ರಾಮನಗರ : ಚನ್ನಪಟ್ಟಣ ನಗರದಲ್ಲಿ ಈ ಹಿಂದೆ ಶಾಸಕರಾಗಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಡಿರುವ ಅದ್ವಾನಗಳನ್ನು ಸರಿಪಡಿಸಬೇಕು. ಚನ್ನಪಟ್ಟಣ ನಗರ ಬಹಳ ಹದಗೆಟ್ಟಿದೆ. ಬಸ್ ನಿಲ್ದಾಣ, ಕಸ, ಒಳ ಚರಂಡಿ ಸಮಸ್ಯೆ ಇದೆ. ಸ್ವಚ್ಛ ಮಾಡುವ ಉದ್ದೇಶದಿಂದ ಎಲ್ಲಾ ನಗರಸಭಾ ಸದಸ್ಯರ ಸಭೆ ಕರೆದಿದ್ದೇನೆ ಎಂದು ನೂತನ ಶಾಸಕ ಯೋಗೇಶ್ವರ್ ಹೇಳಿದ್ದಾರೆ.
ಇದುವರೆಗೂ ಶಾಸಕರಾಗಿದ್ದ ಕುಮಾರಸ್ವಾಮಿ ಯಾವುದೆ ಕ್ರಮ ಕೈಗೊಂಡಿಲ್ಲ. ನಗರಸಭಾ ಸದಸ್ಯರ ಸಭೆ ನಡೆಸಿ, ನಿರಂತರವಾಗಿ ತಾಲ್ಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಅವರು ಹೇಳಿದರು.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಕರೆತರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಮಾಜಿ ಪ್ರಧಾನಿ ದೇವೇಗೌಡರು ಹುಟ್ಟುಹಾಕಿದ ಪಕ್ಷ ಅದು. ಮುನ್ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅದೊಂದು ಕುಟುಂಬ ಕೇಂದ್ರಿತ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆಲ್ಲುತ್ತಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಇದಕ್ಕೆ ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದರು.
ಸರಕಾರ ಸುಭದ್ರವಾಗಿದೆ. 136 ಇತ್ತು ಈಗ 139 ಆಗಿದೆ. ಊಹಾಪೋಹಗಳು ಏಕೆ ಹರಡುತ್ತಿವೆ ತಿಳಿದಿಲ್ಲ? ಜೆಡಿಎಸ್ ನಶಿಸಿ ಹೋಗುತ್ತಿದೆ. ಪಕ್ಷ ನಶಿಸಿ ಹೋದಾಗ, ಶಾಸಕರು ಬೇರೆ ಪಕ್ಷದತ್ತ ಮುಖ ಮಾಡುವುದು ಸಹಜ ಎಂದರು. ಇಡೀ ಕುಟುಂಬ ಒಬ್ಬ ಸಾಮಾನ್ಯ ವ್ಯಕ್ತಿಯ ವಿರುದ್ದ ದಾಳಿ ಮಾಡಿದರು ಎಂಬ ನೋವಿನಿಂದ ಮಾತನಾಡಿದ್ದೇನೆ. ಮುಂದೆ ಯಾವೆಲ್ಲಾ ರಾಜಕೀಯ ಬೆಳವಣಿಗೆಗಳಾಗುತ್ತವೆ ನೋಡೋಣ ಎಂದರು.
ನಾನು ಕಾಂಗ್ರೆಸ್ ನಲ್ಲೇ ಇರುತ್ತೇನೆ. ಕಾಂಗ್ರೆಸ್ ಬಿಡುವುದಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಆಚೆ ಬಂದಿದ್ದೇನೆ. ನಾವು ಕಟ್ಟಿದ ಮನೆಯಿಂದ ಆಚೆ ಹಾಕಿದ ಮೇಲೆ ಬೇರೆ ಮನೆ ಹುಡುಕಿಕೊಳ್ಳಲೇಬೇಕು. ನಾನು ಪಕ್ಕಾ ಕಾಂಗ್ರೇಸ್ಸಿಗ,ನಾನು ಪಕ್ಷ ಬಿಡುವುದಿಲ್ಲ ಎಂದರು.