Thursday, July 25, 2024

ಅವಳೇ ಹಾಕಿಕೊಂಡ ಬಂಧನದಿಂದ ಹೊರ ಬಂದಳು..

Most read

ಗೃಹ ಬಂಧನದ ಅನುಭವ ಕೆಲವು ರೀತಿಯ ಕೇಸುಗಳಲ್ಲಿ ಮಾತ್ರ ಹೆಚ್ಚಾಗಿ ಆಗುತ್ತದೆ. ಅಂತರ್ಜಾತಿ ಪ್ರೇಮ, ಸಲಿಂಗ ಪ್ರೇಮ, ಅಂತರ್ಧರ್ಮದ ಪ್ರೇಮ, ಮದುವೆ ಬೇಡವೆನ್ನುವ ಮಹಿಳೆಯರು, ಇಲ್ಲಾ ವಿದ್ಯಾಭ್ಯಾಸ ಮುಂದುವರೆಸುವ ಹಠದಿಂದ ಮನೆಯಲ್ಲಿ ಸಮಸ್ಯೆಯಾದಂತ ಮಹಿಳೆಯರು ಇತ್ಯಾದಿಗಳಲ್ಲಿ. ಕೆಲವೊಮ್ಮೆ ಚೈಲ್ಡ್ ಸೆಕ್ಷುವಲ್ ಅಬ್ಯೂಸ್ ನಂತಹ ಕೇಸುಗಳಲ್ಲಿ ಸಂತ್ರಸ್ತರನ್ನು ಕೂಡ ಮನೆಯಲ್ಲಿ ಕೂಡಿ ಹಾಕಿ ಆಗಿರುವ ದೌರ್ಜನ್ಯಕ್ಕೆ ಸಂತ್ರಸ್ತರೇ ಹೊಣೆ ಎಂಬಂತೆ ನಡೆದುಕೊಳ್ಳುವ ಸಂದರ್ಭಗಳೂ ಇವೆ. ಬಹಳ ವಿರಳವಾಗಿ ಅಂತರಲಿಂಗ ವ್ಯತ್ಯಾಸದ ವ್ಯಕ್ತಿಗಳನ್ನು ಕಳಂಕ ಅಪಮಾನದ ಹೆಸರಿನಲ್ಲಿ ಮನೆಯಲ್ಲಿ ಮುಚ್ಚಿಡುತ್ತಾರೆ.

ಇವು ಕಣ್ಣಿಗೆ ಕಾಣುವ ಬಂಧನಗಳು. ಆದರೆ ನಮ್ಮ ಮಾನಸಿಕ ಆರೋಗ್ಯದ ಕೆಲವು ಸಮಸ್ಯೆಗಳಿಂದ ನಮ್ಮೊಳಗೆ ನಾವು ಬಂಧನಕ್ಕೊಳಗಾಗುತ್ತೇವೆ. ಆ ಅವಸ್ಥೆ ಎಲ್ಲದ್ದಕ್ಕಿಂತ ಹೀನಾಯ. ಹಾಗೆ ನೋಡಿದರೆ ಈ ಪರಿಸ್ಥಿತಿಗಳನ್ನು ಬೇರೆ ಯಾವುದಕ್ಕೇ ಹೋಲಿಸಲು ಕಷ್ಟ. ಏಕೆಂದರೆ ಹಲವು ಬಾರಿ ಮಾನಸಿಕ ಆರೋಗ್ಯದ  ಸಮಸ್ಯೆಗಳು ಹುಟ್ಟಿಕೊಳ್ಳುವುದೇ ಜನರನ್ನು ಇಂತಹ ಪರಿಸ್ಥಿತಿಗಳಿಗೆ ತಳ್ಳಿದಾಗ.

ನಾನು ಕ್ರೈಸಿಸ್ ಇಂಟರ್ವೆನ್ಷನ್ ಮಾಡುತ್ತಿದ್ದಾಗ ಇಬ್ಬರು ಮಹಿಳಾ ಸಲಿಂಗ ಪ್ರೇಮಿಗಳ ವಿಷಯ ಗೊತ್ತಾಗಿ ಒಬ್ಬರ ಮನೆಯವರು ಆ ಮಹಿಳೆಯನ್ನು 4 ತಿಂಗಳು ಮನೆಯಲ್ಲಿ ಸೆರೆ ಇಟ್ಟು ಅವರನ್ನು ಹೊರ ಜಗತ್ತಿನ ಸಂಪರ್ಕಕ್ಕೆ  ಬರದಂತೆ ಮಾಡಿದ್ದರು. ಆ ಇನ್ನೊಬ್ಬ ಮಹಿಳೆ ಈ ವಿಷಯವನ್ನು ನಮಗೆ ತುಂಬಾ ತಡವಾಗಿ ತಿಳಿಸಿದರು. ನಾವು (ನಾನು ಸುನಿಲ) ಇಬ್ಬರೂ ಎಷ್ಟು ಪ್ರಯತ್ನಿಸಿದರೂ ಇ ಮೇಲ್, ಫೋನ್, ಮೆಸೆಂಜರ್ ಯಾವುದರಲ್ಲಿಯೂ ಸಂಪರ್ಕಿಸಲು ಸಾಧ್ಯವಾಗದಾಗ ಕಡೆಗೆ ಅವರ ಊರಿಗೇ ಹೋಗಲು ತೀರ್ಮಾನಿಸಿ ಹೋದೆವು. ಅಲ್ಲಿನ ಕೆಲವು ಮಾನವ ಹಕ್ಕುಗಳ ಹೋರಾಟಗಾರರನ್ನು ಜತೆ ಸೇರಿಸಿಕೊಂಡು ಆ ಮಹಿಳೆಯ ಕಡೆಯವರ ಕಛೇರಿಗೆ ಹೋದಾಗ ಅಲ್ಲೊಬ್ಬರು ವಕೀಲರು ಭೇಟಿಯಾದರು. ವಕೀಲರಿಗೆ ನಾವು ಯಾವುದೋ ಒಂದು ಕೇಸ್ ತಂದಂತೆ ಭಾಸವಾಗಿ ವಿಷಯ ಕೇಳಿದೊಡನೆ “ನಾನು ಕರೆಸ್ತೀನಿ ಯೋಚನೆ ಮಾಡಬೇಡಿ ಎಂದು ಹೇಳಿ” ಆ ಮಹಿಳೆಯ ಮನೆಗೆ ಫೋನ್ ಮಾಡಿದರು. ಫೋನ್ ನಲ್ಲಿ ದನಿ ಕೇಳಿದೊಡನೆ ಫೋನಿಟ್ಟ ವಕೀಲರು ಕಥೆಯನ್ನೇ ಬದಲಾಯಿಸಿದರು. ಆ ಮಹಿಳೆ ಮದುವೆ ಮಾಡಿಕೊಂಡು ದುಬೈಗೆ ಹೋಗಿ ಸಂಸಾರ ನಡೆಸುತ್ತಿದ್ದಾರೆ, ಅವರಿಗೆ ಇಂತಹ ರೋಗವೆಲ್ಲಾ ಇಲ್ಲ ಎಂದರು. ಅಲ್ಲಿಯವರೆಗೂ ಮಾನವ ಹಕ್ಕು ಪ್ರೇಮದ ಹಕ್ಕು ಎಂದೆಲ್ಲಾ ಮಾತಾಡಿದವರಿಗೆ ಒಂದು ಕ್ಷಣದ ಕರೆಯಲ್ಲಿ ಸಲಿಂಗ ಪ್ರೇಮ ರೋಗವಾಯಿತು. ಆ ಕರೆಯ ನಂತರ ಅವರು ನಮ್ಮನ್ನು ಇನ್ನೇನು ಪೊಲೀಸರಿಗೆ ಒಪ್ಪಿಸುವವರಿದ್ದರು. ಇದು ಯಾವ ಕಾನೂನೂ, ಬದಲಾದ ಮನಸ್ಥಿತಿಗಳ ಕಾಲ ಅಲ್ಲ. ಆ ವಕೀಲರಿಗೆ ನಾನು, ಸುನಿಲ್ ಮತ್ತೆ ವಯಸ್ಸಾದ ಮಾನವ ಹಕ್ಕುಗಳ ಹೋರಾಟಗಾರರು ತೀವ್ರವಾದಿಗಳಂತೆ ಕಂಡೆವು.

ಆದರೆ, ನಿಜದಲ್ಲಿ ಆ ಮಹಿಳೆ ಅಲ್ಲೇ ಇದ್ದರು. ಅವರ ಒಲವು ಮತ್ತೊಬ್ಬ ಮಹಿಳೆಯೇ ಎಂದು ಎಷ್ಟು ಅವರು ಗೋಗರೆದರೂ ಬಿಡದೆ ಬಲವಂತವಾಗಿ ಗಂಡಸಿನೊಂದಿಗೆ ಮದುವೆ ಮಾಡಿಸಿದರು. ಒಂದು ಬಂಧನದಿಂದ ಇನ್ನೊಂದಕ್ಕೆ ಜಾರಿದ ಮಹಿಳೆ ಕೆಲವೇ ದಿವಸಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಹೀಗೆ ಒಬ್ಬ ದಲಿತ ಕ್ರಿಶ್ಚಿಯನ್ ಟ್ರಾನ್ಸ್ ಪುರುಷ ತನಗಿಂತ ಶ್ರೀಮಂತ ಮತ್ತು ಶೋಷಣೆ ಮಾಡುವ ಜಾತಿಗೆ ಸೇರಿದ ಹುಡುಗಿಯನ್ನು ಪ್ರೇಮಿಸಿದ ತಪ್ಪಿಗೆ, ಅವನ ಬಟ್ಟೆ ಬಿಚ್ಚಿ ಲೈಂಗಿಕ ಕಿರುಕುಳ ಕೊಟ್ಟು ಸಮಾಜದ ಮುಂದೆ ಬೆತ್ತಲೆ ನಡೆಸಿ ತಲೆ ಕೂದಲು ಬೋಳಿಸಿದರು. ಆ ಆಘಾತ, ಅವಮಾನ, ಸಮಾಜದ ಮುಂದೆ ಅವನ  ದೇಹ ಮಾತ್ರವಲ್ಲ ಅವನ ಮನಸ್ಸು, ಅವನ ಜೆಂಡರ್ ಘನತೆಯನ್ನೂ ಚೂರು ಚೂರಾಗಿಸಿತು. ಅವನು ತನ್ನ ಪ್ರತಿಭಟನೆಯನ್ನು ಮೌನವಾಗಿ ಸಲ್ಲಿಸಿ ತಾನೇ ಜೈಲಿಗೆ ಹೋದ. ಜೈಲು ಸೇರಿದ್ದು ತನ್ನ ಜೆಂಡರನ್ನು ಕಳ್ಳತನ  ಮಾಡಿದ್ದಕ್ಕೆ. ನಾವೆಷ್ಟು ಅವನನ್ನು ಜೈಲಿನಿಂದ ಬಿಡಿಸಲು ಪ್ರಯತ್ನಿಸಿದರೂ ಅವನು ಸಹಕರಿಸದೆ ಜಗತ್ತಿನ ಮೇಲೆ ಸೇಡು ತೀರಿಸಲು ತಾನೆ ಜೈಲಿಗೆ ಹೋದ.

ತೋಳು ಬಂಧನಕ್ಕೂ

ಸೆರೆಗೂ

ಜೈಲಿಗೂ

ಬಂದ್ ಮಾಡುವ  ಎಲ್ಲಾ

ರಾತ್ರಿಗಳಿಗೂ

ಇರುವ ನಾರು

ಕೊಳೆತು, ಮನಸು

ಮರಗಟ್ಟಿಸುವಾಗ

ಮಧುಮೇಹ ಹರಡುವ

ತಡೆ, ರಕ್ತನಾಳಗಳಲಿ

ಹರಿದು

ಹೃದಯವನ್ನೂ

ಬಂಧಿಸಿ

ಇರುವಂಥಾ ಅನಾಥ ಕ್ಷಣಗಳಿಗೆ

ಸಾವು ಮುಕ್ತಿಯಾದರೂ

ಸಾವಿಗೆ ಮಾತ್ರ

ಗುಂಪು ಸೇರುತ್ತದೆ.

ಅಷ್ಟಾದರೂ

ಅನಾಥ ಕ್ಷಣಗಳಿಗೆ

ಯಾರೂ ಇಲ್ಲ

ಸ್ವ ಬಂಧನ ಮಾತ್ರ.

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article