ಡೀಕೋಡಿಂಗ್‌ ಡಿ ಬಾಸ್‌ ಫ್ಯಾನ್ಸ್:‌ ಯಾರೀ ಹುಚ್ಚು ಅಭಿಮಾನಿಗಳು? ಎಲ್ಲಿಂದ ಬಂದರು?

Most read

ಎರಡು ದಿನಗಳಿಂದ ನೀವು ಇವೆಲ್ಲವನ್ನು ಗಮನಿಸಿಯೇ ಇರುತ್ತೀರಿ. ಕರ್ನಾಟಕ ಚಲನಚಿತ್ರ ರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸೂಪರ್ ಸ್ಟಾರ್ ನಟನೊಬ್ಬನನ್ನು ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಈ ನಟನ ಫ್ಯಾನ್ಸ್ ಗಳು ತಮ್ಮ ಸಾಮಾಜಿಕ ಜಾಲತಾಣ ತಾಣದ ಕೆಟ್ಟಾ ಕೊಳಕ ಕಮೆಂಟ್‌ಗಳು  ಮತ್ತು ವೈಯಕ್ತಿಕ ನೆಲೆಯಲ್ಲಿ ಅತಿರೇಕದ ವರ್ತನೆಗಳಿಗೆ ಕುಖ್ಯಾತಿ ಹೊಂದಿದವರು.

ಇದೀಗ ತಮ್ಮ ನೆಚ್ಚಿನ ನಟನನ್ನು ಪೊಲೀಸರು ಅರೆಸ್ಟ್ ಮಾಡಿ ಠಾಣೆಯ ಸೆಲ್‌ ನೊಳಗೆ ತಳ್ಳಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತೆ ಹುಚ್ಚಾ ಪಟ್ಟೆ ವರ್ತಿಸುತ್ತಿರುವವರು ಇದೇ ಹಾರ್ಡ್ ಕೋರ್ ಫ್ಯಾನ್ ಗಳು. ತಮ್ಮ ನೆಚ್ಚಿನ ನಟನ ಪರವಾಗಿ ಇವರ ಸಮರ್ಥನೆಗಳನ್ನು ಒಮ್ಮೆ ಗಮನಿಸಿ ನೋಡಿದರೆ ಎಂತವರಿಗಾದರೂ ಭಯ ಹುಟ್ಟುತ್ತದೆ. ʻʻಯಾರು ಮಾಡದೆ ಇರುವುದನ್ನು ಏನು  ನಮ್ಮ ಬಾಸ್ ಮಾಡಿಲ್ಲ, ಎರಡು ಪೆಗ್ ಜಾಸ್ತಿಯಾದ ಹುರುಪಿನಲ್ಲಿ  ಒಂದೆರಡು ಏಟು  ಹೊಡೆದಿದ್ದಾರೆ, ದೇಶದ ಕಾನೂನು ಬದಲಾಗಬೇಕು. ನಮ್ಮ ಗುರು ಈಚೆ ಬರಬೇಕು, ಇದು ಸಣ್ಣ ಕೊಲೆ ಅಷ್ಟೇ ಇದರ ಹಿಂದೆ ಯಾರದ್ದೋ ಎದುರಾಳಿ  ನಟರ ಕೈವಾಡವಿದೆ, ನಮ್ಮ ಬಾಸ್ ಅಮಾಯಕರು, ಅವರೇನು ಮಾಡಿದರು ನಾವು ಅವರ ಜೊತೆಗಿರುತ್ತೇವೆ” ಇಂತಹ ಅತಿರೇಕದ ಹುಚ್ಚುತನದ ಮುಠ್ಠಾಳತನದ ಪರಮಾವಧಿಯನ್ನೇ ಈ ಹುಂಬ ನಟನ ಫ್ಯಾನ್ಸ್ ಗಳು ಸಾಮಾಜಿಕ ಜಾಣ ತಾಣದ ತುಂಬಾ ಎರಚಾಡುತ್ತಿದ್ದಾರೆ. ಚಿತ್ರರಂಗವಾಗಲಿ ಸಮಾಜವಾಗಲಿ ಇಂಥ ಕ್ರೂರ ಫ್ಯಾನ್ಸ್ಗಳನ್ನು ಹಿಂದೆಂದೂ ನೋಡಿರಲಿಲ್ಲ. ಯಾರಿವರು ಇವರನ್ನು ಈ ಪರಿಯ ಮೂಡ ಆರಾಧನೆಗೆ ತಳ್ಳಿದ್ದು ಯಾರು? ಕೊಲೆಪಾತಕತನವನ್ನು ಸಂಭ್ರಮಿಸುವ ಮಟ್ಟಿಗೆ ಇವರೆಲ್ಲರ ಮೆದುಳಿಗೆ ವಿಷವನ್ನು ಬೆರೆಸಿರುವವರು ಯಾರು? ಉತ್ತರ ನಮ್ಮ ಸುತ್ತಮುತ್ತಲೇ ಇದೆ.

 ಕಳೆದ ಒಂದುವರೆ ದಶಕಗಳ ಅವಧಿಯಲ್ಲಿ ಜನರನ್ನು ಪ್ರಭಾವಿಸುವ, ಒಳಗೊಳ್ಳುವಂತೆ ಮಾಡುವ ಎರಡು ಅತಿ ದೊಡ್ಡ ಕ್ಷೇತ್ರಗಳಾದ ರಾಜಕಾರಣ ಮತ್ತು ಸಿನಿಮಾ ಎರಡರಲ್ಲೂ ಹಿಂಸೆಯೇ ಅತ್ಯಂತ ಪ್ರಧಾನತೆಯನ್ನು ಗಳಿಸಿಕೊಂಡಿದೆ. ಗಮನಿಸಿ ನೋಡಿದರೆ ಇವೆರಡು ಕ್ಷೇತ್ರಗಳು ತಮ್ಮ ಟಾರ್ಗೆಟ್ ಆಡಿಯನ್ಸ್ ಆಗಿ ಹಿಂಸೆಯನ್ನು ಫೀಡ್ ಮಾಡುತ್ತಿರುವುದು ಹದಿಹರೆಯದ ಯುವಜನತೆಯನ್ನು. ಕೋಮುವಾದಿಗಳು, ದ್ವೇಷ ಭಾಷಣಕಾರರು, ಹೆಣಗಳ ಸುತ್ತ ಅಧಿಕಾರವನ್ನು ಕಬಳಿಸಲು ಹೊಂಚು ಹಾಕುತ್ತಿರುವವರ ಫೀಡಿಂಗ್  ಆಫ್ ವೈಲೆನ್ಸ್ ನ ಜೊತೆಗೆ ಸಿನಿಮಾಗಳಲ್ಲೂ ಹಿಂಸೆಯ ಅತಿ ವೈಭವೀಕರಣ, ಕ್ರಿಮಿನಲ್  ಜಗತ್ತಿನ ಭೂಗತಪಾತಕಿಗಳನ್ನು ಮೆರೆಸುವ ನೂರಾರು ಸಿನಿಮಾಗಳು ಮತ್ತದರ ಹಿಂಸಾತ್ಮಕ ಕಥನಗಳು ಸಹ ತಮ್ಮ ಟಾರ್ಗೆಟ್ ಆಡಿಯನ್ಸ್ ಆಗಿ ಇಟ್ಟುಕೊಂಡಿರುವುದು ಇದೇ ಹದಿಹರೆಯದ ಗುಂಪನ್ನೇ. ಸೈಕಾಲಜಿಯ ಹಿನ್ನೆಲೆಯಲ್ಲಿ ನೋಡುವುದಾದರೆ ನಿರ್ದಿಷ್ಟವಾಗಿ ಈ ವಯಸ್ಸಿನ ಯುವ ಜನತೆ ಹೆಚ್ಚಾನೆಚ್ಚು ಹಿಂಸೆಯತ್ತ ಆಕರ್ಷಿತವಾಗುತ್ತಿರುತ್ತದೆ.

ಮೂಲತಃ ಮನುಷ್ಯನೇ ಹಿಂಸಾ ಪ್ರೇಮಿಯಾಗಿರುವಾಗ, ಎಲ್ಲರೊಳಗೂ ಒಂದು ಕ್ರೂರ ಮೃಗ ಅವಕಾಶಗಳಿಗೋಸ್ಕರ ಹೊಂಚು ಹಾಕುತ್ತಾ ಕುಳಿತಿರುತ್ತದೆ. ಅದರಲ್ಲೂ ಹದಿಹರಿಯದ ಸಮಯದಲ್ಲಿ ಈ ಮೃಗ ಅತಿ ಹೆಚ್ಚು ಜಾಗೃತವಾಗಿರುತ್ತದೆ. ಈ ಸಂದರ್ಭದಲ್ಲಿ ಹಿಂಸೆಯ ಹಸಿವನ್ನು ನೀಗಿಸುವವರೇ ದ್ವೇಷ  ಭಾಷಣಕಾರರು ಮತ್ತು ಹಿಂಸಾತ್ಮಕ ಚಲನಚಿತ್ರಗಳು. ಒಬ್ಬನೇ ನಾಯಕ ನೂರಾರು ಜನರನ್ನು ಬಡಿದುರುಳಿಸುವ, ಲಾಂಗ್ ಮತ್ತು ಕತ್ತಿಗಳನ್ನು ಹಿಡಿದು ಹೊಡೆದಾಡುವ, ದೈತ್ಯಗನ್ ಗಳನ್ನು ಬಳಸಿ ಸಿಕ್ಕಸಿಕ್ಕವರನ್ನು ಕೊಲ್ಲುವ, ತೆರೆಯ ಮೇಲೆ ರಕ್ತದ ಒಕುಳಿಯನ್ನೇ ಹರಿಸುವ ಹೀರೋಗಳು, ಮತ್ತು ಇಂಥದ್ದೇ  ರಕ್ತಸಿಕ್ತ ಕಥೆಗಳು ಹೆಚ್ಚಾದಂತೆ ಹದಿಹರಿಯದವರ ಒಳಗಿನ ಹಿಂಸೆಯ ಹಸಿವಿಗೆ ಇದು ಆಹಾರವಾಗಿಯೂ ಪರಿವರ್ತನೆಯಾಗಿದೆ. ಇಂಥ ಹಿಂಸಾತ್ಮಕ ಸಿನಿಮಾಗಳ ಮೂಲಕ ತಾವು ನಿಜ ಜೀವನದಲ್ಲಿ ಮಾಡಲು ಸಾಧ್ಯವಿಲ್ಲದ ಹಿಂಸೆಯನ್ನು ಭ್ರಮ  ಲೋಕದಲ್ಲಿ ಈ ವರ್ಗ ಅನುಭವಿಸುತ್ತಿದೆ, ಆನಂದಿಸುತ್ತಿದೆ. ಇಂಥ ಹಿಂಸೆಯ  ಹಸಿವು ನೀಗಿಸುವ ಚಲನಚಿತ್ರಗಳೇ ಹೆಚ್ಚೆಚ್ಚು ಹಿಟ್ ಆಗಿ ಹಿಂಸಾ ವಿನೋದಿಗಳನ್ನು ಹುಟ್ಟು ಹಾಕುತ್ತಿವೆ.

 ಸ್ವಲ್ಪ ಸೂಕ್ಷ್ಮವಾಗಿ ಈ ಬೆಳವಣಿಗೆಯನ್ನು ಅವಲೋಕಿಸಿದರೆ ಹಿಂಸಾತ್ಮಕ ಚಿತ್ರಗಳ ನಾಯಕರನ್ನು ಆರಾಧಿಸುವ ಅಭಿಮಾನಿಗಳು ಫ್ಯಾನ್ಸ್ ಗಳು ಕ್ಯಾಸ್ಟ್ ಮತ್ತು ಕ್ಲಾಸ್ ಎರಡು ಹಿನ್ನೆಲೆಯಲ್ಲಿ ತಳ ಸಮುದಾಯವೇ ಆಗಿರುತ್ತದೆ. ಲೋಯರ್ ಮಿಡಲ್ ಕ್ಲಾಸ್ ಮತ್ತು ಬಡತನದ ವರ್ಗದ ಹದಿವಯಸ್ಸಿನವರೇ ಈ ಹಿಂಸಾತ್ಮಕ ಚಿತ್ರಗಳ ಖಾಯಂ ವೀಕ್ಷಕರು. ಹಿಂಸೆಯನ್ನು ವೈಭವೀಕರಿಸುವ, ಹೆಣ್ಣನ್ನು ಹುಡುಗಿಯರನ್ನು ತುಚ್ಚೀಕರಿಸುವ ಎಲ್ಲಾ ಮೊದಲ ಪಾಠಗಳನ್ನು ಈ ಹುಚ್ಚು ಫ್ಯಾನ್ಸ್ ಗಳು ಸಿನಿಮಾದಿಂದಲೇ ಕಲಿಯುತ್ತಿದ್ದಾರೆ. ಇದು ಗೊತ್ತಿದ್ದು ಸಹ ಸಿನಿಮಾ ನಟರು ಹಿಂಸಾತ್ಮಕ ಚಿತ್ರಗಳನ್ನು ಮಾಡುತ್ತಲೇ ಇದ್ದಾರೆ. ಸಮಾಜದೊಳಗೆ ಹಿಂಸೆಯ ಬೀಜಗಳನ್ನು ಬಿತ್ತುತ್ತಲೇ ಇದ್ದಾರೆ.

 ಒಮ್ಮೆ ಹಿಂತಿರುಗಿ ನೋಡಿದರೆ ಹಿಂದೆಯೂ ಸಿನಿಮಾನಟರಿಗೆ ಫ್ಯಾನ್ಸ್ ಗಳಿದ್ದರೂ ಅವರ ನಡುವೆ ಆರೋಗ್ಯಕರವಾದ ಚರ್ಚೆ, ಸ್ಪರ್ಧೆ ಇದ್ದೇ ಇತ್ತು. ಹೆಚ್ಚೆಂದರೆ ತಮ್ಮ ಎದುರಾಳಿ ನಟರನ್ನು ಆಡಿಕೊಳ್ಳುವುದು ತಮ್ಮ ನಟರ ಸ್ಟಾರ್ ಕಟ್ಟಿ ಚಿತ್ರದ ಮಂದಿರದ ಮುಂದೆ ಕಟ್ಟಿ ಸಂಭ್ರಮಿಸುವುದು, ಚಿತ್ರಮಂದಿರದೊಳಗೆ ಸಂಭ್ರಮದ ವಾತಾವರಣ ಸೃಷ್ಟಿಸುವುದು ಇಷ್ಟಕ್ಕೆ ಫ್ಯಾಂಡಮ್ ಮುಗಿಯುತ್ತಿತ್ತು. ಆದರೆ ಈಗ ಕಾಲ ಕೆಟ್ಟದಾಗಿ ಬದಲಾಗಿದೆ. ಎಲ್ಲರ ಕೈಯಲ್ಲೂ ಮೊಬೈಲ್ಗಳಿವೆ, ಸಾಮಾಜಿಕ ಜಾಲತಾಣವಿದೆ ಯಾರ ಮೇಲಾದರೂ ಸರಿ, ಹೇಗೆ ಬೇಕಾದರೂ ಸರಿ ದಾಳಿ ಮಾಡಿ ಬಚಾವಾಗಿ ಬಿಡಬಹುದು ಎಂಬ ಅವಕಾಶವೂ ಹೇರಳವಾಗಿದೆ.

ಮೊದಲೆಲ್ಲ ಸ್ಟಾರ್ ನಟರ ಅಭಿಮಾನಿ ಸಂಘಗಳು ಇದ್ದವು. ಅವರು ತಮ್ಮ ನಟನ ಹುಟ್ಟಿದ ಹಬ್ಬ ಹೊಸ ಚಿತ್ರದ ಬಿಡುಗಡೆಯ ಸಮಯದಲ್ಲಿ ಅನಾಥಾಶ್ರಮಗಳಿಗೆ ಅನ್ನ ಸಂತರ್ಪಣೆ ಮಾಡುವುದು, ನಿರ್ಗತಿಕರಿಗೆ  ಸಹಾಯ ಮಾಡುವುದು, ರಕ್ತದಾನ ಮಾಡುವುದು, ಹೀಗೆಲ್ಲಾ ತಮ್ಮ ಅಭಿಮಾನವನ್ನು ತೋರ್ಪಡಿಸಿಕೊಳ್ಳುತ್ತಿದ್ದರು. ಸಮಕಾಲಿನ ಟ್ರೆಂಡ್ ಇವೆಲ್ಲ ಫ್ಯಾಂಟಸಿಗಳನ್ನು ದಾಟಿಕೊಂಡು ತೀರ ಹಿಂಸೆಯೊಳಗೆ ಮುಳುಗಿ ಹಿಂಸೆಯೊಳಗೆ  ಈಜುವಂತ ಸ್ಥಿತಿಗೆ ತಲುಪಿದೆ. ಆ ನಟರ ಈ ನಟರ ಅಭಿಮಾನಿಗಳು ಮಾತು ಮಾತಲ್ಲೇ ಹೊಡೆದಾಡಿ ಜೀವ ತೆಗೆಯುವ ಮಟ್ಟಕ್ಕೂ ಹೋಗಿದೆ, ಇವೆಲ್ಲವೂ ಸಹ ಅತ್ಯಂತ ತುತ್ತತುದಿಯನ್ನು ಮುಟ್ಟಿದ್ದು ಸ್ಟಾರ್ ನಟರು ತಮ್ಮದೇ ಆದ ಪಾನ್ ಪೇಜ್ ಗಳನ್ನು ದುಡ್ಡು ಕೊಟ್ಟು ಪ್ರಮೋಟ್ ಮಾಡುವ ಸಾಕು ದಾಳಿಕೋರರನ್ನು ಹುಟ್ಟು ಹಾಕಿದ ನಂತರವೇ.

 ಜಿಲ್ಲೆ ತಾಲೂಕು ಹೋಬಳಿ ಗ್ರಾಮಮಟ್ಟದಲ್ಲಿಯೂ ಸಹ ನಟನ ಅಭಿಮಾನಿ ಪೇಜ್ ಗಳು ಓಪನ್ ಆಗುತ್ತವೆ, ಇವೆಲ್ಲವನ್ನೂ ಒಂದು ಟೀಮ್ ಹ್ಯಾಂಡಲ್ ಮಾಡುತ್ತದೆ, ಈ ಈ ಟೀಮ್ ಗೆ ಸ್ಟಾರ್ ನಟರು ಹಣಕಾಸಿನ ನೆರವು ಕೊಟ್ಟು ಸಾಕಿಕೊಳ್ಳುತ್ತಾರೆ. ಇವರ ಕೆಲಸ ಇಷ್ಟೇ, ದಿನಬೆಳಗಾದರೆ ನಿರ್ದಿಷ್ಟ ನಟನನ್ನು ಹೊಗಳುವ, ಸಹಸ್ಪರ್ಧಿ ನಟ ನಟಿಯರನ್ನು ಹೀಯಾಳಿಸುವ ಕೆಟ್ಟ ಕೊಳಕ  ಬೈಯುವ ಅಪಮಾನಿಸುವ ಪೋಸ್ಟ್ಗಳನ್ನು ಸಾಮೂಹಿಕವಾಗಿ ಹರಡುವುದು. ಅಭಿಮಾನಿಗಳ ತಲೆಗೆ ತುಂಬಿಸುವುದು. ಇದು ಕೆಲವು ವರ್ಷಗಳ ಹಿಂದೆ ರಾಜಕೀಯ ನಾಯಕರಿಗಷ್ಟೇ ಸೀಮಿತವಾಗಿತ್ತು, ಈಗ ನಟ ನಟಿಯರಿಗೂ ಈ ರೋಗ ವಕ್ಕರಿಸಿದೆ.

ಊರೂರುಗಳಲ್ಲಿ ಆ ನಟನ ಅಭಿಮಾನಿ ಈ ನಟನ ಅಭಿಮಾನಿ ಎಂದು ಬಡಿದಾಟಗಳಾಗುವ ಸಂದರ್ಭಗಳು ಹೆಚ್ಚಾಗುತ್ತಿವೆ. ಬಹಳಷ್ಟು ಕಡೆ ಇವು ಸಾ*ವುಗಳಲ್ಲೂ ಅಂತ್ಯವಾಗಿದ್ದಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿಯ ಪ್ರಕರಣವು ಕೂಡ ಇದರ ಒಂದು ಮುಂದುವರಿದ ಭಾಗ ಎಂದು  ಹೇಳಬಹುದು. ಇಲ್ಲಿ ಜೀವ ಕಳೆದುಕೊಂಡ ರೇಣುಕಾ ಸ್ವಾಮಿಯು ಸ್ಟಾರ್ ನಟನ ಅಭಿಮಾನಿ, ತನ್ನ ನೆಚ್ಚಿನ ನಟನ ಸಂಸಾರದೊಳಗೆ ಹುಳಿ ಹಿಂಡಿದ ಇನ್ನೊಬ್ಬಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕುವ ಮೂಲಕ ನಾನು ಆರಾಧಿಸುವ ನಟ ಮತ್ತು ಅವನ ಗ್ಯಾಂಗ್ ನಿಂದಲೇ ಈ ಹುಚ್ಚಾಟದ ಅಭಿಮಾನಿ  ಜೀವ ಕಳೆದುಕೊಂಡಿದ್ದಾನೆ.

 ಸಿನಿಮಾ ಮೊದಲೇ ಕಲ್ಪನಾ ಲೋಕ. ಇದರೊಳಗಿರುವ ನಟ ನಟಿಯರಿಗೂ ಬಹಳಷ್ಟು ಭ್ರಮೆಗಳಿವೆ. ತಮ್ಮ ಸುತ್ತ ಒಂದು ಸೈನ್ಯವಿದೆ ಎಂಬ ಅಹಂ ಇದೆ. ಈ ಒಂಬತ್ತನೇ ದಿಂದಲೇ ತಮ್ಮ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ತುಚ್ಚವಾಗಿ ಅಸಹ್ಯವಾಗಿ ಅನಾಗರಿಕವಾಗಿ ವರ್ತಿಸಿದರೂ ಅವರನ್ನು ನಿಯಂತ್ರಿಸುವ ಒಂದು ಹೇಳಿಕೆಯನ್ನು ಕೊಡಲಾಗದಷ್ಟು ಇವರು ದಪ್ಪ ಚರ್ಮದವರು. ತಾವು ಸಹ ರಕ್ತ ಮಾಂಸ ಮೂಳೆ ಮಜ್ಜೆಗಳ ಮಿಶ್ರಣವಾದ ಮನುಷ್ಯ ಕುಲ ಎಂಬುದನ್ನೇ ಈ ಕಲ್ಪನಾ ಲೋಕದ ಮೂರ್ಖರು  ಮರೆತುಬಿಟ್ಟಿದ್ದಾರೆ. ತಾವು  ಹಾಳಾಗಿರುವುದಲ್ಲದೆ ತಮ್ಮ ಅಭಿಮಾನಿಗಳನ್ನು ಹಾಳು ಮಾಡುತ್ತಿರುವ ಕೆಟ್ಟ ಚಾಳಿಯ ನಟ ವರ್ಗ ಇಂದಿನದ್ದು.

ಈಗೇನಾಗಿ ಹೋಗಿದೆ ನೋಡಿ, ಯಾರದೋ ಮಕ್ಕಳು ಯಾವುದೋ ತಂದೆ ತಾಯಿಯ ಮಕ್ಕಳು ಜೀವನದಲ್ಲಿ ತಾವು ಎಂದೂ ನೋಡಿರದ, ಜೊತೆಗಿರದ, ಕಷ್ಟಕ್ಕೆ ಆಗದ ಸ್ಟಾರ್ ಗಳ ಆರಾಧಕರಾಗಿ, ತಮ್ಮ ಭವಿಷ್ಯವನ್ನು ಮರೆತು ತಮ್ಮನ್ನು ಹೆತ್ತವರ ನಿರೀಕ್ಷೆಗಳಿಗೆ ಮಣ್ಣು ಹಾಕಿ ಹಿಂಸಾತ್ಮಕ ಚಿತ್ರಗಳನ್ನು ಆನಂದಿಸುತ್ತಾ ಸಮಯ ಸಿಕ್ಕಾಗಲೆಲ್ಲ ಅಪರಾಧಗಳಿಗೆ ಇಳಿಯುತ್ತಾ ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಹಿಂಸೆ ವೈಭವೀಕರಣವನ್ನು ಯಾವತ್ತು ಸ್ಟಾರ್ ನಟರು ಕೈ ಬಿಡುತ್ತಾರೋ ಆವತ್ತು ಮಾತ್ರ ಅವರ ಅಭಿಮಾನಿಗಳು ಚೆನ್ನಾಗಿರುತ್ತಾರೆ. ಸಮಾಜವು ಚೆನ್ನಾಗಿರುತ್ತದೆ.

– ಪ್ರದೀಪ್ ರಾಚಯ್ಯ

ಇದನ್ನೂ ಓದಿ

More articles

Latest article