಳಿ ಮೂಲತಃ ಹಿಂದೂ ಹಬ್ಬವಾದರೂ ವಿವಿಧ ಧರ್ಮಗಳ ಸಂಸ್ಕೃತಿಗಳನ್ನು ಒಗ್ಗೂಡಿಸುವ ಹಬ್ಬ.
ದೀಪಾವಳಿ ಎಂದರೆ…
ಶ್ರೀರಾಮ ಚರಿತೆಯ ಪ್ರಕಾರ – ತಾಯಿ ಸ್ಥಾನದ ಮಲತಾಯಿ ಕೈಕೇಯಿಯ ಕುತಂತ್ರದಿಂದ, ಅಸಹಾಯಕ ತಂದೆ ದಶರಥನ ಅತಂತ್ರ ಮನೋಸ್ಥಿತಿಯಿಂದ, ಪತ್ನಿ ಸಹೋದರನೊಂದಿಗೆ 14 ವರುಷ ವನವಾಸದ ಕತ್ತಲ ಬದುಕು ನಡೆಸಿದ ಶ್ರೀರಾಮ, ತನ್ನ ಪತ್ನಿ ಸೀತಾದೇವಿಯನ್ನು ಅಪಹರಣಗೈದ ರಾಕ್ಷಸ ರಾವಣನನ್ನು ಬ್ರಹ್ಮಾಸ್ತ್ರ ಬಳಸಿ ವಧಿಸಿ ಅಯೋಧ್ಯೆಗೆ ಮರಳಿದಾಗ ದೀಪ ಹಚ್ಚಿ ಸ್ವಾಗತಿಸಿದ ಧಾರ್ಮಿಕ ಆಚರಣೆ.
ಪಾಂಡವ ಚರಿತೆಯ ಪ್ರಕಾರ….
ಸಹೋದರರಂತಹ ಕೌರವರ ಕುತಂತ್ರದಿಂದ ಜೀವನದ ಅಮೂಲ್ಯ 12 ವರುಷಗಳನ್ನು ವನವಾಸದಲ್ಲಿ ಅತ್ಯಂತ ಕಠಿಣವಾಗಿ ಸವೆಸಿ, ರಾಕ್ಷಸ ಸಂತತಿಯಿಂದ ಹಿಂಸೆ ಅನುಭವಿಸಿ, ಅವರನ್ನು ವಧಿಸಿ, ನವಬದುಕಿಗೆ ಮರಳುವಂತಾದ ನೆನಪಿನಲ್ಲಿ ಆಚರಿಸುವ ಹಬ್ಬ ದೀಪಾವಳಿ.
ಇವೆರಡೂ ಆಚರಣೆಗಳು ಉತ್ತರ ಭಾರತದಲ್ಲಿ ಹಿಂದೂ ಧರ್ಮದವರಲ್ಲಿ ಪ್ರಚಲಿತದಲ್ಲಿವೆ. ದಕ್ಷಿಣ ಭಾರತದಲ್ಲಿ ದೀಪಾವಳಿಯು ಶ್ರೀಕೃಷ್ಣನ ಕತೆಯೊಂದಿಗೆ ಬೆಸೆದುಕೊಂಡಿದೆ. ಶ್ರೀಕೃಷ್ಣ ಪರಮಾತ್ಮ ದೈತ್ಯ ನರಕಾಸುರನನ್ನು ಸಂಹರಿಸಿ, ಹಿಂಸಾಚಾರ ಅಂತ್ಯಗಾಣಿಸಿ, ವಿಜಯ ಸಾಧನೆಗೈದುದನ್ನು ನೆನಪಿಸುವ ಹಬ್ಬವಾಗಿದೆ ದೀಪಾವಳಿ.
ಹಿಂದೂ ಧರ್ಮೀಯರ ದೀಪಾವಳಿ ಆಚರಣೆಯ ನಂಬಿಕೆಗಳು ಹೀಗಾದರೆ, ಸಿಖ್ ಬೌದ್ಧ ಜೈನರ ದೀಪಾವಳಿ ಬಗೆಗಿನ ನಂಬಿಕೆಗಳೇ ಬೇರೆ.
ಸಿಖ್ ಧರ್ಮಗುರು ಹರಗೋವಿಂದ ಸಿಂಗ್ ಅವರು ಮೊಘಲ್ ದೊರೆ ಜಹಾಂಗೀರನ ವಶದಲ್ಲಿದ್ದ ರಾಜರನ್ನು ಬಿಡಿಸಿ ತಂದ ದಿನವನ್ನು ‘ಬಂಧಮುಕ್ತಿ ದಿನ’ದ ರೂಪದಲ್ಲಿ ಆಚರಿಸುವುದೇ ದೀಪಾವಳಿ.
ಸಾಮ್ರಾಟ ಅಶೋಕನು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವನ್ನು ಸ್ಮರಿಸಲು ಆಚರಿಸುವುದೇ ಬೌದ್ಧ ಧರ್ಮೀಯರ ದೀಪಾವಳಿ.
ಜೈನ ಧರ್ಮದ ಪ್ರಕಾರ ತೀರ್ಥಂಕರ ಭಗವಾನ್ ಮಹಾವೀರನ ಜ್ಞಾನೋದಯದ ಸಂದರ್ಭದಲ್ಲಿ ಸ್ವರ್ಗ ಭೂಮಿಗಳನ್ನು ದೀಪಗಳಿಂದ ಅಲಂಕರಿಸಲಾಗಿದ್ದನ್ನು ಸ್ಮರಿಸುವುದೇ ದೀಪಾವಳಿ.
ಆದರೆ ಪ್ರಪಂಚದ ಜೀವರಾಶಿಗಳಲ್ಲಿ ಅತೀ ಸಣ್ಣ ಕ್ರಿಮಿಕೀಟಗಳನ್ನೂ ಸಾಯಿಸಬಾರದೆನ್ನುವ ಅಹಿಂಸೆಯ ಮೂಲ ಆಶಯದ ಜೈನ ಧರ್ಮ, ದೀಪಗಳ ಆಕರ್ಷಣೆಯಿಂದ ಕೀಟಗಳು ಸುಟ್ಟು ಭಸ್ಮವಾಗಿ ಹೋಗಬಾರದೆಂದು ದೀಪ ಹಚ್ಚದೆಯೇ ಈ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದೆ. ವಿದ್ಯುದ್ದೀಪಾಲಂಕಾರ ಮಾಡುವುದು ಕೂಡಾ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಜೈನ ಧರ್ಮದಲ್ಲಿ ನಿಷಿದ್ಧ.
ಏನೇ ಆಗಲೀ, ಕೆಟ್ಟದರ ಮೇಲೆ ಒಳ್ಳೆಯದರ ವಿಜಯವೇ ಅಂತಿಮ ಎಂದು ಸಾರುತ್ತದೆ ದೀಪಾವಳಿ. ಕತ್ತಲೆಯ ಬದುಕಿನ ಹಿಂದೆ ಬೆಳಕಿನ ಬದುಕು ಇದೆ ಎಂದು ಈ ಹಬ್ಬ ನೆನಪಿಸುತ್ತದೆ.
ದೀಪಾವಳಿಯ ದೀಪಗಳ ಹೊಂಬೆಳಕು ಎಲ್ಲೆಲ್ಲೂ ಝಗಮಗಿಸಲಿ. ಎಲ್ಲರ ಕಣ್ಣುಗಳ ಕೋರೈಸಲಿ. ಮನಗಳನ್ನು ಪರಿವರ್ತನೆ ಮಾಡಲಿ. ಬೆಳಕಿನ ಹಬ್ಬ ದೀಪಾವಳಿ ಸಮಸ್ತ ಧರ್ಮದ ಜನರ ಮನಗಳೊಳಗೆ ತುಂಬಿದ ಧರ್ಮದ ಅಂಧಕಾರವನ್ನು, ಧರ್ಮೋನ್ಮಾದವನ್ನು ಹೊಡೆದೋಡಿಸಲಿ. ಬದುಕುವ ಹಕ್ಕಿಗೆ ಕರುಣೆಯ ಆಸರೆಯಾಗಲಿ. ಜಾತಿ ಧರ್ಮ ಮತ ಪಂಥ ಪಂಗಡ ಸಮುದಾಯ ಬೇಧಗಳನ್ನು ತೊಡೆದು ಹಾಕಿ ಸಮರಸದ ಬೆಳಕು ಜಗದಲ್ಲಿ ಮೆರೆಯಲಿ. ಭಕ್ತಿಯ ಸಿಂಚನದೊಂದಿಗೆ ಮಾನವೀಯತೆ, ಸಹನೆ ಸಹಿಷ್ಣುತೆಯ ಮೌಲ್ಯಗಳನ್ನು ಮೇಳೈಸಲಿ. ದೀಪಾವಳಿ ಭಾರತದ ಭಾವಗಳನ್ನು ಬೆಸೆಯುವ ಭರವಸೆಯ ಬೆಳಕಾಗಲಿ.
ದೀಪಾವಳಿ ಹಬ್ಬದ ಬೆಳಕಾದರೂ ನಮ್ಮ ಜನರ ಕಣ್ಣುಗಳನ್ನು ತೆರೆಸುವಂತಾಗಬೇಕಾಗಿದೆ. ಜಾತಿ ಧರ್ಮದ ಹಿಂಸೆಯಲ್ಲಿ ನೊಂದವರ, ಬೆಂದವರ, ಬಳಲಿದವರ, ವಂಚಿತರ, ಶೋಷಿತರ ಬದುಕು ಬೆಳಗಲು ಭಾರತಕ್ಕೆ ಬೇಕು ಬೆಳಕು. ಅದು ಧರ್ಮದ ಬೆಳಕಲ್ಲ . ಜ್ಞಾನ, ವಿವೇಕ, ವಿವೇಚನೆಗಳ ಬೆಳಕು. ಅದು ಎಲ್ಲಿಂದಾದರೂ ಬರಲಿ, ಯಾರಿಂದಲಾದರೂ ಬರಲಿ. ಆ ಸುಂದರ ದಿನಗಳು ಬೇಗ ಬರಲಿ. ಆ ಬೆಳಕಿನಲ್ಲಿ ಭಾರತ ಪ್ರಕಾಶಿಸಲಿ.
ಕನ್ನಡ ನಾಡಿನ ಸಮಸ್ತರಿಗೆ ದೀಪಾವಳಿ ಹಬ್ಬದ ಶುಭಾಶಯಗಳು.
ರೋಶ್ನಿ ಅನಿಲ್ ರೊಜಾರಿಯೊ
ಹವ್ಯಾಸಿ ಬರಹಗಾರ್ತಿ
ಇದನ್ನೂ ಓದಿ- ಅದೊಂದ್ ದೊಡ್ಡ ಕಥೆ, ಆತ್ಮಕಥೆ ಸರಣಿ- 8 |ಅಪ್ಪನ ಗೀತಾ ಪಠಣ