ಸಿದ್ದರಾಮಯ್ಯನವರ 40 ವರ್ಷದ ಕಳಂಕ ರಹಿತ ರಾಜಕಾರಣಕ್ಕೆ ಕಪ್ಪು ಮಸಿಬಳಿಯಲು ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳು ಒಟ್ಟುಗೂಡಿವೆ. ಅದಕ್ಕಿಂತ ಹೆಚ್ಚಾಗಿ ಹಿಂದುಳಿದ ವರ್ಗದ ನಾಯಕನ್ನು ಅಸ್ಥಿರಗೊಳಿಸಲು ಪ್ರಬಲ ಜಾತಿಗಳು ಕೈ ಜೋಡಿಸಿಕೊಂಡಿದ್ದು, ಅದು ಬೆಂಗಳೂರು ಟು ಮೈಸೂರು ಹೆದ್ದಾರಿಯ ತುಂಬಾ ಕಮಟು ವಾಸನೆಯಾಗಿ ಮೂಗಿಗೆ ರಾಚುತ್ತಿದೆ – ಆಕಾಶ್ ಆರ್ ಎಸ್, ಪತ್ರಕರ್ತರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಹಣಿಯಲು ಎಲ್ಲಾ ರೀತಿಯ ಕಸರತ್ತು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಅದರಂತೆ ಮುಡಾ ಹಗರಣದ ಬೆಂಬಿದ್ದಿರುವ ವಿರೋಧ ಪಕ್ಷದ ಬಿಜೆಪಿ ನಾಯಕರು ಭ್ರಷ್ಟಾಚಾರದ ಕೆಸರನ್ನು ಸಿದ್ದರಾಮಯ್ಯರ ಮೇಲೆ ಎರಚುತ್ತಲೆ ಇದ್ದಾರೆ. ಅಧಿಕಾರದ ದುರಾಸೆಗೆ ಬಿದ್ದಿರುವ ಸೋ ಕಾಲ್ಡ್ ಜಾತ್ಯತೀತ ಪಕ್ಷವೂ ಅದರ ಜೊತೆಗೂಡಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರಿಂದ ಶೋಕಾಸ್ ನೋಟಿಸ್ ನೀಡಿ ಮತ್ತಷ್ಟು ಇಕ್ಕಟಿಗೆ ಸಿಲುಕಿಸುವ ಸಂಚಿನಲ್ಲಿದ್ದಾರೆ. ಆದರೆ ಇದು ಮೇಲ್ನೋಟಕ್ಕೆ ಮಾತ್ರ ರಾಜಕೀಯವಾಗಿ ಕಂಡರು ಒಳಗೊಳಗೆ ಸಿದ್ದರಾಮಯ್ಯನವರ ನೈತಿಕ ಬದುಕು ಹಾಗೂ ಅವರ ಸಿದ್ಧಾಂತಗಳ ದಮನಕ್ಕೆ ನಿಂತಂತಿದೆ.
ಸಿದ್ದರಾಮಯ್ಯನವರ ಅಹಿಂದ ಸಮಾವೇಶ ಅವರ ಇಡೀ ರಾಜಕೀಯ ಬದುಕಿನಲ್ಲಿ ಮತ್ತು ರಾಜ್ಯ ರಾಜಕಾರಣದಲ್ಲಿ ಆದ ಬದಲಾವಣೆಯನ್ನು ಈ ನಾಡಿನ ಜನರು ದೃಶ್ಯಕಾವ್ಯವಾಗಿ ನೋಡಿದ್ದಾರೆ. ಅಲ್ಲಿಯವರೆಗೂ ರಾಜಕಾರಣವು ಕೇವಲ ಒಕ್ಕಲಿಗ ಮತ್ತು ಲಿಂಗಾಯತ ಪ್ರಬಲ ಸಮುದಾಯಗಳ ಹಿಡಿತದಲ್ಲಿ ಬಂಧಿಯಾಗಿತ್ತು. ಅಹಿಂದ ಇವೆಲ್ಲವನ್ನೂ ಶಮನ ಮಾಡುವಲ್ಲಿ ಯಶಸ್ವಿಯಾಯಿತು. ಅಲ್ಲಿಂದ ಇಲ್ಲಿಯವರೆಗೂ ಸಿದ್ದರಾಮಯ್ಯನವರ ಮೇಲೆ ವಿಷಕಾರಿದ ಜಂತುಗಳಿಲ್ಲ!. ಈಗ ಮತ್ತೇ ಅದೇ ಪ್ರಬಲ ಸಮುದಾಯಗಳು ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮಣಿಸಲು ಸಜ್ಜಾಗಿವೆ. ಮೈತ್ರಿ ಪಕ್ಷದ ಪಾದಯಾತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವೆಲ್ಲವೂ ಸ್ವಷ್ಟವಾಗಿ ಕಣ್ಣೆದುರಿಗೆ ಗೋಚರಿಸುತ್ತವೆ. ಹಾಗಾದರೆ ಒಬ್ಬ ಜನಪ್ರಿಯ ಮುಖ್ಯಮಂತ್ರಿಯ ಮೇಲೆ ಒಂದು ರಾಷ್ಟ್ರೀಯ ಪಕ್ಷಕ್ಕೆ ಇಷ್ಟೊಂದು ಹಗೆತನ ಯಾಕೆ?. ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ಮಣಿಸಲು ತವಕಿಸುತ್ತಿರುವುದಾದರೂ ಯಾಕೆ?. ಮಾನಸಿಕವಾಗಿ ಕುಗ್ಗಿಸಲಾ?. ಇಲ್ಲ, ಹಿಂದುಳಿದ ವರ್ಗಕ್ಕೆ ಸೇರದವರೆಂದಾ?. ಅಥವಾ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಬಹಿರಂಗವಾಗಿ ಟೀಕೆಗೆ ಒಳಪಡಿಸಿದ್ದಕ್ಕಾ?.
ಸಿದ್ದರಾಮಯ್ಯ ಮತ್ತು ಬಿಜೆಪಿ
70 ವರ್ಷಗಳ ರಾಜಕೀಯ ಇತಿಹಾಸ ನೋಡಿದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜಕೀಯ ಅಸ್ತಿತ್ವದ ತಿಕ್ಕಾಟ ನಡೆಯುತ್ತಲೆ ಬಂದಿದೆ. ಆದರೆ ಈಗ ಅದು ಬದಲಾಗಿ ಕಳೆದ 10 ವರ್ಷಗಳಿಂದ ಸೈದ್ಧಾಂತಿಕ ಹೋರಾಟವಾಗಿದ್ದದ್ದು, ಕಾಂಗ್ರೆಸ್ ಹೊರತಾಗಿ ಸಿದ್ದರಾಮಯ್ಯ ಮತ್ತು ಬಿಜೆಪಿ ಎಂಬ ರಾಜಕೀಯ ಸಂಘರ್ಷಕ್ಕೆ ತಿರುಗಿ ನಿಂತಿದೆ. ಅದು ಮುಂದುವರೆದ ಭಾಗದಂತೆ ಮುಡಾ ಹಗರಣ ಮಧ್ಯ ಪ್ರವೇಶಿಸಿದೆ. ಹಾಗಾದರೆ ಬಿಜೆಪಿ ಇದೇ ಮೊದಲಾ ಸಿದ್ದರಾಮಯ್ಯನವರ ಮೇಲೆ ಮುಗಿಬಿದ್ದಿರುವುದು ಎಂದರೆ, ಅಲ್ಲವೇ ಅಲ್ಲ. ಅದು ನಿರಂತರ ಪ್ರಯತ್ನದಲ್ಲಿದೆ. ಆದರೆ ಯಶಸ್ಸು ಕಂಡಿಲ್ಲ. ಸಿದ್ದರಾಮಯ್ಯ ಅಧಿಕಾರದ ಗದ್ದುಗೆ ಏರಿದ ಕ್ಷಣದಿಂದಲೂ ಬಿಜೆಪಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯವಾಗಿ ಆಪಾದನೆಗಳು, ಆರೋಪಗಳನ್ನು ಎದುರಿಸುತ್ತಲೆ ಬಂದಿದ್ದಾರೆ. ಧರ್ಮ, ಜಾತಿಗಳ ಅಸ್ತ್ರಗಳನ್ನು ಪ್ರಯೋಗಿಸುತ್ತಲೆ ಬಂದಿದ್ದಾರೆ. ಮೀನು ತಿಂದು ಧರ್ಮಸ್ಥಳಕ್ಕೆ ಹೋದರು, ಮಾಂಸ ತಿಂದು ಕೊಡಗಿನ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನ ಹಾಗೂ ಸುತ್ತೂರು ಮಠಕ್ಕೆ ಹೋಗಿದ್ದಾರೆ ಎಂಬ ಆರೋಪಗಳ ಸುರಿಮಳೆ ಸುರಿಸಿ ರಾಜಕೀಯದ ಹೊರತಾಗಿ ತಮ್ಮ ಸಿದ್ಧಾಂತಗಳನ್ನು ಸಿದ್ದರಾಮಯ್ಯನವರ ಮೇಲೆ ಪ್ರಯೋಗಿಸಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದ್ದಕ್ಕೆ ದಲಿತ ನಾಯಕನ ತಲೆ ಮೇಲೆ ಆರ್‌ಎಸ್‌ಎಸ್ ಚಡ್ಡಿ ಹೊರೆಸಿ ಪ್ರತಿಭಟನೆ ನಡೆಸಿದ್ದರು. ಆ ನಿಟ್ಟಿನಲ್ಲಿ ಮತದಾರರ ಭಾವನೆಗಳನ್ನು ಧರ್ಮ, ಜಾತಿ, ಪಾವಿತ್ರ್ಯ ಎಂಬ ಚೌಕಟ್ಟಿಗೆ ಹಾಕಿ ನಾಸ್ತಿಕ, ಧರ್ಮ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಹೊರಟಿದ್ದರು. ಆದರೆ ಸಿದ್ದರಾಮಯ್ಯನವರು ಅವೆಲ್ಲನ್ನು ಸಮರ್ಥವಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಎದುರಿಸಿ ಬಿಜೆಪಿಗೆ ತೀವ್ರ ಮುಖಭಂಗ ಮಾಡಿದರು.
ಸಿದ್ದರಾಮಯ್ಯ ಮತ್ತು ಪ್ರಬಲ ಜಾತಿಗಳು
ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿ ಶೋಷಿತ ವರ್ಗಕ್ಕೆ ಶಕ್ತಿ ತುಂಬುವ ಮೂಲಕ ಅರಸುರವರನ್ನು ಸರಿಗಟ್ಟುತ್ತಾರೆ ಅನ್ನುವಂತೆ ಮುಂಚೂಣಿಯಲ್ಲಿ ಸಾಗುತ್ತಿದ್ದಾರೆ. ಇದು ಅವರ ವಿರೋಧಿಗಳ ಜಾತಿಯ ಅಹಂ ಅನ್ನು ಪದೇ ಪದೇ ಅಣಕಿಸಿದಂತಾಗಿದೆ. ಹಾಗೇ ನೋಡುವುದಾದರೆ ಸಿದ್ದರಾಮಯ್ಯನವರನ್ನು ದಮನ ಮಾಡಲು ಹೊರಟ “ಮೈಸೂರು ಚಲೋ” ಕೇವಲ ಅಧಿಕಾರದ ಮನ್ನಣೆಗೆ ಅಲ್ಲ. ಅದು ವೈಯಕ್ತಿಕ ಜಾತಿಯ ತೆಜೋವಧೆಗಾಗಿ ಕಾರಿಕೊಳ್ಳುತ್ತಿರುವುದು ಸ್ವಷ್ಟವಾಗಿ ತಿಳಿಯುತ್ತಿದೆ. ಅದರಂತೆಯೇ ರಾಜಕೀಯ ಅನುಭವಿಲ್ಲದ, ವಯಸ್ಸಿನ ಮಿತಿಯು ಗೊತ್ತಿಲ್ಲದ, ಚುನಾವಣೆ ಗೆಲ್ಲಲಾಗದ ಎಳಸು “ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಒಬ್ಬ ಮಜಾವಾದಿ” ಎಂದು ಘಂಟಾಘೋಷವಾಗಿ ಹೇಳುವ ಮೂಲಕ ತನ್ನ ಜಾತಿಯ ಅಹಂ ತೋರುತ್ತಿದ್ದಾರೆ. ಇತಿಹಾಸದ ಪುಟ ತೆರೆದರೆ ಸಿದ್ದರಾಮಯ್ಯನವರ ಮೇಲೆ ಮುಗಿಬಿದ್ದ ಇಂತಹ ಹಲವಾರು ಘಟನೆಗಳು ಕಾಣ ಸಿಗುತ್ತವೆ.2014 ರಲ್ಲಿ ಮೊದಲ ಬಾರಿ ಸಿಎಂ ಆಗಿ ಸಿದ್ದರಾಮಯ್ಯ ತೆಗೆದುಕೊಂಡ ಲಿಂಗಾಯತ ಮತ್ತು ವೀರಶೈವ ಕುರಿತಾದ ನಿರ್ಧಾರ, ಅದನ್ನು ಯಡಿಯೂರಪ್ಪ ಮತ್ತು ಬಿಜೆಪಿ ಬಳಸಿಕೊಂಡ ರೀತಿ ಕಾಂಗ್ರೆಸ್‌ಗೆ ಸೋಲಿನ ಕಹಿ ಅನುಭವ ನೀಡಿತು. ಇನ್ನೂ 2023ರ ಚುನಾವಣೆಯ ಮುಂಚಿತವಾಗಿಯೇ ಬೆಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಳಗೊಂಡ ಒಕ್ಕಲಿಗ ನಾಯಕರೆಲ್ಲ ಸೇರಿ ಒಕ್ಕಲಿಗ ಸಮಾವೇಶ ಮಾಡಿದ್ದು, ಅಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮಿ ಮುಂದಿನ ಸಿಎಂ ಒಕ್ಕಲಿಗ ಸಮುದಾಯದವರೆ ಆಗಬೇಕೆಂದು ಕರೆ ನೀಡಿದ್ದರು. 2023 ವಿಧಾನಸಭಾ ಚುನಾವಣೆಯಲ್ಲಿ ಇಡೀ ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯದ ಮೂಲಕ ಸಿದ್ದರಾಮಯ್ಯರನ್ನು ಅವರ ತವರು ಕ್ಷೇತ್ರದಲ್ಲಿ ಸೋಲಿಸಿ ಮೈಸೂರನ್ನು ವಶಪಡಿಸಿಕೊಳ್ಳಲು ದುಂಬಾಲು ಬಿದ್ದಿದ್ದನ್ನು ಕೂಡ ಮತದಾರರು ಸಾಕ್ಷೀಕರಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಮೈತ್ರಿ ನಾಯಕರ ಮಕ್ಕಳು
ಸಿದ್ದರಾಮಯ್ಯನವರ ವಿರುದ್ಧ ಹೊರಟಿರುವ ಮೈಸೂರು ಚಲೋ ಮುಂದಾಳತ್ವ ಮೈತ್ರಿ ನಾಯಕರ ಮಕ್ಕಳ ಕೈಯಲ್ಲಿದೆ. ಇದು ಕೇವಲ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯನವರ ಅಧಿಕಾರವನ್ನು ಕಸಿಯುವಲ್ಲಿ ಮಾತ್ರ ಕೆಲಸ ಮಾಡದೆ ಈ ನಾಯಕರು ತಮ್ಮ ತಮ್ಮ ಮಕ್ಕಳನ್ನು ಅಧಿಕಾರದ ಗದ್ದುಗೆಗೆ ಏರಿಸುವ ಹುನ್ನಾರವನ್ನು ಕೂಡ ಮಾಡಿದ್ದಾರೆ. ಹೀಗಾಗಿ ಅದೇ ಪ್ರಬಲ ಸಮುದಾಯಕ್ಕೆ ಸೇರಿದ ಆರ್. ಆಶೋಕ್, ಅಶ್ವಥ್ ನಾರಾಯಣ್, ಸಿ.ಟಿ.ರವಿ, ಸುನಿಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಪ್ರೀತಂಗೌಡ ಇನ್ನಿತರ ನಾಯಕರನ್ನು ರಾಜಕೀಯದ ಪರದೆಯ ಹಿಂದೆ ತಳ್ಳಿ, ಮಾಜಿ ಮುಖ್ಯಮಂತ್ರಿ ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಹಾಗೂ ಬಿ.ವೈ.ವಿಜಯೇಂದ್ರ ಹೈ ಕಮಾಂಡ್ ನೀಡಿರುವ ಟಾಸ್ ಗೆ ಜಿದ್ದಾಜಿದ್ದಿಗೆ ಬಿದ್ದಂತೆ ಭಾಗವಹಿಸುತ್ತಿದ್ದಾರೆ. ವಿಜಯೇಂದ್ರ ಈ ಹಿಂದೆಯೂ ತಾನು ಲಿಂಗಾಯತ ಸಮುದಾಯದ ಪ್ರಬಲ ನಾಯಕನೆಂದು ಬಿಂಬಿಸಿಕೊಳ್ಳುವಲ್ಲಿ ನಿರತರಾಗಿದ್ದರು. ಅದರಂತೆಯೇ ಸಿದ್ದರಾಮಯ್ಯನವರನ್ನು ಸೋಲಿಸಿಯೇ ಬಿಡುತ್ತೇನೆ ಎಂದು ವರುಣಾ ಕ್ಷೇತ್ರಕ್ಕೆ ಬಂದಿದ್ದು, ಆನಂತರ ಬಿಜೆಪಿ ಹೈಕಮಾಂಡ್ ಕುತಂತ್ರ ತಿಳಿದು ಯಡಿಯೂರಪ್ಪ ಮಗನನ್ನು ಕಾಪಾಡಿಕೊಂಡಿದ್ದನ್ನು ರಾಜಕೀಯ ವಿದ್ಯಮಾನವೇ ಕೂಗಿ ಹೇಳುತ್ತದೆ. ಇನ್ನು ನಿಖಿಲ್ ಕುಮಾರಸ್ವಾಮಿ ಸತತ ಸೋಲಿನಿಂದ ಜರ್ಜರಿತನಾಗಿ ತನ್ನ ರಾಜಕೀಯ ಅಸ್ತಿತ್ವನ್ನು ಕಳೆದುಕೊಂಡಿದ್ದ. ಈಗ ಈ ಇಬ್ಬರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಲು ಈ ಪಾದಯಾತ್ರೆಯನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅದಕ್ಕೆ ಅಹಿಂದ ವರ್ಗದ ನಾಯಕನನ್ನೇ ಆಯ್ಕೆ ಮಾಡಿಕೊಂಡು ನಾವು ಅವರಂತೆ ಪ್ರಬಲ ನಾಯಕರೆಂದು ಪ್ರಚುರ ಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದರೆ ತಪ್ಪೇ ಇಲ್ಲಾ.
ರಾಜ್ಯದ ಈ ರಾಜಕೀಯ ಬೆಳವಣಿಗೆಯು ಸದ್ಯಕ್ಕೆ ದೇವರಾಜು ಅರಸು, ಎಸ್.ಬಂಗಾರಪ್ಪ, ವೀರಪ್ಪಮೊಯ್ಲಿ ಮುಂತಾದ ನಾಯಕರನ್ನು ಮಣಿಸಿದಂತಹ ಬೌದ್ಧಿಕ ಸಂಚುಕೋರರ ನಡೆಯಂತಿದೆ. ಸಿದ್ದರಾಮಯ್ಯನವರ 40 ವರ್ಷದ ಕಳಂಕ ರಹಿತ ರಾಜಕಾರಣಕ್ಕೆ ಕಪ್ಪು ಮಸಿಬಳಿಯಲು ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳು ಒಟ್ಟುಗೂಡಿವೆ. ಅದಕ್ಕಿಂತ ಹೆಚ್ಚಾಗಿ ಹಿಂದುಳಿದ ವರ್ಗದ ನಾಯಕನ್ನು ಅಸ್ಥಿರಗೊಳಿಸಲು ಪ್ರಬಲ ಜಾತಿಗಳು ಕೈ ಜೋಡಿಸಿಕೊಂಡಿದ್ದು, ಅದು ಈಗ ಬೆಂಗಳೂರು ಟು ಮೈಸೂರು ಹೆದ್ದಾರಿಯ ತುಂಬಾ ಕಮಟು ವಾಸನೆಯಾಗಿ ಮೂಗಿಗೆ ರಾಚುತ್ತಿದೆ.
ಆಕಾಶ್.ಆರ್.ಎಸ್
ಪತ್ರಕರ್ತರು
ಇದನ್ನೂ ಓದಿ- ಸಂಯಮ ಸೌಜನ್ಯ ಇಲ್ಲದ ರಾಜಕೀಯ ಪರಿಭಾಷೆ