Saturday, July 27, 2024

ಕೇಂದ್ರವು ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದೆ : ಡಿ ಎಸ್‌ ಗುರುಪ್ರಸಾದ್

Most read

ಬೆಂಗಳೂರು : ಸಂವಿಧಾನದ ತಳಹದಿ ಇರುವುದೇ ಸಮಾನತೆ ಮತ್ತು ಭಾತೃತ್ವದ ಮೇಲೆ ಆದರೆ ಕೇಂದ್ರವು ದೇಶದ ಎಂಟು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ಕೊಟ್ಟು ಉಳಿದ ಭಾಷೆಗಳಿಗೆ ತಾರತಮ್ಯ ಮಾಡುತ್ತಿದೆ. ಭಾರತದಲ್ಲಿ ಇರುವ ಎಲ್ಲಾ ಭಾಷೆಗಳಿಗೂ ಮಾನ್ಯತೆ ಸಿಗಬೇಕು ಎಂದು ಪತ್ರಕರ್ತ ಡಿ ಎಸ್‌ ಗುರುಪ್ರಸಾದ್‌ ಹೇಳಿದರು.

ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ, ಒಕ್ಕೂಟ ವ್ಯವಸ್ಥೆಯಲ್ಲಿನ ಅಂತರಗಳ ಸಮತೋಲನಾ ಆಯಾಮಗಳು ವಿಚಾರ ಕುರಿತು ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆ ನಿಂತಿರುವುದು ವೈವಿದ್ಯತೆಯಲ್ಲಿನ ಏಕತೆ ಮೇಲೆ. ಆದರೆ ಕೇಂದ್ರವು ಕೇವಲ 22 ಭಾಷೆಗಳಿಗೆ ಅಧಿಕೃತ ಸ್ಥಾನಮಾನ ಕೊಟ್ಟು ಬೇರೆ ಭಾಷೆಗಳ ಸಾಂಸ್ಕೃತಿಕ ವೈವಿದ್ಯತೆಯನ್ನು ಕಡೆಗಣಿಸುತ್ತಿದೆ ಎಂದರು.

1960 ರಿಂದ ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡುವ ಪ್ರಯತ್ನಗಳು ನಡೆದಿದೆ. ತಮಿಳುನಾಡಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಸಹ ನಡೆದು ಹಿಂದಿ ರಾಷ್ಟ್ರ ಭಾಷೆ ಆಗುವುದನ್ನು ತಡೆದಿದೆ. ಕೇಂದ್ರದಲ್ಲಿ ಹಿಂದಿ ಭಾಷೆ ಮಾತನಾಡುವವರಿಗೆ ರಾಜಕಾರಣದಲ್ಲಿ, ಉದ್ಯೋಗದಲ್ಲಿ ಸಿಕ್ಕಷ್ಟು ಅವಕಾಶ ಬೇರೆ ಭಾಷೆಯ ಮಾತನಾಡುವವರಿಗೆ ಸಿಕ್ಕಿರುವುದು ಕಡಿಮೆ ಎಂದು ಅಭಿಪ್ರಾಯಪಟ್ಟರು.

ಮುಂದುವರೆದು, ʼಕೇಂದ್ರ ಸರ್ಕಾರವು ತಮ್ಮ ಶಿಕ್ಷಣ ನೀತಿಯನ್ನು ರಾಜ್ಯಗಳಿಗೆ ಹೇರಿಕೆ ಮಾಡುವ ಮೊದಲೇ ರಾಜ್ಯಗಳು ತಮ್ಮದೆ ಆದಂತಹ ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳಬೇಕು. ಅದೇ ರೀತಿ ದೂರದರ್ಶನ, ರೇಡಿಯೋ ಪ್ರಸಾರ, ಅಂಚೆ, ಸಂವಹನ ವಿಷಯಗಳಲ್ಲಿ ರಾಜ್ಯಗಳಿಗೆ ಭಾಷಾ ನೀತಿಯನ್ನು ರೂಪಿಸಿಕೊಳ್ಳುವಂತಹ ಹೆಚ್ಚಿನ ಅಧಿಕಾರ ದೊರೆಯಬೇಕು. ಭಾಷಾ ನೀತಿಗಳು ಅಲ್ಪಸಂಖ್ಯಾತ, ದಮನಿತ ಸಮುದಾಯಗಳ ಭಾಷೆಯನ್ನು ಒಳಗೊಂಡಾಗ ಮಾತ್ರ ಭಾಷೆಯ ವೈವಿದ್ಯತೆಯಲ್ಲಿ ಸಾಕಾರ ಸಾಧಿಸಬಹುದು ಎಂದರು.

ಕರ್ನಾಟಕದಲ್ಲಿನ ಎಲ್ಲಾ ಭಾಷೆಗಳು ಜೊತೆಗೆ ಬೇರೆ ರಾಜ್ಯಗಳ ಭಾಷೆಗಳು ಸಮಾನತೆಯಿಂದ ಬೆಳವಣೆಗೆ ಕಾಣುವ ದೃಷ್ಟಿಯಲ್ಲಿ ಹೋರಾಟ ನಡೆದಾಗ ಮಾತ್ರ ಒಕ್ಕೂಟ ವ್ಯವಸ್ಥೆಯ ಕಲ್ಪನೆ ಸಾಕಾರಗೊಳುತ್ತದೆ ಎಂದು ಹೇಳಿದರು.

ರಾಜ್ಯಸಭೆಗೆ ಸದಸ್ಯರನ್ನು ರಾಜ್ಯ ಸರ್ಕಾರಗಳು ಆಯ್ಕೆ ಮಾಡುತ್ತದೆ. ರಾಜ್ಯಸಭೆಯ ಸದಸ್ಯರು ಪಕ್ಷದ ಹಿತವನ್ನು ಕಾಪಾಡುವುದೇ ತಮ್ಮ ಗುರಿ ಎಂಬತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಆಯಾ ರಾಜ್ಯದ ಸಾಮಾನ್ಯ ನಿವಾಸಿ ಆಗಿರಬೇಕು  ಮತ್ತು ರಾಜ್ಯವನ್ನು ಪ್ರತಿನಿಧಿಸಬೇಕು ಎಂಬ ಕ್ರಮ ಇತ್ತು. ಆದರೆ 2003ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಯಾವುದೇ ರಾಜ್ಯದ ಸದಸ್ಯರನ್ನು ಆಯ್ಕೆ ಮಾಡಬಹದು ಎಂಬ ಕ್ರಮವನ್ನು ತರಲಾಗಿದೆ. ಇದರಿಂದ ರಾಜ್ಯಗಳು ಭಾರಿ ಪ್ರಮಾಣದ ನಷ್ಟವನ್ನು ಅನುಭವಿಸುತ್ತವೆ. ಈ ಸಮಸ್ಯೆಯನ್ನು ಬಗೆಹರಿಸಲು ಒಕ್ಕೂಟ ಸರ್ಕಾರಗಳು ಮತ್ತೆ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯದ ಪ್ರತಿನಿಧಿಗಳೇ ರಾಜ್ಯಸಭೆಗೆ ಹೋಗುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರ ಸ್ವೀಕರಿಸಿದಾಗಿದಂಲೂ ಒಂದು ದೇಶ, ಒಂದು ಚುನಾವಣೆ ಎನ್ನುವ ವಿಚಾರ ಮುನ್ನೆಲೆಗೆ ಬರುತ್ತಿದೆ. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅಧ್ಯಯನ ಕೂಡ ನಡೆಯುತ್ತಿದೆ. ಮುಂದೆ ಇದು ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದರು.

More articles

Latest article