ಮತ್ತೆ ಜಾತಿಗಣತಿ ಸಮೀಕ್ಷೆ; ಈಡೇರಲಿ ಸಾಮಾಜಿಕ ನ್ಯಾಯದ ನಿರೀಕ್ಷೆ

Most read

ಅಂತೂ ಇಂತೂ ಮತ್ತೆ ಕರ್ನಾಟಕದಲ್ಲಿ ಜಾತಿಗಣತಿಗೆ ಮುಹೂರ್ತ ನಿಗದಿಯಾಗಿದೆ. ಸೆಪ್ಟಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ 15 ದಿನಗಳ ಕಾಲ ಜಾತಿಯಾಧಾರಿತ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ನಡೆಯಲಿದೆ. 1.65 ಲಕ್ಷ ಗಣತಿದಾರರು ರಾಜ್ಯಾದ್ಯಂತ 7 ಕೋಟಿ ಜನರ ಸಮೀಕ್ಷೆ ಮಾಡಲಿದ್ದಾರೆ. ಅಕ್ಟೋಬರ್ ತಿಂಗಳು ಮುಗಿಯುವುದರ ಒಳಗೆ ಸಮೀಕ್ಷೆಯ ವರದಿ ಸಲ್ಲಿಕೆಯಾಗಬೇಕೆಂದು ಸಿಎಂ ಆದೇಶಿಸಿದ್ದಾರೆ.

ಇದೇ ರೀತಿಯ ಸಮೀಕ್ಷೆ ನಡೆಸಲು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು 2015 ರಲ್ಲಿ ಆದೇಶಿಸಿತ್ತು. ಹಿಂದುಳಿದ ಆಯೋಗದ ಮುಖ್ಯಸ್ಥರಾಗಿದ್ದ ಕೆಂಪರಾಜರವರ ಅಧ್ಯಕ್ಷತೆಯಲ್ಲಿ ಜಾತಿಗಣತಿ ಸಮೀಕ್ಷೆ ಮಾಡಿಸಲಾಯ್ತು. ಸಮೀಕ್ಷೆಯ ವರದಿ ಸಲ್ಲಿಕೆಯಾಗುವಷ್ಟರಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಸರಕಾರವೇ ಪತನವಾಗಿತ್ತು. ನಂತರ ಬಂದ ಸರಕಾರಗಳು ಸಮೀಕ್ಷಾ ವರದಿಯನ್ನು ನಿರ್ಲಕ್ಷಿಸಿದವು. ಅಷ್ಟರಲ್ಲಿ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಹುಯಿಲೆಬ್ಬಿಸಿದ ಪ್ರಬಲ ಜಾತಿ ಸಮುದಾಯಗಳು ತಮ್ಮ ವಿರೋಧ ವ್ಯಕ್ತಪಡಿಸಿದವು.  ಬಿಜೆಪಿ ಸರಕಾರವು ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ ಹೆಗ್ಡೆಯವರಿಗೆ ಪರಿಷ್ಕೃತ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲು ಆದೇಶಿಸಿತಾದರೂ ಸಿದ್ಧವಾದ ವರದಿಯನ್ನು ಸ್ವೀಕರಿಸಲಿಲ್ಲ.

ಆ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಆಯ್ಕೆಯಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾದಾಗ ಜನಗಣತಿ ವರದಿಗೆ ಮತ್ತೆ ಜೀವ ಬಂದಿತು.

 2024ರಲ್ಲಿ ಜಯಪ್ರಕಾಶ್ ಹೆಗ್ಡೆಯವರು ಸಮೀಕ್ಷಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಆಗಲೂ ಪ್ರಬಲ ಸಮುದಾಯದ ನಾಯಕರುಗಳು ಹಾಗೂ ಮಠಾಧೀಶರುಗಳು ಜಾತಿಸಮೀಕ್ಷೆ ವರದಿಗೆ ತೀವ್ರ ಅಪಸ್ವರ ಎತ್ತಿದರು. ಅದರಲ್ಲೂ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರಿಂದಲೇ ಪ್ರತಿರೋಧ ವ್ಯಕ್ತವಾಯ್ತು. ವಿರೋಧಿಸಿದವರಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೂ ಮುಂಚೂಣಿಯಲ್ಲಿದ್ದರು. ಆದರೂ ಸಿದ್ದರಾಮಯ್ಯನವರು ಪಟ್ಟು ಹಿಡಿದು 2025 ರ ಎಪ್ರಿಲ್ ತಿಂಗಳಲ್ಲಿ ಜಾತಿಗಣತಿ ಸಮೀಕ್ಷಾ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿದರು.

ಹಿಂದುಳಿದ ವರ್ಗಗಳ ಮೀಸಲಾತಿ ಪ್ರಸ್ತುತ 32% ಇದ್ದು ಅದನ್ನು 51%ಗೆ ಹೆಚ್ಚಿಸಬೇಕು, ಮುಸ್ಲಿಂ ಸಮುದಾಯದ ಪ್ರಸ್ತುತ ಮೀಸಲಾತಿ ಪ್ರಮಾಣ 4% ಇದ್ದು 8% ಗೆ ಹೆಚ್ಚಿಸಬೇಕು, ಒಕ್ಕಲಿಗ (3A) ಸಮುದಾಯದ ಮೀಸಲಾತಿ 4% ಇದ್ದು 7% ಗೆ ಏರಿಸಬೇಕು, ಲಿಂಗಾಯತ (3B) ಸಮುದಾಯದ ಮೀಸಲಾತಿ 5% ಇದ್ದಿದ್ದನ್ನು 8% ಗೆ ಹೆಚ್ಚಿಸಬೇಕು… ಎಂದು ಜಾತಿಗಣತಿ ಸಮೀಕ್ಷಾ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಒಟ್ಟು ಮೀಸಲಾತಿಯನ್ನು 66% ನಿಂದ 85% ಗೆ ಏರಿಕೆ ಮಾಡಬೇಕೆಂದೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಜಾತಿವಾರು ಜನಸಂಖ್ಯೆಯ ಈ ಎಲ್ಲಾ ಅಂಕಿ ಅಂಶಗಳು ಬಯಲಾದಾಗ ಜಾತಿಗಣತಿಗೆ ವಿರೋಧ ತೀವ್ರವಾಯಿತು. ಮುಸ್ಲಿಂ ಸಮುದಾಯಕ್ಕೆ ಯಾಕೆ ಮೀಸಲಾತಿ ಹೆಚ್ಚಿಸಬೇಕೆಂದು ಬಿಜೆಪಿಗರ ವಿರೋಧವಾದರೆ ತಮ್ಮ ಸಮುದಾಯಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬುದು ಒಕ್ಕಲಿಗ, ಲಿಂಗಾಯತ ಸಮುದಾಯಗಳ ಆಕ್ಷೇಪವಾಗಿತ್ತು. ಇಡೀ ಸಮೀಕ್ಷೆ ವೈಜ್ಞಾನಿಕವಾಗಿ ನಡೆಸಲಾಗಿಲ್ಲ, ಮನೆಮನೆಗೆ ಭೇಟಿ ಕೊಟ್ಟು ಮಾಹಿತಿ ಪಡೆದಿಲ್ಲ, ಹೀಗಾಗಿ ಸಮೀಕ್ಷೆಯೇ ಅಪೂರ್ಣ ಎನ್ನುವ ಆರೋಪ ಪ್ರಬಲ ಜಾತಿ ಸಮುದಾಯಗಳ ನಾಯಕರದ್ದಾಗಿತ್ತು.

ಏನಾದರಾಗಲಿ ಜಾತಿಗಣತಿ ಸಮೀಕ್ಷೆಯನ್ನು ಜಾರಿ ಮಾಡಿಯೇ ಸಿದ್ಧ ಎಂದು ಸಿದ್ದರಾಮಯ್ಯನವರು ಎದ್ದು ನಿಂತಿದ್ದರೆ, ಎಲ್ಲಿ ಸಿದ್ದರಾಮಯ್ಯನವರು ಜಾರಿ ಮಾಡಿಯೇ ಬಿಡುತ್ತಾರೋ ಎನ್ನುವ ಆತಂಕ ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ, ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ ಅಂತವರದ್ದಾಗಿತ್ತು. ಹೀಗಾಗಿ ಜಾತಿ ಗಣತಿ ವರದಿ ಜಾರಿ ಆಗಲೇಬಾರದೆಂದು ಕಾಂಗ್ರೆಸ್ ಹೈಕಮಾಂಡಿಗೆ ದೂರು ಕೊಡಲಾಯ್ತು. ಹೈಕಮಾಂಡ್ ಸಭೆ ಕರೆದು ಸಮಾಲೋಚನೆ ಮಾಡಿ “ಮರು ಸಮೀಕ್ಷೆ” ಮಾಡಿಸಬೇಕೆಂದು ಸಿದ್ದರಾಮಯ್ಯನವರಿಗೆ ತಾಕೀತು ಮಾಡಿತು.

ಅದರ ಪರಿಣಾಮವೇ ಸೆಪ್ಟಂಬರ್ 22 ರಿಂದ ಜಾತಿಗಣತಿಯ ಮರುಸಮೀಕ್ಷೆ ಆರಂಭವಾಗುತ್ತಿದೆ. ಆಪ್ (App) ಬಳಸುವ ಮೂಲಕ ಮನೆ ಮನೆಗೆ ತೆರಳಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಆದೇಶಿಸಲಾಗಿದೆ.

ಜಾತಿವಾರು ಲೆಕ್ಕಾಚಾರದಲ್ಲಿ ಮೀಸಲಾತಿಯನ್ನು ಹಂಚಿಕೆ ಮಾಡಲು, ಸಮೀಕ್ಷೆ ಆಧರಿಸಿ ಬಜೆಟ್‌ ನಲ್ಲಿ ಹಣವನ್ನು ಅಲೋಕೇಶನ್ ಮಾಡಲು, ಸರಕಾರಿ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಾಮಾಜಿಕ ನ್ಯಾಯವನ್ನು ಅಳವಡಿಸಲು.. ಈ ರೀತಿಯ ಜಾತಿಯಾಧಾರಿತ ಸಾಮಾಜಿಕ ಆರ್ಥಿಕ ಸಮೀಕ್ಷೆ ಅಗತ್ಯವಾಗಿದೆ. ಆದರೆ ಸಕಲ ಸವಲತ್ತುಗಳನ್ನು ಅನುಭವಿಸುತ್ತಾ ಬಂದಿರುವ ಪ್ರಬಲ ಜಾತಿ ಸಮುದಾಯಗಳು ದಲಿತ, ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸವಲತ್ತುಗಳನ್ನು ಬಿಟ್ಟುಕೊಡಲು ಸಿದ್ಧರಾಗಿಲ್ಲ. ಹೀಗಾಗಿ ಜಾತಿಗಣತಿಗೆ ಯಾವಾಗಲೂ ಪ್ರತಿರೋಧ ತೋರುತ್ತಲೇ ಬಂದಿವೆ. ಅವೈಜ್ಞಾನಿಕ, ಅಪೂರ್ಣ ಎಂದೆಲ್ಲಾ ನೆಪಗಳನ್ನು ಹೇಳುತ್ತಾ ಜಾತಿಗಣತಿ ಜಾರಿ ಬರದ ಹಾಗೆ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿಯೇ 2015 ರಲ್ಲಿ ಆರಂಭಗೊಂಡ ಸಮೀಕ್ಷೆಗೆ ಹತ್ತು ವರ್ಷಗಳಾದರೂ ಇನ್ನೂ ಬಿಡುಗಡೆಯ ಭಾಗ್ಯ ದಕ್ಕಿಲ್ಲಾ, ದಕ್ಕುವುದೂ ಇಲ್ಲ. ಈಗ ಮರು ಸಮೀಕ್ಷೆ ಮಾಡಲು ಆದೇಶವಾಗಿದೆ. ಮತ್ತೆ ಇದಕ್ಕೂ ಅಪಸ್ವರ, ಆರೋಪ,  ಪ್ರತಿರೋಧಗಳು ಬರುವುದಂತೂ ಖಂಡಿತ.

ಯಾರು ಅದೆಷ್ಟೇ ಪರಿಶ್ರಮವಹಿಸಿ ಜಾತಿಗಣತಿ ಮಾಡಿಸಿದರೂ ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಶೇಕಡಾ ಹತ್ತರಷ್ಟು ನ್ಯೂನತೆಗಳು ಬಾಕಿಯಾಗುತ್ತವೆ. ಜಾತಿಗಣತಿ ವಿರೋಧಿಗಳು ಆ ಹತ್ತು ಪರ್ಸೆಂಟ್ ನ್ಯೂನತೆಗಳನ್ನೇ ಪ್ರಮುಖ ವಿಷಯವನ್ನಾಗಿ ಮಾಡಿ ಇಡೀ ಸಮೀಕ್ಷೆಯನ್ನೇ ಅವೈಜ್ಞಾನಿಕ ಎಂದು ಅಪಪ್ರಚಾರ ಮಾಡಿ ಜಾತಿ ಸಮೀಕ್ಷಾ ವರದಿ ಜಾರಿ ಆಗದ ಹಾಗೆ ನೋಡಿಕೊಳ್ಳುವ ಸಂಭವನೀಯತೆಯೇ ಹೆಚ್ಚಾಗಿದೆ. ಇಲ್ಲಿವರೆಗೂ ಕರ್ನಾಟಕದಲ್ಲಿ ಅದೇ ಆಗಿದೆ.

ಜಾತಿಗಣತಿಯನ್ನು ಕೇಂದ್ರ ಸರಕಾರವೇ ಮಾಡಬೇಕಿತ್ತು. ಆದರೆ 1931 ರಲ್ಲಿ ಬ್ರಿಟೀಷರು ಮಾಡಿಸಿದ ಜಾತಿಗಣತಿಯನ್ನು ಹೊರತುಪಡಿಸಿ ಸ್ವತಂತ್ರ ಭಾರತದಲ್ಲಿ ಇಲ್ಲಿವರೆಗೂ ಜಾತಿಗಣತಿ ಮಾಡಲಾಗಿಲ್ಲ. 2011ರಲ್ಲಿ ಪ್ರಯತ್ನಿಸಲಾಯ್ತಾದರೂ ಮತ್ತದೇ ಪ್ರಬಲ ಜಾತಿಯ ನಾಯಕರ ಪ್ರತಿರೋಧದಿಂದಾಗಿ ಆ ಸಮೀಕ್ಷೆಯೂ ಇತಿಹಾಸದ ಕಸದ ಬುಟ್ಟಿ ಸೇರಿಯಾಯ್ತು. ಹತ್ತು ವರ್ಷಕ್ಕೊಮ್ಮೆ ಜನಗಣತಿಯನ್ನಾದರೂ ಮಾಡಬೇಕಿತ್ತು. ಆದರೆ ಕಳೆದ 14 ವರ್ಷಗಳಿಂದ ಅದನ್ನೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮಾಡಿಸಲು ಆಗಿಲ್ಲ. ಯಾವಾಗ ಬಿಹಾರ, ಕರ್ನಾಟಕ ಮತ್ತು ತೆಲಂಗಾಣಗಳಲ್ಲಿ ಜಾತಿಯಾಧಾರಿತ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಿಸಲಾಯಿತೋ, ಯಾವಾಗ ಕೇಂದ್ರದ ಪ್ರತಿಪಕ್ಷದ ನಾಯಕ ರಾಜೀವ ಗಾಂಧಿಯವರು ಜಾತಿಗಣತಿ ಕುರಿತು ಒತ್ತಾಯಿಸಲಾರಂಭಿಸಿದರೋ, ಯಾವಾಗ ಬಿಹಾರ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಜಾತಿಗಣತಿ ವಿಷಯ ಮುನ್ನೆಲೆಗೆ ಬರಬೇಕೆಂದು ಬಿಜೆಪಿಗೆ ಮನದಟ್ಟಾಯಿತೋ ಆಗ ಮೋದಿಯವರು ಜನಗಣತಿಯ ಜೊತೆಗೆ ಜಾತಿಗಣತಿಯನ್ನೂ ಮಾಡಲಾಗುವುದು ಎಂದು ಘೋಷಿಸಬೇಕಾಯ್ತು. ಇದು ಕೇವಲ ಚುನಾವಣಾ ಪೂರ್ವ ಭರವಸೆ ಆಗುತ್ತೋ ಇಲ್ಲಾ ಜಾರಿಗೆ ಬರುತ್ತೋ ಕಾಯ್ದು ನೋಡಬೇಕಿದೆ.

ಏನಾದರಾಗಲಿ ಎಲ್ಲಾ ಜಾತಿ ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ದಕ್ಕಲೇ ಬೇಕಿದೆ. ಸಕಲ ಸವಲತ್ತು, ಸಂಪತ್ತು ಹಾಗೂ ಯೋಜನೆಗಳಲ್ಲಿ ಎಲ್ಲಾ ಸಮುದಾಯಗಳಿಗೂ ಅದರಲ್ಲೂ ಶೋಷಿತ ಹಿಂದುಳಿದ ಸಮುದಾಯಗಳಿಗೆ ಪಾಲು ದೊರೆಯಲೇ ಬೇಕಿದೆ. ಅದೇ ಬಾಬಾಸಾಹೇಬರ ಸಂವಿಧಾನದ ಆಶಯವೂ ಆಗಿದೆ. ವರ್ಣವ್ಯವಸ್ಥೆಯ ಪ್ರತಿಪಾದಕರಾಗಿರುವ, ಮೀಸಲಾತಿಯ ಕಟು ವಿರೋಧಿಗಳಾಗಿರುವ ಬಿಜೆಪಿ ಹಾಗೂ ಅದರ ಪೋಷಕರಾದ ಆರೆಸ್ಸೆಸ್ ನಾಯಕರಿಗೆ ಜಾತಿಯಾಧಾರಿತ ಸಾಮಾಜಿಕ ನ್ಯಾಯ ಬೇಕಾಗಿಲ್ಲ. ಮನುಶಾಸ್ತ್ರ ಪ್ರಣೀತ ಶ್ರೇಣೀಕೃತ ಜಾತಿ ವ್ಯವಸ್ಥೆ ಇರಬೇಕೆಂಬುದೇ ಈ ಹಿಂದುತ್ವವಾದಿ  ಸಂಘ ಪರಿವಾರದ ಸಿದ್ಧಾಂತವಾಗಿದೆ. ಹೀಗಾಗಿ ಜಾತಿಗಣತಿಯನ್ನು ಹಾಗೂ ಸಂವಿಧಾನಬದ್ದ ಮೀಸಲಾತಿಯನ್ನು ಈ ಸಂಘ ಪರಿವಾರದ ಪ್ರಮುಖ ಅಂಗಗಳು ವಿರೋಧಿಸುತ್ತಲೇ ಬಂದಿವೆ. ಹೀಗಿರುವಾಗ ಮೋದಿ ನೇತೃತ್ವದ ಬಿಜೆಪಿ ಪಕ್ಷ ಜನಗಣತಿಯನ್ನು ದೇಶಾದ್ಯಂತ ನಡೆಸಿ ಜಾತಿಜನಸಂಖ್ಯೆಯಾಧಾರಿತ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುತ್ತಾರೆ ಎಂಬುದು ಅಸಾಧ್ಯದ ಸಂಗತಿಯಾಗಿದೆ. ಮೋದಿಯವರ ಜಾತಿಗಣತಿಯ ಪ್ರಸ್ತಾಪವೂ ಸಹ ಚುನಾವಣಾ ಪೂರ್ವ ಗಿಮಿಕ್ ಆಗಿದೆ.

ಹೋಗಲಿ, ಕರ್ನಾಟಕದಲ್ಲಾದರೂ ಜಾತಿಗಣತಿ ಸಮೀಕ್ಷೆ ಈ ಸಲವಾದರೂ ನಿರಾತಂಕವಾಗಿ ಹಾಗೂ ಪಾರದರ್ಶಕವಾಗಿ ನಡೆಯುವಂತಾಗಲಿ. ಸಮೀಕ್ಷೆಯ ನಂತರ ಪ್ರಬಲ ಜಾತಿ ಸಮುದಾಯಗಳ ಪ್ರತಿರೋಧಕ್ಕೆ ಹೆದರಿ ವಿಳಂಬ ನೀತಿ ಅನುಸರಿಸದೇ ವರದಿಯನ್ನು ಸ್ವೀಕರಿಸಿ, ಸಚಿವ ಸಂಪುಟದಲ್ಲಿ ಮಂಡಿಸಿ, ಅಧಿವೇಶನದಲ್ಲಿ ಚರ್ಚಿಸಿ ಆದಷ್ಟು ಬೇಗ ಜಾರಿಗೊಳಿಸಲೇ ಬೇಕಿದೆ. ಏನಾದರಾಗಲಿ ಶೋಷಿತ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಹಾಗೂ ಅವಕಾಶಗಳು ಸಿಕ್ಕಲೇ ಬೇಕಿವೆ.  ಜ್ಯಾತ್ಯತೀತ ಸಮಾನತೆಯ ಸಮಾಜವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪನೆಗೆ ಜಾತಿ ಸಮೀಕ್ಷೆ ಹಾಗೂ ಸಾಮಾಜಿಕ ನ್ಯಾಯದ ಅಳವಡಿಕೆ ಮೊದಲ ಮೆಟ್ಟಲಾಗಿದೆ. ಪಟ್ಟದಲ್ಲಿ ಕುಳಿತಿರುವವರು ತಮ್ಮ ಸಾಮಾಜಿಕ ಇಚ್ಚಾಶಕ್ತಿ ತೋರಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಜಾತಿ ಜನಗಣತಿ ಎಂದರೆ ಮೇಲ್ವರ್ಗದವರಿಗೆ ಯಾಕೆ ಭೀತಿ?

More articles

Latest article