ಕರ್ಜಗಿಯವರು ಗುರುಕುಲ ಶಿಕ್ಷಣ ಪದ್ಧತಿಯನ್ನು ವಾಚಾಮಗೋಚರವಾಗಿ ಹೊಗಳುತ್ತಾರೆ. ಪುರಾಣದ ಕಟ್ಟು ಕಥೆಗಳನ್ನು ಭಾವನಾತ್ಮಕವಾಗಿ ಹೇಳಿ ಇವರಿಂದ ತರಬೇತಿ ಪಡೆಯುವ ಶಿಕ್ಷಕರಲ್ಲಿ ಮನುವಾದವನ್ನು ತುಂಬುತ್ತಾರೆ ಮತ್ತು ಅದಕ್ಕೆ ಒಳ್ಳೆಯ ಸಂಭಾವನೆ ಪಡೆಯುತ್ತಾರೆ. ಇಂಥಹ ಒಬ್ಬ ಖಾಸಗಿ ಮನುವಾದಿಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿಯುತ್ತಿರುವ ಹೈಸ್ಕೂಲ್ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವ ಸಮಿತಿಯಲ್ಲಿ ತಜ್ಞರಾಗಿ ನೇಮಿಸುವುದು ಕಾಂಗ್ರೆಸ್ ಸರ್ಕಾರದ ಅತಿದೊಡ್ಡ ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ – ರುದ್ರು ಪುನೀತ್ ಆರ್ ಸಿ, ಯುವ ಚಿಂತಕ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ SSLC ಫಲಿತಾಂಶದಲ್ಲಿ ಗಣನೀಯ ಹಿನ್ನಡೆ ಕಂಡುಬರುತ್ತಿರುವ ಕಾರಣಕ್ಕೆ ಅದನ್ನು ಪರಿಶೀಲಿಸಲು ಮತ್ತು ಅಭಿವೃದ್ಧಿ ಪಡಿಸಲು ಆರು ಜನರ ತಜ್ಞರ ಸಮಿತಿಯನ್ನು ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಅಧ್ಯಕ್ಷರಾದ ಅಜಯ್ ಸಿಂಗ್ ರವರು ನೇಮಿಸಿರುವುದು ಪತ್ರಿಕೆಗಳಲ್ಲಿ ಬಂದಿತ್ತು. ಈ ಸಮಿತಿಗೆ ಗುರುರಾಜ್ ಕರ್ಜಗಿಯವರನ್ನು ನೇಮಿಸಿರುವ ಕಾರಣಕ್ಕೆ ಅನೇಕ ವಿರೋಧಗಳು ವ್ಯಕ್ತವಾಗಿದ್ದವು. ತಮ್ಮನ್ನು ತಾವು ಶಿಕ್ಷಣ ತಜ್ಞ ಎಂದು ಹೇಳಿಕೊಳ್ಳುವ ಗುರುರಾಜ್ ಕರ್ಜಗಿಯವರು ಇಲ್ಲಿಯವರೆಗೆ ಸರ್ಕಾರಿ ಶಾಲೆಗಳನ್ನು ಅಥವಾ ಕನ್ನಡ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಯಾವ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಎಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ನೋಡಿದರೆ ಅದು ಶೂನ್ಯ ಮಾತ್ರ.
ಕ್ರಿಯೇಟಿವ್ ಅಕಾಡೆಮಿ ಎನ್ನುವ ಖಾಸಗಿ ಸಂಸ್ಥೆಯನ್ನು ಹೊಂದಿರುವ ಗುರುರಾಜ್ ಕರ್ಜಗಿಯವರು ಇಲ್ಲಿಯವರೆಗೆ ಸಂಭಾವನೆ ಇಲ್ಲದ ಒಂದೇ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಮೊದಲು ಸಾಕ್ಷಿ ನೀಡಲಿ. ವಿದ್ಯಾವರ್ಧಕ ಸಂಘ ಎನ್ನುವ ಸಂಸ್ಥೆಯಿಂದ ಹಿಡಿದು ಜೈನ್ ಅಂತಾರಾಷ್ಟ್ರೀಯ ಶಾಲೆಯ ವರೆಗೂ ಗುರುರಾಜ್ ಕರ್ಜಗಿಯವರು ಸೇವೆ ಸಲ್ಲಿಸಿರುವುದು ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಡೊನೇಷನ್ ದೋಚುವ ಖಾಸಗೀ ಸಂಸ್ಥೆಗಳಲ್ಲಿ ಮಾತ್ರ. DISHA Bharat ಎನ್ನುವ ಖಾಸಗಿ ತರಬೇತಿ ಕೇಂದ್ರದ ಮೂಲಕ ಶಿಕ್ಷಕರಲ್ಲಿ ಮನುವಾದವನ್ನು ಮತ್ತು ಬಲಪಂಥೀಯ ಧೋರಣೆಯನ್ನು ಪ್ರಾಥಮಿಕವಾಗಿಯೇ ತುಂಬುವ ಸಲುವಾಗಿ ನೂರಾರು ಶಿಬಿರಗಳನ್ನು ಮಾಡುವುದರಲ್ಲಿ ಇದೇ ಗುರುರಾಜ್ ಕರ್ಜಗಿಯವರು ಮುಂಚೂಣಿಯಲ್ಲಿದ್ದಾರೆ. ಹಾಗೂ ತಮ್ಮದೇ Academy of Creative Teaching ಸಂಸ್ಥೆಯು ಕೂಡ ಹೆಚ್ಚು ತರಬೇತಿ ನೀಡುತ್ತಿರುವುದು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಮಾತ್ರ.
ಸಾವಿರಾರು ವರ್ಷಗಳ ಕಾಲ ಈ ದೇಶದ ಬಹುಜನರಿಗೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು ಎನ್ನುವುದನ್ನು ರಾಮಾಯಣ, ಮಹಾಭಾರತ, ಭಗವದ್ಗೀತೆ, ಮನುಸ್ಮೃತಿಯೇ ಹೇಳುತ್ತದೆ. ಕೇವಲ ಒಂದು ವರ್ಗದ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿದ್ದ ಗುರುಕುಲ ಶಿಕ್ಷಣ ಪದ್ಧತಿಯ ಬಗ್ಗೆ ಇವರೇ ರಚಿಸಿರುವ ಪುರಾಣಗಳಲ್ಲಿ, ಅನೇಕ ಗ್ರಂಥಗಳಲ್ಲಿ ನಾವು ಓದಿದ್ದೇವೆ. ಹೀಗಿರುವಾಗ ತಮ್ಮ ತರಬೇತಿಗಳಲ್ಲಿ, ಭಾಷಣದಲ್ಲಿ ಇದೇ ಗುರುರಾಜ್ ಕರ್ಜಗಿಯವರು ಗುರುಕುಲ ಶಿಕ್ಷಣ ಪದ್ಧತಿಯನ್ನು ವಾಚಾಮಗೋಚರವಾಗಿ ಹೊಗಳುತ್ತಾರೆ. ಪುರಾಣದ ಕಟ್ಟು ಕಥೆಗಳನ್ನು ಭಾವನಾತ್ಮಕವಾಗಿ ಹೇಳಿ ಇವರಿಂದ ತರಬೇತಿ ಪಡೆಯುವ ಶಿಕ್ಷಕರಲ್ಲಿ ಮನುವಾದವನ್ನು ತುಂಬುತ್ತಾರೆ ಮತ್ತು ಅದಕ್ಕೆ ಒಳ್ಳೆಯ ಸಂಭಾವನೆ ಪಡೆಯುತ್ತಾರೆ. ಇಂಥಹ ಒಬ್ಬ ಖಾಸಗಿ ಮನುವಾದಿಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿಯುತ್ತಿರುವ ಹೈಸ್ಕೂಲ್ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವ ಸಮಿತಿಯಲ್ಲಿ ತಜ್ಞರಾಗಿ ನೇಮಿಸುವುದು ಕಾಂಗ್ರೆಸ್ ಸರ್ಕಾರದ ಅತಿದೊಡ್ಡ ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ.
ಅಷ್ಟಕ್ಕೂ SSLC ಯಲ್ಲಿ ಫಲಿತಾಂಶ ಕಡಿಮೆ ಬಂದಿದ್ದರೆ ಕೇವಲ ಫಲಿತಾಂಶವನ್ನು ಹೆಚ್ಚಿಸುವ ಗುರಿಯನ್ನು ಹೊಂದದೆ ಒಟ್ಟಾರೆ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಪ್ರಯತ್ನಿಸಬೇಕು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ, ಕನ್ನಡ ಶಾಲೆಯ ಉಳಿವಿಗಾಗಿ ಈಗಾಗಲೇ ಎರಡು ಮೂರು ದಶಕಗಳಿಂದಲೂ ಸಂಶೋಧನೆ ನಡೆಸುತ್ತಾ, ಲಕ್ಷಾಂತರ ರೂಪಾಯಿ ಸಂಬಳ ಇರುವ ಕೆಲಸವನ್ನೇ ತ್ಯಾಗ ಮಾಡಿ ಕನ್ನಡ ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ನಿರಂಜನಾರಾಧ್ಯ ರಂಥವರು ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಬೀಳದೆ ಒಬ್ಬ ಬಾಡಿಗೆ ಭಾಷಣಕಾರ, NEP ಯನ್ನು ಸಮರ್ಥಿಸುವ ಮತ್ತು ಕಾಂಗ್ರೆಸ್ ಸರ್ಕಾರ NEP ಯನ್ನು ರದ್ದುಗೊಳಿಸಿ ಹೊಸದಾಗಿ ಜಾರಿಗೆ ತಂದ SEP ಯನ್ನು ನಿರಂತರವಾಗಿ ತೆಗಳುತ್ತಿರುವ ಮತ್ತು ಗುರುಕುಲ ಶಿಕ್ಷಣ ಪದ್ಧತಿಯನ್ನು ಹೋಲುವ NEP ಯನ್ನು ರದ್ದುಗೊಳಿಸಿದ ಕಾರಣಕ್ಕೆ ಕರ್ನಾಟಕ 100 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ ಎಂದು ರಾಜ್ಯಸರ್ಕಾರದ ನಿರ್ಧಾರವನ್ನು ಟೀಕಿಸುವ ಈ ವ್ಯಕ್ತಿಯು ಅನೇಕ ಭಾಷಣಗಳಲ್ಲಿ ಮೋದಿಯ ಗುಣಗಾನವನ್ನೂ ಮಾಡುತ್ತಾನೆ. ಇಂಥಹ ಒಬ್ಬ ಬಂಡವಾಳಶಾಹಿಯನ್ನು ಅಜಯ್ ಸಿಂಗ್ ರವರು ಶಿಕ್ಷಣ ಅಭಿವೃದ್ಧಿ ಸಮಿತಿಯ ತಜ್ಞರಾಗಿ ನೇಮಿಸಿರುವುದು ನಿಜಕ್ಕೂ ದೊಡ್ಡ ದುರಂತ. ಮತ್ತು ಇದು ಅಜಯ್ ಸಿಂಗ್ ರವರಲ್ಲಿರುವ ಮನುವಾದವೂ ಇರಬಹುದು.
ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಅಜಯ್ ಸಿಂಗ್ ರವರು ನೇಮಿಸಿರುವ ಈ ಸಮಿತಿಯನ್ನು ರದ್ದುಗೊಳಿಸಿ. ಕೇವಲ SSLC ಫಲಿತಾಂಶಗಳ ಮೇಲೆಯಷ್ಟೇ ಗಮನಹರಿಸುವುದನ್ನು ಬಿಟ್ಟು ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಲು ನಿರಂಜನಾರಾಧ್ಯ ರಂತಹ ಶಿಕ್ಷಣ ತಜ್ಞರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು.
SEP ಗಾಗಿ ತಾವೇ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, NEP ಪರವಾಗಿರುವ ಒಬ್ಬ ಮನುವಾದಿಯಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ ಸಾಧ್ಯವೇ? ಯೋಚಿಸಿ ಮುಖ್ಯಮಂತ್ರಿಗಳೇ….
ರುದ್ರು ಪುನೀತ್ ಅರ್ ಸಿ
ಯುವ ಚಿಂತಕ
ಇದನ್ನೂ ಓದಿ- ಕಾಂಗ್ರೆಸ್ ಪಕ್ಷದಲ್ಲೊಬ್ಬ ಆರ್.ಎಸ್.ಎಸ್ ಶಾಸಕ