ಗಾಂಧಿ ಜಯಂತಿ ವಿಶೇಷ
ಗಾಂಧಿ ಪೊರಕೆ ಹಿಡಿದದ್ದು ರಸ್ತೆ ಬದಿಯ ತ್ಯಾಜ್ಯವನ್ನು ಗುಡಿಸಿಹಾಕಲು ಅಲ್ಲ ಅಥವಾ ಶೌಚವನ್ನು ತೆಗೆದುಹಾಕಲೂ ಅಲ್ಲ. ಗಾಂಧಿ ಸ್ವಚ್ಛತೆ ಬಯಸಿದ್ದು ಭಾರತೀಯರ ಹೃದಯದಲ್ಲಿ, ಚಿಂತನೆಗಳಲ್ಲಿ ಹಾಗೂ ಬೌದ್ಧಿಕತೆಯಲ್ಲಿ – ನಾ ದಿವಾಕರ, ಚಿಂತಕರು.
ವಸಾಹತುಶಾಹಿಯ ದಾಸ್ಯದಿಂದ ವಿಮೋಚನೆ ಪಡೆದ ಭಾರತ 77 ವರ್ಷಗಳ ಸ್ವತಂತ್ರ ಆಳ್ವಿಕೆಯನ್ನು ಪೂರೈಸಿದೆ. 74 ವರ್ಷಗಳ ಗಣತಂತ್ರ ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾಪಾಡಿಕೊಂಡು ಬಂದಿದೆ. ಭಾರತದ ವಿಮೋಚನೆಯ ಹಿಂದೆ ಇದ್ದಂತಹ ಧೀಮಂತ ಚಿಂತಕರು ಮತ್ತು ಹೋರಾಟಗಾರರ ನಡುವೆ ಎದ್ದು ಕಾಣುವ, ಸದಾ ಕಾಡುವ ಹಾಗೂ ವಿಭಿನ್ನ ಕಾರಣಗಳಿಗಾಗಿ ತನ್ನ ಪ್ರಸ್ತುತತೆಯನ್ನು ಇಂದಿಗೂ ಕಾಪಾಡಿಕೊಂಡಿರುವ ವ್ಯಕ್ತಿಗಳಲ್ಲಿ ಗಾಂಧಿ ಒಬ್ಬರು. ರಾಜಕೀಯವಾಗಿ ಗಾಂಧಿ ಎಂಬ ಒಂದು ಶಕ್ತಿ ಪ್ರಸ್ತುತ ರಾಜಕಾರಣದಲ್ಲಿ ವಿರೋಧಾಭಾಸವಾಗಿಯೇ (Paradoxical) ಕಾಣುತ್ತದೆ.
ಮತ್ತೊಂದೆಡೆ ಗಾಂಧಿ ಅನುಸರಿಸಿದ ಮತ್ತು ಪ್ರತಿಪಾದಿಸಿದ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯನ್ನು ಎಂದೋ ಮರೆತುಹೋಗಿರುವ ಭಾರತದ ಅಧಿಕಾರ ರಾಜಕಾರಣದಲ್ಲಿ ಆಡಳಿತಾರೂಢ ಪಕ್ಷಗಳ ವಿರುದ್ಧ ಅಥವಾ ರಾಜಕೀಯ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗಲೆಲ್ಲಾ, ತಮ್ಮ ʼ ಪ್ರಾಮಾಣಿಕತೆʼಯ ದನಿಗೆ ಒಂದು ಸಾರ್ಥಕತೆಯನ್ನು ಪಡೆದುಕೊಳ್ಳುವ ಸಲುವಾಗಿ ರಾಜಕೀಯ ಪಕ್ಷಗಳು ಗಾಂಧಿ ಪ್ರತಿಮೆಯ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತವೆ. ಈ ಸಾಂಕೇತಿಕ ಮಾನ್ಯತೆಯ ಹೊರತಾಗಿ, ತಾತ್ವಿಕ ನೆಲೆಯಲ್ಲಿ ಗಾಂಧಿ ವರ್ತಮಾನದ ಅಧಿಕಾರ ರಾಜಕಾರಣದ ಅಂಗಳದಲ್ಲಿ ಎಷ್ಟರ ಮಟ್ಟಿಗೆ ಪ್ರಸ್ತುತ ಎನಿಸಿಕೊಳ್ಳುತ್ತಾರೆ ?
ವಿರೋಧಾಭಾಸಗಳ ನಡುವೆ ಗಾಂಧಿ
ನವ ಉದಾರವಾದ ಮತ್ತು ಬಂಡವಾಳಶಾಹಿ ಆರ್ಥಿಕತೆಯಲ್ಲಿ ಕಾರ್ಪೋರೇಟ್ ಮಾರುಕಟ್ಟೆ ಭಾರತದ ಆರ್ಥಿಕತೆಯ ಸಾರಥ್ಯ ವಹಿಸಿರುವ ಸಂದರ್ಭದಲ್ಲಿ, ಬಹುಸಂಖ್ಯಾವಾದ-ಹಿಂದೂ ರಾಷ್ಟ್ರೀಯತೆಯ ನೆಲೆಯಲ್ಲಿ ಬಲಪಂಥೀಯ ರಾಜಕಾರಣ ದೇಶದ ಸಾಮಾಜಿಕ-ಸಾಂಸ್ಕೃತಿಕ ರಥವನ್ನು ಎಳೆಯುತ್ತಿರುವ ಸನ್ನಿವೇಶದಲ್ಲಿ, ಗಾಂಧಿ ಒಂದು ಪ್ರತಿಮೆಯಾಗಿ ಕಂಗೊಳಿಸುವುದು ವಿಡಂಬನೆಯಾಗಿಯೇ ಕಾಣಲು ಸಾಧ್ಯ. ಏಕೆಂದರೆ ಗಾಂಧಿ ಕನಸಿದ ಗ್ರಾಮ ಭಾರತವಾಗಲೀ ಅಥವಾ ಸಾರ್ವಜನಿಕ ಜೀವನದಲ್ಲಿ ಮಹಾತ್ಮರು ಕಟ್ಟಿದ ಸಾಂಸ್ಕೃತಿಕ ಕೋಟೆಯನ್ನಾಗಲೀ, ಡಿಜಿಟಲ್ ಭಾರತದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯು ಗ್ರಾಮ ಭಾರತವನ್ನು ಸಾಮಾಜಿಕವಾಗಿ ಭಂಗಗೊಳಿಸಿರುವುದೇ ಅಲ್ಲದೆ, ಆರ್ಥಿಕವಾಗಿಯೂ ಶಾಶ್ವತ ಪರಾವಲಂಬಿಯನ್ನಾಗಿ ಮಾಡುತ್ತಿದೆ. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳದ ಗ್ರಾಮೀಣ ಜನಜೀವನವು ತನ್ನ ಸಾಂಪ್ರದಾಯಿಕ ಸಂಕೋಲೆಗಳಿಂದ ಬಿಡಿಸಿಕೊಳ್ಳಲಾಗದೆ ಪ್ರಾಚೀನ ಮನಸ್ಥಿತಿಗೇ ಅಂಟಿಕೊಂಡಿರುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯಲಾಗುವುದಿಲ್ಲ. ಆದರೆ ಇದೇ ಸಂದರ್ಭದಲ್ಲಿ ಗಾಂಧಿ ಭಾರತದ ಗ್ರಾಮೀಣ ಜನಜೀವನದಲ್ಲೇ ದೇಶದ ಭವಿಷ್ಯವನ್ನು ಕಂಡಿದ್ದರು. ಅಂಬೇಡ್ಕರ್ ಅವರನ್ನು ಕಾಡಿದ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯಗಳು ಗಾಂಧಿಯವರನ್ನು ಕಾಡಲಿಲ್ಲ. ಬದಲಾಗಿ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ತನ್ನ ಸಾಂಪ್ರದಾಯಿಕ ನೆಲೆಯಲ್ಲಿ ಭದ್ರವಾಗಿ ಕಾಪಾಡುವ ಒಂದು ಶಕ್ತಿಯಾಗಿ ಗಾಂಧಿ ಗ್ರಾಮಭಾರತವನ್ನು ಕಂಡಿದ್ದರು. ಗಾಂಧಿ ಕಂಡ ಗ್ರಾಮದ ಕನಸನ್ನು ವರ್ತಮಾನದಲ್ಲಿ ನಿಂತು ಭೇದಿಸಿದಾಗ ಕಾಣುವುದೇನು ?
ಸಮಾಜ-ಸಂಸ್ಕೃತಿಗಳ ನಡುವೆ ಗಾಂಧಿ
ಭಾರತೀಯ ಸಮಾಜದ ಮೇಲ್ಜಾತಿ ವರ್ಗಗಳು, ಸುಶಿಕ್ಷಿತ ಜನಸಮೂಹಗಳು ತಮ್ಮ ಸಾಂಪ್ರದಾಯಿಕ-ಪ್ರಾಚೀನ ಮನಸ್ಥಿತಿಯನ್ನು ಕಳಚಿ ರೂಪಾಂತರಗೊಳ್ಳುವ ಮೂಲಕ, ಆಧುನಿಕ ಭಾರತಕ್ಕೆ ಹೊಸ ಮಾನವೀಯ ಸ್ಪರ್ಶ ನೀಡುತ್ತವೆ ಎಂಬ ಗಾಂಧಿಯವರ ಭ್ರಮೆ, ವರ್ತಮಾನದಲ್ಲಿ ನಿಂತು ನೋಡಿದಾಗ, ಅತಿರೇಕದ ಭ್ರಾಂತಿ ಎನಿಸಿಬಿಡುತ್ತದೆ. ಇಲ್ಲಿ ತಾತ್ವಿಕವಾಗಿ ಅಂಬೇಡ್ಕರ್ ಗೆಲ್ಲುತ್ತಾರೆ. ಗ್ರಾಮೀಣ ಭಾರತದ ಸಾಂಸ್ಕೃತಿಕ ಸಮನ್ವಯತೆ ಮತ್ತು ಸಾಮಾಜಿಕ ಸೌಹಾರ್ದತೆಗಳ ಎಲ್ಲ ನೆಲೆಗಳನ್ನೂ ಭ್ರಷ್ಟಗೊಳಿಸಿರುವ ಕೋಮುವಾದ, ಮತೀಯವಾದ ಮತ್ತು ಜಾತಿ ಶ್ರೇಷ್ಠತೆಯ ಕಲ್ಪನೆಗಳು, ಗ್ರಾಮ ಭಾರತವನ್ನು ಬಲಪಂಥೀಯ ಬಹುಸಂಖ್ಯಾವಾದದ ಕೋಶಗಳನ್ನಾಗಿ ರೂಪಾಂತರಗೊಳಿಸಿವೆ.
ಆಧುನಿಕೀಕರಣ ಯಾವುದೇ ಒಂದು ಸಮಾಜವನ್ನು ಬೌದ್ಧಿಕವಾಗಿ ಶ್ರೀಮಂತಗೊಳಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಮನುಷ್ಯ ಸಮಾಜ ನಾಗರಿಕತೆಯಲ್ಲಿ ಮುನ್ನಡೆದಂತೆಲ್ಲಾ ತನ್ನ ಪ್ರಾಚೀನತೆಯನ್ನು ಕಳಚಿಕೊಳ್ಳುತ್ತಾ ವಿಕಾಸದತ್ತ ಸಾಗಬೇಕು ಎನ್ನುವುದು ಎಲ್ಲ ದಾರ್ಶನಿಕ ಚಿಂತಕರ ಆಶಯ ಮತ್ತು ಕನಸು. ಗಾಂಧಿ ಸಹ ಇದೇ ಕನಸನ್ನು ಕಂಡವರು, ಕಟ್ಟಿದವರು. ಶ್ರೇಣೀಕೃತ ಸಮಾಜದಲ್ಲಿ ಮೇಲ್ಜಾತಿಗಳ ಮತ್ತು ಉಳ್ಳವರ ಮನಃಪರಿವರ್ತನೆಯಿಂದಲೇ ಕ್ರಾಂತಿಕಾರಕ ಪಲ್ಲಟ ಸಂಭವಿಸುತ್ತದೆ ಎಂಬ ಸರಳೀಕೃತ ಚಿಂತನೆ ಗಾಂಧಿಯವರ ಸೋಲಿಗೆ ಕಾರಣ ಎನ್ನಬಹುದು. ಆದರೆ ಗಾಂಧಿಯವರ ಈ ಸೋಲಿಗೆ ಕಾರಣವಾಗುತ್ತಿರುವ ಆಧುನಿಕ ಸಮಾಜವೇ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕ ನೆಲೆಗಳಲ್ಲಿ ಅವರನ್ನು ಆರಾಧಿಸುವ ನಾಟಕವನ್ನೂ ಆಡುತ್ತಿದೆ. ಗಾಂಧಿಯನ್ನು ಕೊಂದ ಶಕ್ತಿಗಳಿಗೆ ಅವರಲ್ಲಿದ್ದ ಗ್ರಾಮಭಾರತದ ಕಲ್ಪನೆಯಾಗಲೀ ಅಥವಾ ಧರ್ಮದರ್ಶಿತ್ವದ ಔದಾತ್ಯವಾಗಲೀ ಪ್ರಶ್ನೆಯಾಗಿರಲಿಲ್ಲ. ಬದಲಾಗಿ ಗಾಂಧಿ ಬಯಸಿದ ಸಾಮಾಜಿಕ ಸೌಹಾರ್ದತೆ ಮತ್ತು ಎಲ್ಲರನ್ನೊಳಗೊಳ್ಳುವ ಸಾಂಸ್ಕೃತಿಕ ಚಿಂತನೆಗಳು ಮುಖ್ಯವಾಗಿದ್ದವು. ಹಾಗಾಗಿಯೇ 21ನೆಯ ಶತಮಾನದಲ್ಲೂ ಈ ಸೌಹಾರ್ದತೆ ಮತ್ತು ಸಮನ್ವಯತೆಯನ್ನು ವಿರೋಧಿಸುವ ಶಕ್ತಿಗಳೇ ಗಾಂಧಿಯ ಪ್ರತಿಮೆಗೆ ಸಾಂಕೇತಿಕವಾಗಿ ಬಂದೂಕು ಹಿಡಿಯುತ್ತವೆ.
ಅಧಿಕಾರ ರಾಜಕಾರಣ ಮತ್ತು ಗಾಂಧಿ
ಈ ದ್ವಂದ್ವಗಳಾಗಲೀ, ತಾತ್ವಿಕ ಸಂದಿಗ್ಧತೆಗಳಾಗಲೀ ಅಧಿಕಾರ ರಾಜಕಾರಣದ ವಾರಸುದಾರರಿಗೆ ಅಷ್ಟಾಗಿ ಕಾಡುವುದಿಲ್ಲ. ಏಕೆಂದರೆ ಗಾಂಧಿ ಭಾರತೀಯ ಸಮಾಜದ ಒಂದು ಪ್ರಬಲ ವರ್ಗಗಳ ದೃಷ್ಟಿಯಲ್ಲಿ ಎಷ್ಟೇ ತಿರಸ್ಕೃತರಾಗಿ, ಅಪ್ರಸ್ತುತವಾಗಿ ಕಂಡುಬಂದರೂ, ಅವರ ಸಮಾಜ ಸುಧಾರಣೆಯ ಧ್ವನಿ ಸಾಂಕೇತಿಕವಾಗಿಯಾದರೂ ರಾಜಕೀಯ ಬಂಡವಾಳವಾಗಿ ಪರಿಣಮಿಸುತ್ತದೆ. ಗಾಂಧಿಯ 155 ನೆಯ ಜನ್ಮದಿನವನ್ನು ಆಚರಿಸುವ ಸಂದರ್ಭದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಸರ್ಕಾರದ ಆಲೋಚನೆಯನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಆದರೆ ಐದು ವರ್ಷಗಳ ಸ್ವಚ್ಛಭಾರತ ಅಭಿಯಾನದ ನಂತರವೂ 2019-23ರ ಅವಧಿಯಲ್ಲಿ ಮಲಗುಂಡಿಯನ್ನು ಕೈಯಿಂದಲೇ ಸ್ವಚ್ಛಗೊಳಿಸುವ 377 ಕಾರ್ಮಿಕರು ಮೃತಪಟ್ಟಿರುವುದು ಭಾರತದ ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಪರಿಚಯಿಸುತ್ತದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಒಳಚರಂಡಿ-ಮಲಗುಂಡಿ ಶುಚಿಗೊಳಿಸುವ ಮತ್ತು ಇತರ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸುತ್ತಿರುವವರ ಪೈಕಿ ಶೇಕಡಾ 92ರಷ್ಟು ಕಾರ್ಮಿಕರು ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ.
ದೇಶದ ವಿಭಜನೆಯ ಸಂದರ್ಭದಲ್ಲಾಗಲೀ ತಮ್ಮ ರಾಜಕೀಯ ನಡಿಗೆಯಲ್ಲಾಗಲೀ ಗಾಂಧಿ ಪೊರಕೆ ಹಿಡಿದದ್ದು ರಸ್ತೆ ಬದಿಯ ತ್ಯಾಜ್ಯವನ್ನು ಗುಡಿಸಿಹಾಕಲು ಅಲ್ಲ ಅಥವಾ ಶೌಚವನ್ನು ತೆಗೆದುಹಾಕಲೂ ಅಲ್ಲ. ಗಾಂಧಿ ಸ್ವಚ್ಛತೆ ಬಯಸಿದ್ದು ಭಾರತೀಯರ ಹೃದಯದಲ್ಲಿ, ಚಿಂತನೆಗಳಲ್ಲಿ ಹಾಗೂ ಬೌದ್ಧಿಕತೆಯಲ್ಲಿ. ನೋಖಾಲಿಯಲ್ಲಿ ಗಾಂಧಿ ಸ್ವಚ್ಛಗೊಳಿಸಲು ಮುಂದಾಗಿದ್ದು ಮತಾಂಧತೆ, ಮತೀಯ ದ್ವೇಷ ಮತ್ತು ಕೋಮುದ್ವೇಷ ಉಕ್ಕಿಸಿದ ಮಾನವ ಸಮಾಜದ ನೆತ್ತರನ್ನು. ಮಾನವ ಸಮಾಜದಲ್ಲಿ ಮುಸುಕಿದ್ದ ಅಮಾನುಷತೆ, ಕ್ರೌರ್ಯ ಮತ್ತು ಹಿಂಸೆಯನ್ನು. ಈ ನೆತ್ತರಿನ ಕೋಡಿ ಇಂದು ಕಾಣುತ್ತಿಲ್ಲವಾದರೂ, ಮತೀಯ ದ್ವೇಷದಿಂದ, ಜಾತಿ ದ್ವೇಷದಿಂದ ನೆತ್ತರು ಹರಿಸುವ ಮನಸ್ಥಿತಿ ಇಂದಿಗೂ ಎದ್ದು ಕಾಣುತ್ತಿದೆ. ಅಂದು ಮತಾಂಧರ ಬಾಯಲ್ಲಿ ಬರುತ್ತಿದ್ದ ಹಿಂಸಾತ್ಮಕ ಮಾತುಗಳು ಇಂದು ಚುನಾಯಿತ ಜನಪ್ರತಿನಿಧಿಗಳ ಬಾಯಲ್ಲೂ ಬರುತ್ತಿದೆ. ಗಾಂಧಿ ಮಹಿಳೆಯರ ಘನತೆ ಗೌರವವನ್ನು ಎತ್ತಿಹಿಡಿದಿದ್ದರು. ತಳಸಮಾಜದ ಘನತೆಯನ್ನು ಕಾಪಾಡಲು ಶ್ರಮಿಸಿದ್ದರು. ಆದರೆ ಇಂದು ಗಾಂಧಿ ಸ್ಮರಣೆಯ ನಡುವೆಯೇ ಈ ಎಲ್ಲ ಅಮಾನುಷತೆಯೂ ಭಾರತವನ್ನು ಕಾಡುತ್ತಲೇ ಇದೆ.
ಈ ನೆಲೆಯಲ್ಲಿ ಭಾರತೀಯ ಸಮಾಜದಲ್ಲಿ ಬೌದ್ಧಿಕ ಸ್ವಚ್ಛತೆಯನ್ನು ಬಯಸಿದ್ದ ಗಾಂಧಿಯವರನ್ನು ಕೇವಲ ಪ್ರತಿಮೆಗಳಲ್ಲಿ ಕುಳ್ಳಿರಿಸಿ, ವರ್ಷಕ್ಕೊಮ್ಮೆ ನಮಿಸುತ್ತಾ ಗಾಂಧಿ ಸ್ಮೃತಿಯನ್ನು ಪಠಿಸುತ್ತಿರುವ ಭಾರತದ ರಾಜಕೀಯ ನಾಯಕತ್ವ ಮತ್ತು ಸಮಾಜ, ಅವರು ಬಯಸಿದ ಮಾನವೀಯ ಸಮಾಜವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೋತಿದೆ. ಇತಿಹಾಸದ ಪುಟಗಳಿಂದ ಗಾಂಧಿಯವರನ್ನು ಅಳಿಸಿಹಾಕುವ ಪ್ರಯತ್ನಗಳು ವಾಟ್ಸಾಪ್ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವಂತೆಯೇ, ಗಾಂಧಿ ಚಿಂತನೆಗಳನ್ನು, ನೆನಪುಗಳನ್ನು ಶಾಶ್ವತವಾಗಿ ಅಳಿಸಿಹಾಕುವ ಪ್ರಯತ್ನಗಳು ಸಾಂಘಿಕ ನೆಲೆಯಲ್ಲಿ ನಡೆಯುತ್ತಿವೆ. ಆದರೂ ದೇಶಾದ್ಯಂತ ಅಕ್ಟೋಬರ್ 2ರಂದು “ ವೈಷ್ಣವ ಜನತೋ ….” ಪಠಿಸುವ ಮೂಲಕ ಗಾಂಧಿಯವರನ್ನು ಜನಮಾನಸದ ಮಧ್ಯೆ ನಿಲ್ಲಿಸಲಾಗುತ್ತಿದೆ. ಈ ಪ್ರತಿಮೆಗೆ ಹಾಕುವ ಹಾರ ತುರಾಯಿಗಳು ಚಾರಿತ್ರಿಕ ಗಾಂಧಿಯನ್ನು ನೆನಪಿಸುವುದಕ್ಕಿಂತಲೂ ಹೆಚ್ಚಾಗಿ ಅವರ ಚಿಂತನೆಗಳು ಮರೆಯಾಗುತ್ತಿರುವುದನ್ನು ನೆನಪಿಸುತ್ತವೆ.
ಅಕ್ಟೋಬರ್ 2ರಂದು ಗಾಂಧಿ ಪ್ರತಿಮೆಗೆ ಹಾರ ಹಾಕುವ ಮುನ್ನ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಗಾಂಧಿ ಪ್ರತಿಮೆಯ ಮುಂದೆ ಕೂರುವ ಮುನ್ನ, ಗಾಂಧಿ ಸಮಾಧಿಯ ಮುಂದೆ ವಿನಮ್ರವಾಗಿ ತಲೆಬಾಗುವ ಮುನ್ನ, ಆರ್ಥಿಕವಾಗಿ ವಿಕಸಿತ ಭಾರತವಾಗುವತ್ತ ಸಾಗಿರುವ ಡಿಜಿಟಲ್ ಇಂಡಿಯಾ ಸಾಮಾಜಿಕವಾಗಿ ಎತ್ತ ಸಾಗುತ್ತಿದೆ, ಸಾಂಸ್ಕೃತಿಕವಾಗಿ ಎಲ್ಲಿಗೆ ಜಾರುತ್ತಿದೆ ಎಂಬ ಆತ್ಮಾವಲೋಕನ ವರ್ತಮಾನ ಭಾರತದ ಆದ್ಯತೆಯಾಗಬೇಕಿದೆ. ಮುಂದಿನ ತಲೆಮಾರಿಗೆ ಗಾಂಧಿ ಮತ್ತು ಅವರ ಚಿಂತನೆಗಳನ್ನು ದಾಟಿಸಬೇಕಾದರೆ, ಅಂಬೇಡ್ಕರ್ ಅವರೊಡನೆ ಅನುಸಂಧಾನ ಮಾಡುತ್ತಲೇ, ಮಾರ್ಕ್ಸ್‌ವಾದದೊಡನೆ ಮುಖಾಮುಖಿಯಾಗುತ್ತಲೇ ಅವರ ಬೌದ್ಧಿಕ ಔದಾತ್ಯಗಳನ್ನು ಸಮಚಿತ್ತದಿಂದ ರವಾನಿಸುವ ನೈತಿಕ ಕರ್ತವ್ಯ ಇಂದಿನ ಭಾರತದ ಮೇಲಿದೆ. ಇದು ಸಾಧ್ಯವಾಗುವುದಾದರೆ ಅಕ್ಟೋಬರ್ 2ರ ಗಾಂಧಿ ಜಯಂತಿ ಸಾರ್ಥಕತೆ ಪಡೆಯುತ್ತದೆ.
ನಾ ದಿವಾಕರ
ಚಿಂತಕರು
ಇದನ್ನೂ ಓದಿ-ಗಾಂಧೀಜಿಯವರ ಕಣ್ಣಲ್ಲಿ ನ್ಯಾಯ