ಮಕ್ಕಳ ಶಿಕ್ಷಣಕ್ಕೆ ಬೇಕು ಶಿಕ್ಷಣ ತಜ್ಞರ ಮತ್ತು ಸರ್ಕಾರದ ಚಿಂತನೆಗಳು

Most read

ಮಕ್ಕಳ ದಿನಾಚರಣೆಯು ಒಂದು ದಿನದ ಸಂಭ್ರಮಕ್ಕೆ ಮೀಸಲಾಗಿರದೇ ಶಿಕ್ಷಣ ಸಂಸ್ಥೆಗಳು ಮಕ್ಕಳ ಎಲ್ಲ ವಿಧದ ಪ್ರತಿಭೆಯನ್ನು ಹೊಳಪಿಸುವ ಜ್ಞಾನ ಕೇಂದ್ರಗಳಾಗಬೇಕು. ಕಲಿಕೆಯ ಅವಕಾಶಗಳು ಅವರನ್ನು ಪ್ರತಿಭಾವಂತರನ್ನಾಗಿ, ಸ್ವತಂತ್ರ ಚಿಂತನೆಯ ಸ್ವಾವಲಂಬಿ ವ್ಯಕ್ತಿಗಳನ್ನಾಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ, ಶಿಕ್ಷಣ ಸಚಿವರು, ಜನಪ್ರತಿನಿಧಿಗಳು ಚಿಂತನ ಮಂಥನ ನಡೆಸಬೇಕು ಡಾ. ಗಂಗಾಧರಯ್ಯ ಹಿರೇಮಠ, ನಿವೃತ್ತ ಪ್ರಾಧ್ಯಾಪಕರು

ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ನವೆಂಬರ್-14ರಂದು ‘ಮಕ್ಕಳ ದಿನಾಚರಣೆ’ ಎಂದು ಆಚರಿಸಲಾಗುತ್ತಿದೆ. ‘ನೆಹರು’ ಅವರಿಗೆ ಮಕ್ಕಳ ಕುರಿತು ಅಪಾರ ಪ್ರೀತಿ, ವಿಶ್ವಾಸ.  ಹೀಗಾಗಿ ಅವರನ್ನು ‘ಚಾಚಾನೆಹರು’ ಎಂದು ಕರೆಯುತ್ತಿದ್ದರು. 1954ರಲ್ಲಿ ಮೊದಲಬಾರಿಗೆ ‘ಮಕ್ಕಳದಿನ’ ಆಚರಿಸಲಾಯಿತು. ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 50 ಸಾವಿರಕ್ಕೂ ಹೆಚ್ಚು ಶಾಲಾಮಕ್ಕಳು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಧಿಕೃತವಾಗಿ ‘ಮಕ್ಕಳ ದಿನಾಚರಣೆ’ ಆರಂಭವಾದದ್ದು 1957ರಲ್ಲಿ ನೆಹರು ಹುಟ್ಟುಹಬ್ಬ ಮಕ್ಕಳ ದಿನಾಚರಣೆಯಾಯಿತು. ಇಂದಿನ ಮಕ್ಕಳು ನಾಳಿನ ನಾಗರೀಕರು. ಹೀಗಾಗಿ ಮಕ್ಕಳನ್ನು ಗೌರವಿಸುವ, ಅವರಲ್ಲಿ ಶಿಕ್ಷಣ ಬೆಳೆಸುವ, ಮೌಲ್ಯವನ್ನು, ಸೃಜನಶೀಲತೆಯನ್ನು ತಿಳಿಸುವ, ಬೆಳೆಸುವ ನಿಟ್ಟಿನಲ್ಲಿ ‘ಮಕ್ಕಳ ದಿನಾಚರಣೆ’ ಮಹತ್ವದ್ದಾಗಿದೆ. ಇಂದಿನ ಮಕ್ಕಳಲ್ಲಿ ದಯೆ, ಗೌರವ, ಕೃತಜ್ಞತಾಭಾವ, ಆತ್ಮವಿಶ್ವಾಸ, ಜವಾಬ್ದಾರಿ, ಆರೋಗ್ಯಕರ ಅಭ್ಯಾಸಗಳು, ಸ್ಥಿತಿಸ್ಥಾಪಕತ್ವ, ಸೃಜನಶೀಲತೆ, ಸಮಸ್ಯೆಗೆ ಪರಿಹಾರ, ಸಂವಹನ, ಪರಿಸರ ಕಾಳಜಿ, ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಕಲಿಕೆಗೆ ಪ್ರೀತಿ, ಆಸಕ್ತಿ, ಕೌಟುಂಬಿಕ ಮೌಲ್ಯಗಳನ್ನು ಬೆಳೆಸುವುದು, ಬದುಕಿಗೆ ಪೂರಕವಾಗುವ ಕೌಶಲ್ಯಗಳನ್ನು ಕಲಿಸುವುದು ತುರ್ತು ಅಗತ್ಯವಾದ ಸಂಗತಿಗಳಾಗಿವೆ.

ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಆಶಯ

ಮಕ್ಕಳೊಂದಿಗೆ ನೆಹರೂ

ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಆಶಯವನ್ನು ಸಂವಿಧಾನ ರಚನಾ ಸಮಿತಿ ಹೊಂದಿತ್ತು. 1950ರ ಸರ್ವಶಿಕ್ಷಣ ಅಭಿಯಾನದ ತರುವಾಯ ಪ್ರಾಥಮಿಕ ಶಿಕ್ಷಣ ವಿಸ್ತಾರಗೊಂಡಿತು.  ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ಕಾಯ್ದೆ 2009ರಲ್ಲಿ ಕೇಂದ್ರ ಸರ್ಕಾರ ಈ ಮಸೂದೆಯನ್ನು ಕಾನೂನಾಗಿಸಿತು. ಅದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರ ನೇಮಕ, ಪಠ್ಯಕ್ರಮ, ಮೂಲಭೂತ ಸೌಕರ್ಯಗಳು, ಶಿಕ್ಷಣದ ಅವಕಾಶಗಳಿಗೆ ಹಣ ವಿನಿಯೋಗಿಸುವುದು, ಮಕ್ಕಳಿಗೆ ಪ್ರವೇಶ ಪರೀಕ್ಷೆ ಆಯೋಜಿಸುವಂತಿಲ್ಲ, ಶುಲ್ಕರಹಿತ ಪ್ರವೇಶ, ಶೇ.25 ರಷ್ಟು ದುರ್ಬಲ ವರ್ಗದ ಮಕ್ಕಳಿಗೆ ಪ್ರವೇಶ,  ಮಗುವನ್ನು ಅನುತ್ತೀರ್ಣಗೊಳಿಸದೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು, ಯಾವುದೇ ಮಗುವನ್ನು ಶಾಲೆಯಿಂದ ಹೊರಹಾಕುವಂತಿಲ್ಲ, ಬಹಿಷ್ಕರಿಸುವಂತಿಲ್ಲ, ಪ್ರತಿಶಾಲೆ ಸರ್ಕಾರದಿಂದ ಮಾನ್ಯತೆ ಪಡೆಯಬೇಕು, ಮಕ್ಕಳಿಗೆ ದೈಹಿಕ, ಮಾನಸಿಕ ಹಿಂಸೆ ನಿಷಿದ್ಧ ಇತ್ಯಾದಿ ಅಂಶಗಳಿವೆ.

ಮಕ್ಕಳ ಕುರಿತು ವಿದೇಶಿ ತಜ್ಞರ ಚಿಂತನೆ

ಭಾರತೀಯರ ಚಿಂತನೆ, ಶಿಕ್ಷಣ ಪದ್ಧತಿಗಳು ಮರೆಯಾಗಿ ವಿದೇಶಿಯರು ಪ್ರಾರಂಭಿಸಿದ ಶಿಕ್ಷಣ ಪದ್ಧತಿ ವಿಶ್ವದಾದ್ಯಂತ ಅನುಮೋದನೆ ಪಡೆದಿದೆ, ಹೆಸರು ಪಡೆದಿದೆ. ‘ಜೋಹಾನ ಅಮಸ್ ಕೊಮೆನಿಯಸ್, ಜೆಕೋಸ್ಲೋವಾಕಿಯಾದ ಚಿಂತಕ’ ಆಧುನಿಕ ಶಿಕ್ಷಣದ ಜನಕನೆಂದು ಮಾನ್ಯತೆ ಗಳಿಸಿದರು. ಶಿಕ್ಷಕರು ಮಕ್ಕಳ ಮನಸ್ಸನ್ನು, ಅವರ ಹೃದಯವನ್ನು ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿ The great didactic ಎಂಬ ತನ್ನ ಪುಸ್ತಕದಲ್ಲಿ ಮಕ್ಕಳ ಹಕ್ಕುಗಳು, ಶಿಕ್ಷಣಕ್ರಮದ ಕುರಿತು ಬರೆದಿದ್ದಾರೆ. ಮಕ್ಕಳನ್ನು, ಶಿಕ್ಷಕರನ್ನು ಕುರಿತು 151 ಪುಸ್ತಕಗಳನ್ನು ಬರೆದಿದ್ದಾರೆ. ಈ ಪುಸ್ತಕಗಳು ಇಂಗ್ಲೀಷ್‍ನಲ್ಲಿದ್ದು 32 ಭಾಷೆಗಳಲ್ಲಿ ಪ್ರಕಟವಾಗಿವೆ. ರೊಸೋ ಫ್ರೆಂಚ್ ತತ್ವಜ್ಞಾನಿಯು ಮಕ್ಕಳ ಕಲಿಕೆ ಸಹಜ ವಾತಾವರಣದಲ್ಲಿ ಇರಬೇಕು, ಹಿರಿಯರ ಅಭಿಪ್ರಾಯವನ್ನು ಮಕ್ಕಳ ಮೇಲೆ ಹೇರಬಾರದು, ಮಕ್ಕಳು ಇಷ್ಟವಾದ ರೀತಿಯಲ್ಲಿ ಓದಬೇಕೆಂದು ತಿಳಿಸಿದರು. ಪೆಸ್ಟಾಲ್ಜೀ ಎಂಬ ಸ್ವಿಟ್ಜರ್‌ಲ್ಯಾಂಡ್‌ ಚಿಂತಕ 10ನೇ ವಯಸ್ಸಿಗೆ ಶಾಲೆ ಸೇರಿ ಜೂರಿತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದ. ಮಕ್ಕಳಿಗೆ ಪಾಠ ಹೇಳುವ ಮೊದಲು ಮಕ್ಕಳ ಕುರಿತು ಅಧ್ಯಯನ ಮಾಡಬೇಕು, ಮಕ್ಕಳ ತನ್ಮಯತೆ (ಏಕಾಗ್ರತೆ) ಗಳಿಸಬೇಕು, ಪಾಠಗಳನ್ನು ಆಟ, ಹಾಡುಗಳೊಂದಿಗೆ ಕಲಿಸಬೇಕು, ಚಿಕ್ಕಕಥೆಗಳ ಮೂಲಕ ಮಕ್ಕಳಿಗೆ ಒಳ್ಳೆಯ ಬುದ್ಧಿ ಕಲಿಸಬೇಕು ಎಂದರು.

ಕಿಂಡರ್‌ ಗಾರ್ಟನ್‌ ನೋಟ

ಫ್ರೋಬೇಲ್  ಶಿಕ್ಷಣ ಕ್ಷೇತ್ರದಲ್ಲಿ ಮಹೋನ್ನತ ವ್ಯಕ್ತಿ. ‘ಕಿಂಡರ್‌ ಗಾರ್ಟನ್’ ಎಂಬ ಶಿಕ್ಷಣದ ಪದ್ಧತಿ ಆರಂಭಿಸಿದ. ಮಕ್ಕಳು ಸಹಜವಾಗಿ ಬುದ್ಧಿವಂತರು. ಅವರಿಗೆ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳ ಕಲಿಕೆ ಆಟ-ಪಾಠಗಳೊಂದಿಗೆ ಸಾಗಬೇಕೆಂದರು. ಮಾರಿಯಾ  ಮಾಂಟೆಸ್ಸರಿ ಇಟಲಿ ದೇಶದ ಚಿಂತಕಳು. ಶಿಕ್ಷಣ ಪದ್ಧತಿಯಲ್ಲಿ ವೈಜ್ಞಾನಿಕ ಪದ್ಧತಿ ರೂಪಿಸಿದರು. ಪ್ರಪಂಚದ ಭವಿಷ್ಯ ಮಕ್ಕಳ ಭವಿಷ್ಯದ ಮೇಲೆ ನಿಂತಿದೆ, ಮಕ್ಕಳನ್ನು ಶಿಕ್ಷಿಸುವುದು ಸರಿಯಲ್ಲ, ಅವರ ಮೇಲೆ ಹೆಚ್ಚು ನಿಯಂತ್ರಣ ಹಾಕಬಾರದೆಂದು ತಿಳಿಸಿದರು.

ದೇಶಿಯ ಚಿಂತಕರ ಚಿಂತನೆ

ಸ್ವಾಮಿ ವಿವೇಕಾನಂದರು ಮಕ್ಕಳಲ್ಲಿ ಸದ್ವರ್ತನೆ, ಆತ್ಮವಿಶ್ವಾಸ, ಸೋದರಪ್ರೇಮ, ತ್ಯಾಗ, ಸ್ವಯಂ ಸಮೃದ್ಧಿ, ಆರೋಗ್ಯ, ಆಧ್ಯಾತ್ಮಿಕ ಚಿಂತನೆ, ಹಾಗೂ ಸಮಾಜಸೇವೆ ಕುರಿತು ಮಕ್ಕಳಿಗೆ ತಿಳುವಳಿಕೆ, ಶಿಕ್ಷಣ ನೀಡಬೇಕೆಂದರು. ಶಿಕ್ಷಕರ ಕಾಳಜಿ, ಪ್ರೇಮ, ವಾತ್ಸಲ್ಯ, ಪ್ರೋತ್ಸಾಹದಿಂದ ಮಕ್ಕಳು ಅಭಿವೃದ್ಧಿಗೊಳ್ಳುತ್ತಾರೆಂಬ ಆಶಯ ಅವರದು. ರವೀಂದ್ರನಾಥ್ ಟ್ಯಾಗೊರ್ ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಡಬೇಕೆಂದರು. ‘ಮಕ್ಕಳ ವರ್ತನೆ’ ಬದಲಾಗಲು ಮೊದಲು ‘ಶಿಕ್ಷಕರ ವರ್ತನೆ’ ಬದಲಾಗಬೇಕು, ಮಕ್ಕಳಿಗೆ ಕಠಿಣ ನಿಯಮ, ನಿಬಂಧನೆ ಇರದೇ ಮನೋಸ್ವಾತಂತ್ರ್ಯವಿರಬೇಕೆಂದು ತಿಳಿಸಿದರು. ಮಹಾತ್ಮಾಗಾಂಧೀಜಿ 1937ರಲ್ಲಿ ‘ನಯಾತಾಲೀಮ್’ ಎಂಬ ನೂತನ ಶಿಕ್ಷಣ ಪದ್ಧತಿಯನ್ನು ಪ್ರಾಥಮಿಕ ಹಂತದಲ್ಲಿ ಸೂಚಿಸಿದರು. ಮಕ್ಕಳಿಗೆ ವಿದ್ಯೆ ಮಾತೃಭಾಷೆಯಲ್ಲಿರಬೇಕು, ಶಿಕ್ಷಣ ಶಿಶುಕೇಂದ್ರೀತವಾಗಿರಬೇಕು, ಜೀವನದ ಅವಶ್ಯಕತೆಯನ್ನು ಪೂರೈಸುವ ಶಿಕ್ಷಣ ಮಕ್ಕಳಿಗೆ ನೀಡಬೇಕೆಂದು ತಮ್ಮ ‘ಮೂಲಶಿಕ್ಷಣ ಪದ್ಧತಿ’ಯಲ್ಲಿ ತಿಳಿಸಿದರು.

ಡಾ. ರಾಧಾಕೃಷ್ಣನ್ ಮಕ್ಕಳಿಗೆ ಒಳಿತು-ಕೆಡಕುಗಳನ್ನು ಹೇಳಬೇಕು, ಮಕ್ಕಳ ದೃಷ್ಟಿಕೋನ, ವ್ಯಕ್ತಿತ್ವ ಬೆಳೆಯುವ ಶಿಕ್ಷಣ ನೀಡಬೇಕಾಗಿದೆ ಎಂಬುದು ಅವರ ಆಶಯ. ಅರಬಿಂದೋಘೋಷ್ ಮಕ್ಕಳ ಬಾಯಿಪಾಠ ವಿದ್ಯೆ ಅನ್ನಿಸಿಕೊಳ್ಳವುದಿಲ್ಲ, ಮಕ್ಕಳ ಪಾಠಗಳ ಪ್ರಣಾಳಿಕೆ, ವಿಷಯ ಜ್ಞಾನ, ವ್ಯಾಯಾಮ, ಆರೋಗ್ಯ, ವೃತ್ತಿ ನೈತಿಕ ಮೌಲ್ಯ ಪೋಷಣೆ, ಲಲಿತಕಲೆಗಳು, ಅಂತಾರಾಷ್ಟ್ರೀಯ ತಿಳುವಳಿಕೆ ಮೂಡಿಸುವ ವ್ಯವಸ್ಥೆ ಮಕ್ಕಳಿಗೆ ಇರಬೇಕೆಂದರು. ಜಿಡ್ಡುಕೃಷ್ಣಮೂರ್ತಿಯವರು ‘ಸತ್ಯಾನ್ವೇಷಕರು’ ವಿದ್ಯಾರ್ಥಿಗಳ ಬಗೆಗೆ ಸ್ನೇಹ ಭಾವವನ್ನು ಪ್ರದರ್ಶಿಸಬೇಕು. ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿಯನ್ನು, ವಿಶ್ವಮಾನವ ಭ್ರಾತೃತ್ವವನ್ನು ಮಕ್ಕಳಲ್ಲಿ ಶಿಕ್ಷಣದ ಮೂಲಕ ಬೆಳೆಸಬೇಕೆಂದರು.

ಶಾಲಾ ಮಕ್ಕಳು

ಹೀಗೆ ದೇಶೀಯ ಮತ್ತು ವಿದೇಶೀ ಶಿಕ್ಷಣ ತಜ್ಞರ, ಚಿಂತಕರ ಅಭಿಪ್ರಾಯಗಳು ಮಕ್ಕಳ ಬೆಳವಣಿಗೆ, ಅವರ ಶಿಕ್ಷಣ ಪದ್ಧತಿಗೆ ಪೂರಕವಾಗಿವೆ. ಪರಮ ಪವಿತ್ರವಾದ ಈ ವಿದ್ಯಾಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ದಾರಿ ತಪ್ಪುತ್ತಿದೆ.  ಹಿಂದೆ ಶಾಲೆಗಳನ್ನು ಸ್ಥಾಪಿಸಿದವರಲ್ಲಿ, ಶಿಕ್ಷಕರಲ್ಲಿ ಅರ್ಪಣಾ ಮನೋಭಾವವಿತ್ತು. ತದನಂತರ ‘ಶಿಕ್ಷಣ’ ವ್ಯಾಪಾರವಾಗಿ, ಲಾಭ ತರುವ ಸಂಗತಿಯಾಗಿ ಬದಲಾಗುವುದರೊಂದಿಗೆ ಇತರ ವ್ಯಾಪಾರಗಳಲ್ಲಿ ನಷ್ಟ ಅನುಭವಿಸಿದವರು ಈ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ. ಇಂತಹ ವ್ಯಾಪಾರಿ ಮನಸ್ಥಿತಿ ಜನರ ಕೈಗೆ ಸಿಕ್ಕ ಶಿಕ್ಷಣದ ವ್ಯವಸ್ಥೆಯ ಬಗ್ಗೆ  ಬರೆಯುವುದು ಬೇಕಾದಷ್ಟಿದೆ.

ಇದನ್ನೂ ಓದಿ- http://ವಿಶೇಷ |ಕಲಿಸುತ ಕಲಿಯುತ ಸಾಗೋಣ……..https://kannadaplanet.com/lets-teach-and-learn/

ಮಕ್ಕಳ ಶಿಕ್ಷಣದಲ್ಲಿ ಸರ್ಕಾರದ ಪಾತ್ರ

ವಿದೇಶಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ, ಹಾಗೂ ಪ್ರೌಢಶಾಲಾ ಶಿಕ್ಷಣಕ್ಕೆ ಅತಿಹೆಚ್ಚು ಆದ್ಯತೆ ನೀಡಿ ಮಕ್ಕಳನ್ನು ಆರಂಭದ ಹಂತದಲ್ಲಿ ಶಿಕ್ಷಣಕ್ಕೆ ಉತ್ತಮ ಬುನಾದಿಹಾಕುತ್ತಾರೆ.  ಭಾರತದ ಸಂದರ್ಭಗಳಿಗೆ ಹೋಲಿಸಿದರೆ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕಡಿಮೆ. ನಮ್ಮ ಅಭಿವೃದ್ಧಿ ಕಲ್ಪನೆಗಳೇ ಬೇರೆ ಆಗಿವೆ.  ಆದರೆ ವಾಸ್ತವದಲ್ಲಿ ಶೈಕ್ಷಣಿಕ ಪ್ರಗತಿ, ಮಕ್ಕಳ ಪ್ರಗತಿ ದೇಶದ ಅಭಿವೃದ್ಧಿ ಎಂಬ ಆಲೋಚನೆ ಬರಬೇಕಾಗಿದೆ. ಸರ್ಕಾರಗಳು ವಿವಿಧ ಬಾಬತ್ತುಗಳಿಗೆ ನೀಡುವ ಹಣ, ಅನುದಾನಕ್ಕಿಂತ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಪ್ರಮಾಣ ಎಷ್ಟು ಎಂಬುದರ ಪರಾಮರ್ಶೆ ನಡೆಯಬೇಕು. ಸರ್ಕಾರದ ಶಿಕ್ಷಣ ನೀತಿಗಳು ಮರು ಪರಿಶಿಲನೆಗೆ ಒಳಪಡಬೇಕು. ಶೈಕ್ಷಣಿಕ ಬೆಳವಣಿಗೆಗೆ ಮೂಲಭೂತ ಸೌಕರ್ಯಗಳು, ಶಿಕ್ಷಕರ ನೇಮಕಾತಿ, ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ಮಕ್ಕಳ ದಿನಾಚರಣೆಯು ಒಂದು ದಿನದ ಸಂಭ್ರಮಕ್ಕೆ ಮೀಸಲಾಗಿರದೇ ಶಿಕ್ಷಣ ಸಂಸ್ಥೆಗಳು ಮಕ್ಕಳ ಎಲ್ಲ ವಿಧದ ಪ್ರತಿಭೆಯನ್ನು ಹೊಳಪಿಸುವ ಜ್ಞಾನ ಕೇಂದ್ರಗಳಾಗಬೇಕು. ಕಲಿಕೆಯ ಅವಕಾಶಗಳು ಅವರನ್ನು ಪ್ರತಿಭಾವಂತರನ್ನಾಗಿ, ಸ್ವತಂತ್ರ ಚಿಂತನೆಯ ಸ್ವಾವಲಂಬಿ ವ್ಯಕ್ತಿಗಳನ್ನಾಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ, ಶಿಕ್ಷಣ ಸಚಿವರು, ಜನಪ್ರತಿನಿಧಿಗಳು ಚಿಂತನ ಮಂಥನ ನಡೆಸುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಸಮಾಜದ, ದೇಶದ ಅಭಿವೃದ್ಧಿ ಎಂದು ಭಾವಿಸಬೇಕು.

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು

ಇದನ್ನೂ ಓದಿ-ಚಾ ಚಾ ನೆಹರೂ ಅವರೊಂದಿಗೆ ಇಂದಿನ ಚಹಾ..

More articles

Latest article