ಕೊಡಗು : ಪೊನ್ನಂಪೇಟೆಯ ತಿತಿಮತಿ ಬಳಿಯ ಕೊಣ್ಣನಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ತಮ್ಮ ಕಾಫಿ ತೋಟ ವೀಕ್ಷಿಸಲು ಹೋದ ಸಂದರ್ಭದಲ್ಲಿ ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ಆನೆ ದಾಳಿಗೆ ತುತ್ತಾಗಿದ್ದಾರೆ.
ಸಂಧ್ಯಾ ಅವರು ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವಾಯುವಿಹಾರಕ್ಕೆ ತೆರಳಿದ್ದರು. ಹಾಗೇ ತೋಟದ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನ ಮೇಲ್ವಿಚಾರಣೆ ಮಾಡಿಕೊಂಡು ವಾಪಸ್ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಎರಗಿದ ಕಾಡಾನೆ ಸಂಧ್ಯಾ ಅವರ ಮೇಲೆ ದಾಳಿ ನಡೆಸಿದೆ.
ಬಳಿಕ ಅಲ್ಲಿದ್ದ ಇಬ್ಬರು ಕಾಫಿ ತೋಟದ ಕಾರ್ಮಿಕರ ಮೇಲೂ ದಾಳಿ ಮಾಡಲು ಮುಂದಾಗಿದೆ. ಇವರು ದಾಳಿಯಿಂದ ಓಡಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪಲು ಲೋಪಾಮುದ್ರಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಸಂಧ್ಯಾ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಾಣಾಪಾಯದಿಂದ ಪಾರಾದ ಗಾಯಾಳು ಕಾರ್ಮಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

