ಮಂಗಳೂರು: ಧರ್ಮಸ್ಥಳ ಗ್ರಾಮದದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆಸಂಬಂಧಿಸದಂತೆ ಸಾಮೂಹಿಕವಾಗಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಹೇಳಿದ್ದ ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮತ್ತು ಮಾಜಿ ಅಧ್ಯಕ್ಷ ಕೇಶವಗೌಡ ಬೆಳಲು ಅವರ ಹೇಳಿಕೆಗಳನ್ನು ಎಸ್ ಐಟಿ ದಾಖಲಿಸಿಕೊಂಡಿದೆ.
ಧರ್ಮಸ್ಥಳ ದೇವಾಲಯ ಆಡಳಿತ ಮಂಡಳಿಯನ್ನು ಬೆಂಬಲಿಸಿ ಇವರಿಬ್ಬರೂ ಹಲವಾರು ಹೇಳಿಕೆಗಳನ್ನು ನೀಡಿದ್ದರು. ಜತೆಗೆ ಧರ್ಮಸ್ಥಳ ಗ್ರಾಮದಲ್ಲಿನ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾತಂಡ (ಎಸ್‌ಐಟಿ) ಇವರಿಗೆ ನೋಟಿಸ್ ನೀಡಿತ್ತು. ಅದರಂತೆ ಇಬ್ಬರೂ ಕಚೇರಿಗೆ ಆಗಮಿಸಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಹೂತುಹಾಕಿದ ಶವಗಳನ್ನು ಕುರಿತು ಎಸ್ ಐಟಿ ಅಧಿಕಾರಿಗಳು ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ನೇತ್ರಾವತಿ ನದಿ ಸಮೀಪದ ಬಂಗ್ಲೆಗುಡ್ಡ ಸಮೀಪದ ಕಾಡಿನಲ್ಲಿ ಇದೇ 17 ಮತ್ತು 18ರಂದು ಶೋಧ ಮತ್ತು ಮಹಜರು ನಡೆಸಿದಾಗ ಸಿಕ್ಕಿರುವ ಬುರುಡೆಗಳು ಮತ್ತು ಮೂಳೆಗಳು ಪುರುಷರಿಗೆ ಸೇರಿದವು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಇಲ್ಲಿ ಸಿಕ್ಕ ಏಳು ತಲೆಬುರುಡೆ ಮತ್ತು ಅಸಂಖ್ಯಾತ ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ ಎಸ್ ಎಲ್) ಕಳುಹಿಸಿದ್ದು, ತಜ್ಞರ ಪ್ರಾಥಮಿಕ ವರದಿ ಪ್ರಕಾರ ಅವೆಲ್ಲವೂ ಪುರುಷರಿಗೆ ಸೇರಿದವು ಎಂದು ತಿಳಿದು ಬಂದಿದೆ.
ಇವುಗಳಲ್ಲಿ ಒಂದು ಬುರುಡೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಯು.ಬಿ ಅಯ್ಯಪ್ಪ ಅವರದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಸ್ ಐಟಿ ಎಲ್ಲ ಏಳು ಬುರುಡೆಗಳ ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.