Tuesday, May 20, 2025

ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ: ರಾಹುಲ್‌, ಖರ್ಗೆ ಭಾಷಣ; ಸಿಎಂ ಡಿಸಿಎಂ ಜೋಡಿಗೆ ಮೆಚ್ಚುಗೆ, ಬಿಜೆಪಿ ವಿರುದ್ಧ ವಾಗ್ದಾಳಿ

Most read

ಹೊಸಪೇಟೆ: ಸರ್ಕಾರಕ್ಕೆ 2 ವರ್ಷ ತುಂಬಿರುವ ಸಂಭ್ರಮದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶ ಆರಂಭವಾಗಿದೆ. ಸಮಾರಂಭದಲ್ಲಿ ಪಕ್ಷದ ಮುಖಂಡರ ಜತೆಗೆ ಲಕ್ಷಾಂತರ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಪಕ್ಷದ ಕಾರ್ಯಕರ್ತರ ಕೊಡುಗೆ ದೊಡ್ಡದು. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಸಿದ್ದೇವೆ.

ಮಹಿಳೆಯರಿಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿದ್ದೇವೆ. ಕೋಟ್ಯಂತರ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆ.ಜಿ ಉಚಿತವಾಗಿ ಅಕ್ಕಿ. ಬಡ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ ಮತ್ತು ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.

ನಾವು ನೀಡಿದ್ದ 5 ಗ್ಯಾರಂಟಿಗಳನ್ನೂ ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಜೆಪಿಯವರು ಟೀಕಿಸಿದ್ದರು. ಗ್ಯಾರಂಟಿ ಅನುಷ್ಠಾನಕ್ಕೆ ತರಲು ಆಗಲ್ಲ ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಟೀಕಿಸಿದ್ದರು. ಆದರೆ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಬಿಜೆಪಿ ಸರಕಾರ ಇಬ್ಬರು ಮೂವರು ಕೋಟ್ಯಧಿಪತಿಗಳ ಪರವಾಗಿ ನಿಂತಿದೆ ಎಂದೂ ರಾಹುಲ್ ಕಿಡಿ ಕಾರಿದರು.

ನಂತರ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಹಾಗೂ ಡಿಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಇದು ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆ. ಗ್ಯಾರಂಟಿ ಈಡೇರಿಸುವುದು ಅಷ್ಟೊಂದು ಸುಲಭವಲ್ಲ. ಗ್ಯಾರಂಟಿಗಳ ಜೊತೆಗೆ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ ಎಂದೂ ಶ್ಲಾಘಿಸಿದರು.

ಅಧಿಕಾರಕ್ಕೆ ಬಂದ ಮೇಲೆ ಕಪ್ಪು ಹಣ ತರುತ್ತೇವೆ ಎಂದರು. ಒಂದೇ ಒಂದೂ ರೂಪಾಯಿ ತರಲಿಲ್ಲ. ಎಲ್ಲರ ಖಾತೆಗೂ 15 ಲಕ್ಷ ರೂ. ಹಾಕುತ್ತೇವೆ ಎಂದರು, ಹಾಕಲಿಲ್ಲ. ಹೇಳಿದ ಯಾವುದನ್ನೂ ಪ್ರಧಾನಿ ಮೋದಿ ಮಾಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಕೊಟ್ಟ ವಾಗ್ದಾನ ಈಡೇರಿಸಿದೆ ಎಂದರು.

ಪಹಲ್ಗಾಮ್ ದಾಳಿಯನ್ನು ಪ್ರಸ್ತಾಪಿಸಿದ ಖರ್ಗೆ, ಈ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ. ಮೋದಿ ಸರ್ಕಾರದ ವೈಫಲ್ಯದಿಂದಲೇ ಪಹಲ್ಗಾಮ್ ನಲ್ಲಿ 26 ಅಮಾಯಕರ ಹತ್ಯೆ ಆಯಿತು ಎಂದು ವಾಗ್ದಾಳಿ ನಡೆಸಿದರು.

More articles

Latest article