ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯ ವಿರುದ್ಧ ಕರ್ನಾಟಕದ ಜನತೆ ಇದ್ದಾರೆ: ರಾಷ್ಟ್ರೀಯ ಅಭಿಯಾನ

Most read

ರಾಜ್ಯಪಾಲರು, ಸಂವಿಧಾನಿಕ ಸಂಸ್ಥೆಗಳು, ತನಿಲಾ ಏಜೆನ್ಸಿಗಳು ಎಲ್ಲವೂ ಬಿಜೆಪಿ‌ ಪಕ್ಷದ ದಾಳವಾಗುತ್ತಿರುವ ವಿರುದ್ಧ ರಾಷ್ಟ್ರೀಯ ಅಭಿಯಾನ ಆರಂಭವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಅಭಿಯಾನ ಕರ್ನಾಟಕ, ಭಾರತದ ಪ್ರಜಾತಂತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ಮಧ್ಯೆ ಕೆಲವು ತಿಕ್ಕಾಟಗಳು ಇದ್ದೇ ಇವೆ. ಹಲವು ಸಾರಿ ಈ ತಿಕ್ಕಾಟ ಮತ್ತು ಕೇಂದ್ರ ಸರ್ಕಾರದ ನಡೆಗಳು ಅಪ್ರಜಾತಾಂತ್ರಿಕ ಮತ್ತು ಅನಾರೋಗ್ಯಕರವಾಗಿ ನಡೆದಿತ್ತಾದರೂ, ಈ ಹೊತ್ತಿನ ವಿದ್ಯಮಾನ ಅತ್ಯಂತ ಅಪಾಯಕಾರಿಯಾದುದು ಎಂದು ಹೇಳಿದೆ.

ಸಾಂವಿಧಾನಿಕವಾಗಿ, ಶಾಸನಾತ್ಮಕವಾಗಿ, ವಿತ್ತೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಕೇಂದ್ರದ ದಾಳಿಯು ಒಕ್ಕೂಟ ವ್ಯವಸ್ಥೆಯನ್ನು ಮುಗಿಸುವ ದಿಕ್ಕಿನಲ್ಲಿ ಸಾಗಿದೆ. ಅಂತಹ ಸಂದರ್ಭದಲ್ಲಿ ಪ್ರಾದೇಶಿಕ ರಾಜಕೀಯ ವ್ಯವಸ್ಥೆಯು ಅದಕ್ಕೆ ತಡೆಯೊಡ್ಡಿ ನಿಲ್ಲುವ ಪ್ರಯತ್ನ ಮಾಡುತ್ತಾ ಬಂದಿದೆ.ಹೀಗಾಗಿ ದೇಶದ ವಿವಿಧ ರಾಜ್ಯಗಳ ಪ್ರಾದೇಶಿಕ ನಾಯಕರ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಿ ಅವರನ್ನು ಗುರಿ ಮಾಡಿ ದಮನ ಮಾಡುವ ಪ್ರಯತ್ನವೂ ನಡೆದಿದೆ ಎಂದು ಆರೋಪಿಸಿದೆ.

ಭ್ರಷ್ಟಾಚಾರವು ನಮ್ಮ ರಾಜಕೀಯ ವ್ಯವಸ್ಥೆಗೆ ಅಂಟಿರುವ ಪಿಡುಗಾಗಿದ್ದು ಅದನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯಬೇಕೆಂದು ನಾವೆಲ್ಲರೂ ಆಗ್ರಹಿಸುತ್ತೇವೆ. ಅದೇ ಹೊತ್ತಿನಲ್ಲಿ, ಭ್ರಷ್ಟಾಚಾರದ ನೆಪದಲ್ಲಿ ಅಥವಾ ಭ್ರಷ್ಟಾಚಾರದ ಹುಸಿ ಆರೋಪಗಳನ್ನು ಮುಂದೆ ಮಾಡಿ ಕುತ್ಸಿತ ಹುನ್ನಾರಗಳನ್ನು ಹೆಣೆಯುವ ಪ್ರಯತ್ನವನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಇದೊಂದು ಜಾಗತಿಕ ವಿದ್ಯಮಾನವಾಗಿದ್ದು, ಜನಪರ ಹಾಗೂ ಸಮಾಜವಾದಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಯತ್ನಿಸಿದ ಬ್ರೆಜಿಲ್‌ನ ಅಧ್ಯಕ್ಷರಾಗಿದ್ದ ಲುಲಾ ಡಿಸಿಲ್ವ ಹಾಗೂ ಡಿಲ್ಮಾ ರೋಸೆಫ್, ಪೆರುವಿನ ಅಧ್ಯಕ್ಷ ಪೆಡ್ರೋ ಕ್ಯಾಸ್ಟೆಲೋ, ಬೊಲಿವಿಯಾದ ಮೊಟ್ಟ ಮೊದಲ ಆದಿವಾಸಿ ಅಧ್ಯಕ್ಷ ಇವಾ ಮೊರೆಲೆಸ್, ಸ್ಪೇನ್‌ನ ಪ್ರಧಾನಿ ಪೆಡ್ರೋ ಸ್ಯಾಂಚೆಜ್ ಮೇಲೆ ಹುಸಿ ಆರೋಪಗಳನ್ನು ಹೊರಿಸಲಾಯಿತು. ಅಲ್ಲಿನ ಮಾಧ್ಯಮಗಳ ಒಂದು ಭಾಗ ನಡೆಸಿದ ವ್ಯವಸ್ಥಿತ ಅಪಪ್ರಚಾರದ ಬಲದೊಂದಿಗೆ, ಬೃಹತ್ ಕಾರ್ಪೋರೇಟ್ ಹಿತಾಸಕ್ತಿಗಳು ಬಲಪಂಥೀಯ ಶಕ್ತಿಗಳ ಜೊತೆಗೆ ಕೈ ಜೋಡಿಸಿ, ಕೆಲವೆಡೆ ನ್ಯಾಯಾಲಯಗಳನ್ನೂ ಶಾಮೀಲು ಮಾಡಿಕೊಂಡು ಚುನಾಯಿತ ಜನಪ್ರಿಯ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು; ಜೊತೆಗೆ ಜೈಲಿಗೆ ಕಳಿಸುವ ಅಥವಾ ಕ್ಷಿಪ್ರಕ್ರಾಂತಿ ನಡೆಸುವ ಪ್ರಯತ್ನಗಳು ನಡೆದವು. ವಿಶೇಷವೆಂದರೆ, ಇಲ್ಲೆಲ್ಲಾ ಕಡೆ ನಂತರ ನಡೆದ ಚುನಾವಣೆಗಳಲ್ಲಿ ಇದೇ ಜನಪ್ರಿಯ ನಾಯಕ/ನಾಯಕಿಯರು ಮತ್ತೆ ಅಧಿಕಾರಕ್ಕೆ ಬಂದರು ಎಂದಿದ್ದಾರೆ.

ಭಾರತದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೊರೆನ್ ರನ್ನು ಜೈಲಿಗೆ ಕಳಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ನಡೆಯುತ್ತಿರುವ ಹುನ್ನಾರಗಳನ್ನೂ ಈ ಹಿನ್ನೆಲೆಯಲ್ಲಿ ನೋಡಬೇಕು. ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕುವ ಒಂದು ಸಿದ್ಧಸೂತ್ರ (Playbook) ಇದು ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದಿದೆ.

ಇದರ ಅರ್ಥ ಭ್ರಷ್ಟಾಚಾರವನ್ನು ತಡೆಗಟ್ಟಲು ನಿಷ್ಪಕ್ಷಪಾತಿ, ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಾರದು ಎಂದಲ್ಲ. ಅದನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು ಮತ್ತು ಎಲ್ಲಾ ಪಕ್ಷಗಳ ಹಾಗೂ ಸರ್ಕಾರಗಳ ಭ್ರಷ್ಟಾಚಾರವನ್ನು ತಡೆಗಟ್ಟಲು ಸ್ವತಂತ್ರ ತನಿಖಾ ಸಂಸ್ಥೆಗಳು ಏರ್ಪಡುವ ಅಗತ್ಯವಿದೆ; ಅದಕ್ಕಾಗಿ ಒತ್ತಾಯಿಸುತ್ತೇವೆ.ಆದರೆ, ಇಂದು ʼಸ್ವತಂತ್ರವೆಂದುʼ ಭಾವಿಸಲಾದ ಎಲ್ಲಾ ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳ ಮೇಲೆ ಹೂಡಲಾದ ಬಾಣಗಳಂತೆ ಕೆಲಸ ಮಾಡುತ್ತಿವೆ.

ರಾಜ್ಯಪಾಲರ ಕಚೇರಿಯನ್ನು ಅಂತಹ ಕುತಂತ್ರದ ದಾಳಿಯ ಸ್ಥಳೀಯ ಕಚೇರಿಯಂತೆ ಬಳಸಲಾಗುತ್ತಿದೆ. ಅಂತಹ ಪ್ರಯತ್ನಗಳ ವಿರುದ್ಧ ʼ80ರ ದಶಕದಲ್ಲಿ ದೊಡ್ಡ ದನಿಯೆದ್ದಿದ್ದು ಕರ್ನಾಟಕದಿಂದಲೇ ಎಂಬುದನ್ನು ಮರೆಯಲಾಗದು. ಆ ನಂತರದಲ್ಲಿ ಒಕ್ಕೂಟ ಸರ್ಕಾರವು ಸರ್ಕಾರಿಯಾ ಆಯೋಗವನ್ನು ರಚಿಸಿತು. ಅದರ ನಂತರ ನಿರ್ದಿಷ್ಟ ಸಾಂವಿಧಾನಿಕ ಕ್ರಮಗಳು ಆಗದಿದ್ದರೂ, ಒಕ್ಕೂಟ ಸರ್ಕಾರದ ನಡವಳಿಕೆಯಲ್ಲಿ ಬದಲಾವಣೆಗಳು ಬಂದವು. ಆ ಎರಡು ದಶಕಗಳು ಸಮ್ಮಿಶ್ರ ಸರ್ಕಾರದ ಯುಗವಾಗಿದ್ದುದೂ ಅದಕ್ಕೆ ಕಾರಣವಿರಬಹುದು. ಆದರೆ, 2014ರಿಂದ ಈಚೆಗೆ ಒಕ್ಕೂಟ ಸರ್ಕಾರವು ರಾಜ್ಯಗಳ ಸ್ವಾಯತ್ತತೆಯ ಮೇಲೆ ಯುದ್ಧವನ್ನೇ ಹೂಡಿದಂತಿದೆ. ಹಲವು ಬಗೆಯಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ ಮಾತ್ರವಲ್ಲದೇ, ರಾಜ್ಯಗಳಲ್ಲಿ ಗಟ್ಟಿಯಾದ ಬೇರುಗಳನ್ನುಳ್ಳ ನಾಯಕ/ನಾಯಕಿಯರನ್ನು ದುರ್ಬಲಗೊಳಿಸುವ ಸಂಚು ನಡೆದಿದೆ. ಮಾಧ್ಯಮಗಳ ಒಂದು ವಿಭಾಗ ಅವರ ಕೈ ಜೋಡಿಸಿದೆ ಮತ್ತು ಹುನ್ನಾರದ ಭಾಗವಾಗಿರುವುದು ಸ್ಪಷ್ಟವಾಗಿದೆ.

ಇವೆಲ್ಲವೂ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿದೆ. ದೇಶದ ಎಲ್ಲಾ ರಾಜಕೀಯ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒಂದೋ ಕೇಂದ್ರಕ್ಕೆ ಅಡಿಯಾಳಾಗಬೇಕು ಇಲ್ಲವೇ ಜೈಲಿಗೆ ಹೋಗಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದು ಭಾರತದ ಸ್ವಾತಂತ್ರ್ಯ ಚಳವಳಿಯ, ಸಾಂವಿಧಾನಿಕ ಗಣತಂತ್ರದ ಆಶಯಗಳಿಗೆ ವಿರುದ್ಧವಾದುದು. ದೇಶವನ್ನು ಸರ್ವಾಧಿಕಾರಕ್ಕೆ ತಳ್ಳುವ ಇಂತಹ ಪ್ರಯತ್ನಗಳಿಗೆ ನಾವು ವಿರುದ್ಧವಿದ್ದೇವೆ.

ಭಾರತದ ಐಕ್ಯತೆ ಮತ್ತು ಸಮಗ್ರತೆಯು ಅತ್ಯಂತ ಮುಖ್ಯವಾದುದು ಮತ್ತು ನಿಜವಾದ ಒಕ್ಕೂಟ ವ್ಯವಸ್ಥೆಯೇ ಭಾರತದಲ್ಲಿ ಅದಕ್ಕೆ ಪ್ರಬಲ ತಳಹದಿಯನ್ನು ಹಾಕಿಕೊಟ್ಟಿದೆ. ಅದನ್ನು ದುರ್ಬಲಗೊಳಿಸುವ ಪ್ರಯತ್ನದ ವಿರುದ್ಧ ನಾವು ದನಿಯೆತ್ತಲು ನಿರ್ಧರಿಸಿದ್ದೇವೆ. ಕರ್ನಾಟಕದಿಂದಲೇ ಶುರುವಾಗುವ ಈ ರಾಷ್ಟ್ರೀಯ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು, ಈ ಸಂಬಂಧ ನಡೆಯುವ ವಿವಿಧ ಪ್ರತಿಭಟನಾ ಸಭೆಗಳು ಹಾಗೂ ಅರಿವಿನ ಆಂದೋಲನದಲ್ಲಿ ನೀವೆಲ್ಲರೂ ಭಾಗಿಯಾಗಬೇಕೆಂದು ನಾವು ಕೋರುತ್ತೇವೆ.

ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 8ರಂದು ಒಂದು ಪ್ರತಿಭಟನಾ ಸಭೆ ನಡೆಯಲಿದ್ದು, ಸೆಪ್ಟೆಂಬರ್ 3ನೇ ವಾರದ ನಂತರ ದೆಹಲಿಯಲ್ಲೂ ಈ ಕುರಿತು ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಒಕ್ಕೂಟ ವ್ಯವಸ್ಥೆಯ ಪರವಾಗಿ, ರಾಜ್ಯಪಾಲರ ಕಚೇರಿಯ ದುರ್ಬಳಕೆಯ ವಿರುದ್ಧ ನಾಗರಿಕರ ಪ್ರತಿರೋಧ ರೂಪುಗೊಳ್ಳಬೇಕಿದೆ. ಕರ್ನಾಟಕದ ಹಾಗೂ ಭಾರತದ ಸಮಸ್ತ ಪ್ರಜಾತಂತ್ರವಾದಿ ಜನತೆ ಇದರ ಭಾಗವಾಗಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದೆ.

More articles

Latest article