ಪ್ರಜಾಪ್ರಭುತ್ವ ಆಶಯವೂ ಪುಸ್ತಕ ಲೋಕದ ನಿರ್ಲಕ್ಷ್ಯವೂ

Most read

ಇದೇ ಸೆಪ್ಟಂಬರ್‌ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ಬೀದರ್‌ನಿಂದ ಚಾಮರಾಜ ನಗರದವರೆಗೆ ಮಾನವ ಸರಪಳಿಯನ್ನು ರಚಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಮೂಲ ಆಶಯವಾದ ಭ್ರಾತೃತ್ವ ಮತ್ತು ಸಮನ್ವಯತೆಯನ್ನು ಸಾರಲು ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಸಜ್ಜಾಗಿದೆ. ಆದರೆ ಭಾರತದ ಪ್ರಜಾಪ್ರಭುತ್ವ ನಿಂತಿರುವುದು ನಮ್ಮ ಸಂವಿಧಾನದ ಮೇಲೆ ಎಂಬ ವಾಸ್ತವವನ್ನು ಅರಿತಿರುವುದೇ ಆದರೆ, ರಾಜ್ಯ ಸರ್ಕಾರ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇನ್ನೂ ಗಂಭೀರ ಆಲೋಚನೆ ಮಾಡಬೇಕಿದೆ – ನಾ ದಿವಾಕರ

ಇದೇ ಸೆಪ್ಟಂಬರ್‌ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರವೂ ಈ ದಿನವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದೆ. ಬೀದರ್‌ನಿಂದ ಚಾಮರಾಜ ನಗರದವರೆಗೆ ಮಾನವ ಸರಪಳಿಯನ್ನು ರಚಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಮೂಲ ಆಶಯವಾದ ಭ್ರಾತೃತ್ವ ಮತ್ತು ಸಮನ್ವಯತೆಯನ್ನು ಸಾರಲು ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಸಜ್ಜಾಗಿದೆ. ಆಚರಣಾತ್ಮಕ ನೆಲೆಯಲ್ಲಿ ಇದು ಸ್ವಾಗತಾರ್ಹವೇ. ಆದರೆ ಭಾರತದ ಪ್ರಜಾಪ್ರಭುತ್ವ ನಿಂತಿರುವುದು ನಮ್ಮ ಸಂವಿಧಾನದ ಮೇಲೆ ಎಂಬ ವಾಸ್ತವವನ್ನು ಅರಿತಿರುವುದೇ ಆದರೆ, ರಾಜ್ಯ ಸರ್ಕಾರ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇನ್ನೂ ಗಂಭೀರ ಆಲೋಚನೆ ಮಾಡಬೇಕಿದೆ. ಇದರ ಒಂದು ಆಯಾಮವನ್ನು ಯುವ ಸಮೂಹದ ನಡುವೆ ಓದು, ಅಧ್ಯಯನ, ಸಂಶೋಧನೆ ಮತ್ತು ಸಂವಾದವನ್ನು ಉತ್ತೇಜಿಸುವ ಮಾರ್ಗದಲ್ಲಿ ಗುರುತಿಸಬಹುದು. ಇಲ್ಲಿ ಸರ್ಕಾರದ ಆಲೋಚನಾ ಕ್ರಮಗಳು ಬಹುಮಟ್ಟಿಗೆ ನಿಷ್ಕ್ರಿಯತೆಯತ್ತ ಸಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಮಿಲೆನಿಯಂ ಸಮೂಹ, ಅಂದರೆ 20-30ರ ವಯೋಮಾನದ ಯುವಕ ಯುವತಿಯರು ಓದುವ ಹವ್ಯಾಸಕ್ಕೆ ವಿಮುಖವಾಗಿದ್ದಾರೆ ಎಂಬ ಸಾಮಾನ್ಯ ಆರೋಪಗಳು ಒಂದು ನೆಲೆಯಲ್ಲಿ ಒಪ್ಪುವಂತಹುದೇ. ಆದರೆ ಸಾಂಸ್ಥಿಕ ನೆಲೆಯಲ್ಲಿ ಸರ್ಕಾರವೇ ಆಗಲೀ, ಸಾಹಿತ್ಯ ಅಕಾಡೆಮಿ, ಪುಸ್ತಕ ಅಕಾಡೆಮಿ, ವಿವಿಧ ಪ್ರಾಧಿಕಾರಗಳು  ಯುವ ಸಂಕುಲದ ನಡುವೆ ಓದು ಮತ್ತು ಅಧ್ಯಯನದ ಜನಸಂಸ್ಕೃತಿಯನ್ನು ಬೆಳೆಸಲು ಎಷ್ಟರ ಮಟ್ಟಿಗೆ ಪ್ರಯತ್ನಗಳನ್ನು ಮಾಡಿವೆ ಎಂಬ ಗಹನವಾದ ಪ್ರಶ್ನೆ ಉದ್ಭವಿಸುತ್ತದೆ. ನಿರುದ್ಯೋಗ, ಅರೆ ಉದ್ಯೋಗವಷ್ಟೇ ಅಲ್ಲದೆ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿರುವ ವಿದ್ಯಾವಂತರಿಗೆ ತಮ್ಮ ಬದುಕು ರೂಪಿಸಿಕೊಳ್ಳುವುದೇ ದುಸ್ತರವಾಗಿರುವ ಹೊತ್ತಿನಲ್ಲಿ, ಪುಸ್ತಕ ಖರೀದಿ ಎನ್ನುವುದು ಲಕ್ಸುರಿ ಆಗಿಬಿಡುತ್ತದೆ. ಇದಕ್ಕೆ ಪರಿಹಾರ ಇರುವುದು ಕೈಗೆಟುಕುವ ಬೆಲೆಯಲ್ಲಿ ಕನ್ನಡದ ಮೇರು ಸಾಹಿತ್ಯ ಕೃತಿಗಳನ್ನು, ಸಂಶೋಧನಾ ಗ್ರಂಥಗಳನ್ನು ಒದಗಿಸುವುದು. ಈ ನಿಟ್ಟಿನಲ್ಲಿ ಈವರೆಗಿನ ಸರ್ಕಾರಗಳು ಯೋಚನೆಯನ್ನೂ ಮಾಡದಿರುವುದು ಕಟು ವಾಸ್ತವ. ಸಮಾಜದಲ್ಲಿ ಆರ್ಥಿಕ ಸ್ಥಿತಿಗತಿಗಳಲ್ಲಿ ಉಂಟಾಗುವ ಏರುಪೇರುಗಳು, ಸುಶಿಕ್ಷಿತ ವಲಯದ ಪುಸ್ತಕ ಓದಿನ ಮೇಲೂ ಪರಿಣಾಮ ಬೀರುತ್ತದೆ ಎಂಬ ಸೂಕ್ಷ್ಮ ಸರ್ಕಾರಕ್ಕೆ/ಅಕಾಡೆಮಿಗಳಿಗೆ ತಿಳಿದಿರಬೇಕಲ್ಲವೇ ?

ಸುಭದ್ರ ನೌಕರಿಯಲ್ಲಿರುವವರಿಗೇ ಎಟುಕಲಾರದಷ್ಟು ಬೆಲೆಯುಳ್ಳ ಕನ್ನಡದ ಅತ್ಯುತ್ಕೃಷ್ಟ ಸಾಹಿತ್ಯ ಕೃತಿಗಳು ಹೆಚ್ಚೆಂದರೆ ಗ್ರಂಥಾಲಯದ ಕಪಾಟುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅಥವಾ ಹಿರಿಯ ತಲೆಮಾರಿನ ಅಧ್ಯಯನಾಸಕ್ತರ ಮನೆಗಳಲ್ಲಿ ಕಾಣಸಿಗುತ್ತವೆ. ಪುಸ್ತಕ ಓದು ಮೇಲ್ವರ್ಗದವರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದ್ದರೆ, ತಳಸ್ತರದ ಸಮಾಜದಲ್ಲಿ ಅದು ಜ್ಞಾನವಿಸ್ತರಣೆಯ ಆಕರವಾಗಿ ಪರಿಣಮಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಪ್ರಜಾಪ್ರಭುತ್ವ, ಸೆಕ್ಯುಲರಿಸಂ ಮತ್ತು ಬಹುತ್ವವನ್ನು ಜನಸಾಮಾನ್ಯರ ನಡುವೆ ಪಸರಿಸಲು ಅನುಕೂಲಕರವಾದ ಸಾಹಿತ್ಯ ಕನ್ನಡದಲ್ಲಿ ವಿಪುಲವಾಗಿವೆ. ಸಮಕಾಲೀನ-ಆಧುನಿಕ ಸಾಹಿತ್ಯದಲ್ಲೂ ಇಂತಹ ಅತ್ಯುತ್ಕೃಷ್ಟ ಕೃತಿಗಳು ಪ್ರಕಟವಾಗುತ್ತಲೇ ಇವೆ. ಆದರೆ ಇವುಗಳನ್ನು ಕೊಳ್ಳುವವರು ಎಲ್ಲಿದ್ದಾರೆ ? ಕನ್ನಡ ಪುಸ್ತಕ ಪ್ರಾಧಿಕಾರದ ಮಳಿಗೆಗಳಲ್ಲೇ ವಿಲೇವಾರಿಯಾಗದ, ಮಾರಾಟವಾಗದ ಪುಸ್ತಕಗಳ ಪರ್ವತಗಳನ್ನು ಕಾಣಬಹುದಾಗಿದೆ. ಕರ್ನಾಟಕದಲ್ಲಿ ಬಿಡುಗಡೆಯಾಗುವ ವೇಗದಲ್ಲೇ ಪುಸ್ತಕ ಓದು ಸಹ ನಡೆಯುವುದಾದರೆ, ಸಾಹಿತ್ಯಕ ವೈಭವವನ್ನು ಕಾಣಲು ಸಾಧ್ಯ. ಆದರೆ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಪುಸ್ತಕ ಬಿಡುಗಡೆ ಎನ್ನುವುದು ಕೇವಲ ಮಾರುಕಟ್ಟೆಗೆ ಸರಕು ತುಂಬಿಸುವ ಪ್ರಕ್ರಿಯೆಯಾಗಿ ಹೋಗಿದೆ.

ಪುಸ್ತಕ ಕೊಳ್ಳುವವರಿಲ್ಲ ಎನ್ನುವುದನ್ನು ವಸ್ತುನಿಷ್ಠವಾಗಿ ಪರಾಮರ್ಶಿಸಿದರೆ ಕೆಲವು ವಾಸ್ತವ ಸಮಸ್ಯೆಗಳೂ ಕಾಣಬಹುದು.  ಓದುವ ಇಚ್ಛೆ ಇರುವ ಯುವಸಮೂಹಕ್ಕೆ ಕೊಳ್ಳುವ ಶಕ್ತಿ ಇಲ್ಲ. ಸಾಂಸ್ಥಿಕ ನೆಲೆಯಲ್ಲಿ ಅಥವಾ ಸಂಘಟನಾತ್ಮಕವಾಗಿ ಗುಂಪು ಓದನ್ನು ಪ್ರಚೋದಿಸುವಂತಹ ಒಂದು ಸಾಹಿತ್ಯಕ-ಅಧ್ಯಯನ ಅಭಿಯಾನಕ್ಕೆ ಕನ್ನಡ ಸಾರಸ್ವತ ಲೋಕ ತೆರೆದುಕೊಂಡೇ ಇಲ್ಲ. ಪುಟಪುಟಗಳಲ್ಲೂ ತಮಗಿಷ್ಟವಾದ ಯಾವುದೋ ಒಂದು ಅಸ್ಮಿತೆಯ ಕುರುಹನ್ನು ಹುಡುಕುತ್ತಾ, ಪುಟ ತಿರುವಿ ಹಾಕಿ, ಒಲ್ಲೆ ಎಂದು ಪಕ್ಕಕ್ಕಿಡುವ ಒಂದು ಮನೋಭಾವವನ್ನೂ ನಮ್ಮ ಅಸ್ಮಿತೆಯಾಧಾರಿತ ಚಳುವಳಿಗಳು ಸೃಷ್ಟಿಸಿರುವುದರಿಂದ, ಮುಖಪುಟ ನೋಡಿ ಮುಖತಿರುಗಿಸುವ ಒಂದು ಹವ್ಯಾಸವೂ ಹೆಚ್ಚಾಗಿದೆ. Donʼt Judge the Book by its Cover page ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿದರೆ ತಪ್ಪಾಗಲಾರದು. ಈ ಮನೋಭಾವಕ್ಕೆ ಕಾರಣ ಪುಸ್ತಕ ಓದಿನಲ್ಲಿ ನುಸುಳಿರುವ ತಾತ್ವಿಕ ಅಸ್ಮಿತೆಗಳು ಮತ್ತು ಅದರ ಸುತ್ತ ನಿರ್ಮಾಣವಾಗಿರುವ ಅಭೇದ್ಯ ಗೋಡೆಗಳು.

ಈ ಸಾಮಾಜಿಕ ಸಮಸ್ಯೆಗಳಿಂದಾಚೆಗೆ ಯೋಚಿಸುವ ವ್ಯವಧಾನ ಅಧಿಕಾರದಲ್ಲಿರುವವರಿಗೆ ಇರಬೇಕಲ್ಲವೇ ? ಸಭೆ ಸಮಾರಂಭಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಅಭಿನಂದನಾ ಸಭೆಗಳಲ್ಲಿ, ಸಾಹಿತ್ಯ ಪರಿಷತ್ತು ನಡೆಸುವ ಕಾರ್ಯಕ್ರಮಗಳಲ್ಲಿ ಪ್ರತಿಷ್ಠಿತರನ್ನು ಅಥವಾ ಪ್ರತಿಭಾವಂತರನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುತ್ತಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು, ಸನ್ಮಾನಿಸುವ ಒಂದು ದೊಡ್ಡ ಪರಂಪರೆ ನಮ್ಮಲ್ಲಿದೆ. ಆದರೆ ಈ ಸನ್ಮಾನ ಸಮಾರಂಭಗಳಲ್ಲಿ ಢಾಳಾಗಿ ಕಾಣುವುದು ಸನ್ಮಾನಿತರು ಮುಂದೆಂದೂ ಬಳಸಲಾಗದ ಅಥವಾ ಬಳಸದಿರುವ ಸಾಂಪ್ರದಾಯಿಕ ಮೈಸೂರು ಪೇಟ, ಮಣಿಗಳ ಹಾರ ಮತ್ತು ಒಂದು ಶಾಲು. ಶಾಲಾ ಮಟ್ಟದಿಂದ ಅತ್ಯುನ್ನತ ಸಾಹಿತ್ಯಕ ವಲಯದವರೆಗು ವಿಸ್ತರಿಸುವ ಈ ಸನ್ಮಾನ ಸಂಸ್ಕೃತಿಯಲ್ಲಿ ಮುಂದೆಂದೂ ಬಳಕೆಯಾಗದ ಈ ಮೂರೂ ವಸ್ತುಗಳನ್ನು ಬದಿಗಿಟ್ಟು, ಪುಸ್ತಕಗಳನ್ನೇ ನೀಡುವ ಮೂಲಕ ಓದಿನ ಸಂಸ್ಕೃತಿಯನ್ನು ಬೆಳೆಸಬಹುದಲ್ಲವೇ? ಸರ್ಕಾರ, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಿದರೆ, ಮಾರ್ಕ್ಸ್‌ ಗಳಿಸಿ ಪ್ರತಿಭೆ ಪ್ರದರ್ಶಿಸುವ ಯುವ ತಲೆಮಾರು ಮುಂದಿನ ದಿನಗಳಲ್ಲಿ ಓದು-ಅಧ್ಯಯನ-ಸಂಶೋಧನೆಯತ್ತ ಗಮನಹರಿಸುತ್ತದೆ.

ಇದು ಸಾಧ್ಯವಾಗಬೇಕಾದರೆ ಸರ್ಕಾರ ತನ್ನ ಅಧೀನದಲ್ಲಿರುವ ಅಕಾಡೆಮಿ-ಪ್ರಾಧಿಕಾರಗಳಿಗೆ ಧನ ಸಹಾಯ ನೀಡುವ ಮೂಲಕ ಪುಸ್ತಕ ಖರೀದಿಯನ್ನು ಹೆಚ್ಚಿಸಬೇಕು. ಕನ್ನಡದ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು, ಸಂಶೋಧನಾ ಗ್ರಂಥಗಳನ್ನು, ವಿಮರ್ಶಾತ್ಮಕ ಪುಸ್ತಕಗಳನ್ನು ಈ ಸಾಂಸ್ಕೃತಿಕ ಸಂಸ್ಥೆಗಳ ಮೂಲಕ ಖರೀದಿಸಿ ವಿದ್ಯಾರ್ಥಿಗಳಿಗೆ, ಯುವ ಸಮೂಹಕ್ಕೆ ಸುಲಭ ಬೆಲೆಯಲ್ಲಿ ಒದಗಿಸುವಂತಾಗಬೇಕು. ವಿಶ್ವವಿದ್ಯಾಲಯಗಳ, ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಗಾಗಿಯೇ ಪ್ರತ್ಯೇಕ ಧನ ಸಹಾಯ ಒದಗಿಸಬೇಕು. ತನ್ಮೂಲಕ ಕೈಗೆಟುಕುವ ಬೆಲೆಯಲ್ಲಿ ಪುಸ್ತಕಗಳನ್ನು ಒದಗಿಸಬೇಕು. ಹಾಗಾದಲ್ಲಿ ಸಾಹಿತ್ಯಕ ಬದ್ಧತೆ ಇರುವ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಪುಸ್ತಕ ಖರೀದಿಸಿ, ಸನ್ಮಾನಗಳಿಗೆ ಪುಸ್ತಕಗಳನ್ನು ಬಳಸುವುದು ಸಾಧ್ಯವಾಗುತ್ತದೆ. ಶತಮಾನದ ಚರಿತ್ರೆ ಇರುವ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳೂ ಸಹ ಈ ನಿಟ್ಟಿನಲ್ಲಿ ಗಂಭೀರವಾಗಿ  ಆಲೋಚನೆ ಮಾಡಬೇಕಿದೆ.

ರಾಷ್ಟ್ರಕವಿ ಕುವೆಂಪು ಅವರ  “ನಿರಂಕುಶಮತಿಗಳಾಗಿ” ಕರೆಗೆ ಐವತ್ತು ತುಂಬಿದೆ. ಸಮಾಜದಲ್ಲಿ ಇದು ಸಾಕಾರವಾಗಬೇಕಾದರೆ ಓದು-ಅಧ್ಯಯನ-ಸಂವಾದದ ಸಂಸ್ಕೃತಿಗೆ ಉತ್ತೇಜನ ದೊರೆಯಬೇಕು. ಅಷ್ಟೇ ಅಲ್ಲದೆ ಕುವೆಂಪು ಪ್ರತಿಪಾದಿಸಿದ ವೈಚಾರಿಕತೆಯನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ವಿಚಾರ ಸಾಹಿತ್ಯದ ಪ್ರಸಾರ ಆಗಬೇಕು. ದಿನದಿಂದ ದಿನಕ್ಕೆ ಪ್ರಾಚೀನತೆಯತ್ತ ಜಾರುತ್ತಿರುವ ಸಮಾಜವನ್ನು ಈ ಪತನದಿಂದ ತಪ್ಪಿಸಬೇಕೆಂದರೆ ವಿಚಾರ ಸಾಹಿತ್ಯ ತಳಮಟ್ಟದವರೆಗೂ ತಲುಪುವಂತಾಗಬೇಕು. ಇದು ಸಾಧ್ಯವಾಗಿಸಲು ಇರುವುದು ಎರಡೇ ಮಾರ್ಗ. ಸಾಹಿತ್ಯ ಮತ್ತು ರಂಗಭೂಮಿ. ಈ ಎರಡೂ ಕ್ಷೇತ್ರಗಳನ್ನು ವಿಶ್ವಮಾನವತೆಯ ಚೌಕಟ್ಟಿನಲ್ಲಿ ಮುಂದಕ್ಕೆ ಕೊಂಡೊಯ್ಯಬೇಕಾದರೆ, ಎರಡೂ ಕ್ಷೇತ್ರಗಳಲ್ಲಿ ಸಾಹಿತ್ಯದ ಓದು, ಅಧ್ಯಯನ ಮತ್ತು ಸಂಶೋಧನೆಗಳು ಹೆಚ್ಚಾಗಬೇಕು. ಈ ಪುಸ್ತಕ ಸಂಸ್ಕೃತಿಯ ಮೂಲ ಇರುವುದು ಮುದ್ರಿತ ಪುಸ್ತಕಗಳಲ್ಲೇ ಅಲ್ಲವೇ? ಈ ಪುಸ್ತಕಗಳು ಸಾಮಾನ್ಯ ಜನತೆಗೆ ಗಗನ ಕುಸುಮಗಳಾದರೆ ಓದುವ ಹವ್ಯಾಸವನ್ನು ಬೆಳೆಸುವುದಾದರೂ ಹೇಗೆ ? ಈ ಅರಿವು ಸರ್ಕಾರ ಮತ್ತು ಅದರಿಂದ ನಿರ್ದೇಶಿಸಲ್ಪಡುವ ಸಾಂಸ್ಕೃತಿಕ ಸಂಸ್ಥೆಗಳಿಗೆ ಇರಬೇಕು.

ನಾ ದಿವಾಕರ

ಚಿಂತಕರು

More articles

Latest article