ಮನೆ ದೇವರ ಲಾವಣಿ ಹಾಡಿದ ಸಿಎಂ ಸಿದ್ದರಾಮಯ್ಯ; ಆ ಲಾವಣಿ ಯಾವುದು?

Most read

ಮಂಡ್ಯ: ಅಲ್ಲಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ, ಅನ್ನದಾನೇಶ್ವರಾ…ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನೆದೇವರ ಕುರಿತಾದ ಲಾವಣಿಯ ಸಾಲುಗಳನ್ನು ಹಾಡಿದರು. ಶ್ರೀರಂಗಪಟ್ಟಣದ ಅಲ್ಲಾಪಟ್ಟಣದ ಶ್ರೀ ಅನ್ನದಾನೇಶ್ವರ ಸ್ವಾಮಿ ದೇವಸ್ಥಾನ ಪುನರ್ ನಿರ್ಮಾಣ, ವಿಗ್ರಹಗಳ ಸ್ಥಾಪನೆ ಹಾಗೂ ಗೋಪುರ ಕುಂಭಾಭಿಷೇಕ ನೆರವೇರಿಸಿ ಮಾತನಾಡುವ ವೇಳೆ ತಾವು ಬಾಲ್ಯದಲ್ಲಿ ಹಾಡುತ್ತಿದ್ದ, ವೀರ ಕುಣಿತದಲ್ಲಿ ನರ್ತಿಸುತ್ತಿದ್ದದನ್ನು ಉಲ್ಲೇಖಿಸಿ ಲಾವಣಿ ಹಾಡಿದರು. ಸಿದ್ದರಾಮೇಶ್ವರ ಪೂಜೆಗೆ ವೀರಕುಣಿತದ ಜನಪದ ನೃತ್ಯ ಈಗಲೂ ಚಾಲ್ತಿಯಲ್ಲಿದೆ. ನಾನೂ ವೀರಕುಣಿತ ಸೇರಿದ್ದೆ. ಆಮೇಲೆ ರಾಜಪ್ಪ ಮೇಸ್ಟ್ರು ನನ್ನನ್ನು ಕರೆದುಕೊಂಡು ಹೋಗಿ ಐದನೇ ತರಗತಿಗೆ ಸೇರಿಸಿದರು. ಹೀಗೆ ನನ್ನ ಶಿಕ್ಷಣ ಆರಂಭವಾಯಿತು. ಅಲ್ಲಿಂದ ನಾನು ಎಲ್ಲೂ ಫೇಲಾಗಲೇ ಇಲ್ಲ ಎಂದರು.

ಜನರ ಸೇವೆಯೇ ದೇವರ ಸೇವೆ ಎಂದು ನಂಬಿದವನು ನಾನು. ಬಸವಣ್ಣನವರು ಇದನ್ನೇ “ದೇಹವೇ ದೇಗುಲ” ಎಂದು ಹಾಡಿದರು. ದೇವರು ಮತ್ತು ಜನರ ನಡುವೆ ಮಧ್ಯವರ್ತಿ ಇರಬಾರದು ಎನ್ನುವುದು ಬಸವಣ್ಣನವರ ಮೌಲ್ಯವಾಗಿತ್ತು. ನಾವು ಮಾನವೀಯವಾಗಿ ಇದ್ದರಷ್ಟೆ ದೇವರ ಸಹಾಯ ಸಿಗುತ್ತದೆ. ಅಮಾನವೀಯತೆಯಿಂದ ನಡೆಸುವವರಿಗೆ ಯಾವ ದೇವರೂ ಸಹಾಯ ಮಾಡುವುದಿಲ್ಲ ಎಂದರು.

ಅಂಬೇಡ್ಕರ್ ಅವರ ಸಂವಿಧಾನ, ಬಸವಾದಿ ಶರಣರ ಆಶಯದಂತೆ ಜಾತಿ ನಿರ್ಮೂಲನೆ ಮಾಡಬೇಕಿದೆ. ಜಾತಿಗೆ ಚಲನೆ ಇಲ್ಲ, ವರ್ಗಕ್ಕೆ ಚಲನೆ ಇದೆ. ನಿಂತ ನೀರಾಗಿರುವ ಜಾತಿಯನ್ನು ಅಳಿಸಬೇಕಾದರೆ ಶಿಕ್ಷಣ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಒದಗಿಸಬೇಕು. ಆಗ ಮಾತ್ರ ಜಾತಿ ಅಳಿಸುವ ದಿಕ್ಕಿನಲ್ಲಿ ಸಾಗಬಹುದು ಎಂದರು.

ಮೊದಲೆಲ್ಲಾ ವ್ಯಕ್ತಿಗಳ ಅರ್ಹತೆಯನ್ನು ಜಾತಿ ಆಧಾರದಲ್ಲಿ ಅಳೆಯುತ್ತಿದ್ದರು. ಇದು ಹೋಗಿ ನಿಜವಾದ ಅರ್ಹತೆ ಆಧಾರದಲ್ಲಿ ಅಳೆಯಬೇಕು. ನಾನು ಉಪಮುಖ್ಯಮಂತ್ರಿಯಾಗಿ ಮೊದಲ ಬಜೆಟ್ ಮಂಡಿಸುವಾಗ “ನೂರು ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ” ಎಂದು ಅಣಕಿಸಿದ್ದರು. ಈಗ ನಾನು 16 ಬಜೆಟ್ ಮಂಡಿಸಿದ್ದೇನೆ. ಆದ್ದರಿಂದ ಅವಕಾಶ ಮುಖ್ಯ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆ ಹೊರಗೆ ಬರುತ್ತದೆ ಎಂದರು.

ಆಚಾರವೇ ಸ್ವರ್ಗ, ಅನಾಚಾರವೇ ನರಕ ಎನ್ನುವ ಬಸವಣ್ಣನವರ ಸರಳ ಧರ್ಮದ ಸಾರವನ್ನು ಪಾಲಿಸಬೇಕು. ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿ ಎಂದರು. ಮಾಡಬಾರದ ಪಾಪದ ಕೆಲಸಗಳನ್ನು ಮಾಡಿ ಒಳ್ಳೇದು ಮಾಡಪ್ಪಾ ಅಂದ್ರೆ ದೇವರು ಒಳ್ಳೇದು ಮಾಡಲ್ಲ ಎಂದರು.

More articles

Latest article