ನೀನು ನಕ್ಷತ್ರಗಳನ್ನು ಗಾಢವಾಗಿ ಪ್ರೀತಿಸಿದೆ
ಚೋದ್ಯ ನೋಡು, ನೀನೇ ನಕ್ಷತ್ರವಾಗಿಹೋದೆ
ನಕ್ಷತ್ರವಾಗುವುದು ಬಲು ಕಷ್ಟಕಣೋ ಗೆಳೆಯ
ತನ್ನನ್ನು ತಾನು ಇನ್ನಿಲ್ಲದಂತೆ ಸುಟ್ಟುಕೊಳ್ಳುವುದು, ಉರಿದುಹೋಗುವುದು
ಈಗ ನೋಡು ನೀನಿಲ್ಲ, ಹುಡುಕಿದರೂ ಕಾಣಸಿಗುವುದಿಲ್ಲ
ಎಲ್ಲೆಡೆ ನಿನ್ನ ಸುತ್ತಲಿನ ತೇಜಪುಂಜಗಳು, ಉರಿಉರಿ ಬೆಂಕಿ
ನಿಜ ನೀನು ಹೇಳಿದ್ದು, ಈಗ ಎಲ್ಲದಕ್ಕೂ ಬಣ್ಣಗಳು
ತಿನ್ನೋ ಅನ್ನ, ಕುಡಿಯೋ ನೀರು, ಉಸಿರಾಡೋ ಗಾಳಿಯವರೆಗೆ
ನಿಸರ್ಗದೊಂದಿಗೆ ಬಂಧವೇ ಕಳೆದುಕೊಂಡಿದ್ದೇವೆ
ಕಳೆದುಕಂಡಷ್ಟು ಸುಳ್ಳಾಗಿದ್ದೇವೆ, ಬೇವರ್ಸಿ ಬದುಕು
ಹುಟ್ಟೇ ನನ್ನ ಪಾಲಿನ ಮರಣಾಂತಿಕ ಆಘಾತವಾಯಿತೆನ್ನುತ್ತಿರುವೆ
ಇನ್ನು ಬದುಕು? ನಿನ್ನ ಮರಣವೂ ನಾಚಿಕೆಯಿಂದ ತಲೆತಗ್ಗಿಸಿರಬೇಕು
ನಿಜಾಯಿತಿಗೆ ಇರಿವ ಚೂರಿಗಳ ನಡುವೆ ನೀನು ಟೆಂಟು ಹಾಕಿ ಕುಳಿತಿದ್ದೆ
ಬೀದಿಯಲ್ಲಿ ಬಾಬಾಸಾಹೇಬರು, ಬಾಪುಲೆ ಫಲಕಗಳಾಗೇ ಉಳಿದುಹೋದರು
ಕ್ಷಮಿಸು ಗೆಳೆಯ, ನನ್ನ ಸಾವಿಗೆ ಕಂಬನಿಗೆರೆಯಬೇಡಿ ಎಂದಿದ್ದೆ ನೀನು
ನಿನ್ನ ಸೋದರರು ನಾವು, ಅಳದೇ ಹೇಗಿರಲು ಸಾಧ್ಯ ಹೇಳು? ಕಣ್ಣೀರಾಗಿಹೋದೆವು
ಮೇಲೆ ನಭದಲ್ಲಿ ನಕ್ಷತ್ರಪುಂಜಗಳು ಮಿಣಿಮಿಣಿ ಮಿಣುಕುತ್ತಿವೆ
ಎಲ್ಲಿ ನೀನು? ವಿಳಾಸಕ್ಕಾಗಿ ಹುಡುಕುತ್ತಿರುತ್ತೇವೆ
-ದಿನೇಶ್ ಕುಮಾರ್ ಎಸ್.ಸಿ.