ಧರ್ಮಸ್ಥಳ ಈಗ ಒಂದು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಯಾವುದೇ ಪಕ್ಷಪಾತವಿಲ್ಲದೆ ಎಲ್ಲರೂ ಸೇರಿ ಒಮ್ಮತದಲ್ಲಿ ಈ ಕೇಂದ್ರವನ್ನು ರಾಜಕೀಯಕರಣಗೊಳಿಸುತ್ತಿದ್ದಾರೆ. ಸರಿಯಾಗಿ ತನಿಖೆಯಾಗಬೇಕು ಎನ್ನುವ ಜೊತೆಗೆ ಧಾರ್ಮಿಕ ಕ್ಷೇತ್ರಕ್ಕೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗಬಾರದು ಎಂದು ಘಂಟಾಘೋಷವಾಗಿ ಉಭಯಪಕ್ಷಗಳು ಕೂಗಿ ಹೇಳುತ್ತಿರುವುದರ ಹಿಂದೆ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಮೇಲಿರುವ ಮೃದುತನ ಎದ್ದು ಕಾಣುತ್ತಿದೆ – ಆಕಾಶ್ ಆರ್ ಎಸ್. ಪತ್ರಕರ್ತರು.
ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ರಚಿಸಿದ ಕ್ಷಣದಿಂದ ಈ ಪ್ರಕರಣ ಅನೇಕ ರೀತಿಯ ಚರ್ಚೆಗಳಿಗೆ ಒಳಪಡುತ್ತಿದೆ. ಅನಾಮಿಕ ದೂರುದಾರ ತೋರಿಸುತ್ತಿರುವ ಜಾಗಗಳು ದಿನೇ ದಿನೇ ಕುತೂಹಲ ಮೂಡಿಸುತ್ತಿದೆ ಹಾಗೂ ದೇಶಾದ್ಯಂತ ಸುದ್ದಿಯಾಗುತ್ತಿದೆ.
ಎಸ್ ಐ ಟಿ ರಚನೆಯ ಹಿನ್ನೆಲೆ
ಜುಲೈ 11 ರಂದು ಅನಾಮಿಕ ವ್ಯಕ್ತಿ ತಲೆ ಬುರುಡೆ ತಂದು ನ್ಯಾಯಾಲಯಕ್ಕೆ ದೂರು ನೀಡಿದ್ದ. ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಯಿತು. ಇದಕ್ಕೂ ಮುಂಚೆ ದೂರುದಾರರ ಪರವಾದ ಲಾಯರ್‌ಗಳು ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಕೊಲೆಗಳಿಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಿದ್ದರು. ನಂತರ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡ ಹಾಗೂ ಹಿರಿಯ ನ್ಯಾಯವಾದಿಗಳಾದ ಎಸ್.ಬಾಲನ್, ದ್ವಾರಕಾನಾಥ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಸ್‌ಐಟಿ ತನಿಖೆಗೆ ಒತ್ತಾಯಿಸಿದರು. ಜಾಗೃತ ಕರ್ನಾಟಕ ಇದಕ್ಕೆ ಪೂರಕವಾಗಿ ಸಹಿ ಸಂಗ್ರಹ ಅಭಿಯಾನವನ್ನು ರಾಜ್ಯಾದ್ಯಂತ ಮಾಡಿತು. ಇಷ್ಟೆಲ್ಲಾ ಬೆಳವಣಿಗೆಯ ನಂತರ ಸರ್ಕಾರ ಎಸ್‌ಐಟಿ ತಂಡವನ್ನು ರಚಿಸಿತು. ಇದರ ಬೆನ್ನಲ್ಲೆ ಇಬ್ಬರು ಐಪಿಎಸ್ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಸುದ್ದಿಯೂ ಹೊಗೆಯಾಡಿತು.
ಇವೆಲ್ಲಾ ಎಸ್‌ಐಟಿ ರಚನೆಗೆ ಹಾಗೂ ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಕೊಲೆಗಳ ತನಿಖೆಗೆ ಒಳಪಡಿಸಬೇಕೆಂಬ ಸಾರ್ವಜನಿಕರ ಒತ್ತಾಸೆ ಹಾಗೂ ಹೋರಾಟದ ರೂಪವಾಗಿದ್ದು, ಇದು ಸಂಯಮದಿಂದ ನಡೆದಿದೆ. ಆದರೆ ಈಗ ಮತ್ತೊಂದು ಆಟ ಶುರುವಾಗಿದೆ. ಅದು ವೀರೇಂದ್ರ ಹೆಗ್ಗಡೆ, ರಾಜಕೀಯ ಹಾಗೂ ಧರ್ಮದ ತ್ರಿಕೋನ ಕಥೆ. ಅದಕ್ಕಾಗಿಯೇ ಧರ್ಮಸ್ಥಳ ಪ್ರಕರಣಗಳಿಗೆ ಹೊಸ ಸ್ವರೂಪ ಕೊಡಲು ತಯಾರಿ ನಡೆಯುತ್ತಿದೆ.
ಹೆಗ್ಗಡೆ, ರಾಜಕೀಯ ಹಾಗೂ ಧರ್ಮದ ತ್ರಿಕೋನ ಕಥೆ
ಮೊದಲ ಬಾರಿ ಶವಗಳ ಬುರುಡೆ ಸಿಕ್ಕಾದ ತುಟಿ ಬಿಚ್ಚದ ಕನ್ನಡ ಮಾಧ್ಯಮಗಳು ಈಗ ಎಸ್‌ಐಟಿಗಿಂತಲೂ ಹೆಚ್ಚು ಮುತುವರ್ಜಿ ವಹಿಸಿ ಈ ಕೇಸ್‌ನ ಫಾಲೋ ಅಪ್ ಮಾಡುತ್ತಿದೆ. ಪತ್ರಿಕೋದ್ಯಮದ ಭಾಷಾ ಜ್ಞಾನ, ಭಾಷಾ ಬಳಕೆಯ ಗಂಧ ಗಾಳಿ ಗೊತ್ತಿಲ್ಲದವರೆಲ್ಲಾ ಮಾಧ್ಯಮಗಳಲ್ಲಿ ಘೀಳಿಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ಇಂತಹ ಅಮಾನವೀಯ ಕೆಲಸ ನಡೆದಿರುವುದಿಲ್ಲ, ವೀರೇಂದ್ರ ಹೆಗಡೆ ದೇವ ಮಾನವ, ಇದು ಎಡಪಂಥೀಯರ ಪಿತೂರಿ, ಇದಕ್ಕೆ ವಿದೇಶದಿಂದ ಫಂಡ್ ಬಂದಿದೆ, ಇದೆಲ್ಲಾ ಹಿಂದೂಗಳ ಭಾವನೆಗೆ ಧಕ್ಕೆ ಎನ್ನುತ್ತಾ ಕ್ಯಾಮರಾ ಮುಂದೆ ಕುಳಿತಿದ್ದಾರೆ. ಇದು ಮಾಧ್ಯಮ ಗತಿಯಾದರೆ, ರಾಜಕೀಯ ಹಾಗೂ ರಾಜಕಾರಣವು ಇವುಗಳಿಂದ ಹೊರತಾಗಿಲ್ಲ.!
ಹಾಗಾದರೆ ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತಿರುವುದು ನಿಜವೇ? ನಿಜವಾಗಲೂ ವಿದೇಶಿ ಫಂಡ್ ಬಂದಿದೆಯಾ? ಧರ್ಮಸ್ಥಳದಲ್ಲಿ ಅಧರ್ಮ ನಡೆಯುತ್ತಿದೆಯಾ? ಅತ್ಯಾಚಾರಗಳು ಹಾಗೂ ಕೊಲೆಗಳು ಧರ್ಮಸ್ಥಳದಲ್ಲಿ ನಡೆದೇ ಇಲ್ಲವಾ? ಈ ಪ್ರಕರಣದಲ್ಲಿ ದೇವರು ಹಾಗೂ ಧರ್ಮವನ್ನು ತಂದವರು ಯಾರು?.
ರಾಜಕೀಯ ಹಿತಾಸಕ್ತಿ ಮತ್ತು ಧರ್ಮಸ್ಥಳ:
ಧರ್ಮಸ್ಥಳ ಎಂಬ ಒಂದು ಪುಟ್ಟ ಊರು ಇಡೀ ದೇಶದ ಉದ್ದಗಲಕ್ಕೂ ಹೆಸರುವಾಸಿಯಾಗಿದೆ. ಹಾಗೂ ಅದರ ಪ್ರಭಾವ ರಾಷ್ಟ್ರ ರಾಜಕಾರಣ, ಉದ್ಯಮ, ಧಾರ್ಮಿಕತೆ ವರೆಗೂ ಪಸರಿಸಿದೆ. ಹಾಗಾಗಿ ಇಂದು ಆ ಸ್ಥಳದ ಮೇಲೆ ಬರುತ್ತಿರುವ ಆರೋಪಗಳನ್ನು ಒಂದಿಷ್ಟು ಸಮೂಹ ಸನ್ನಿಗೆ ಒಳಗಾದವರಿಗೆ ಸಹಿಸಲಾಗುತ್ತಿಲ್ಲ ಹಾಗೂ ಅದನ್ನು ಒಪ್ಪಲು ಅವರು ಸಿದ್ಧರಿಲ್ಲ. ಇದಕ್ಕೆ ಸ್ವತಂತ್ರ ಪತ್ರಕರ್ತರ ಮೇಲೆ ನಡೆಸಿರುವ ದಾಳಿಯೇ ಪ್ರತ್ಯಕ್ಷ ಸಾಕ್ಷಿ. ಇದಿಷ್ಟು ಒಂದು ಬೆಳವಣಿಗೆಯಾದರೆ ಇದರಾಚೆಗೆ ರಾಜಕಾರಣದ ಬೆಳವಣಿಗೆ ಇದೆ. ಅದಕ್ಕೆ ವೇಗ ಕೊಡಲು ತಯಾರಿಯೂ ನಡೆಯುತ್ತಿದೆ ಎಂಬುದಕ್ಕೆ ಈ ಕೆಳಗಿನ ಉದಾಹರಣೆಗಳನ್ನು ಗಮನಿಸಬೇಕು-
“ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅಪಪ್ರಚಾರ ಮಾಡುತ್ತಿದ್ದಾರೆ. ವೀರೇಂದ್ರ ಹೆಗ್ಗಡೆ ಅವರನ್ನು ಆರೋಪಿ ಎಂದು ಫಿಕ್ಸ್ ಮಾಡಿದ್ದಾರೆ – ಪ್ರತಾಪ್ ಸಿಂಹ, ಮಾಜಿ ಸಂಸದ”.
“ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಆದರೆ, ಧಾರ್ಮಿಕ ಕ್ಷೇತ್ರಕ್ಕೆ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ಮಾಡಬಾರದು – ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ”.
“ಎಡಪಂಥೀಯರ ಕುತಂತ್ರ ಇದು, ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ವಿದೇಶದಿಂದ ಫಂಡ್ ಬಂದಿದೆ- ಆರಗ ಜ್ಞಾನೇಂದ್ರ, ಮಾಜಿ ಸಚಿವ”.
“ಹಿಂದೂ ಸಮಾಜಕ್ಕೆ ಅಪಮಾನ ಮಾಡಲು ಹಾಗೂ ಪುಣ್ಯ ಕ್ಷೇತ್ರದ ಬಗ್ಗೆ ಅನುಮಾನ ಸೃಷ್ಟಿಸಲು ಈ ಕುತಂತ್ರ ನಡೆದಿದೆ- ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ”
“ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಡಿಪಿಐ ಕೈವಾಡ ಇದೆ – ಬಿಜೆಪಿ ಪಕ್ಷ”
“ದೇವಸ್ಥಾನದ ಬಳಿ ಶವಗಳನ್ನು ಹೂಳುವುದು ನಮ್ಮ ಸಂಸ್ಕೃತಿಯೇ ಆಗಿದೆ” – ಕಾಂಗ್ರೆಸ್ ಮಾಜಿ ಸಂಸದ ಜನಾರ್ದನ ಪೂಜಾರಿ “
ಇಂತಹ ಹಲವಾರು ಹೇಳಿಕೆಗಳನ್ನು ರಾಜಕೀಯ ಪಕ್ಷದ ನಾಯಕರು ದಿನೇ ದಿನೇ ನೀಡುತ್ತಾ ಇದ್ದಾರೆ. ಆ ಮೂಲಕ ಒಂದು ಅಪರಾಧ ಪ್ರಕರಣವನ್ನು ಸಂಪೂರ್ಣವಾಗಿ ರಾಜಕೀಯಕ್ಕೆ ಬಳಕೆ ಮಾಡಲು ಅದನ್ನು ಧರ್ಮ ಹಾಗೂ ದೇವರ ಹಣೆಗೆ ಕಟ್ಟುತ್ತಿದ್ದಾರೆ.
ಧರ್ಮಸ್ಥಳದ ಸಂಪೂರ್ಣ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ದೂರುದಾರನಾಗಲಿ, ಪೊಲೀಸ್ ಆಗಲಿ, ಸರ್ಕಾರವಾಗಲಿ ದೇವಸ್ಥಾನ ಹಾಗೂ ದೇವರ ಬಗ್ಗೆ ಮಾತಾಡಿಲ್ಲ. ತನಿಖೆ ನಡೆಸಲೂ ಹೇಳಿಲ್ಲ. ಹಾಗಾಗಿ ನಾವೆಲ್ಲಾ ಈ ತನಿಖೆಯನ್ನು ಸಂಪೂರ್ಣವಾಗಿ ದೇವರು, ಧರ್ಮವನ್ನು ಆಚೆ ಇಟ್ಟು ನೋಡಬೇಕು. ಮಾನವ ಕೃತ್ಯಗಳಿಗೂ ದೇವರು ಧರ್ಮಕ್ಕೂ ಯಾವುದೇ ಸಂಬಂಧವಿಲ್ಲವೆಂದು ತಿಳಿಯಬೇಕು.
ಆದರೆ ಮಾಜಿ ಸಂಸದ ಪ್ರತಾಪ್ ಸಿಂಹ ಈ ಪ್ರಕರಣದಲ್ಲಿ ನಮ್ಮ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರನ್ನು ಆರೋಪಿ ಮಾಡಲಿದ್ದಾರೆ ಎಂದು ಸ್ವತಃ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಹಾಗೂ ಧರ್ಮಸ್ಥಳ ಪ್ರಕರಣವನ್ನು ರಾಜಕೀಯ ಶಕ್ತಿ ಕೇಂದ್ರವನ್ನಾಗಿಸಿಕೊಳ್ಳುವ ಎಲ್ಲಾ ಪ್ರಯತ್ನದಲ್ಲಿದೆ ಎಂಬುದಕ್ಕೆ ಕಾಂಗ್ರೆಸ್‌ನ ಮಾಜಿ ಸಂಸದ ಜನಾರ್ದನ ಪೂಜಾರಿ ಹಾಗೂ ಬಿಜೆಪಿ ನಾಯಕರ ಹೇಳಿಕೆಗಳಲ್ಲಿ ಉತ್ತರವಿದೆ.
ಹಾಗೇ ನೋಡುವುದಾದರೆ ಇದೊಂದು ಮಾಸ್ ಕಮ್ಯುನಲ್ ಹಾಗೂ ಧರ್ಮದ ಹೋರಾಟ ಎಂದು ಬಿಂಬಿಸಲು ತೆರೆ ಮರೆಯಲ್ಲಿ ಕೆಲಸ ಕೂಡ ನಡೆಯುತ್ತಿದ್ದು, ಅದರ ಕಾಂಟ್ರಾಕ್ಟ್ ಅನ್ನು ಸುವರ್ಣ ನ್ಯೂಸ್, ರಿಪಬ್ಲಿಕ್ ಕನ್ನಡ, ಪಬ್ಲಿಕ್ ಟಿವಿ, ಪವರ್ ಟಿವಿ ತೆಗೆದುಕೊಂಡಿದೆ ಎಂದು ಇಲ್ಲಿ ನಡೆಯುವ ಡಿಬೆಟ್ ಗಳು ಸ್ವಷ್ಟವಾಗಿ ತಿಳಿಸುತ್ತಿವೆ.
ಧರ್ಮಸ್ಥಳ, ಕಿರುಕುಳ, ಆತ್ಮಹತ್ಯೆ:
“ಸಾಲದ ಕಂತಿನ ಹಣ ತುಂಬುವಂತೆ ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಸಂಸ್ಥೆಯವರು ನೀಡಿದ ಕಿರುಕುಳಕ್ಕೆ ಮಂಡ್ಯದ ಮಲಿಯೂರು ತಾಲ್ಲೂಕಿನಲ್ಲಿ ರೈತ ಮಹಿಳೆ ಮಹಾಲಕ್ಷ್ಮಿಆತ್ಮಹತ್ಯೆ (ಸೆ.18, 2024)” , “ ಸಾಲ ವಸೂಲಿ ಮಾಡಲು ಬಂದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಸಿಬ್ಬಂದಿ ಜಾತಿ ಹೆಸರಿನಲ್ಲಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿರುವುದು (15 ಜೂ, 2025)” ಪ್ರಕರಣಗಳು ದಾಖಲಾಗಿವೆ.
ಹಾಸನ, ದಕ್ಷಿಣ ಕನ್ನಡ, ಬಂಟ್ವಾಳ, ಉಡುಪಿ, ಬೆಳ್ತಂಗಡಿ, ಚಿತ್ರದುರ್ಗ, ವಿಜಯನಗರ, ಕುಂದಾಪುರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ 2024 ರಿಂದ 2025 ಸಾಲಿನಲ್ಲಿ ಒಟ್ಟು 26 ಕೇಸ್ ದಾಖಲಾಗಿದ್ದು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಆರ್‌ಬಿಐ ನಿಯಮ ಪಾಲನೆ ಮಾಡುತ್ತಿಲ್ಲ, ಅಧಿಕ ಬಡ್ಡಿ, ಮಾನಸಿಕ ಕಿರುಕುಳ, ಜಾತಿ ನಿಂದನೆ ಮಾಡಲಾಗುತ್ತಿದೆಯೆಂದು ವೀರೇಂದ್ರ ಹೆಗ್ಗಡೆ, ಸಂಸ್ಥೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದಿ ಫೈಲ್ ನಲ್ಲಿ ವರದಿಯಾಗಿದೆ.
ಇದಲ್ಲದೆ ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ಹೊರಡಿಸಿದ ಸಂದರ್ಭದಲ್ಲೂ ಕೂಡ ಈ ಸುಗ್ರೀವಾಜ್ಞೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಮಾತ್ರ ಅನ್ವಯವಾಗದಂತಾಯ್ತು. ಹಾಗೂ ದಕ್ಷಿಣ ಕನ್ನಡದ ಭಾಗದಲ್ಲಿ ಇಂತಹ ಯಾವುದೇ ಪ್ರಕರಣಗಳು ದಾಖಲಾಗಿಲ್ಲವೆಂದು ವಿಧಾನಸಭೆಯಲ್ಲಿ ಗೃಹಮಂತ್ರಿ ಪರಮೇಶ್ವರ್ ಉತ್ತರಿಸಿದ್ದರು. ಇದು ವರದಿಯೂ ಆಗಿದೆ.
ಒಟ್ಟಾರೆ ಧರ್ಮಸ್ಥಳ ಈಗ ಒಂದು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಯಾವುದೇ ಪಕ್ಷಪಾತವಿಲ್ಲದೆ ಎಲ್ಲರೂ ಸೇರಿ ಒಮ್ಮತದಲ್ಲಿ ಈ ಕೇಂದ್ರವನ್ನು ರಾಜಕೀಯಕರಣಗೊಳಿಸುತ್ತಿದ್ದಾರೆ. ಸರಿಯಾಗಿ ತನಿಖೆಯಾಗಬೇಕು ಎನ್ನುವ ಜೊತೆಗೆ ಧಾರ್ಮಿಕ ಕ್ಷೇತ್ರಕ್ಕೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗಬಾರದು ಎಂದು ಘಂಟಾಘೋಷವಾಗಿ ಉಭಯಪಕ್ಷಗಳು ಕೂಗಿ ಹೇಳುತ್ತಿರುವುದರ ಹಿಂದೆ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಮೇಲಿರುವ ಮೃದುತನ ಎದ್ದು ಕಾಣುತ್ತಿದೆ.
ಆಕಾಶ್.ಆರ್.ಎಸ್.
ಪತ್ರಕರ್ತ
ಇದನ್ನೂ ಓದಿ- http://ದಿ ಮೇಕಿಂಗ್ ಆಫ್ ಧರ್ಮಸ್ಥಳ: ಹುಟ್ಟಿನ ಹಿಂದಿನ ರಹಸ್ಯಗಳು | ಭಾಗ – 2 https://kannadaplanet.com/the-making-of-dharmasthala-part-2/