ನವದೆಹಲಿ: ಕಾವೇರಿ ನೀರು ಬಿಡುವ ಸಂಬಂಧ ಮತ್ತೆ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 9,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಾಧಿಕಾರ ಸೂಚನೆ ನೀಡಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ.
ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಮುಂದಿನ 15 ದಿನಗಳ ಕಾಲ ಪ್ರತಿದಿನ 9 ಸಾವಿರ ಕ್ಯೂಸೆಕ್ಸ್ ನೀರಿನ ಹರಿವು ಖಚಿತಪಡಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಸೋಮವಾರ ಸೂಚಿಸಿತ್ತು.
ಆಗಸ್ಟ್ 25ರ ಬೆಳಗ್ಗೆ, 8 ಗಂಟೆಯಿಂದ ಈ ಆದೇಶ ಜಾರಿಗೆ ಬರಲಿದೆ. ಈ ಮೂಲಕ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಸತತ ಮೂರನೇ ಬಾರಿ ನೀರು ಹರಿಸುವ ಸೂಚನೆ ಬಂದಂತಾಗಿದೆ. ಮೊದಲಿಗೆ 3 ಸಾವಿರ ಕ್ಯೂಸೆಕ್ಸ್ ಬಳಿಕ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚಿಸಲಾಗಿತ್ತು. ಇದೀಗ 12 ಸಾವಿರ ಕ್ಯೂಸೆಕ್ಸ್ ಆದೇಶವನ್ನು ಕಡಿಮೆ ಮಾಡಿ 9 ಸಾವಿರ ಕ್ಯೂಸೆಕ್ಸ್ಗೆ ನಿಗದಿಪಡಿಸಲಾಗಿದೆ
15 ದಿನಕ್ಕೆ 11.66 ಟಿಎಂಸಿ ನೀರು ಸಿಡಬ್ಲ್ಯು ಆರ್ಸಿ ನಿರ್ಧಾರದಂತೆ ಆಗಸ್ಟ್ 25ರಿಂದ ಮುಂದಿನ 15 ದಿನಗಳ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಒಟ್ಟು ಸುಮಾರು 11.66 ಟಿಎಂಸಿ ನೀರು ಹರಿಯುವಂತೆ ಕರ್ನಾಟಕ ಖಚಿತಪಡಿಸಬೇಕಿದೆ.
ದೆಹಲಿಯ ಸಿಡಬ್ಲ್ಯೂಎಂಎ ಕಚೇರಿಯಲ್ಲಿ ಇಂದು ಸುಮಾರು ಒಂದೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಗೌರವ್ ಗುಪ್ತಾ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (MD) ಮಹೇಶ್ ಭಾಗವಹಿಸಿದ್ದರು. ತಮಿಳುನಾಡಿನ ಪರವಾಗಿ ನೀರಾವರಿ ಕಾರ್ಯದರ್ಶಿ ಪ್ರಶಾಂತ್ ಮತ್ತು ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಂ ಪಾಲ್ಗೊಂಡಿದ್ದರು.

