ಬೆಂಗಳೂರು: ಕಾಂಗ್ರೆಸ್ ಪಕ್ಷ ಟರ್ಕಿಯಲ್ಲಿ ನೋಂದಾಯಿತ ಕಚೇರಿ ಹೊಂದಿದೆ ಎಂದು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಯುವ ಕಾಂಗ್ರೆಸ್ ಘಟಕ ಕ್ರಿಮಿನಲ್ ಮೊಕದ್ದಮೆ ಹೂಡಿದೆ.
ಭಾರತೀಯ ಯುವ ಕಾಂಗ್ರೆಸ್ನ ಕಾನೂನು ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಸ್ವರೂಪ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆ ಉಂಟು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು) ಮತ್ತು 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವುದು) ಅಡಿಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಷ ಮೇ 15ರಂದು ರಿಪಬ್ಲಿಕ್ ಟಿವಿಯಲ್ಲಿ ನಡೆದ ‘ಡಿಬೇಟ್ ವಿತ್ ಅರ್ನಾಬ್’ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಅವರು ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್ ಕಟ್ಟಡದ ದೃಶ್ಯಗಳನ್ನು ತೋರಿಸಿದ್ದರು. ಆ ಕಟ್ಟಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಭಾರತದ ಶತ್ರು ರಾಷ್ಟ್ರದಲ್ಲಿ ಕಚೇರಿ ತೆರೆಯುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದರು. ಇದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಅಮಿತ್ ಮಾಳವೀಯ ರಾಹುಲ್ ಗಾಂಧಿ ಟೀಕಿಸಿದ್ದರು.
ಕಾಂಗ್ರೆಸ್ ಪಕ್ಷವನ್ನು ಕೆಣಕುವ, ಅಶಾಂತಿಯನ್ನು ಪ್ರಚೋದಿಸುವ ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುವ ಈ ದುರುದ್ದೇಶಪೂರಿತ ಪ್ರಯತ್ನವು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ನಾವು ಮೌನವಾಗಿರುವುದಿಲ್ಲ, ನಮ್ಮ ಪಕ್ಷ ಅಥವಾ ಅದರ ನಾಯಕತ್ವದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ ಯಾವುದೇ ಪ್ರಯತ್ನಕ್ಕೆ ನಾವು ಶಕ್ತವಾದ ಕಾನೂನು ಮತ್ತು ರಾಜಕೀಯ ಪ್ರತಿಕ್ರಿಯೆಯನ್ನು ನೀಡುತ್ತೇವೆ. ಇದು ನಮ್ಮ ಸ್ಪಷ್ಟ ಸಂದೇಶ ಎಂದು ಭಾರತೀಯ ಯುವ ಕಾಂಗ್ರೆಸ್ ಕಾನೂನು ಘಟಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.