ಡಾ. ಅಣ್ಣಪ್ಪ ಎನ್. ಮಳೀಮಠ್
ಜನ್ನನ ಯಶೋಧರ ಚರಿತೆಯಲ್ಲಿ ಸುಂದರಿಯಾದ ಅಮೃತಮತಿಯು ತನ್ನ ಗಂಡನನ್ನು ತೊರೆದು ಮಾವುತನ ಪ್ರೇಮಪಾಶಕ್ಕೆ ಒಳಗಾದ ಸನ್ನಿವೇಶ ಇದೆ. ಯುವರಾಜ ಯಶೋಧರನ ತೋಳತೆಕ್ಕೆಯಿಂದ ತಪ್ಪಿಸಿಕೊಂಡು ಹೋಗುವ ಅಮೃತಮತಿಯ ಮನಸ್ಸಿನ ಬಗ್ಗೆ ನೂರಾರು ಯೋಚನೆಗಳು ನನಗೆ ಬಂದು ಹೋದವು. ಪ್ರೇಮಕಾಮಕ್ಕೆ ಕಣ್ಣಿಲ್ಲ ಎಂದೆಲ್ಲ ಓದಿದ್ದಿದೆ. ಆದರೆ ಅದೆಲ್ಲ ಜೀವಜಗತ್ತಿನ ಸಹಜ ಗುಣವಲ್ಲವೆ.? ಸಹಜವಾದ ತೃಷೆಗಳನ್ನೆಲ್ಲ ಈ ಮಾನವ ಜಗತ್ತು ಅದನ್ನು ಅಸಹಜವೆಂದು ಯಾಕೆ ಹೊರಗಿಟ್ಟಿದೆ ಎಂದೆಲ್ಲ ಚಿಂತಿಸುತ್ತಿದ್ದ ನನಗೆ ಎದುರಿಗೆ ಸುಂದರಿ ಬಂದಿದ್ದು ತಿಳಿಯಲೇ ಇಲ್ಲ. ಈ ಸುಂದರಿ ಕುಳ್ಳು ಹುಡುಗಿ, ಬಿಳಿ ಚರ್ಮದ ಈಕೆ ಹೋಗುತ್ತಿದ್ದರೆ ಟಿಬೇಟಿಯನ್ ಹೆಣ್ಣೊಬ್ಬಳ ನಡಿಗೆಯಂತೆ ಕಾಣಿಸುತ್ತಿತ್ತು. ದೊಡ್ಡ ಮನೆಯ ಈ ಪೋರಿ ನೋಡು ನೋಡುತ್ತಿದ್ದಂತೆ ದೊಡ್ಡವಳಾದವಳು. ಬಾಲ್ಯದ ಆಟೋಟಗಳಲ್ಲಿ ತನ್ನದೇ ತಂಡ ಕಟ್ಟಿದ್ದ ಮೋಜುಗಾರ್ತಿ. ಕುಂಟುಪಿಲ್ಲೆ, ಚಿನ್ನಿದಾಂಡು, ಅಡುಗೆಮನೆ ಆಟ, ಸುಳಿಪಟ್ಟೆ, ಕಣ್ಣೆ ಮುಚ್ಚೆ ಕಾಡೆಗೂಡೆ ಎಂದೆಲ್ಲ ಆಡುವಾಗ ಅವಳ ಮುಗ್ಧತೆ, ಚೆಲುವು ಸೊಗಸಾಗಿತ್ತು. ದೊಡ್ಡ ಮನೆಯಲ್ಲಿ ಸಣ್ಣವಳು ಎಂಬ ಕಾರಣದಿಂದಲೂ ಎಲ್ಲರ ಮನ ಗೆದ್ದಿದ್ದಳು. ಮನೆ ಒಡೆದು ಚೂರು ಚೂರು ಆದಾಗ ಈಕೆ ನಮ್ಮದು ಅಂತ ಕೂರುವ ಮಣೆ, ಗುಡಿಸುವ ಹಿಡಿ, ಜಗುಲಿಯಲ್ಲಿ ಅನಾಥವಾಗಿ ಬಿದ್ದ ಚಾಪೆಗಳನ್ನೆಲ್ಲ ಎತ್ತಿಕೊಂಡು ತಮ್ಮ ಕೋಣೆಗೆ ಸೇರಿಸುವುದನ್ನು ನೋಡಿದ ಪಂಚಾಯಿತಿಗೆ ಬಂದ ಹಿರಿಯರು ಅವಳ ಮಗ್ಧತೆಗಾಗಿ ನಕ್ಕಿದ್ದರು.
‘ಬ್ಯಾರೆ ಆದಾಗ ಕೆಲಸ ಚಂದ, ಮದುವೆ ಆದಾಗ ಗಂಡ ಚೆಂದ’ ಎನ್ನುವಂತೆ ಹದಿನಾರು ಪ್ರಾಯಕ್ಕೆ ಬಂದಾಗ ಈ ಹುಡುಗಿಗೆ ಬಾರದ ಕೆಲಸವಿರಲಿಲ್ಲ. ಕೆಲಸ ಹಿಡಿದ್ರೆ ಯಾವ ಗಂಡಸಿಗಿಂತ ಕಡಿಮೆಯಿಲ್ಲ ಎಂದು ಎಲ್ಲರೂ ಹೊಗಳುತ್ತಿದ್ದರು. ಒಂದು ಎಕ್ರೆ ಹತ್ತಿ ಗದ್ದೆಯನ್ನು ಎರಡು ದಿನದಲ್ಲಿ ಕ್ರೇಪಿಂಗ್ ಮಾಡುವಳು. ಶುಂಠಿ, ಭತ್ತದ ಗದ್ದೆಯ ಕಳೆಯೇ ಇವಳನ್ನು ನೋಡಿ ಹೆದರುತ್ತಿತ್ತು. ಹೊತ್ತಿನ ಅರಿವು ಸಮೀಪಕ್ಕೆ ಬಾರದ ಹಾಗೆ ದುಡಿಯುವ ಈಕೆ ಕಾಲೇಜು ಮೆಟ್ಟಿಲು ಹತ್ತಿದ್ರು, ಅದು ಅರೆಬರೆಯಾಗಿಯೇ ಹೋಯಿತು. ಕಾಲೇಜಿಗೆ ಕೈಮುಗಿದು, ಹತ್ತಿ, ಶುಂಠಿ, ಗದ್ದೆ ತೋಟ ಎಂದೆಲ್ಲ ಗೆಯ್ಯುವ ಈಕೆಯ ಬಾಯಿಯೂ ಬೊಂಬಾಯಿ ಆಗಿತ್ತು. ಇವಳ ಎದುರು ಉತ್ತರ ಕೊಟ್ಟು ಗೆದ್ದವರನ್ನು ಊರಿನಲ್ಲಿ ಯಾರನ್ನೂ ನೋಡಿಲ್ಲ. ವರ್ಷದಲ್ಲಿ ಇವಳು ಮಾಡಿಟ್ಟ ಮುಯ್ಯಾಳು ತೀರಿಸಲು ಕೆಲವರಿಗೆ ಸಾಧ್ಯವಾಗದೇ ಒದ್ದಾಡುತ್ತಿದ್ದರು. ಮಾತಿನ ಮಲ್ಲಿ, ನೋಟದಲ್ಲಿ ಬಿಳಿ, ಗೆಯ್ಯುವುದರಲ್ಲಿ ಚಾಲಾಕಿನಂತಿದ್ದವಳು ಮುಯ್ಯಾಳಿಗೆ ಬಂದ ಪಕೀರನಿಗೆ ಮನಸೋತು ಹೋಗಿದ್ದಳು. ಆದರೇನು ತನ್ನ ಬಾಲ್ಯವನ್ನೆಲ್ಲ ಧಣಿಯರ ಮನೆಯ ತೋಟಕ್ಕೆ ಅರ್ಪಿಸಿಕೊಂಡಿದ್ದ ಪಕೀರ ಒಂದು ದಿನ ಇದ್ದಕ್ಕಿದ್ದ ಹಾಗೆ ಸಿಕ್ಕ ಶಾಮಣ್ಣನ ಮಾತು ಕೇಳಿ ಧಣೇರ ಮನೆಯನ್ನು, ಊರು ಕೇರಿಯನ್ನು ತನ್ನನ್ನು ಇಷ್ಟ ಪಡುವ ಸುಂದರಿಯನ್ನು ಬಿಟ್ಟು ಬೆಂಗಳೂರು ಸೇರಿದ್ದನು.
ಮಾಯನಗರಿ ಬೆಂಗಳೂರಿಗೆ ಕಾಲಿಟ್ಟ ಪಕೀರ ಹೋಟೆಲ್ ಒಂದರಲ್ಲಿ ಮಾಣಿಯಾಗಿ ಸೇರಿಕೊಂಡನು. ಗಿಜಿಗುಡುವ ಲಾರಿ, ಬಸ್ಸು, ಆಟೋರಿಕ್ಷಾ, ಬೈಕುಗಳನ್ನು ನೋಡಿದ ಪಕೀರನಿಗೆ ಕಾಡು, ಕಣಿವೆಗಳು ಕಣ್ಣಿಗೆ ಕಾಣದಾದವು. ಧಣಿಯರ ಮನೆಯ ತೋಟದ ಕಾಜಿಗೆ ಹೆರೆಯುವುದು, ಅಡಿಕೆ ಗಿಡದ ಬುಡ ಸರಿಮಾಡುವುದು, ಬಾಳೆ, ಅಡಿಕೆ ಗಿಡ ನೆಡುವುದು, ತೋಟದ ಕಳೆ ತೆಗೆಯೋದರಲ್ಲಿ ಜಗತ್ತು ನೋಡುತ್ತಿದ್ದ ಪಕೀರನಿಗೆ ಮಾಯನಗರಿಯ ಎತ್ತರದ ಕಾಂಕ್ರಿಟ್ ಕಟ್ಟಡಗಳು ಅವನ ಆಸೆಕನಸುಗಳನ್ನು ಕಮರಿಸುತ್ತಿದ್ದವು. ಮಾಲೀಕರು ಕೊಟ್ಟ ಗಂಜಿಯನ್ನ ಉಂಡು, ಸೂರ‍್ಯ ಹುಟ್ಟೋ ಮುನ್ನ ಸುರುವಾದ ಅವನ ಕಾಯಕ, ರಾತ್ರಿ ಮಗ್ಗಲು ಊರುವವರೆಗೂ ನಿರಂತರವಾಯಿತು. ಶಾಮಣ್ಣ ಯಾಕಾರು ನನಗೆ ಸಿಕ್ಕನಪ್ಪ ಅಂತ ಚಿಂತಿಸುವಂತೆ ಬಂದ ನಾಲ್ಕಾರು ದಿನಗಳಿಗೆ ಆಯಿತು. “ಏ ಬರೀ ಲೋಟ ಎತ್ತದು, ತಟ್ಟೆ ತೊಳೆಯುವುದು ಅಷ್ಟೇ ಅಲ್ಲ, ಅಡುಗೆ ಮಾಡೋದನ್ನು ಕಲಿಬೇಕು, ಏ ಬೇವರ್ಷಿ ಅಲ್ನೋಡು ಆ ತಟ್ಟೆ ನಿಮ್ಮಪ್ಪ ತೊಳಿತಾನ…ಇಲ್ಲಿ ನೋಡು ಟೇಬಲ್ ಒರೆಸಿದ್ದು ಸರಿಯಾಗಿಲ್ಲ. ಹೊಟ್ಟೆಗೆ ಏನ್ ತಿಂತೀಯ…” ಎಂಬ ಮಾತುಗಳು ಹೋಟೆಲ್ ಸೇರಿದ ವಾರಕ್ಕೆ ಮಾಲೀಕನಿಂದ ಬರಲು ಸುರುವಾದವು. ಅಪ್ಪ, ಅಮ್ಮನ ಹೆಸರು ಹೇಳಿ ಬೈದ ಮಾಲೀಕನ ಮೇಲೆ ಸಿಟ್ಟು ಕೋಪ ಎಲ್ಲಾ ಇದ್ರು, ‘ಬಡವನ ಕೋಪ ದವಡೆಗೆ ಮೂಲ’ವೆಂದು ಸುಮ್ಮನಾದನು.
ಊರಲ್ಲಿ ಅಪ್ಪ ಹೊಟ್ಟೆಗೆ ಅನ್ನ ಇಲ್ಲದಿದ್ರು ಸ್ವಾಭಿಮಾನದಿಂದ ಬದುಕುವುದನ್ನು ಕಲಿತವನು. ಅಮ್ಮ ಎಷ್ಟೋ ದಿನ ಗಂಜಿ ಉಂಡು ಮಲಗಿದರೂ ಯಾರೊಂದಿಗೂ ‘ಹಚೀ.. ಥೂ..’ ಎನಿಸಿಕೊಂಡವಳಲ್ಲ. ಇದನೆಲ್ಲಾ ಹತ್ತಿರದಿಂದ ನೋಡಿದ ಪಕೀರ ನಗರ ಜನರ ದುರಹಂಕಾರ ಕಂಡು ಅಸಹ್ಯ ಪಟ್ಟುಕೊಂಡಿದ್ದನು. ಊರತ್ತ ಮುಖ ಮಾಡೋಣ ಅಂದ್ರೆ, ಒಡೆಯರು ಅಪ್ಪ ಅಮ್ಮನ ರಕ್ತ ಮಾಂಸ ಹೀರಿದ ಹಾಗೆ ನನ್ನನ್ನು ಹೀರುವುದರಲ್ಲಿ ಆಶ್ಚರ್ಯವಿಲ್ಲವೆನಿಸಿ ಸುಮ್ಮನಾದನು. ಅವರು ದುಡಿದದ್ದು ಗಂಜಿಗೇ ಸರಿಯಷ್ಟೆ. ತಮ್ಮ, ತಂಗಿನ ಓದಿಸುವರಾರು ಅನ್ನೋ ಚಿಂತೆ ಪಕೀರನದ್ದು. ಏನೇ ಆಗಲಿ ಬೆಂಗಳೂರು ಬಿಟ್ಟು ಹೋಗಲೇಬಾರದು ಅನ್ನೋ ನಿರ್ಧಾರಕ್ಕೆ ಬಂದ ಪಕೀರ, ಮಾಲಿಕನ ಬಾಯಿಗೆ ಬಾಯಾಗದೇ ಮೌನವಾದನು.
ತಿಂಗಳ ಕೊನೆಯಲ್ಲಿ ಮಾಲೀಕ ಸಂಬಳವೆಂದು ಐದುನೂರು ರೂಪಾಯಿಯನ್ನು ಪಕೀರನಿಗೆ ನೀಡಿದನು. ಖುಷಿಯಾದ ಫಕೀರ ಇವತ್ತು ಒಂದು ಜೊತೆ ಹೊಸ ಬಟ್ಟೆ ಹೊಲಿಸಿ ಕೊಳ್ಳಬೇಕೆಂದು, ಸಿನಿಮಾ ನೋಡಬೇಕೆಂದು ಮೆಜೆಸ್ಟಿಕ್ ಕಡೆ ಹೆಜ್ಜೆ ಹಾಕಿದನು. ಹೋಗುವಾಗ ಪ್ಲೈ ಓವರ್‌ನಲ್ಲಿ ಅನೇಕ ಹೆಂಗಸರು, ಪ್ರಾಯದ ಹುಡುಗಿಯರು ಕೆಂಪು ವೇಷ, ಹೂವು ಮುಡಿದು, ಬದಿಯಲ್ಲಿ ನಿಂತಿರುವುದನ್ನು ಕಂಡು ಚಕಿತನಾದನು. ಇವರ‍್ಯಾಕೆ ಹೀಗೆ ನಿಂತಿದ್ದಾರೆ, ಅವರು ಭಿಕ್ಷುಕರೋ, ಪಯಣಿಗರೋ ಏನೆಂದು ಅರಿಯದೆ ಮುಗ್ಧನಾಗಿಯೇ ಹೆಜ್ಜೆ ಹಾಕಿದನು. ಹೋಗುವಾಗ ಅನಾಥವಾಗಿ ಕಂಡ ಹೆಣ್ಣೊಬ್ಬಳಿಗೆ ತನ್ನಲ್ಲಿ ಕೈಯಲ್ಲಿರುವ ಇಪ್ಪತ್ತು ರೂಪಾಯಿ ನೋಟನ್ನು ಹಾಕಿದನು. ಮುಗಳ್ನಕ್ಕ ಆಕೆ ಬರುವಂತೆ ಸನ್ನೆ ಮಾಡಿದರೂ, ಅದು ಇವನ ಅರಿವಿಗೆ ಬಾರದೆ ಹೆಜ್ಜೆ ಹಾಕಿದ.
“ಬನ್ನಿ…..ಬನ್ನಿ… ನೂರು ರುಪಾಯಿ ಜೊತೆ……ಬ್ರಾಂಡೆಡ್ ಐಟಮ್…ಬನ್ನಿ ಅಣ್ಣ…ಬನ್ನಿ ಅಕ್ಕ…..ಎಂದು ಹೇಳುವ ಒಬ್ಬನು, ಯಾವುದಾದರು ತಗೋಳಿ ಮೂರಕ್ಕೆ ನೂರು ರುಪಾಯಿ….ಎಂದು ರಾಶಿ ಬಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ತೋರಿಸುವ ಮತ್ತೊಬ್ಬ, ನೂರಕ್ಕೆರಡು ಎಂದು ತನ್ನೆರಡು ಕೈಯಲ್ಲಿ ಬೆಲ್ಟುಗಳನ್ನು ಎತ್ತಿ ತೋರಿಸುವ, ನೂರು ರುಪಾಯಿಗೆ ಮೂರು ಶರ್ಟು……..ತಗೋಳಿ ಎಂದು..” ಮಗದೊಬ್ಬ ಹೀಗೆ ನೂರಾರು ಜನರು ತಮ್ಮ ವ್ಯಾಪಾರದಲ್ಲಿಯೇ ಮಗ್ನರಾದವರಂತೆ ಕಾಣುತ್ತಿದ್ದರು. ಅಂಗಿಗಳನ್ನು ನೋಡಿದ ಪಕೀರನಿಗೆ ಇಷ್ಟು ಕಡಿಮೆ ಬೆಲೆಗೆ ಮೂರು ಅಂಗಿಗಳು ಸಿಗೋದು ಆಕಾಶವೇ ಸಿಕ್ಕಾಂಗಾಯ್ತು. ಹರ್ಕು ಅಂಗಿ, ಬನಿಯನ್, ಚೆಡ್ಡಿಗಳನ್ನು ಜೀವನ ಪರ್ಯಂತ ನೋಡಿದ್ದ ಪಕೀರನಿಗೆ ತನಗೂ, ನನ್ನಪ್ಪನಿಗೂ ಮತ್ತು ನನ್ನ ತಮ್ಮನಿಗೂ ಒಂದೊಂದು ಅಂಗಿ ಆಯ್ತು ಎಂದು ಖುಷಿಯಿಂದ ತನ್ನಲ್ಲಿರುವ ಮಾಲೀಕ ಕೊಟ್ಟ ಐದುನೂರು ರುಪಾಯಿಯನ್ನು ಕೊಟ್ಟು ಕೊಂಡನು. ಉಳಿದ ಚಿಲ್ಲರೆ ನೂರು ರುಪಾಯಿಗಳ ನಾಲ್ಕು ನೋಟುಗಳನ್ನು, ಹೊಸ ಅಂಗಿಗಳನ್ನು ಒಂದು ಕರಿ ಕವರಿನಲ್ಲಿ ಹಿಡಿದುಕೊಂಡು ಮುನ್ನಡೆದನು.
ಇದನ್ನೂ ಓದಿ- ಭಾಗ – 1 http://ಒಂದು ದೋಣಿಯ ಕಥೆ….https://kannadaplanet.com/a-story-of-a-boat/
ಪಕೀರನಿಗೆ ಕಾಲಿಡಲು ಜಾಗವೇ ಇಲ್ಲದ ಆ ಮೆಜೆಸ್ಟಿಕ್‌ನಲ್ಲಿ ತಾನೆಲ್ಲಿ ಕಳೆದು ಹೋಗುವೆನೊ ಎಂಬ ಆತಂಕ ಒಂದು ಕಡೆಯಾದರೆ, ಈ ದೇಶದಲ್ಲಿ ಇಷ್ಟೊಂದು ಜನಕ್ಕೆ ಮನೆಮಠ ಎಲ್ಲಿ ಎಂದು ತನಗೆ ಕೈಗೆಟುಕದ ಯೋಚನೆಗಳನ್ನು ಮಾಡುತ್ತಾ ಮುನ್ನಡೆದನು. ಫುಟ್ಪಾತ್‌ನಲ್ಲಿ ಚಂದದ ಶೂಗಳನ್ನು ನೋಡಿ, ಮತ್ತೆ ತನ್ನ ಆಸೆಯನ್ನು ಗರಿಗೆದರಿಸಿಕೊಂಡನು. ಜೀವನವೇ ಹೀಗೆ, ಯಾವಾಗ ನಾನು ಎಲ್ಲರಂತೆ ಶೂ ಹಾಕೋದು ಎಂದು ಭಾವಿಸಿ, ಒಂದು ಜೊತೆ ‘ಶೂ’ ಕೊಳ್ಳಲು ಅನುವಾದನು. ಚೌಕಾಸಿ ವ್ಯಾಪಾರಕ್ಕೆ ಕೂತ ಇವನನ್ನು ನೋಡಿದ ಫುಟ್ಪಾತ್ ಅಂಗಡಿಯವನು, ಇವನೊಬ್ಬ ಹಳ್ಳಿಗಮಾರನೆಂದೇ ಭಾವಿಸಿ, ದುಪ್ಪಟ್ಟ ರೇಟು ಹೇಳಿ, ಕೊನೆಗೆ ಪಕೀರನು ಹೇಳಿದ ರೇಟಿಗೆ ಕೊಡಲು ಅನುಮತಿಸಿದನು. ಇನ್ನೂರ ಐವತ್ತು ರುಪಾಯಿಗೆ ಒಂದು ಜೊತೆ ಶೂ ಬಂತು ಅನ್ನೋ ಖುಷಿಯಿಂದ, ತನ್ನಲ್ಲಿರುವ ನಾಲ್ಕುನೂರು ರುಪಾಯಿಯಲ್ಲಿ ನೂರರ ಮೂರು ನೋಟುಗಳನ್ನು ನೀಡಿದನು. ಇದನ್ನು ನೋಡಿದವನೇ “ಇವು ಕಳ್ಳ ನೋಟುಗಳು. ನೀನೊಬ್ಬ ಕಳ್ಳ. ನಿನ್ನ ಬಗ್ಗೆ ಪೊಲೀಸ್‌ಗೆ ಹೇಳ್ತೀನಿ” ಅಂತ ಒಂದೇಬಾರಿಗೆ ಅವನು ಮತ್ತು ಅವನ ಕಡೆಯವರು ಸುತ್ತುವರಿದರು. ಮಾಯಾನಗರಿಯ ಮಾಯಾ ಪ್ರಪಂಚವನ್ನು ಅರಿಯದ ಪಕೀರ ಹಂಗಂದ್ರೆ ಏನು? ಯಾಕೆ ಪೊಲೀಸನವರಿಗೆ ಹೇಳ್ತೀರ….? ಎಂಬೆಲ್ಲ ತೊದಲು ಪ್ರಶ್ನೆಗಳನ್ನು ಕೇಳಿದರೂ ಅವರ‍್ಯಾರಿಗೂ ಕೇಳಿಸಿಕೊಳ್ಳುವ ವ್ಯವಧಾನ ಇರಲಿಲ್ಲ.
ಸ್ವಲ್ಪ ಸಮಯದಲ್ಲಿಯೇ ಪೊಲೀಸಿನವನು ಬಂದು, ಪಕೀರನನ್ನು ಹಿಡಿದುಕೊಂಡು ಸ್ಟೇಶನ್‌ಗೆ ಕರೆದುಕೊಂಡು ಹೋದನು. ಕೊಟ್ಟಿರುವ ಇನ್ನೂರ ಐವತ್ತು ರೂಪಾಯಿ, ಕೊಂಡಿರುವ ಶೂ ಫುಟ್‌ಪಾತ್ ಅಂಗಡಿಯವನೇ ಇಟ್ಟುಕೊಂಡನು. ಉಳಿದ ನೂರ ಐವತ್ತು ರುಪಾಯಿ ಪೊಲೀಸಿನವನ ಪಾಲಾಯಿತು. ಕಾಮಾಕ್ಷಿಪಾಳ್ಯ ಪೊಲಿಸ್ ಸ್ಟೇಷನ್‌ಗೆ ಹೋದ ಪಕೀರನಿಗೆ ಅಲ್ಲಿನ ಖಾಕಿ ಪಡೆಯನ್ನು ನೋಡಿ ಹೇಲು ಉಚ್ಚೆ ಒಂದೇ ಬಾರಿಗೆ ಬರುವಂತಾಯಿತು. ತನ್ನದಲ್ಲದ ತಪ್ಪಿಗೆ ಸ್ಟೇಷನ್ ಬಾಗಿಲನ್ನು ಮೊದಲ ಬಾರಿಗೆ ಹತ್ತಿದ ಪಕೀರನಿಗೆ, ಒಂದೇ ಸಮನೆ ಕಣ್ಣೀರು ಇಳಿದು, ಅಪ್ಪ, ಅಮ್ಮ, ತಮ್ಮ, ತಂಗಿ ನೆನಪಾದರು.
ಇನ್ಸ್ಪೆಕ್ಟರ್ ಜಗನ್ನಾಥ ಹತ್ರ ಪೊಲೀಸಿನವನು ಕರೆದುಕೊಂಡು ಹೋದನು. ಇನ್ಸ್ಪೆಕ್ಟರ್ ಜಗನ್ನಾಥನು ಇವನ ಪೂರ್ವಾಪರ ಕೇಳಿ, ಯೋಚಿಸಿ, ಸಂಜೆಯವರೆಗೆ ಕಂಬಿಯ ಹಿಂದೆ ಕೂರಿಸಿ, ಕೇಸಿನಿಂದ ಮುಕ್ತಮಾಡಿ ಕಳಿಸಿದನು. ತನ್ನ ಪಾಲಿನ ದೈವಸಂಭೂತನೆಂದೇ ಭಾವಿಸಿ, ಇನ್ಸ್ಪೆಕ್ಟರ್ ಜಗನ್ನಾಥನಿಗೆ ಅಡ್ಡಡ್ಡ ಬಿದ್ದು, ತನ್ನ ಹೋಟೆಲ್‌ನತ್ತ ಮುಖಮಾಡಿದನು. ತಿಂಗಳು ಪೂರ್ತಿ ದುಡಿದು ಹೈರಾಣಾಗಿ ಬಂದ ಐದುನೂರು ರೂಪಾಯಿಯಲ್ಲಿ ತನಗೂ, ತನ್ನ ಅಪ್ಪನಿಗೂ, ತಮ್ಮನಿಗೂ ಏನೋ ತರಬೇಕೆಂದು ಮೆಜೆಸ್ಟಿಕ್ ಕಡೆ ಹೋದ ಪಕೀರ, ತನಗಾದ ಗೋಳನ್ನು ನೆನಪಿಸಿ ಆ ದಿನ ನಿದ್ದೆಯಿಲ್ಲದ ರಾತ್ರಿ ಕಳೆದನು.
ಏನಾದರೂ ಆಗಲಿ ಈ ಬೆಂಗಳೂರು ಸಹವಾಸ ನನಗಂತೂ ಬೇಡ ಎಂದು ನಿರ್ಧರಿಸಿ, ತನ್ನ ಗೆಳೆಯ ಕರಿಯಪ್ಪನ ಹತ್ರ ನೂರು ರುಪಾಯಿ ಸಾಲವಾಗಿ ಪಡೆದು ಊರಿನಕಡೆ ಬಸ್ಸು ಹತ್ತಿದನು. ಬೆಂಗಳೂರಿಗೆ ಹೋಗುವಾಗ ಹಾಕಿಕೊಂಡ ಬಟ್ಟೆಯಲ್ಲೇ ವಾಪಾಸು ತನ್ನೂರಿಗೆ ಬಂದಿಳಿದನು. ಕೈ ಖರ್ಚಿಗೆ ದುಡ್ಡು, ಜೊತೆಗೆ ತನ್ನ ಬಡತನವೆಲ್ಲಾ ಹರಿದು ಹೋಗುತ್ತದೆಯೆಂದು ಭಾವಿಸಿದ ಪಕೀರನ ಅಪ್ಪ ಹುಚ್ಚಪ್ಪನು ತನ್ನ ಮಗನ ಸ್ಥಿತಿ ಕಂಡು ಮಮ್ಮಲ ಮರುಗಿದನು. ಮಗ ಬೆಂಗಳೂರಿಗೆ ಹೋಗಿದ್ದಾನೆ, ತಾನು ಇನ್ನು ಗೌಡರ ಹಟ್ಟಿಯಲ್ಲಿ ಸೆಗಣಿ ಬಾಚುವುದು ತಪ್ಪುತ್ತದೆಯೆಂದು ಭಾವಿಸಿದ ಹುಚ್ಚಪ್ಪನ ಕಂಡು ಹಟ್ಟಿಯ ಕಲ್ಲುಕಂಬಗಳು ಅಣಕಿಸಿದವು. ಮೊನ್ನೆ ಗೌಡರ ಕೋಣವೊಂದು ತನ್ನ ಕಾಲು ತುಳಿದು ಮೂಳೆ ಮುರಿದು ಊತವಾಗಿದ್ದುದು, ಇನ್ನೂ ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತಲೇ ಇತ್ತು. ಅಂಗಾಲಿಗೆ ಬಿದಿರು ಮುಳ್ಳೊಂದು ತಾಗಿ, ಕೀವು ಆಗಿ ಸೋರುತ್ತಿತ್ತು. ಗೌಡರ ಅಪ್ಪಣೆ ಮೇರೆಗೆ ರಿಪ್ಪನ್‌ಪೇಟೆಯ ಕಿರಣಿ ಡಾಕ್ಟರ್ ಹತ್ರ ಹುಚ್ಚಪ್ಪನು ಹೋದನು. ಮೂಳೆ ಮುರಿದ ಕಾಲಿಗೆ ಬೆಂಡೇಜನ್ನು ಡಾಕ್ಟ್ರು ಸುತ್ತಿದರು. ಕಾಲಿಗೆ ಹೊಕ್ಕ ಬಿದಿರು ಮುಳ್ಳನ್ನು ತೆಗೆದು, ಕಾಲನ್ನು ಅಮಾಗತ ಒತ್ತಿ, ಕೀವನ್ನು ಪಿಚಪಿಚನೇ ಹೊರಡಿಸಿದರು. ಎಂದಿನಂತೆ ಡಾಕ್ಟ್ರು ಅಲ್ಲೇ ಇರೋ ವಿನಾಯಕನಿಗೆ ಕೈಮುಗಿದು ಮಾತ್ರೆ ತಗೋ, ಎಲ್ಲಾ ಸರಿಹೋಗುತ್ತೆ ಎಂದರು. ಅಯ್ಯೋಯ್ಯೋ ಎಂದು ನರಳುವ ಹುಚ್ಚಪ್ಪನಿಗೆ “ಹೋಗು ಹುಚ್ಚಪ್ಪ ಇನ್ನು ನಿನ್ನ ಕಾಲನ್ನು ನಮ್ಮ ಗಣಪ ಕಾಯುತ್ತಾನೆ, ಹೆದರಬೇಡವೆಂದು” ಧೈರ್ಯ ತುಂಬಿದರು. ಮನೆಗೆ ಬಂದ ಹುಚ್ಚಪ್ಪ ಒಂದು ದಿನ ಮನೆಯಲ್ಲಿಯೇ ತನ್ನ ಹೆಂಡತಿ ಬಸಮ್ಮನಿಂದ ಆರೈಕೆ ಮಾಡಿಸಿಕೊಂಡನು. ಆದರೂ ಕಾಲಿನಲ್ಲಿ ರಸಿಗೆ ಹಾಗೆ ಹರಿಯುತ್ತಿತ್ತು. ಗೌಡರ ಮನೆಯಿಂದ ತಂದ ಅಕ್ಕಿ ಖಾಲಿಯಾಗುತ್ತಲೇ, ಕೆಲಸಕ್ಕೆ ಅವರ ಮನೆಯತ್ತ ಹೆಜ್ಜೆಹಾಕಿದನು. ಸೆಗಣಿ ಮೆತ್ತಿದ ಕಾಲಿನಲ್ಲಿ ಅದು ಕಣ್ಮರೆಯಾಗಿ, ನೋವು ಮಾತ್ರ ಜೀವ ಹಿಂಡುತ್ತಿತ್ತು.
ಪಕೀರನ ಸಪ್ಪೆ ಮುಖ, ಮಾಸಿದ ಅಂಗಿ, ಯಾವುದೋ ಆತಂಕದಲ್ಲಿದ್ದ ಅವನ ಮನಸ್ಸು ನೋಡಿದ ತಾಯಿ ಬಸಮ್ಮನಿಗೆ ದುಃಖ ಉಮ್ಮಳಿಸಿ ಬಂದಿತು. “ನೋಡು ಅವತ್ತೆ ನಾನು ನಿಂಗೆ ಹೇಳಿದ್ದೆ, ಸಾಲಿಗೆ ಹೋಗು, ಸಾಲಿಗೆ ಹೋಗು ಅಂತ. ನನ್ನ ಮಾತು ಕೇಳ್ದೆ, ಊರ್ ಹಾಳ್ ಮುಂಡೆಗಂಡ, ಸತ್ ಕೆಂಪಣ್ಣನ ಮಾತು ಕೇಳಿ ಹಾಳಾದೆ. ಸಾಲಿಗೆ ಹೋಗಿದ್ರೆ ಈ ಪಾಡು ನಿಂಗೆ ಬತ್ತಿತ್ತ? ಸಾಲಿಗೆ ಹೋಗು ಅಂದ್ರೆ ಕಾಡ್ ಬಿದ್ದು ಓಡಿ ಹೋತಿದ್ದೆ, ತ್ವಾಟ ಬಿದ್ದು ಓಡಿ ಹೋತಿದ್ದೆ, ಕೊಡೊ ಮೂರ‍್ಕಾಸಿಗೆ ಪ್ಲಾಂಟೇಷನ್‌ನಲ್ಲಿ ಗಿಡ ನೆಡಕ್ಕೆ ಹೋತಿದ್ದೆ. ಅವ್ವನ ಮಾತು ಕೇಳ್ದೆ ಇರೋ ಮುಂಡೆಗಂಡ್ರು ಉದ್ದಾರವಾಗಿದ್ದು ಎಲ್ಲಿ, ಹೇಳು…” ಎಂದು ಒಂದೇ ಸಮನೆ ಸಾಬಾಸಕೆ ಹಿಡಿದ್ಲು ಬಸಮ್ಮ. ಅವ್ವನ ಮಾತಿಗೆ ಯಾವ ಉತ್ತರ ಕೊಡದೆ ಪಕೀರ ಮೌನಕ್ಕೆ ಜಾರಿದ. ಈ ಕಡೆ ಅವ್ವನ ಬೈಗುಳ, ಅಪ್ಪನ ನೋವು, ಮನೆಯಲ್ಲಿನ ತಾಂಡವ ನೃತ್ಯ ಮಾಡುವ ಹಸಿವು, ಬೆಂಗಳೂರಿನ ಮೋಸ, ಅದೇ ಪೊಲೀಸಿನವರು, ಹೋಟೆಲ್ ಮಾಲೀಕ, ಕರಣೆಯೇ ಇಲ್ಲದ ಊರು, ಜನ ಎಲ್ಲವನ್ನು ನೋಡಿದ ಪಕೀರನಿಗೆ ಸಂಕಟ, ತಳಮಳ ಸುರುವಾದವು. ತನ್ನವರು ಯಾರು ಇಲ್ಲ ಅನ್ನೋ ಅನಾಥಭಾವದಿಂದ ತಲೆಸಿಡಿತಕ್ಕೆ ಒಳಗಾಗಿ, ಅರಸಾಳಿಗೆ ಅನಾಸಿನ್ ಮಾತ್ರೆ ತರಲು ಸೈಕಲ್ ಏರಿದನು.
ಹೋಕ್ತಿದ್ದಾಗ ಬಹುಕಾಲದ ಗೆಳತಿ ಸುಂದರಿ ಸಿಕ್ಕಳು. “ಏನೋ ಪಕೀರಣ್ಣ, ಯಾವಾಗ ಬಂದೆ, ಧಣೇರ ಮನೆ ಆತು, ಬೆಂಗಳೂರು ಆತು, ಈಗ ಇದೇ ಊರು ಬೇಕಾಯ್ತ..” ಎಂದು ಅಣಕಿಸಿದಳು. “ಏನು ಮಾಡೋದು ಸುಂದರಿ, ಪರ ಊರಿನ ಔಷಧಿ ಬೇಕಾದ್ರು, ಇದ್ದ ಊರಿನ ನೀರು ಬೇಕಲ್ಲ”. ನಮ್ಮಂತವರಿಗೆ ಬೆಂಗಳೂರು ಅಲ್ಲ ಕಣೇ. ಏನಿದ್ರು ಭಂಡ್ರಿಗೆ, ಮೂರು ಬಿಟ್ಟವರಿಗೆ, ಮೋಸಗಾರರಿಗೆ, ಕಳ್ರಿಗೆ, ಸುಳ್ರಿಗೆ, ನೀಚರಿಗೆ, ವಂಚಕರಿಗೆ….” ತನ್ನೆಲ್ಲಾ ಸಿಟ್ಟುಗಳನ್ನು, ಬೆಂಗಳೂರಿನಲ್ಲಿ ತಾನು ಅನುಭವಿಸಿದ್ದನ್ನೆಲ್ಲಾ ಒಂದೇ ಬಾರಿಗೆ ಹೊರಹಾಕಿದ. “ಇರಲಿ ಸಮಧಾನ ಮಾಡಿಕೋ, ಇಲ್ಲೇ ಒಂದು ಕ್ವಿಂಟಲ್ ಶುಂಠಿ ನೆಟ್ಟಿದ್ರೆ, ಅದೇ ದುಡ್ಡು ಬತ್ತಿತಲ್ಲ ಮರಾಯ. ಅಣ್ಣಾವ್ರ ಸಿನಿಮಾ ಬಂಗಾರದ ಮನುಷ್ಯ ನೋಡಿಲ್ಲಾನು. ಆದದ್ದು ಆತು, ಮುಂದೇನು ಯೋಚಿಸು, ಹೆದರ‍್ಕೋಬ್ಯಾಡ. ಹೋದ ವರ್ಷ ನಾನೇ ಓಬುಜಿಯಾಗಿ ಒಂದು ಕ್ವಿಂಟಲ್ ಶುಂಠಿಯನ್ನು ನೆಟ್ಟಿದ್ದೆ, ಹನ್ನೆರಡು ಕ್ವಿಂಟಲ್ ಬಂದಿತ್ತು ನೋಡು. ಈ ಕಿವಿಯೋಲೆಯಿದೆಯೆಲ್ಲಾ ಅದರಲ್ಲೇ ತಂದಿದ್ದು” ಎಂದಳು. ಸುಂದರಿ ಹೇಳಿದ ಮಾತುಗಳನ್ನೆಲ್ಲಾ ಸಾವಧಾನವಾಗಿ ಕೇಳಿಸಿಕೊಂಡ ಪಕೀರನಿಗೆ, ಅವಳ ಸಾಂತ್ವನದ ಮಾತುಗಳು, ಸಾಧನೆಯ ಹೆಜ್ಜೆಗಳನ್ನು ಕೇಳಿಸಿಕೊಂಡ ಫಕೀರನಿಗೆ ಬತ್ತಿದ ಬಾವಿಯಲ್ಲಿ ನೀರು ಬಂದಂತೆಯೂ, ತಳಹಿಡಿದ ಪಾತ್ರೆಯೂ ಫಳಫಳ ಹೊಳೆಯುವಂತೆಯೂ ಆಯಿತು.
ಚಾಲಾಕಿ ಹುಡುಗಿಯ ಮಾತುಗಳನ್ನು ಕೇಳಿದ ಪಕೀರನಿಗೆ ಬದುಕಿನಲ್ಲಿ ಒಂದಷ್ಟು ಭರವಸೆ ಸಿಕ್ಕಿತು. ಮುಂದಿನ ವರ್ಷ ಏನಾದ್ರು ಆಗ್ಲಿ ಒಂದು ಎಕರೆ ಜಮೀನನ್ನು ಗೇಣಿ ತಗೊಂಡು ಶುಂಠಿ ನೆಡೋದೆ ಸರಿ ಅನ್ನೋ ತೀರ್ಮಾನಕ್ಕೆ ಬಂದನು. ಇದಕ್ಕಾಗಿ ಅರಸಾಳಿನ ಸೊಸೈಟಿಯಲ್ಲಿ ಸಾಲವನ್ನು ಪಡೆದನು. ಇನ್ನು ಯಾವ ಬೆಂಗಳೂರು, ಯಾವ ಗೌಡ್ರು ಮನೆಯೂ, ಯಾವ ಧಣೇರು ಮನೆಯೂ ಬೇಡವೆಂದು ಮಣ್ಣನ್ನು ನಂಬಲು ಹೊರಟನು. ಪಕೀರನ ದುಡಿಮೆ ಮಾರ್ಗವನ್ನು, ಅವನ ದಿನನಿತ್ಯದ ಕೆಲಸವನ್ನು ಕಂಡ ಸುಂದರಿಗೆ ಅವನ ಮೇಲೆ ಬಹುವರ್ಷಗಳ ಹಿಂದೆ ಇದ್ದ ನಂಬಿಕೆ ಹೊಸಹುಟ್ಟನ್ನು ಪಡೆಯಿತು. “ನಿನ್ನ ಜೊತೆ ಮಾತನಾಡೋದೆ ನನಗೊಂದು ಖುಷಿ, ನಿನ್ನ ಬಗ್ಗೆ ಬಾಳ ಪ್ರೀತಿ ಕಣೋ” ಅನ್ನೋ ಊವಾಚ ಒಂದು ದಿನ ಹೊರಗೆ ಹಾಕಿಯೇ ಬಿಟ್ಟಳು. ಹೆಚ್ಚು ಓದಿಲ್ಲದ, ಪೇಟೆಯಲ್ಲಿ ಇದ್ರು ಪೇಟೆಯ ನಯನಾಜೂಕಿನ ಭಾಷೆಗಳು ಅರ್ಥವಾಗದ ಪಕೀರನಿಗೆ ಸುಂದರಿ ಮಾತುಗಳು ವಯೋಸಹಜ ರೋಮಾಂಚನಕ್ಕೆ ಕಾರಣವಾಯಿತು. ಪಕೀರನಿಗೂ ಸುಂದರಿಯ ಮಾತುಗಳು, ಮುಯ್ಯಾಳು ಬೇಕಾದರೆ ಪರಸ್ಪರರ ಮನೆಗೆ ಹೋಗುವುದು ಮುಂದೆ ಖಾಯಂ ಆಯ್ತು. ಪಕೀರ ನೆಟ್ಟಿರುವ ಒಂದು ಎಕರೆ ಶುಂಠಿ ಹುಲುಸಾಗಿ ಬೆಳೆಯಿತು. ಸುಂದರಿಯ ಮಾತುಗಳು ಪಕೀರನ ತೋಳತೆಕ್ಕೆಯಲ್ಲಿ ಬಂಧಿಸುವಂತಾಯಿತು. ಶುಂಠಿ ಬೆಳೆ ಹುಲುಸಾಗಿ ಬಂದಿದ್ದರಿಂದ ಕೈತುಂಬಾ ದುಡ್ಡು ಸಿಕ್ಕಿತು. ಇದರಿಂದ ಪಕೀರನ ಸೊಸೈಟಿಯ ಸಾಲವು ತೀರಿತು. ಅಪ್ಪನ ಭೂಮಿಯಲ್ಲಿ ಒಂದಷ್ಟು ತೋಟವೂ ಕೂರಿಸುವ ಚೈತನ್ಯ ಒಡಮೂಡಿತು. ಓಡಾಡಲೂ ಬೈಕು ಬಂದು ಮನೆ ಸೇರಿ, ನಾನೇನು ಕಮ್ಮಿ ಅನ್ನುವ ಅಹಂ ಸಣ್ಣಗೆ ಕುಡಿಯೊಡೆಯಿತು. ಪಕೀರನಿಗೆ ದುಡ್ಡು ಬಂದು ಮನೆಸೇರಲು ಸುರುವಾದಂದಿನಿಂದ ಊರವರ ಹತ್ರ ಮಾತನಾಡುವುದನ್ನು ಕಡಿಮೆ ಮಾಡಿದನು. ಯಾವ ಸಂಬಂಧಿಕರ ಸಹವಾಸವನ್ನು, ಜೊತೆಯಲ್ಲಿರೋ ತಮ್ಮನ ಬಗ್ಗೆ, ತಂಗಿಯ ಬಗ್ಗೆ ಯೋಚಿಸುವುದನ್ನು ಮರೆತನು.
ಇದನ್ನೂ ಓದಿ-ಭಾಗ- 2 ಒಂದು ದೋಣಿಯ ಕಥೆ….
ತಾನು ದುಡಿದ ಒಂದು ಪಾಲು ಸುಂದರಿಯ ಮನೆ ಸೇರಲು ಸುರುವಾಯಿತು. ತಮ್ಮಿಬ್ಬರ ಭೇಟಿ ಯಾರಿಗೂ ಗೊತ್ತಾಗಬಾರದೆಂದು ಇಬ್ಬರು ದಿನನಿತ್ಯ ಓಡಾಡುವ ಮಾಮೂಲಿ ಜಾಗದಲ್ಲಿ ಗಂಟೆಗೆ ಒಂದರಂತೆ ಹಲಸಿನ ಎಲೆಯನ್ನು ಇಡೋ ಪ್ಲಾನ್ ಮಾಡಿಕೊಂಡರು. ಎರಡು ಎಲೆ ಇಟ್ರೆ ಎರಡು ಗಂಟೆ, ಮೂರು ಎಲೆ ಇಟ್ರೆ ಮೂರು ಗಂಟೆ, ನಾಲ್ಕು ಎಲೆ ಇಟ್ರೆ ನಾಲ್ಕು ಗಂಟೆ…ಹೀಗೆ ಸಮಯಕ್ಕೆ ಸರಿಯಾಗಿ ಅಮೃತಮತಿ ಅಷ್ಟಾವಕ್ರನ ಸೇರುವ, ಕೂಡುವ, ಮಾತನಾಡುವ ಬಯಕೆ ಸಾಗುವಾನೆ ಪ್ಲಾಂಟೇಷನ್ ನಲ್ಲಿ ನಿರಂತರವಾಯಿತು. ಪ್ರತಿದಿನ ಹಸಿ ಎಲೆ ರಸ್ತೆ ಮೇಲೆ ಬೀಳುವುದನ್ನು, ಪ್ಲಾಂಟೇಷನ್ ದಾರಿಯಲ್ಲಿ ಫಕೀರನು ಏಕಾಂಗಿಯಾಗಿ ಹೋಗುತ್ತಿರುವುದು ಕಂಡ ಅವನ ತಮ್ಮನ ಅನುಮಾನಕ್ಕೆ ಕಾರಣವಾಗುತ್ತಾ ಬಂತು. ಒಂದು ದಿನ ಗುಡ್ಡದ ಕಲ್ಲಬಂಡೆಯ ಇಳಿಜಾರಿನಲ್ಲಿ ಇಬ್ಬರೂ ಇರುವುದನ್ನು ಪ್ರತ್ಯಕ್ಷವಾಗಿ ನೋಡಿದನು. ತನ್ನವ್ವನಿಗೆ ಈ ವಿಷಯ ಹೇಳಿ, ಮನೆಯಲ್ಲಿ ರಂಪರಾಡಿಯೂ ಆಯಿತು. ಸುಂದರಿಯ ಮನೆಯಲ್ಲಿ ಯಾರು ಇಲ್ಲದಾಗ, ಅವರ ಮನೆಯಲ್ಲಿ ಉಳಿಯುವವರೆಗೆ ಅವರ ಸಂಬಂಧ ಮುಂದುವರೆಯಿತು. ಪ್ರತಿತಿಂಗಳ ಹದಿನೈದನೇ ತಾರೀಖಿಗೆ ರಜೆಯಾಗುವ ಸುಂದರಿ, ಆ ತಿಂಗಳಲ್ಲಿ ಇಪ್ಪತ್ತೈದನೇ ತಾರೀಕು ಬಂದರೂ ತಾನು ಮುಟ್ಟು ಆಗದೆ ಇರೋದು ತಿಳಿದು ಭಯಭೀತಳಾದಳು. ಎಷ್ಟು ದಿನ ಅಂತ ಸುಮ್ಮನಾಗುವುದೆಂದು ತಿಳಿದು, ತನಗೆ ತಾನೇ ಗಟ್ಟಿ ಧೈರ‍್ಯಮಾಡಿ ತನ್ನವ್ವ ಮಂಜಮ್ಮಳಿಗೆ ವಿಷಯ ಹೇಳಿದಳು. ಮಾನಮರ‍್ವಾದೆಗೆ ಅಂಜಿದ ತಾಯಿ ಮಂಜಮ್ಮಳಿಗೆ, ಮಗಳ ಈ ಸುದ್ದಿ ಬರಸಿಡಿಲೆರೆಗಿದಂತೆ ಆಯಿತು. ಹತ್ತಾರು ಕುಟುಂಬಗಳು, ಊರು ಕೇರಿ, ಸಂಬಂಧಿಕರು ಇವರ ಎದುರು ಮಗಳ ಈ ಸುದ್ದಿ ಹೌದಾದರೇ ಹೆಂಗೆ ತಲೆಯೆತ್ತಿ ನಿಲ್ಲುವುದೆಂಬ ಚಿಂತೆ ಸಾವಿರಾರು ಮೈಲು ಕಾಲ್ನಡಿಗೆಯಲ್ಲಿ ಕ್ರಮಿಸಿದ ಅನುಭವವಾಯಿತು. ದೂರದ ಪೇಟೆಗೆ ಹೋಗಿ, ಅಲ್ಲೊಬ್ಬರು ತಿಳಿದವರ ಸಹಾಯ ಪಡೆದು ಗರ್ಭಪಾತ ಮಾಡಿಸಿಕೊಂಡಳು. ಅಂತೂ ಸುಂದರಿ ತನಗಾಗಿರುವ ಸಂಕಟದಿಂದ ಹೊರಬಂದು, ಒಂದು ದಿನ ತನ್ನನ್ನು ಮದುವೆಯಾಗುವಂತೆ ಪಕೀರನಿಗೆ ಕೇಳಿದಳು. ಅವನೊಪ್ಪಲಿಲ್ಲ. ದುಡ್ಡು ಪಕೀರನ ಕೈಗೆ ಸಲೀಸಾಗಿ ಸಿಗೋ ಹೊತ್ತಿಗೆ, ತನಗಾರು ಬೇಡವೆಂದೇ ತಿಳಿದು, ತನ್ನ ತೃಷೆಗಳನ್ನು ಮಾತ್ರ ತೀರಿಸಿಕೊಳ್ಳುವ ಮನಸ್ಥಿತಿಯಲ್ಲಿ ಬಹುದೂರ ನಡೆದಿದ್ದನು.
ಈ ಮನುಷ್ಯ ಎಷ್ಟು ನೀಚ, ಹಣ ಮನುಷ್ಯನ ಹತ್ರ ಸುಳಿಯಲೇಬಾರದು. ನಂಬಿಕೆಯ ಕತ್ತು ಕೊಯ್ದ ಈ ಪಾಪಿ ಬೆಂಗಳೂರಲ್ಲಿ ಅನುಭವಿಸಿದ್ದಕ್ಕಿಂತಲೂ ನೂರುಪಟ್ಟು ಅನುಭವಿಸಬೇಕು ಎಂದು ಸುಂದರಿ ಶಪಿಸಿದಳು. ತನ್ನ ಬದುಕಿನಲ್ಲಿ ಆದ ಗಾಯ ಇನ್ನಾರಿಗೂ ಆಗಬಾರದೆಂಬ ಕನವರಿಕೆಯಲ್ಲಿ ಇನ್ನೂ ನಡೆಯುತ್ತಿದ್ದಾಳೆ. ಪಕೀರನಿಗೆ ತಾನು ಗಳಿಸಿದ ಹಣ, ಪೇಟೆ ಕಡೆ ಯೋಚಿಸುವಂತೆಯೂ ತಂಗಿ, ತಮ್ಮ, ಅಪ್ಪ, ಅವ್ವನ ಹಂಬಲವನ್ನು ಮರೆಯುವಂತೆಯೂ ಮಾಡಿತು.
ಅಕ್ಷರ ಜಗತ್ತಿನ ಅರಿವೇ ಇಲ್ಲದ ಪಕೀರನಿಗೆ ತಾನು ಮಾಡಿದ ಕೆಲಸಕ್ಕೆ ಪಾಪಪ್ರಜ್ಞೆ ಬರಲಿಲ್ಲ. ಗೌಡ್ರು ಮನೆ ಜೀತದಾಳಾಗಿ ಸಾಯುವವರೆಗೆ ದುಡಿದ ಹುಚ್ಚಪ್ಪನ ಕಾಲು ಸರಿಯಾಗಲೇ ಇಲ್ಲ. ಮಗನ ಮನಸ್ಥಿತಿ ನೋಡಿದ ಬಸಮ್ಮಳ ಕಣ್ಣೀರು ಬತ್ತಲಿಲ್ಲ. ಗಿಡುಗವೊಂದು ಕೆರೆಯಲ್ಲಿ ಆಡುತ್ತಿದ್ದ ಮೀನೊಂದನ್ನು ಗುರಿಯಿಟ್ಟು, ಧುಮುಕಿ ತನ್ನೆರೆಡು ಕಾಲುಗಳಿಂದ ಗಟ್ಟಿಯಾಗಿ ಹಿಡಿದು ಎತ್ತಿಕೊಂಡು ಹೋಯ್ತು. ಸುಂದರಿಯ ಕನಸುಗಳು ಗಿಡುಗನ ಕಾಲಿಗೆ ಸಿಕ್ಕ ಮೀನಿನಂತೆ ವಿಲವಿಲ ಒದ್ದಾಡಿದವು. ಪಕೀರನಂತಿರುವ ಹದ್ದುಗಳು ಇನ್ನೂ ಊರಲ್ಲಿ ಜೀವಂತವಾಗಿವೆ, ಕನಸು ಕಟ್ಟಿಕೊಳ್ಳುವ ಜೀವಗಳು ಬೇಯುತ್ತಿವೆ….
ಡಾ. ಅಣ್ಣಪ್ಪ ಎಸ್ ಮಳೀಮಠ್
ಸಹ ಪ್ರಾಧ್ಯಾಪಕರು