Saturday, December 7, 2024

ಕೇಂದ್ರ ಯಾವಾಗಲೂ ಬ್ರಾಹ್ಮಣ-ಬನಿಯಗಳ ಹಿತವನ್ನು ಕಾಯುತ್ತದೆ : ವಿಎಲ್‌ಎನ್

Most read

ಬೆಂಗಳೂರು : ಕೇಂದ್ರ ಸರ್ಕಾರ ಯಾವಾಗಲೂ ಮೇಲ್ಜಾತಿಯ ಹಿತಾಸಕ್ತಿಯನ್ನು ಕಾಯುತ್ತದೆ ಎಂದು ಸಾಕಷ್ಟು ಅಧ್ಯಯನಗಳಿಂದ ತಿಳಿದು ಬಂದಿದ್ದು, ಒಕ್ಕೂಟ ವ್ಯವಸ್ಥೆಯ ಒಳಗಡೆ ಸಮನ್ವಯತೆಯನ್ನು ಸಾಧಿಸಬೇಕಾದರೆ ಕೇಂದ್ರ ಮಾಡುವ ದಬ್ಬಾಳಿಕೆಯನ್ನು ರಾಜ್ಯವು ಪ್ರಶ್ನೆಮಾಡಬೇಕು ಎಂದು ಪ್ರಾಧ್ಯಾಪಕರಾದ ವಿ ಎಲ್‌ ನರಸಿಂಹಮೂರ್ತಿ ಹೇಳಿದರು.

ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ, ಒಕ್ಕೂಟ ವ್ಯವಸ್ಥೆಯಲ್ಲಿನ ಅಂತರಗಳ ಸಮತೋಲನಾ ಆಯಾಮಗಳು ವಿಚಾರ ಕುರಿತು ಮಾತನಾಡಿದ ಅವರು, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಸಾಂಸ್ಕೃತಿಕವಾದ ಭಿನ್ನತೆಯಿದೆ ಎಂದರು. ಉತ್ತರ ಭಾರತ ಸಾಂಪ್ರಾದಾಯಿಕವಾಗಿ ಆಲೋಚನೆ ಮಾಡುತ್ತದೆ, ಶೈಕ್ಷಣಿವಾಗಿ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿಯೂ ಸಹ ಹಿಂದೆ ಉಳಿದಿದೆ. ಅದಕ್ಕೆ ವಿರುದ್ಧವಾಗಿ ದಕ್ಷಿಣ ಭಾರತ ಶೈಕ್ಷಣಿಕವಾಗಿ, ಸಂಪತ್ತಿನ ಉತ್ಪಾದನೆಯಲ್ಲಿ ಬಹಳ ಮುಂದಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿ ಇರುವುದು ಬ್ರಾಹ್ಮಣ, ಬನಿಯ ರಿಪಬ್ಲಿಕ್‌ ಸರ್ಕಾರ. ದಕ್ಷಿಣ ಭಾರತದಲ್ಲಿ ಅಭಿವೃದ್ಧಿಯ ಪ್ರಶ್ನೆ, ಜಾತಿ ಅಸಮಾನತೆಯ ಪ್ರಶ್ನೆ ಬಂದಾಗ ಉತ್ತರ ಭಾರತದವರು ರಾಷ್ಟ್ರೀಯತೆಯ ಮತ್ತು ಸಾಂಸ್ಕೃತಿಕ ಪ್ರಶ್ನೆಯನ್ನು ಮುಂದೆ ತಂದು ದಕ್ಷಿಣ ಮತ್ತು ಉತ್ತರ ಭಾರತಗಳಲ್ಲಿ ಭಿನ್ನಾಭಿಪ್ರಾಯವನ್ನು ಬ್ರಾಹ್ಮಣ, ಬನಿಯಗಳು ಸೃಷ್ಟಿ ಮಾಡುತ್ತಾರೆ. ಬ್ರಾಹ್ಮಣಶಾಹಿಗೆ ಬಹುಸಂಖ್ಯಾತರು ಅಭಿವೃದ್ಧಿ ಹೊಂದುವುದನ್ನು ಬಯಸುವುದಿಲ್ಲ ಎಂದರು.

ಕೇಂದ್ರ ಸರ್ಕಾರವು ಸಿಎಎ-ಎನ್‌ಆರ್‌ಸಿ, ಸಾಮಾಜಿಕ ನ್ಯಾಯದ ವಿರುದ್ಧವಾಗಿ ಇಡಬ್ಲ್ಯಎಸ್ ಜಾರಿ, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ದುರ್ಬಲ, ಇವೆಲ್ಲವೂ ಬಹುಸಂಖ್ಯಾತರನ್ನು ಶೋಷಣೆ ಮಾಡಿ ಶೇ 15 ಕ್ಕಿಂತ ಕಡಿಮೆ ಇರುವ ಬ್ರಾಹ್ಮಣ ಮತ್ತು ಬನಿಯಗಳ ಹಿತ ಕಾಯುವ ಉದ್ದೇಶಗಳನ್ನು ಹೊಂದಿದೆ ಎಂದರು.

ಭಾರತದಲ್ಲಿ ರಾಷ್ಟ್ರೀಯವಾದಿ ಚಳುವಳಿ ನಡೆಯುವ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕೇರಳದಲ್ಲಿ ಅಯ್ಯಂಕಾಳಿ, ತಮಿಳುನಾಡಿನಲ್ಲಿ ಪೆರಿಯಾರ್‌, ಮಹಾರಾಷ್ಟ್ರದಲ್ಲಿ ಫುಲೆ ದಂಪತಿಗಳು ಮತ್ತು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಜಾತಿ ವಿಮುಕ್ತಿ ಮಾಡುವ ಬಗ್ಗೆ ಚಿಂತನೆ ನಡೆಸಿದನ್ನು ನೆನಪಿಸಿಕೊಂಡರು.

ಸಾಂವಿಧಾನಿಕವಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಿಗಬೇಕಾದ ನ್ಯಾಯವಾದ ಪಾಲನ್ನು ಸರಿಯಾಗಿ ಕೊಡಬೇಕಾಗುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿವರೆಗೂ ಹಿಂದಿ ಮಾತನಾಡುವ ರಾಜ್ಯಗಳಿಂದ ಬಂದವರಿಗೆ ಹೆಚ್ಚು ಅಧಿಕಾರದ ಪಾಲು, ನೈಸರ್ಗಿಕ ಸಂಪತ್ತು, ಭೂಮಿಯ ಹಕ್ಕು, ರಾಜಕೀಯ ಒಡೆತನ ಅತೀ ಹೆಚ್ಚು ಜನಸಂಖ್ಯೆಯಲ್ಲಿ ಕಡಿಮೆ ಇರುವ ಬ್ರಾಹ್ಮಣ ಸಮುದಾಯಕ್ಕೆ ಸಿಕ್ಕಿದೆ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಬಂದಾಗ, ಸರಿದೂಗಿಸಲು ಕೇಂದ್ರದಲ್ಲಿ ಗಟ್ಟಿಯಾದ ಸರ್ಕಾರ ಇರಬೇಕು. ಆದರೆ ಕೇಂದ್ರದ ಸರ್ಕಾರಗಳು ರಾಜ್ಯಗಳ ಹಿಡಿತವನ್ನು ಸಾಧಿಸಿ ದಬ್ಬಾಳಿಕೆ ಮಾಡುವುದನ್ನು ಗಮನಿಸಬಹುದು ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ಸಂವಿಧಾನ ಅಪಾಯದಲ್ಲಿದೆ ಎಂದು ಕೇಳುತ್ತಾ ಬಂದಿದ್ದೇವೆ. ಆ ಅಪಾಯವನ್ನು ತಪ್ಪಿಸಲು ಸಂವಿಧಾನವನ್ನು ಇನ್ನಷ್ಟು ಬಲಗೊಳಿಸಬೇಕು ಎಂದರು.

More articles

Latest article