ಪ್ರಭುತ್ವದ ವತಿಯಿಂದಲೇ ನಡೆಯುತ್ತಿರುವ ಬುಲ್ ಡೋಜರ್ ಕ್ರೌರ್ಯವು ಕಾನೂನು ಆಧರಿಸಿದ ಆಡಳಿತ ಮತ್ತು ನ್ಯಾಯ ವ್ಯವಸ್ಥೆಗೇ ಒಂದು ಬೆದರಿಕೆಯಾಗುವ ಮಟ್ಟಿಗೆ ಬೆಳೆದಿದೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ, ನ್ಯಾಯಾಂಗದ ಮೇಲೆ ಜನರಿಗಿರುವ ವಿಶ್ವಾಸವೇ ನಾಶವಾಗಲಿದೆ. ನ್ಯಾಯಾಲಯಗಳು ಇರುವುದಾದರೂ ಯಾಕೆ ಎಂದು ಜನರೇ ಪ್ರಶ್ನಿಸುವಂತಾಗಲಿದೆ – ಶ್ರೀನಿವಾಸ ಕಾರ್ಕಳ.
ನೂರನಲವತ್ತು ಕೋಟಿ ಜನಸಂಖ್ಯೆ ಇರುವ ನಮ್ಮದು ‘ಜಗತ್ತಿನ ಅತಿದೊಡ್ಡ ಪ್ರಜಾತಂತ್ರ’ ಎಂಬ ಹೆಗ್ಗಳಿಕೆ ಹೊಂದಿರುವ ದೇಶ. ‘ಭಾರತವು ಪ್ರಜಾತಂತ್ರದ ತಾಯಿ, ಪ್ರಜಾತಂತ್ರವು ನಮ್ಮ ಡಿ ಎನ್ ಎ ಯಲ್ಲಿಯೇ ಇದೆ’ ಎಂದು ಈಗಿನ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ ಹೇಳುತ್ತಾರೆ. ಅತಿಥಿ ದೇವೋಭವ, ಸರ್ವಧರ್ಮ ಸಮಭಾವ, ವಸುದೈವ ಕುಟುಂಬಕಂ, ಸರ್ವೇ ಜನಾಃ ಸುಖಿನೋಭವಂತು ಎಂಬ ಉದಾತ್ತ ಚಿಂತನೆಗಳನ್ನು ಜಗತ್ತಿಗೆ ನೀಡಿದ ದೇಶ ನಮ್ಮದು. ಸತ್ಯ, ಅಹಿಂಸೆಯನ್ನು ಬೋಧಿಸಿದ, ಬದುಕಿದ ಗಾಂಧಿಯ ನಾಡು ನಮ್ಮದು. ಅಸಂಖ್ಯ ಜಾತಿ, ಮತ, ಕುಲ, ಭಾಷೆಗಳು ಶತಶತಮಾನಗಳಿಂದ ಸೌಹಾರ್ದದಿಂದ ಬದುಕಿದ, ಬಹುತ್ವ ಭಾರತ ನಮ್ಮದು. ಮೂಲತಃ ವಲಸಿಗರ ದೇಶವೇ ಆದ ಭಾರತದ ನಾವು ಬಂದವರನ್ನೆಲ್ಲ ನಮ್ಮವರೆಂದು ಗೌರವದಿಂದ ಸ್ವೀಕರಿಸಿ ಅವರನ್ನು ನಮ್ಮವರಾಗಿಸಿ ಅವರೊಂದಿಗೆ ಬಾಳಿದವರು. ನಮಗೆ ಯಾರಲ್ಲೂ ಭೇದ ಮಾಡಿ ಗೊತ್ತಿಲ್ಲ.
ನಮ್ಮಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವಿದೆ. ಸಮಾನತೆ, ಸ್ವಾತಂತ್ರ್ಯ, ಬಂಧುತ್ವ ಅದರ ತಳಹದಿ. ಜಾತಿ, ಮತ, ಕುಲ ಯಾವುದೇ ನೆಲೆಯಲ್ಲಿ ಯಾರನ್ನೂ ಭೇದಭಾವದಿಂದ ಕಾಣುವಂತಿಲ್ಲ ಎಂದು ಅದು ಹೇಳುತ್ತದೆ. ನಮ್ಮ ಸಂವಿಧಾನವೇ ನಮಗೆ ಘನತೆಯಿಂದ ಜೀವಿಸುವ ಹಕ್ಕನ್ನು ಕೊಟ್ಟಿದೆ. ಸಂವಿಧಾನದ 21 ನೇ ಪರಿಚ್ಛೇದದಲ್ಲಿ ಹೇಳಲಾಗಿರುವ ‘ಜೀವಿಸುವ ಹಕ್ಕು’ ಎಂದರೆ, ‘ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕು’. ಈ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ನಮ್ಮಲ್ಲಿ ನ್ಯಾಯಾಲಯಗಳಿವೆ. ನಮ್ಮ ಜನಪ್ರತಿನಿಧಿಗಳು ‘ರಾಗ ದ್ವೇಷವಿಲ್ಲದೆ ಕೆಲಸ ಮಾಡುತ್ತೇನೆ’ ಎಂದು ಸಂವಿಧಾನದ ಪ್ರಕಾರವೇ ಅಧಿಕಾರದ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಾರೆ.
ನಮ್ಮದು ಪ್ರಜಾತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶ. ಸುಸೂತ್ರ ಆಡಳಿತಕ್ಕಾಗಿ ನಮ್ಮಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವೆ. ಇಲ್ಲಿ ಎಲ್ಲವೂ ನಡೆಯಬೇಕಾದುದು ಕಾನೂನು ಆಧರಿಸಿದ ಆಡಳಿತ ಆಧರಿಸಿ. ಇಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಪ್ರಕ್ರಿಯೆಗಳಿವೆ. ಅಪರಾಧ ಕೃತ್ಯವೊಂದು ನಡೆದರೆ ಅಂತಹ ಕೃತ್ಯ ನಡೆಸಿದವರನ್ನು ಪೊಲೀಸರು ಬಂಧಿಸುತ್ತಾರೆ. ಹೀಗೆ ಬಂಧಿತ ವ್ಯಕ್ತಿ ಕೇವಲ ‘ಆರೋಪಿ’. ಆತನ ಮೇಲೆ ದೋಷಾರೋಪಣೆ ನಡೆಸಿ ಆತನ್ನು ನ್ಯಾಯಾಲಯದ ಮುಂದೆ ನಿಲ್ಲಿಸುತ್ತಾರೆ. ಆತ ಅಪರಾಧಿಯೋ ನಿರಪರಾಧಿಯೋ ಎಂದು ತೀರ್ಮಾನಿಸಬೇಕಾದುದು ನ್ಯಾಯಾಧೀಶರು. ಅಪರಾಧಿಯೇ ಆದರೂ ನ್ಯಾಯಾಧೀಶರು ಮನಸೋ ಇಚ್ಛೆ ಶಿಕ್ಷೆ ನೀಡುವಂತಿಲ್ಲ. ಕಾನೂನು ನಿಗದಿಪಡಿಸಿದ ಶಿಕ್ಷೆಯನ್ನೇ ನೀಡಬೇಕಾಗುತ್ತದೆ.
ಅರಾಜಕತೆಯೆಡೆಗೆ ಭಾರತ
ಈ ಎಲ್ಲ ಅಂಶಗಳಿಗೆ ಅನುಗುಣವಾಗಿಯೇ ಈ ದೇಶ ಸರಿಸುಮಾರು ಅರವತ್ತೈದು ವರ್ಷಗಳಿಂದ ಬಾಳಿ ಬದುಕಿಕೊಂಡು ಬಂದಿದೆ. ಆದರೆ ದುರದೃಷ್ಟವಶಾತ್, ಫ್ಯಾಸಿಸ್ಟ್ ಶಕ್ತಿಯ ಕಪಿ ಮುಷ್ಟಿಗೆ ಸಿಲುಕಿದ ಬಳಿಕ, ಕಳೆದ ಒಂದು ದಶಕದಿಂದ ಇಂತಹ ಒಂದು ಚಂದದ ದೇಶವನ್ನು ‘ಬನಾನಾ ರಿಪಬ್ಲಿಕ್’ ಮಾಡುವ, ಇಲ್ಲಿ ‘ಜಂಗಲ್ ನ್ಯಾಯ’ ಜಾರಿಗೊಳಿಸುವ ಗಂಭೀರ ಯತ್ನ ನಡೆದಿದೆ. ನಮ್ಮದೇ ದೇಶದ ಪ್ರಜೆಗಳನ್ನು ಮತಧರ್ಮದ ನೆಲೆಯಲ್ಲಿ ದ್ವೇಷದಿಂದ ಅನ್ಯರಂತೆ ನೋಡುವ ಕಾರ್ಯಕ್ರಮ ಭರದಿಂದ ನಡೆದಿದೆ. ಆರೋಪಿಯೊಬ್ಬನ ಅಪರಾಧವನ್ನು ಸಾಬೀತುಪಡಿಸಿ ಆತನನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ ಶಿಕ್ಷೆ ನೀಡಬೇಕಾದ ದೇಶದಲ್ಲಿ ನ್ಯಾಯಾಲಯದ ಕೆಲಸವನ್ನು ಸರಕಾರ ಮತ್ತು ಪೊಲೀಸರೇ ಮಾಡಲಾರಂಭಿಸಿದ್ದಾರೆ. ವಿಶೇಷವಾಗಿ, ಮುಸ್ಲಿಮರಾದರೆ ಅವರನ್ನು ಆರೋಪಿಯೆಂದು ನಿರ್ಧರಿಸುವವರೂ ಸ್ಥಳೀಯ ಅಧಿಕಾರಿಗಳೇ, ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸುವವರೂ ಅವರೇ.
ಶಿಕ್ಷೆಯಾದರೂ ಎಂಥದ್ದು? ಮಗ ಮಾಡಿರಬಹುದಾದ ತಪ್ಪಿಗೆ ಆತನ ತಂದೆ ತಾಯಿಯ, ಅಜ್ಜ ಅಜ್ಜಿಯ ಮನೆಯನ್ನು ಕೆಡವಿ ಹಾಕುವುದು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ. ಮನೆ ಕಟ್ಟಲು ಅಪಾರ ಹಣ, ಶ್ರಮ, ಸಮಯ ಬೇಕು. ಅಂಥ ಮನೆಯನ್ನು ನೆಲಸಮ ಗೊಳಿಸುವುದು ಬುಲ್ ಡೋಜರ್ ಗೆ ನಿಮಿಷಗಳ ಕೆಲಸ.
ಈ ಬುಲ್ ಡೋಜರ್ ಕಾರ್ಯಾಚರಣೆಗೆ ಕೊಡುವ ಸಬೂಬಾದರೂ ಏನು? ಅದು ಅಕ್ರಮ ಕಟ್ಟಡ ಎನ್ನುವುದು. ಅಕ್ರಮ ಕಟ್ಟಡ ಹೌದಾದರೆ, ಅದನ್ನು ಕಟ್ಟುವಾಗ ಸಂಬಂಧಿತ ಅಧಿಕಾರಿಗಳು ಏನು ಮಾಡುತ್ತಿದ್ದರು? ಅವರ ಕರ್ತವ್ಯಲೋಪಕ್ಕೆ ಏನು ಶಿಕ್ಷೆ? ಒಂದು ವೇಳೆ ಆರೋಪಿಯು ನಿರಪರಾಧಿಯೆಂದು ಸಾಬೀತಾದರೆ ಆ ಮನೆಯನ್ನು ಮತ್ತೆ ಕಟ್ಟಿಕೊಡುವವರು ಯಾರು?
ಮಹಾಕಾಲ ಮೆರವಣಿಗೆಯ ಸಮಯದಲ್ಲಿ ಉಗುಳಿದ ಎಂಬ ನೆಪದಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ 18 ರ ಹರೆಯದ ಅದ್ನನ್ ಮನ್ಸೂರಿಯ ಮನೆಯನ್ನು ಕೆಡವಲಾಯಿತು. ಆತ 150 ದಿನಗಳನ್ನು ಜೈಲಿನಲ್ಲಿ ಕಳೆದ ಬಳಿಕ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ಕೊಟ್ಟು ಬಿಡುಗಡೆ ಮಾಡಿತು. ಬಿಡುಗಡೆಯಾಗಲು ಕಾರಣ ಏನು ಗೊತ್ತೇ? ದೂರು ಕೊಟ್ಟವರೂ ಸಾಕ್ಷಿಗಳೂ ನಮಗೆ ಈ ಪ್ರಕರಣದೊಂದಿಗೆ ಸಂಬಂಧವೇ ಇಲ್ಲ ಎಂದರು!
ಅದೆಲ್ಲ ಸರಿ, ಹೀಗೆ ನ್ಯಾಯಾಲಯದ ಕೆಲಸವನ್ನು ಪೊಲೀಸರೇ ಮಾಡತೊಡಗಿದಾಗ ಅದನ್ನು ನ್ಯಾಯಾಲಯ ಪ್ರಶ್ನಿಸಬೇಡವೇ? ಮನೆಗಳನ್ನು ಕಟ್ಟಿಕೊಡಬೇಕಾದ ಸರಕಾರವೇ ಪ್ರಜೆಗಳ ಮನೆಗಳನ್ನು ಕೆಡವಲಾರಂಭಿಸಿದಾಗ ಪ್ರಜೆಗಳ ಸಂವಿಧಾನಾತ್ಮಕ ಮತ್ತು ಮಾನವ ಹಕ್ಕುಗಳನ್ನು ಕಾಪಾಡಬೇಕಾದುದು ನ್ಯಾಯಾಲಯಗಳ ಕೆಲಸವಲ್ಲವೇ? ಆದರೆ ಆ ಕೆಲಸವನ್ನು ಅವು ಯಾಕೆ ಮಾಡುತ್ತಿಲ್ಲ? ಯಾರಲ್ಲಿ ಕೇಳೋಣ?
ಬುಲ್ ಡೋಜರ್ (ಅ)ನ್ಯಾಯದ ಪಿತಾಮಹ
ಇವೆಲ್ಲ ಆರಂಭವಾದುದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ. ‘ಸಮಾಜದ ಮಹಿಳೆ ಮತ್ತು ದುರ್ಬಲ ವರ್ಗಗಳ ವಿರುದ್ಧ ಅಪರಾಧ ಎಸಗುವ ಯಾರೇ ಆಗಲಿ, ಅವರ ಮನೆಯನ್ನು ನನ್ನ ಸರಕಾರ ಕೆಡವಿಹಾಕಲಿದೆ’ ಎಂದು ಅವರು 2017 ರಲ್ಲಿ ಘೋಷಿಸಿದ್ದರು. 2020 ರಲ್ಲಿ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮತ್ತು ಎಂ ಎಲ್ ಎ ಮುಕ್ತಾರ್ ಅನ್ಸಾರಿಯ ಮನೆಗಳ ಮೇಲೆ ಬುಲ್ ಡೋಜರ್ ಓಡಿಸಿದಾಗ ಇದು ಅಧಿಕೃತವಾಗಿ ಜಾರಿಗೆ ಗಮನಕ್ಕೆ ಬಂತು.
2022 ರ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಯೋಗಿಯ ಬೆಂಬಲಿಗರು ಅವರನ್ನು ‘ಬುಲ್ ಡೋಜರ್ ಬಾಬಾ’, ‘ಬುಲ್ ಡೋಜರ್ ಮಾಮಾ’ ಎಂಬ ಬಿರುದುಗಳಿಂದ ಹಾಡಿ ಹೊಗಳಿದರು. ಕ್ರಮೇಣ ಈ ದುಷ್ಟ ಸಂಸ್ಕೃತಿ ಮಧ್ಯಪ್ರದೇಶ, ಹರ್ಯಾಣಾಗಳಿಗೂ ಹರಡಿತು.
ಕಳೆದ ವರ್ಷ ಹರ್ಯಾಣಾದ ನೂಹ್ ನಲ್ಲಿ ಬುಲ್ ಡೋಜರ್ ಕಾರ್ಯಾಚರಣೆ ನಡೆದಾಗ ಮಧ್ಯಪ್ರವೇಶಿಸಿದ ಪಂಜಾಬ್ ಹರ್ಯಾಣಾ ಹೈಕೋರ್ಟ್ ‘ಒಂದು ಸಮುದಾಯದ ವಿರುದ್ಧ ಜನಾಂಗ ನಾಶದ (ಎತ್ನಿಕ್ ಕ್ಲೆನ್ಸಿಂಗ್) ಕೆಲಸವನ್ನು ಪ್ರಭುತ್ವವೇ ನಡೆಸುತ್ತಿದೆ’ ಎಂದಿತು. ಈ ವರ್ಷದ ಆರಂಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್, ಕಾನೂನು ಬಾಹಿರವಾಗಿ ಮನೆ ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ಕೊಡುವಂತೆ ಸರಕಾರಕ್ಕೆ ಆದೇಶಿಸುತ್ತಾ ‘ಈಗೀಗ ಸೂಕ್ತ ಕಾನೂನು ಪ್ರಕ್ರಿಯೆ, ನೈಸರ್ಗಿಕ ನ್ಯಾಯ ಪಾಲಿಸದೆ ಮನೆಗಳನ್ನು ಧ್ವಂಸ ಮಾಡುವುದು ಸ್ಥಳೀಯಾಡಳಿತಗಳಿಗೆ ಒಂದು ಫ್ಯಾಶನ್ನೇ ಆಗಿಬಿಟ್ಟಿದೆ’ ಎಂದು ವಾಗ್ದಾಳಿ ನಡೆಸಿತು.
ವರದಿಗಳ ಪ್ರಕಾರ ಈ ಅಮಾನವೀಯ ಮತ್ತು ಅನಾಗರಿಕ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಬಹುತೇಕರು ಮುಸ್ಲಿಮರು. ದಿಲ್ಲಿಯ ಜಹಾಂಗೀರ್ ಪುರಿ (2022), ಮಧ್ಯಪ್ರದೇಶದ ಖಾರ್ಗೋನೆ (2022), ಉತ್ತರಪ್ರದೇಶದ ಪ್ರಯಾಗರಾಜ್ (2022), ಹರ್ಯಾಣಾದ ನೂಹ್ (2023) ಇಲ್ಲೆಲ್ಲ ಮುಸ್ಲಿಮರ ಮನೆಗಳು ಸರಕಾರಿ ದಾಳಿಯ ಗುರಿಯಾದವು. ಮುಸ್ಲಿಮರ 128 ಮನೆಗಳನ್ನು ಧ್ವಂಸ ಮಾಡಲಾಯಿತು, 617 ಮಂದಿಗೆ ಅನ್ಯಾಯವಾಯಿತು.
ಸರ್ವೋಚ್ಚ ನ್ಯಾಯಾಲಯ ಮಾತನಾಡುತ್ತಿಲ್ಲ !
ವರದಿಯೊಂದರ ಪ್ರಕಾರ ಕಳೆದ ಕೇವಲ ಎರಡು ವರ್ಷಗಳಲ್ಲಿ ದೇಶದಲ್ಲಿ 1,50,000 ಮನೆಗಳನ್ನು ಕೆಡವಲಾಗಿದೆ. 7,38,000 ಜನರನ್ನು ಮನೆರಹಿತರನ್ನಾಗಿಸಿ ಬೀದಿಗೆ ತಳ್ಳಲಾಗಿದೆ. ದೇಶದ ಪ್ರತಿಯೊಂದು ಕಟ್ಟಡವೂ ದೇಶದ ಆಸ್ತಿಯಲ್ಲವೇ? ಅವನ್ನು ವಶಪಡಿಸಿಕೊಂಡು ಬೇರೆ ರೀತಿಯಲ್ಲಿ ಬಳಸಿಕೊಳ್ಳಲಿ. ಆದರೆ ಕೆಡಹುವುದು ಯಾಕೆ? ಬೇರೆ ದೇಶಗಳಲ್ಲಿ ಪ್ರಜೆಗಳಿಗೆ ಮನೆ ಕಟ್ಟಿಕೊಡಲು ಅಲ್ಲಿನ ಪ್ರಭುತ್ವ ಒದ್ದಾಡುತ್ತದೆ. ಆದರೆ ಜಗತ್ತಿನ ಅತಿದೊಡ್ಡ ಪ್ರಜಾತಂತ್ರದಲ್ಲಿ ಪ್ರಜೆಗಳು ಕಟ್ಟಿಕೊಂಡ ಮನೆಗಳನ್ನು ಪ್ರಭುತ್ವವೇ ನಾಶ ಮಾಡುವುದು ಎಂತಹ ವಿಪರ್ಯಾಸ?!
ದೇಶದ ಸರ್ವೋಚ್ಚ ನ್ಯಾಯಾಲಯ ಒಂದೇ ಒಂದು ಆದೇಶ ಹೊರಡಿಸಿದರೂ ಸಾಕು, ಈ ಸರಕಾರಿ ಕ್ರೌರ್ಯ ನಾಳೆಯೇ ನಿಲ್ಲುತ್ತದೆ. ಆದರೆ ನ್ಯಾಯಾಲಯ ಮಾತನಾಡುತ್ತಿಲ್ಲ. ಹಾಗಾಗಿಯೇ ಬುಲ್ ಡೋಜರ್ ಕಾರ್ಯಾಚರಣೆ ಎಗ್ಗಿಲ್ಲದೆ ಮುಂದುವರಿಯುತ್ತಿದೆ.
ಮೊನ್ನೆ ಮೊನ್ನೆಯಷ್ಟೇ ಮಧ್ಯಪ್ರದೇಶದ ಛತಾರಪುರದಲ್ಲಿ ಕಾಂಗ್ರೆಸ್ ನಾಯಕ ಹಾಜಿ ಶೆಹಜಾದ್ ಅಲಿಯ 20,000 ಚದರ ಅಡಿಯ ಬೃಹತ್ ಬಂಗಲೆಯನ್ನು ಬುಲ್ ಡೋಜರ್ ಬಳಸಿ ನಾಶಪಡಿಸಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿಯೇ ಈ ಸರಕಾರಿ ಅನ್ಯಾಯವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಸೋಶಿಯಲ್ ಮೀಡಿಯಾದ ತುಂಬಾ ಖಂಡನೆ ವ್ಯಕ್ತವಾಯಿತು. ಸರ್ವೋಚ್ಚ ನ್ಯಾಯಾಲಯ ಯಾಕೆ ಇದನ್ನು ಸುಮೋಟೋ ಆಗಿ ಪರಿಗಣಿಸಿ ಈ ಅನ್ಯಾಯಕ್ಕೆ ತಡೆ ಹಾಕುವುದಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿಯೂ ಆಯಿತು. ಆದರೆ ಸುಪ್ರೀಂ ಕೋರ್ಟ್ ಮೌನ ಮುರಿದಿಲ್ಲ.
ಪ್ರಭುತ್ವದ ವತಿಯಿಂದಲೇ ನಡೆಯುತ್ತಿರುವ ಬುಲ್ ಡೋಜರ್ ಕ್ರೌರ್ಯವು ಕಾನೂನು ಆಧರಿಸಿದ ಆಡಳಿತ ಮತ್ತು ನ್ಯಾಯ ವ್ಯವಸ್ಥೆಗೇ ಒಂದು ಬೆದರಿಕೆಯಾಗುವ ಮಟ್ಟಿಗೆ ಬೆಳೆದಿದೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ, ನ್ಯಾಯಾಂಗದ ಮೇಲೆ ಜನರಿಗಿರುವ ವಿಶ್ವಾಸವೇ ನಾಶವಾಗಲಿದೆ. ನ್ಯಾಯಾಲಯಗಳು ಇರುವುದಾದರೂ ಯಾಕೆ ಎಂದು ಜನರೇ ಪ್ರಶ್ನಿಸುವಂತಾಗಲಿದೆ.
ಶ್ರೀನಿವಾಸ ಕಾರ್ಕಳ
ಸಾಮಾಜಿಕ ಹೋರಾಟಗಾರರು
ಇದನ್ನೂ ಓದಿ- KPSC ಅಧಿಕಾರಿಗಳ ಹೊಣೆಗೇಡಿತನಕ್ಕೆ ಕನ್ನಡಿ ಹಿಡಿದ ಪ್ರಶ್ನೆ ಪತ್ರಿಕೆ! ಇದು ಅಸಡ್ಡೆಯೋ? ಬಡವರ ಮಕ್ಕಳ ವಿರುದ್ಧದ ಪಿತೂರಿಯೋ?