Thursday, December 12, 2024

ಜಾತಿ ಜನಗಣತಿ ಎಂದರೆ ಮೇಲ್ವರ್ಗದವರಿಗೆ ಯಾಕೆ ಭೀತಿ?

Most read

ಈ ದೇಶ ಎಲ್ಲಾ ಜಾತಿ ಜನಾಂಗಗಳಿಗೂ ಸೇರಿದ್ದು. ದುಡಿಯುವ ವರ್ಗಗಳ ಶ್ರಮದಿಂದಲೇ ಈ ದೇಶದ ಸಂಪತ್ತು ಸೃಷ್ಟಿಯಾಗಿರುವುದು. ಹೀಗಾಗಿ ದೇಶದ ಸಂಪನ್ಮೂಲಗಳಲ್ಲಿ ಶ್ರಮಿಕ ಸಮುದಾಯಕ್ಕೂ ನ್ಯಾಯಯುತವಾದ ಪಾಲು ಸಲ್ಲಲೇ ಬೇಕಲ್ಲವೆ? ಶತಮಾನಗಳಿಂದ ಅವಕಾಶ ವಂಚಿತ ಸಮುದಾಯದವರ ಸ್ಥಾನಮಾನ, ಬದುಕು ಸಮಾನತೆಯತ್ತ ಸಾಗಬೇಕಲ್ಲವೇ? ಹೌದು ಎನ್ನುವುದಾದರೆ ಜಾತಿ ಜನಗಣತಿ ಈಗಿನ ತುರ್ತು ಅಗತ್ಯವಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಜಾತಿ ಎನ್ನುವುದು ನಮ್ಮ ಬಹುತ್ವ ಭಾರತದಲ್ಲಿ ನಿರಾಕರಿಸಲಾಗದ ವಾಸ್ತವ. ಜಾತಿವಿನಾಶಕ್ಕೆ, ಜಾತಿ ತಾರತಮ್ಯ ನಿವಾರಣೆಗೆ ಅನೇಕಾನೇಕ ಸಮಾಜ ಸುಧಾರಕರು ಕಾಲಕಾಲಕ್ಕೆ ಪ್ರಯತ್ನಿಸಿದರೂ ಜಾತಿ ವ್ಯವಸ್ಥೆಯ ಬೇರುಗಳು ಶಿಥಿಲವಾಗುವ ಬದಲಾಗಿ ಗಟ್ಟಿಗೊಳ್ಳುತ್ತಲೇ ಇರುವುದು ವರ್ತಮಾನದ ವಿಪರ್ಯಾಸ.

ಹೌದು, ಈ ದೇಶ ಸಹಸ್ರಾರು ಜಾತಿ ಉಪಜಾತಿಗಳನ್ನು ಉದರದಲ್ಲಿಟ್ಟುಕೊಂಡಿರುವ ಜಾತ್ಯತೀತ ರಾಷ್ಟ್ರ. ಸಂವಿಧಾನದ ಪರಿವಿಡಿಯಲ್ಲಿ ಜಾತ್ಯಾತೀತ ದೇಶವೆಂದು ಘೋಷಿಸಿದ ತಕ್ಷಣ ಜಾತಿವಿನಾಶ ಸಾಧ್ಯವಾಗುತ್ತದೆ ಎಂಬುದು ಭ್ರಮೆ. ಆದರೆ ಸಂವಿಧಾನದ ಕರ್ತೃಗಳ ಆಶಯ ಹಾಗೂ ಸಂವಿಧಾನದ ಉದ್ದೇಶ ಭಾರತ ಜಾತ್ಯತೀತ ರಾಷ್ಟ್ರ ಆಗಬೇಕು ಎನ್ನುವುದಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಲಿ ಎಂಬುದಾಗಿದೆ.

ಆದರೆ ಚುನಾವಣಾ ಕೇಂದ್ರಿತ ಆಳುವ ವ್ಯವಸ್ಥೆಯು ತನ್ನ ಮತ ಬ್ಯಾಂಕ್ ರಾಜಕಾರಣದ ಭಾಗವಾಗಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಲೇ ಬಂದಿದೆ. ಜಾತೀಯತೆಯನ್ನು ವಿರೋಧಿಸಿ “ನಾವೆಲ್ಲಾ ಒಂದೇ ಜಾತಿ, ಒಂದೇ ಕುಲ ನಾವು ಮನುಜರು” ಎಂದು ಹೇಳಬೇಕಾಗಿದ್ದ ಮಠ ಮಾನ್ಯ ಪೀಠಗಳೇ ಜಾತಿಗೊಂದರಂತೆ ಹುಟ್ಟಿಕೊಂಡಿವೆ, ಸ್ವಜಾತಿಯವರ ಹಿತಾಸಕ್ತಿ ಕಾಪಾಡುತ್ತಲೇ ತಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿವೆ.

ಅನೇಕ ಜಾತಿಯ ಜನರಿಗೆ ಸಾಂಕೇತಿಕವಾಗಿ ಲಿಂಗಧಾರಣೆ ಮಾಡಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಜಾತಿ ವಿನಾಶಕ್ಕೆ ಪ್ರಯತ್ನಿಸಿದ, ನಿಜವಾದ ಅರ್ಥದಲ್ಲಿ ಜಾತಿವಿನಾಶದ ರೂವಾರಿಯಾದ ಬಸವಣ್ಣನವರನ್ನೇ ಒಂದು ಜಾತಿಗೆ ಸೀಮಿತ ಗೊಳಿಸಲಾಗಿದೆ.. ಶಿವಶರಣರ ಕಾಯಕ ವೃತ್ತಿಯನ್ನೇ ತಮ್ಮ ಜಾತಿಯ ಅಸ್ಮಿತೆಯನ್ನಾಗಿಸಿ ಜಾತ್ಯತೀತ ಶರಣರನ್ನು ಜಾತಿಗೆ ಮೀಸಲಾಗಿರಿಸಲಾಗಿದೆ.

ಈ ರೀತಿಯ ಜಾತಿನಿಷ್ಠ ಸಂಕೀರ್ಣ ಕಾಲದಲ್ಲಿ ಈ ದೇಶ ಜಾತ್ಯತೀತ ರಾಷ್ಟ್ರ ಆಗಬೇಕೆಂದು ಸಂವಿಧಾನದ ರೂವಾರಿಗಳು ಕಂಡ ಕನಸು ನನಸಾಗದೇ ಇನ್ನೂ ಭ್ರಮೆಯಾಗಿಯೇ ಉಳಿದಿದೆ. ಇಂತಹ ಸಂದರ್ಭದಲ್ಲಿ, ಜಾತಿಯೆಂಬ ವಾಸ್ತವದ ಬೆಳಕಲ್ಲಿ ವರ್ಗಸೂಕ್ಷ್ಮತೆಯನ್ನು ಗಮನಿಸಬೇಕಿದೆ. ವರ್ಗ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯನ್ನು ಸಾಧಿಸಲು ಸಂವಿಧಾನದಲ್ಲಿ ಮೀಸಲಾತಿಯ ಅಗತ್ಯವನ್ನು ಸೇರಿಸಲಾಗಿದೆ. ಸಾಮಾಜಿಕವಾಗಿ ಅವಕಾಶವಂಚಿತ ಶೋಷಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ಸರಕಾರಿ ಯೋಜನೆಗಳಲ್ಲಿ ಒಂದಿಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯವನ್ನು ಎಲ್ಲಾ ಸಮುದಾಯಗಳೂ ಪಡೆಯುವಂತಾಗಲಿ ಎಂಬುದೇ ಸಂವಿಧಾನದ ಆಶಯವಾಗಿದೆ.

ಆದರೆ ಮೀಸಲಾತಿಯ ಪ್ರಯೋಜನದಲ್ಲೂ ಮೇಲ್ಜಾತಿಗಳು ಪಾಲು ಪಡೆಯುತ್ತಲೇ ಬಂದಿವೆ. ಸಾಮಾಜಿಕವಾಗಿ ಹಿಂದುಳಿದ ಅಸಹಾಯಕ ವರ್ಗದವರಿಗೆ ಮಾತ್ರ ಮೀಸಲಿದ್ದ ಮೀಸಲಾತಿ ನೀತಿಯನ್ನೇ ಬದಲಾಯಿಸಿ ಆರ್ಥಿಕವಾಗಿ ಹಿಂದುಳಿದವರಿಗೂ ವಿಸ್ತರಿಸಿದ್ದು ಸಂವಿಧಾನಕ್ಕೆ ಮಾಡಿದ ದ್ರೋಹವೇ ಆಗಿದೆ. ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಇರುವ, ಸಾಮಾಜಿಕವಾಗಿ ಮೇಲ್ಮಟ್ಟದಲ್ಲಿರುವ ಬ್ರಾಹ್ಮಣರೂ ಶೇ.10 ಮೀಸಲಾತಿಯನ್ನು ಪಡೆಯುತ್ತಿರುವುದು ಮೀಸಲಾತಿ ನೀತಿಯ ದುರುಪಯೋಗ ಆಗಿದೆ.

ಇದರ ಜೊತೆಗೆ ಮೇಲ್ಜಾತಿಯ ಪ್ರಬಲ ಸಮುದಾಯಗಳೂ ಸಹ ಮೀಸಲಾತಿಯ ಫಲಾನುಭವಿಗಳಾಗಿದ್ದು ಇನ್ನೂ ಹೆಚ್ಚಿನ ಪಾಲು ಬೇಕೆಂದು ಹಾತೊರೆಯುತ್ತಿವೆ. ಆಳುವ ಸರಕಾರಗಳ ಮೇಲೆ ಒತ್ತಡ ಹೇರುತ್ತಿವೆ. ಸ್ವಾಮಿಗಳ ನೇತೃತ್ವದಲ್ಲಿ ಹೋರಾಡುತ್ತಿವೆ. ಹೀಗಾಗಿ ಬಹುಸಂಖ್ಯಾತ ಕೆಳ ತಳ ಸಮುದಾಯಗಳು ಮೀಸಲಾತಿಯಿಂದ ವಂಚಿತವಾಗಿವೆ. ಸಾಮಾಜಿಕ ನ್ಯಾಯ ಎನ್ನುವುದು ತಳ ಸಮುದಾಯದವರಿಗೆ ಕನ್ನಡಿಯ ಗಂಟಾಗಿದೆ.

ಅವಕಾಶಗಳು, ಸಂಪನ್ಮೂಲಗಳು ಶೋಷಿತ ಸಮುದಾಯಗಳಿಗೆ ತಲುಪಬೇಕೆಂದರೆ ಇಲ್ಲಿವರೆಗೂ ಈ ದೇಶದಲ್ಲಿ ಜಾತಿ ಸಮೀಕ್ಷೆಯನ್ನೇ ಮಾಡಿಲ್ಲ. 1930 ರಲ್ಲಿ ಬ್ರಿಟಿಷರು ಮಾಡಿಸಿದ ಜಾತಿಗಣತಿಯನ್ನು ಹೊರತು ಪಡಿಸಿದರೆ ಇಲ್ಲಿವರೆಗೂ ಜಾತಿಗಳ ಕುರಿತ ಸಮೀಕ್ಷೆ ನಡೆಸಿಲ್ಲ. ಯಾವ ಜಾತಿಯ ಜನರು ಎಷ್ಟಿದ್ದಾರೆ, ಅವರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಾನಮಾನಗಳು ಏನೇನಿವೆ ಎಂಬುದರ ಕುರಿತ ನಿರ್ದಿಷ್ಟ ಮಾಹಿತಿಗಳೇ ಸರಕಾರದ ಬಳಿ ಇಲ್ಲ. ಕೇವಲ ಜನಗಣತಿ ಆಧರಿಸಿ ಜಾತಿಗಳ ಜಾತಕವನ್ನು ಅರಿಯಲು ಸಾಧ್ಯವೂ ಇಲ್ಲ. 2011 ರಿಂದ ಈ ದೇಶದಲ್ಲಿ ಜನಗಣತಿಯನ್ನೂ ಮಾಡಿಸಿಲ್ಲ.  ಹೀಗಾಗಿ ಜಾತಿ ಸಮುದಾಯಗಳ ಕುರಿತ ಯಾವುದೇ ಮಾಹಿತಿಗಳು ಇಲ್ಲದೇ ಇರುವುದರಿಂದ, ಜನಗಣತಿ ಆಧರಿಸಿ ಮೀಸಲಾತಿ ಪ್ರಮಾಣವನ್ನು ನಿರ್ಧರಿಸುತ್ತಿರುವುದರಿಂದ, ಅದೆಷ್ಟೋ ಶೋಷಿತ ಜಾತಿ ಉಪಜಾತಿಗಳ ಜನತೆ ಇವತ್ತಿಗೂ ಅವಕಾಶ ವಂಚಿತರಾಗಿ ಸಮಾಜದ ಕೆಳ ಸ್ತರದಲ್ಲಿಯೇ ಬದುಕುತ್ತಿದ್ದಾರೆ.

ಈ ದೇಶ ಎಲ್ಲಾ ಜಾತಿ ಜನಾಂಗಗಳಿಗೂ ಸೇರಿದ್ದು. ದುಡಿಯುವ ವರ್ಗಗಳ ಶ್ರಮದಿಂದಲೇ ಈ ದೇಶದ ಸಂಪತ್ತು ಸೃಷ್ಟಿಯಾಗಿರುವುದು. ಹೀಗಾಗಿ ದೇಶದ ಸಂಪನ್ಮೂಲಗಳಲ್ಲಿ ಶ್ರಮಿಕ ಸಮುದಾಯಕ್ಕೂ ನ್ಯಾಯಯುತವಾದ ಪಾಲು ಸಲ್ಲಲೇ ಬೇಕಲ್ಲವೆ?. ಶತಮಾನಗಳಿಂದ ಅವಕಾಶ ವಂಚಿತ ಸಮುದಾಯದವರ ಸ್ಥಾನಮಾನ ಬದುಕೂ ಸಮಾನತೆಯತ್ತ ಸಾಗಬೇಕಲ್ಲವೇ? ಹೌದು ಎನ್ನುವುದಾದರೆ ಜಾತಿ ಜನಗಣತಿ ಈಗಿನ ತುರ್ತು ಅಗತ್ಯವಾಗಿದೆ. ಆದರೆ ಮೇಲ್ಜಾತಿಯ ಪ್ರಭಾವಿ ಸಮುದಾಯವನ್ನೇ ಪ್ರತಿನಿಧಿಸುವ ಪ್ರಭುತ್ವ ಈ ನಿಟ್ಟಿನಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದೆ. ಜಾತಿಗಣತಿಯಾದರೆ ಎಲ್ಲಿ ತಮ್ಮ ಪಾಲು ಕಡಿಮೆಯಾಗುವುದೋ ಎಂಬ ಆತಂಕದಲ್ಲಿ ಮೇಲ್ವರ್ಗದ ಸಮುದಾಯಗಳು ಏನಾದರೊಂದು ನೆಪ ಹೇಳಿ ಜಾತಿಗಣತಿ ಸಮೀಕ್ಷೆಗೆ ಅಡೆತಡೆ ಒಡ್ಡುತ್ತಲೇ ಇವೆ.

ಭಾರತ ಹಲವು ರಾಜ್ಯಗಳ ಒಕ್ಕೂಟವಾದರೂ ಯಾವುದೇ ರಾಜ್ಯಕ್ಕೂ ಸ್ವತಂತ್ರವಾಗಿ ಜಾತಿಗಣತಿ ಮಾಡಲು ಅವಕಾಶವಿಲ್ಲ. ಹೀಗಾಗಿಯೇ ಕರ್ನಾಟಕದಲ್ಲಿ ಕಳೆದ ಬಾರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಆರ್ಥಿಕ ಸಾಮಾಜಿಕ ಸಮೀಕ್ಷೆಯ ಹೆಸರಲ್ಲಿ ಜಾತಿಗಣತಿಯನ್ನು ಕಾಂತರಾಜರವರ ಅಧ್ಯಕ್ಷತೆಯ ಸಮಿತಿಯ ಮೂಲಕ ಮಾಡಿಸಿತ್ತು. ಇನ್ನೇನು ಆ ವರದಿಯನ್ನು ಸರಕಾರ ಸ್ವೀಕರಿಸಬೇಕು ಎನ್ನುವಷ್ಟರಲ್ಲಿ ಸರಕಾರ ಬದಲಾಯ್ತು. ವರದಿ ಅನಧಿಕೃತವಾಗಿ ಬಹಿರಂಗವಾಗಿದೆ ಎಂದು ಹುಯಿಲೆಬ್ಬಿಸಲಾಯ್ತು. ಈಗ ಮತ್ತೆ ಸಿದ್ದರಾಮಯ್ಯನವರ ಸರಕಾರ ಬಂದಿದೆ. ಕಾಂತರಾಜರವರ ದತ್ತಾಂಶವನ್ನು ಆಧರಿಸಿ ಜಯಪ್ರಕಾಶ್ ಹೆಗ್ಡೆಯವರ ಸಮಿತಿಯು ಅಂತಿಮ ವರದಿಯನ್ನು ತಯಾರಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಕರ್ನಾಟಕದ ಪ್ರಬಲ ಸಮುದಾಯಗಳಾದ ಒಕ್ಕಲಿಗ ಹಾಗೂ ಲಿಂಗಾಯತರ ನಾಯಕರುಗಳು ಹಾಗೂ ಮಠಾಧೀಶರುಗಳು ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿಲ್ಲ ಎಂಬ ನೆಪ ಹೇಳಿ ಪ್ರಭಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರ ಜೊತೆ ಈ ವೈದಿಕ ಮಠದ ಪೇಜಾವರ ಸ್ವಾಮಿಗಳು ಬೇರೆ ಜಾತ್ಯತೀತ ದೇಶದಲ್ಲಿ ಜಾತಿ ಸಮೀಕ್ಷೆ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ ಪೋಷಿಸುತ್ತಾ ಬಂದಿರುವ ವೈದಿಕ ಮಠದ ಈ ಸ್ವಾಮಿಗಳ ಮಾತುಗಳೇ ವಿಕ್ಷಿಪ್ತವಾಗಿವೆ.

ವಂಚಿತ ಸಮುದಾಯಗಳಿಗೆ ಮೀಸಲಾತಿಯ ಸವಲತ್ತು ದಕ್ಕದ ಹಾಗೆ ಮಾಡುವ ಪ್ರಯತ್ನ ಇದೇ ಮೊದಲೇನಲ್ಲ. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಹಿಂದುಳಿದ ಹಾಗೂ ದಮನಿತ ವರ್ಗದವರಿಗೆ ಮೀಸಲಾತಿ ಕೊಡಬೇಕೆಂದು ನಿರ್ಧರಿಸಿ ಮಿಲ್ಲರ್ ಆಯೋಗ ರಚಿಸಿದರು. ಇದನ್ನು ಮಾನ್ಯ ವಿಶ್ವೇಶ್ವರಯ್ಯನವರು ವಿರೋಧಿಸಿ ತಮ್ಮ ದಿವಾನಗಿರಿಗೆ ರಾಜೀನಾಮೆ ಕೊಟ್ಟು ತಮ್ಮ ಜಾತಿಶ್ರೇಷ್ಟತೆಯನ್ನು ಸಾಬೀತು ಗೊಳಿಸಿದರು. ಆದರೂ ಮಹಾರಾಜರು ಮೀಸಲಾತಿ ಜಾರಿಗೆ ತಂದರು. ಮುಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸುರವರು ಹಾವನೂರು ವರದಿ ಅಂಗೀಕರಿಸಿ ಜಾರಿಗೆ ತರಲು ಮುಂದಾದಾಗ ಇದೇ ಮೇಲ್ಜಾತಿಯ ನಾಯಕರುಗಳು ಪ್ರಬಲ ವಿರೋಧ ವ್ಯಕ್ತಪಡಿಸಿದರಾದರೂ ಅರಸುರವರು ಜಾರಿಗೆ ತಂದರು. ಆ ನಂತರ ಮೀಸಲಾತಿಗೆ ಸಂಬಂಧಿಸಿದಂತೆ ಸರಕಾರ ರಚಿಸಿದ ವೆಂಕಟಸ್ವಾಮಿ ಆಯೋಗ ಹಾಗೂ ಓ ಚೆನ್ನಪ್ಪ ರೆಡ್ಡಿ ಸಮಿತಿಯ ವರದಿಯ ಜಾರಿಗೆ ಇದೇ ಮೇಲ್ವರ್ಗದವರು ವಿರೋಧ ವ್ಯಕ್ತಪಡಿಸಿದರು.

 ಈಗ ಇದೇ ಮನಸ್ಥಿತಿಯ ಮೇಲ್ವರ್ಗದ ನಾಯಕರುಗಳು ಕಾಂತರಾಜ ಸಮಿತಿ ಸಿದ್ಧ ಪಡಿಸಿದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಗೆ ಪ್ರತಿರೋಧವನ್ನುಂಟು ಮಾಡುತ್ತಿದ್ದಾರೆ. ‘ಜಾತಿಗಣತಿ ಅಂಗೀಕಾರವಾದರೆ ಮುಂದಿನ ಚುನಾವಣೆಯಲ್ಲಿ ಸೋಲಿಸುತ್ತೇವೆ, ಸರಕಾರವನ್ನೇ ಬೀಳಿಸುತ್ತೇವೆ’ ಎಂದು ಪ್ರಬಲ ಸಮುದಾಯಗಳ ನಾಯಕರುಗಳು ಸರಕಾರವನ್ನೇ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಈ ಪ್ರಬಲ ಸಮುದಾಯಗಳಿಂದ ಶೋಷಣೆಗೆ ಒಳಗಾದವರಿಗೆ ರಾಜಕೀಯ ಸ್ಥಾನಮಾನ, ಆರ್ಥಿಕ ಸವಲತ್ತು ಹಾಗೂ ಸಾಮಾಜಿಕ ಸಮಾನತೆ ಎಂದೂ ದೊರೆಯಬಾರದು ಎಂಬುದೇ ಈ ಜಾತಿ ಶ್ರೇಷ್ಟತೆ ವ್ಯಸನ ಪೀಡಿತರ ಉದ್ದೇಶವಾಗಿದೆ.

ಅಚ್ಚರಿಯ ಸಂಗತಿ ಏನೆಂದರೆ, ಈ ಸಮೀಕ್ಷಾ ವರದಿಯನ್ನು ವಿರೋಧಿಸುತ್ತಿರುವ ಯಾರಿಗೂ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಇಲ್ಲಿವರೆಗೂ ಅದನ್ನು ಯಾರೂ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಏನು ಎತ್ತ ಎನ್ನುವ ಮಾಹಿತಿ ಇಲ್ಲದ ಈ ಮೇಲ್ಜಾತಿ ಸಮುದಾಯದ ನಾಯಕರು ಹಾಗೂ ಸ್ವಾಮಿಗಳು ವಿರೋಧಿಸುತ್ತಿರುವುದಾದರೂ ಯಾಕೆ? ಯಾಕೆಂದರೆ ಅವರಿಗೆಲ್ಲಾ ಎಲ್ಲಿ ತಮ್ಮ ಸಮುದಾಯದವರ ಪಾಲು ಕಡಿಮೆಯಾಗುತ್ತದೋ ಎಂಬ ಆತಂಕವಿದೆ. ಎಲ್ಲಿ ಬಹುಸಂಖ್ಯಾತ ದುಡಿಯುವ ವರ್ಗದವರು ತಮ್ಮ ಸಂಖ್ಯಾಬಲಕ್ಕೆ ಅನುಗುಣವಾಗಿ ಸರಕಾರಿ ಸವಲತ್ತು ಪಡೆಯುತ್ತಾರೋ ಎನ್ನುವ ಅಸೂಯೆಯೂ ಇದೆ. ಹೀಗಾಗಿ  ಶತಾಯ ಗತಾಯ ಈ ಜಾತಿ ಸಮೀಕ್ಷೆ ಬಹಿರಂಗವಾಗದಂತೆ ಸರ್ವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಪಕ್ಷ ಬೇಧ ಮರೆತು ಮೇಲ್ಜಾತಿ ನಾಯಕರು ಸಮೀಕ್ಷಾ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾತಿಯಾಧಾರಿತ ಸಮೀಕ್ಷಾ ವರದಿಯನ್ನು ಅಂಗೀಕರಿಸಿ ಅನುಷ್ಠಾನಕ್ಕೆ ತಂದಿದ್ದೇ ಆದರೆ ಸರಕಾರವನ್ನೇ ಬೀಳಿಸಲು ಈ ಪ್ರಬಲ ಜಾತಿಯ ಪ್ರಮುಖರು ಸಿದ್ಧರಾಗಿದ್ದಾರೆ. ಹೀಗಾಗಿ ಅವಕಾಶ ವಂಚಿತ ಸಮುದಾಯಗಳು ಇದ್ದಲ್ಲೇ ಇರುತ್ತವೆ, ಜಾತಿಗಣತಿ ವಿರೋಧಿ ಶಕ್ತಿಗಳ ಸಮುದಾಯಗಳು ಹೆಚ್ಚು ಅವಕಾಶಗಳನ್ನು ಪಡೆದು ಸಾಮಾಜಿಕ ಸ್ತರದಲ್ಲಿ ಮೇಲೆ ಮೇಲಕ್ಕೆ ಏರುತ್ತಲೇ ಇರುತ್ತಾರೆ. ದುಡಿಯುವ ವರ್ಗಗಳು ದುಡಿಯುತ್ತಲೇ ಇರುತ್ತಾರೆ, ಪ್ರಭಾವಿ ವರ್ಗಗಳು ಫಲಾನುಭವಿಗಳಾಗುತ್ತಾರೆ. ತಳ ಕೆಳ ವರ್ಗಗಳು ಈಗ ಒಂದಾಗಿ ಧ್ವನಿ ಎತ್ತದೇ ಹೋದರೆ ಜಾತಿ ಸಮೀಕ್ಷೆ ಕೋಲ್ಡ್ ಸ್ಟೋರೇಜ್ ಸೇರಿಸಲಾಗುತ್ತದೆ. ಸಾಮಾಜಿಕ ಅಸಮಾನತೆ ಮುಂದುವರೆಯುತ್ತದೆ. ಸಂವಿಧಾನದ ಆಶಯಕ್ಕೆ ಹಿನ್ನಡೆಯಾಗುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಜಾತ್ಯತೀತ ದೇಶದಲ್ಲೇಕೆ ಜಾತಿ ಜನಗಣತಿ?

More articles

Latest article