ತಾಯಂದಿರ ಮರಣ ಪ್ರಮಾಣದಲ್ಲಿ ಶೇ. 24ರಷ್ಟು ಇಳಿಕೆ
ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ (MMR) ದಾಖಲೆ ಮಟ್ಟದಲ್ಲಿ ಅಂದರೆ ಶೇ. 24ರಷ್ಟು ಇಳಿಕೆಯಾಗಿದೆ. ಗರ್ಭಿಣಿಯರಿಗೆ ಗುಣಾತ್ಮಕ ಸೇವೆ ಮತ್ತು ಆಧುನಿಕ ಉಪಕರಣಗಳ ಪೂರೈಕೆ ಈ ಸಾಧನೆಗೆ ಕಾರಣವಾಗಿದೆ.
‘ಅನೀಮಿಯಾ ಮುಕ್ತ ಕರ್ನಾಟಕ’ಕ್ಕೆ ಚಾಲನೆ
ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯಡಿ ಶಾಲಾ ಕಾಲೇಜುಗಳ 52 ಲಕ್ಷ ಮಕ್ಕಳಿಗೆ ರಕ್ತಹೀನತೆ ತಪಾಸಣೆ ನಡೆಸಲಾಗಿದೆ. ರಕ್ತಹೀನತೆ ಕಂಡುಬಂದಿರುವ 11.7 ಲಕ್ಷ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ 3.7 ಲಕ್ಷ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಉಳಿದ ಮಕ್ಕಳಿಗೆ ಚಿಕಿತ್ಸೆ ಮತ್ತು ಅನುಸರಣೆ ಮುಂದುವರೆಸಲಾಗಿದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ದರ ಪರಿಷ್ಕರಣೆ
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಹಾಲಿ ಚಾಲ್ತಿಯಲ್ಲಿರುವ 2018ರ ಚಿಕಿತ್ಸಾ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಹೆಚ್.ಬಿ.ಪಿ.-2022 ಪ್ಯಾಕೇಜ್ ದರಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಇದರಿಂದ ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ. ಇದಕ್ಕಾಗಿ 400 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು. ಸದರಿ ಯೋಜನೆಯನ್ನು ಯಶಸ್ವಿನಿ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ
ರಾಜ್ಯ ವಿಮಾ ಯೋಜನೆ ಮತ್ತು ಅನ್ವಯಿಸುವ ಇತರ ಯೋಜನೆಗಳ ಅನುದಾನವನ್ನು ಒಗ್ಗೂಡಿಸುವ ಮೂಲಕ ಅನುಷ್ಠಾನಗೊಳಿಸಲಾಗುವುದು.
900 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗಳ ಕಾಯಕಲ್ಪ
ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು. ಆರೋಗ್ಯ ಇಲಾಖೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 900 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.

ತುರ್ತು ಚಿಕಿತ್ಸೆ ಮತ್ತು ಹೃದಯ ಆರೋಗ್ಯ (STEMI)
ಹೃದಯಾಘಾತದಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು STEMI ಯೋಜನೆಯಡಿ 9.4 ಲಕ್ಷ ಇಸಿಜಿಗಳನ್ನು ಮಾಡಲಾಗಿದ್ದು, ಸಾವಿರಾರು ಜೀವಗಳನ್ನು ಉಳಿಸಲಾಗಿದೆ. ಅಲ್ಲದೆ, ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ‘ಟ್ರಾಮಾ ಕೇರ್’ (Trauma Care) ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ
ಸಮಸ್ತ (Samasta) ಆಪ್: ಇಲಾಖೆಯ ಎಲ್ಲಾ ಸಿಬ್ಬಂದಿಗಳ ಕಾರ್ಯವೈಖರಿ ಡಿಜಿಟಲೀಕರಣ.
ಪೇಪರ್ ರಹಿತ ವ್ಯವಸ್ಥೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಗಣಕೀಕೃತ ನೋಂದಣಿ, ಡಿಜಿಟಲ್ ದಾಖಲೆ ಮತ್ತು ಯುಪಿ (UPI) ಮೂಲಕ ಹಣ ಪಾವತಿ ವ್ಯವಸ್ಥೆ ಜಾರಿ.
ಟೆಲಿ-ರೇಡಿಯಾಲಜಿ: ಸ್ಕ್ಯಾನಿಂಗ್ ಮತ್ತು ಹೆರಿಗೆ ಕೊಠಡಿಗಳಲ್ಲಿ ತಾಂತ್ರಿಕ ಸೌಲಭ್ಯಗಳ ಅಳವಡಿಕೆ.
ಮಕ್ಕಳ ಆರೋಗ್ಯಕ್ಕೆ ವಿಶೇಷ ಒತ್ತು
ಟೈಪ್-1 ಮಧುಮೇಹ: ಈ ಕಾಯಿಲೆಯಿಂದ ಬಳಲುತ್ತಿರುವ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಇನ್ಸುಲಿನ್ ಪೆನ್‌ಗಳ ವಿತರಣೆ.
ಪೌಷ್ಟಿಕತೆ: ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗಾಗಿ ಹೊಸದಾಗಿ 63 ತಾಲ್ಲೂಕುಗಳಲ್ಲಿ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳ (NRC) ಸ್ಥಾಪನೆ.
ಮೂಲಸೌಕರ್ಯ ಮತ್ತು ಉದ್ಯೋಗಾವಕಾಶ
ಆರೋಗ್ಯ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗೆ 900 ಕೋಟಿ ರೂ. ಅನುದಾನ.
ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿಗೆ ಕ್ರಮ.
ಹೆಚ್ಚುವರಿಯಾಗಿ 1.35 ಲಕ್ಷ ಡಯಾಲಿಸಿಸ್ ಸೇವೆಗಳನ್ನು ಒದಗಿಸಲು 20 ಕೋಟಿ ರೂ. ಅನುದಾನ.

