Saturday, December 7, 2024

ಪ್ರೊ.ಭಗವಾನ್ ಅವರಿಗೆ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರ ಬಾರ್ ಕೌನ್ಸಿಲ್ ನಿಂದ ಅಮಾನತು

Most read

ಬೆಂಗಳೂರು: ಪ್ರಗತಿಪರ ಚಿಂತಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಎಸ್. ಭಗವಾನ್ ಅವರ ಮುಖಕ್ಕೆ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರ ಅವರನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ. ಪ್ರಕರಣವೊಂದರ ಸಂಬಂಧ ಬೆಂಗಳೂರು ನ್ಯಾಯಾಲಯಕ್ಕೆ ಪ್ರೊ.ಭಗವಾನ್ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಮೀರಾ ಅವರು, ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದರು. ಭಗವಾನ್ ಅವರು ಶ್ರೀರಾಮಚಂದ್ರನನ್ನು ತಮ್ಮ ಪುಸ್ತಕದಲ್ಲಿ ಹಿಯಾಳಿಸಿ ಬರೆದಿದ್ದು, ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಪ್ರೊ. ಭಗವಾನ್ ರವರ ವಿರುದ್ಧ 2ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಕೀಲೆ ಮೀರಾ ರಾಘವೇಂದ್ರ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. 04/02/2021 ರಂದು ನ್ಯಾಯಾಲಯದಲ್ಲಿ ಹಾಜರಾಗಿ ಜಾಮೀನು ಪಡೆದು ಹೊರಬರುತ್ತಿದ್ದ ಭಗವಾನ್ ರವರ ಮುಖಕ್ಕೆ ಮೀರಾ ರಾಘವೇಂದ್ರ ಆಲಿಯಾಸ್ ಮೀರಾ ಬಾಯಿ .ಆರ್ ಮಸಿ ಬಳಿದು ಅಲ್ಲದೇ ಪ್ರೊ.ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರು ಕೊಲೆಯಾದಂತೆ, ಭಗವಾನ್ ಅವರನ್ನೂ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದರು. ಅವರು ಮಸಿ ಬಳಿಯುತ್ತಿರುವ ದೃಶ್ಯಗಳು ಹಾಗೂ ವರದಿಗಳು 05/02/2021 ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇವರ ವರ್ತನೆಗೆ ಬೇಸತ್ತ ಭಗವಾನ್ ಅವರು ಮೀರಾ ರಾಘವೇಂದ್ರ ಅವರ ವಿರುದ್ಧ ಕರ್ನಾಟಕ ಬಾರ್ ಕೌನ್ಸಿಲ್ ನಲ್ಲಿ ದೂರನ್ನು ದಾಖಲಿಸಿದ್ದರು.

ಈ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೀರಾ ರಾಘವೇಂದ್ರ ಅವರಿಗೆ ಕಳುಹಿಸಿದ್ದ ನೋಟಿಸ್ ಅನ್ನು ಮೀರಾ ಅವರು ಸ್ವೀಕರಿಸಲಿಲ್ಲ. ಹಾಗಾಗಿ ಅವರ ಅನುಪಸ್ಥಿತಿಯಲ್ಲಿ ದೂರಿನ ವಿಚಾರಣೆ ನಡೆಸಿದ ಬಾರ್ ಕೌನ್ಸಿಲ್ ಸಮಿತಿ ವಕೀಲೆಯಾಗಿ ವೃತ್ತಿಪರರಾಗಿ ಕೆಲಸ ಮಾಡುವ ಮೀರಾ ರಾಘವೇಂದ್ರ ರವರು ದೂರಿನ ಬಗ್ಗೆ ವಿಚಾರಣೆಗೆ ಹಾಜರಾಗದೇ, ನೋಟಿಸನ್ನು ಸ್ವೀಕರಿಸದೇ, ಅವರು ನಡೆದುಕೊಂಡಿರುವ ರೀತಿ ಬಾರ್ ಕೌನ್ಸಿಲ್ ನ ನಿಯಮಗಳಿಗೆ ವಿರುದ್ಧವಾಗಿದೆ. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಮವಸ್ತ್ರದಲ್ಲಿದ್ದು ದೂರುದಾರರ ಮುಖಕ್ಕೆ ಮಸಿ ಬಳಿಯುವುದು ಅವರ ದುರ್ನಡತೆಯನ್ನು ತೋರಿಸುತ್ತದೆ. ತಮ್ಮ ವೃತ್ತಿಗೆ ಬದ್ಧರಾಗಿರದೆ ಅವರು ನಡೆದುಕೊಂಡಿರುವ ರೀತಿ, ವೃತ್ತಿಯ ಶಿಷ್ಟಾಚಾರಕ್ಕೆ ಅಪಮಾನ ಮಾಡಿದಂತಾಗಿದ್ದು, ಅವರು ಮೂರು ತಿಂಗಳ ಕಾಲ ಕರ್ನಾಟಕ ಸೇರಿದಂತೆ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿಯನ್ನು ಮಾಡಬಾರದು ಎಂದು ನಿರ್ಧಾರ ಕೈಗೊಂಡಿದ್ದು, ಮೂರು ತಿಂಗಳ ಕಾಲ ಅಮಾನತ್ತಿನಲ್ಲಿಡುವಂತೆ ಕರ್ನಾಟಕ ಬಾರ್ ಕೌನ್ಸಿಲ್ ದಿ. 20/11/2024 ರಂದು ಆದೇಶಿಸಿದೆ.

More articles

Latest article