ಯಾರು ಯಾವ ಬಟ್ಟೆ ತೊಡಬೇಕು? ಯಾರು ಯಾವ ಆಹಾರ ಸೇವಿಸಬೇಕು? ಯಾರು ಯಾರೊಂದಿಗೆ ಮಾತನಾಡಬೇಕು? ಯಾರೊಂದಿಗೆ ವ್ಯವಹಾರ ಮಾಡಬೇಕು? ಎಂಬುದನ್ನೆಲ್ಲ ಯಾರೋ ಮೂರನೆಯವರು ನಿರ್ಧರಿಸುವಂತಹ ಕಾಲ ಇದು. ಅಡುಗೆಗೆಂದು ತಂದು ಫ್ರಿಡ್ಜ್ ನಲ್ಲಿಟ್ಟಿದ್ದ ಮಾಂಸಕ್ಕಾಗಿ ಕೊಲೆಯೂ ನಡೆಯುತ್ತದೆ. ಮದುಮಗ ಕುದುರೆಯೇರಿ ಜರಿಜರಿ ಬಟ್ಟೆ ತೊಟ್ಟು ಪೇಟ ಧರಿಸಿದ್ದಕ್ಕೂ ಹಲ್ಲೆಗಳಾಗುತ್ತಿವೆ. ಅಸಲಿಗೆ ಈ ಮಾಂಸಾಹಾರಕ್ಕೂ ಮತ್ತು ನಮ್ಮಗಳ ದೈನಂದಿನ ವ್ಯವಹಾರ ಆಚರಣೆಗಳಿಗೂ ಸಂಬಂಧವೇನಾದರೂ ಇದೆಯೇ?– ಶಂಕರ್ ಸೂರ್ನಳ್ಳಿ, ಬರಹಗಾರರು.
ಇತ್ತೀಚೆಗೆ ಕನ್ನಡದ ನಟರೊಬ್ಬರ ಬಿರಿಯಾನಿ ಸೇವನೆಯ ಕುರಿತಂತೆ ಭಾರೀ ಪರವಿರೋಧ ಚರ್ಚೆಗಳು ನಡೆದವು. ಇಂತವನ್ನ ನೋಡಿದಾಗ ಒಂದು ಬಗೆಯಲ್ಲಿ ನಿಜಕ್ಕೂ ಖುಷಿ ಎನಿಸುತ್ತಿದೆ. ದೇಶದ ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ, ಜಾತೀಯತೆ, ಭ್ರಷ್ಟಾಚಾರ ಇವನ್ನೆಲ್ಲ ಬಿಟ್ಟು ಜನರು ಯಾರದೋ ಬಿರಿಯಾನಿ ಸೇವನೆ, ಅವರ ಬಾಯ್ ರುಚಿ, ಅವರ ಹೊಟ್ಟೆ ಇವನ್ನೆಲ್ಲ ಸಾರ್ವತ್ರೀಕರಿಸಿ ಚರ್ಚಿಸುವಂತಹ ಸ್ಥಿತಿಗೆ ತಲುಪಿದ್ದಾರಲ್ಲ ಎಂಬಂತಹ (ಅ)ಭಾವಪರವಶತೆ ಇದು!
ಯಾರು ಯಾವ ಬಟ್ಟೆ ತೊಡಬೇಕು? ಯಾರು ಯಾವ ಆಹಾರ ಸೇವಿಸಬೇಕು? ಯಾರು ಯಾರೊಂದಿಗೆ ಮಾತನಾಡಬೇಕು? ಯಾರೊಂದಿಗೆ ವ್ಯವಹಾರ ಮಾಡಬೇಕು? ಎಂಬುದನ್ನೆಲ್ಲ ಯಾರೋ ಮೂರನೆಯವರು ನಿರ್ಧರಿಸುವಂತಹ ಕಾಲ ಇದು. ಅಡುಗೆಗೆಂದು ತಂದು ಫ್ರಿಡ್ಜ್ ನಲ್ಲಿಟ್ಟಿದ್ದ ಮಾಂಸಕ್ಕಾಗಿ ಕೊಲೆಯೂ ನಡೆಯುತ್ತದೆ. ಮದುಮಗ ಕುದುರೆಯೇರಿ ಜರಿಜರಿ ಬಟ್ಟೆ ತೊಟ್ಟು ಪೇಟ ಧರಿಸಿದ್ದಕ್ಕೂ ಹಲ್ಲೆಗಳಾಗುತ್ತಿವೆ. ಅಂತದ್ದರಲ್ಲಿ ಮೊನ್ನೆ ಮೊನ್ನೆ ಯಾವುದೋ ನಟ ಬಿರಿಯಾನಿಯನ್ನು ಚಪ್ಪರಿಸಿ ತಿಂದ ಬಗ್ಗೆ ಚರ್ಚೆಗಳಾಗುವುದು, ಮಾಂಸ ತಿನ್ನುವ ನೀನು ಬಸವಾದಿ ಶರಣರ ವಚನ ಹೇಳುವ ಯೋಗ್ಯತೆಯನ್ನು ಪ್ರಶ್ನಿಸುವುದು ಇತ್ಯಾದಿಗಳು ವಿಶೇಷವೇನೂ ಅಲ್ಲ ಬಿಡಿ. ಅಸಲಿಗೆ ಈ ಮಾಂಸಾಹಾರಕ್ಕೂ ಮತ್ತು ನಮ್ಮಗಳ ದೈನಂದಿನ ವ್ಯವಹಾರ ಆಚರಣೆಗಳಿಗೂ ಸಂಬಂಧವೇನಾದರೂ ಇದೆಯೇ?.
ತಿನ್ನುವ ಆಹಾರ, ಮಾಡುವ ಕಸುಬು, ಮೈಯ ಬಣ್ಣ, ಹುಟ್ಟಿದ ಜಾತಿ ಇತ್ಯಾದಿಗಳ ಆಧಾರದಲ್ಲಿ ನೇರಾ ನೇರ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವಂತಹ ಜನಗಳು ನಾವು. ಅದರಲ್ಲೂ ಮುಖ್ಯವಾಗಿ ಯಾವ ದೇಶದಲ್ಲೂ ಇಲ್ಲದ ಮಾಂಸಾಹಾರಿ -ಸಸ್ಯಾಹಾರಿ ಎಂದು ಭೇದವೆಣಿಸುವ ಪ್ರವೃತ್ತಿ ನಮ್ಮಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಮಾಂಸಾಹಾರ ಕೆಟ್ಟದು ಸಸ್ಯಾಹಾರ ಒಳ್ಳೆಯದು ಎನ್ನುವಂತಹ ಅತಾರ್ಕಿಕ ಸಿದ್ಧಾಂತವನ್ನು ಬೇಕಂತಲೇ ಜನರ ಮನದೊಳಗೆ ವ್ಯವಸ್ಥಿತವಾಗಿ ತುಂಬಲಾಗುತ್ತಿದೆ. ವಿಶ್ವಾದ್ಯಂತ ದೇಶ, ಧರ್ಮ, ಪಂಥ ಭೇದಗಳಿಲ್ಲದೇ ಸಸ್ಯಾಹಾರಿ (ವೇಗನ್) ಗಳ ಸಂಖ್ಯೆ ಅದರದ್ದೇ ರೀತಿಯಲ್ಲಿ ವೃದ್ಧಿಯಾಗುತ್ತಿದೆ. ಹಿಂದೆ ಮಾಂಸಾಹಾರಿಗಳಾಗಿದ್ದು ಮೂರೂ ಹೊತ್ತು ವಿಪರೀತ ಮಾಂಸಾಹಾರ ಸೇವಿಸಿ ಆರೋಗ್ಯ ಕೆಟ್ಟು (ಅತಿಯಾದರೆ ಅಮೃತವೂ ವಿಷ ಎನ್ನುವಂತೆ) ನಂತರ ಆಹಾರ ಪದ್ಧತಿಯನ್ನು ಬದಲಿಸುವ ಮನಸ್ಸು ಮಾಡಿದವರಿರಬಹುದು ಅಥವಾ ಮಾಂಸಾಹಾರದ ಹಿನ್ನೆಲೆಯಲ್ಲಿರುವ ಪ್ರಾಣಿಹಿಂಸೆಯನ್ನು ಮನಗಂಡು ಬದಲಾದವರೂ ಇದರಲ್ಲಿ ಇದ್ದಿರಬಹುದು. ಆದರೆ, ಮಾಂಸಾಹಾರ ಕೆಟ್ಟದು ಸಸ್ಯಾಹಾರ ಒಳ್ಳೆಯದು ಅದು ತಾಮಸಿಕ ಇದು ಸಾತ್ವಿಕ ಎಂಬ ಅಪಪ್ರಚಾರ ಇರುವುದು ಮಾತ್ರ ನಮ್ಮಲ್ಲಿ.

ಅಸಲಿಗೆ ಪ್ರಾಚೀನ ಭಾರತದಲ್ಲಿ ಈ ಆಹಾರ ಪದ್ಧತಿಗಳಲ್ಲಿ ಒಳ್ಳೆಯದು ಕೆಟ್ಟದು ಎಂಬ ಭೇದಗಳೇನೂ ಇದ್ದಿರಲಿಲ್ಲ. ಪರಿಸರ ಮತ್ತು ಲಭ್ಯತೆಗನುಗುಣವಾಗಿ ಆಯಾಯ ಪ್ರದೇಶಗಳ ಆಹಾರ ಪದ್ಧತಿ ಅಲ್ಲಲ್ಲಿ ಚಾಲ್ತಿಯಲ್ಲಿದ್ದವು. ಶ್ರೀರಾಮ ಶ್ರೀಕೃಷ್ಣರಲ್ಲೂ ಕೂಡ ಈ ಆಹಾರ ಭೇದಗಳಿರಲಿಲ್ಲ ಎಂಬುದು ಆ ಪೌರಾಣಿಕ ಗ್ರಂಥಗಳಲ್ಲೇ ಉಲ್ಲೇಖವಿದೆ. ಪಾಂಡವರು ವನವಾಸದಲ್ಲಿದ್ದಾಗ ಧರ್ಮರಾಯನ ಕನಸಿನಲ್ಲಿ ಅಲ್ಲಿನ ಕಾಡು ಪ್ರಾಣಿಗಳು ಬಂದು ದಯವಿಟ್ಟು ನೀವುಗಳು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ವಿನಂತಿಸುವ ಪ್ರಸಂಗ ವ್ಯಾಸ ಭಾರತದಲ್ಲೇ ಇದೆ. ಆಹಾರಕ್ಕಾಗಿ ಪಾಂಡವರು ಕಾಡು ಪ್ರಾಣಿಗಳಿಗೆ ಬೇಟೆಯ ಹೆಸರಲ್ಲಿ ಅಷ್ಟೊಂದು ಉಪಟಳ ನೀಡುತ್ತಿದ್ದರು.
ಹಿಂದೆ ಯಜ್ಞಗಳಲ್ಲಿ ಪ್ರಾಣಿಗಳ ಬಲಿ ಸಾಮಾನ್ಯವಿತ್ತು. ಬ್ರಾಹ್ಮಣರಲ್ಲೂ ಮಾಂಸಾಹಾರ ನಿಷಿದ್ಧವಿರಲಿಲ್ಲ ಎಂಬುದಕ್ಕೆ ಶಾಸ್ತ್ರ ಪುರಾಣಗಳಲ್ಲೇ ದಾಖಲೆಗಳಿವೆ. ತಾವು ಹೇಳಿದ್ದನ್ನು ನೆರವೇರಿಸಿಕೊಡದ ಬ್ರಾಹ್ಮಣರ ಮೇಲಿನ ಸಿಟ್ಟಿಗೆ ವಾತಾಪಿ, ಇಲ್ವಲ ಎಂಬ ಸಹೋದರರು ಬ್ರಾಹ್ಮಣರನ್ನು ಊಟಕ್ಕೆ ಕರೆದು ಕುರಿ ಮಾಂಸದ ಊಟ ಹಾಕಿ ಕೊಲ್ಲುವ ಕಥೆಯಿದೆ. ಇಲ್ವಲನ ತಮ್ಮ ವಾತಾಪಿಯೇ ಕುರಿಯಾಗಿ ಅವನ ಮಾಂಸ ತಿಂದ ಬ್ರಾಹ್ಮಣರ ಹೊಟ್ಟೆಯನ್ನು ಬಗೆದು ಹೊರಬರುವ ವಾತಾಪಿಯನ್ನು ಕೊನೆಗೆ ಅಗತ್ಸ್ಯನೆಂಬ ಬ್ರಾಹ್ಮಣ ಋಷಿಯೇ ತಿನ್ನುವ ಮೂಲಕ ಕೊಲ್ಲುತ್ತಾನೆ. ಅದೇ ರೀತಿ ಕೌಶಿಕ ಎಂಬ ವೇದ ವಿದ್ಯಾ ಪಾರಂಗತ ಬ್ರಾಹ್ಮಣ ಧರ್ಮ ಬೋಧನೆಗಾಗಿ ಮಾಂಸ ಕಡಿದು ಮಾರುವ ಧರ್ಮವ್ಯಾದನ ಬಳಿಗೆ ಬರುವ ಪ್ರಸಂಗ ಮಹಾಭಾರತದಲ್ಲಿದೆ. ಮಾಂಸಾಹಾರ ಮತ್ತು ಮಾಂಸಾಹಾರ ಪದ್ಧತಿ ಇಲ್ಲೆಲ್ಲೂ ಕೆಟ್ಟದಾಗಿ ಪರಿಗಣಿತವಾಗಿಲ್ಲ ಎಂಬುದು ಗಮನಾರ್ಹ.
ಇಂದಿಗೂ ಕೂಡ ಬಂಗಾಲಿ ಮೊದಲಾದ ಬ್ರಾಹ್ಮಣ ಸಮುದಾಯಗಳಲ್ಲಿ ಮಾಂಸಾಹಾರದ ಖಾದ್ಯ ತಯಾರಿ ಸಾಮಾನ್ಯ. ಇತಿಹಾಸಕಾರರ ಪ್ರಕಾರ ಭಾರತದಲ್ಲಿ ಜನಪ್ರಿಯತೆ ಮತ್ತು ರಾಜಾಶ್ರಯಗಳ ಕಾರಣ ಜೈನ ಹಾಗು ಬೌದ್ಧ ಧರ್ಮಗಳ ಉಚ್ಛ್ರಾಯ ಕಾಲದಲ್ಲಿ ವೈದಿಕ ಧರ್ಮದ ಏಳಿಗೆಗೆ ಬಿದ್ದ ಹೊಡೆತವನ್ನು ನಿವಾರಿಸಿಕೊಳ್ಳಲು ಅದು ಅನಿವಾರ್ಯವಾಗಿ ಅಳವಡಿಸಿಕೊಂಡ ಬದಲಾವಣೆಗಳಲ್ಲಿ ಈ ಮಾಂಸಾಹಾರ ನಿಷಿದ್ಧವೂ ಒಂದು.
ಮಾಂಸಾಹಾರ- ಸಸ್ಯಾಹಾರ ಅವರವರು ಅನುಸರಿಸಿಕೊಂಡು ಬಂದಂತಹ ಆಹಾರ ಪದ್ಧತಿಗಳಷ್ಟೆ. ಇದರಲ್ಲಿ ಮೇಲು ಕೀಳು ಎಂಬಂತಹ ತುಲನೆಯೇ ಅಸಂಬದ್ಧವಾದದು. ಸಾತ್ವಿಕ ಲೇಬಲ್ಲಿನ ಸಸ್ಯ ತಿಂದವ ಒಳ್ಳೆಯವನು ಅಥವಾ ಶುದ್ಧನೆನ್ನುವುದಾಗಲೀ, ತಾಮಸಿಕ ಮಾಂಸಹಾರ ಸೇವಿಸಿದವ ದುರುಳ ಅಥವಾ ಅಶುದ್ಧ ಎನ್ನುವುದಾಗಲೀ ನಿಜಕ್ಕೂ ಅರ್ಥವಿಲ್ಲದ್ದು. ಇದಕ್ಕೆ ಹಿಟ್ಲರ್, ಮದರ್ ತೆರೇಸಾರಂತಹ ಸಾವಿರಾರು ನಿದರ್ಶನಗಳಿವೆ. ಅಹಿಂಸಾತ್ಮಕ ಹಿನ್ನೆಲೆಯಲ್ಲಿ ಸಸ್ಯಾಹಾರಕ್ಕೆ ಮಹತ್ವವನ್ನು ನೀಡೋಣ. ಆದರೆ ಅಸಂಖ್ಯ ಜನಸಮುದಾಯದ ಆಹಾರವಾದ ಮಾಂಸಾಹಾರವನ್ನು ಕೀಳು ದೃಷ್ಟಿಯಿಂದ ತೂಗಿ ನೋಡುವುದು ಮಾತ್ರ ಸರಿಯಲ್ಲ .
ಶಂಕರ್ ಸೂರ್ನಳ್ಳಿ
ಬರಹಗಾರರು
ಇದನ್ನೂ ಓದಿ- ಎಫ್ಸ್ಟೀನ್ ಫೈಲ್ಸ್ ಭಾಗ-1 | ಸತ್ಯಗಳ ಸಂತೆಯಲ್ಲಿ ಬ್ಲ್ಯಾಕ್ಮೇಲ್ ದಂಧೆಗಿಳಿಯಿತೇ ಅಮೆರಿಕಾ?


