ಸಿಎಂ ಪತ್ನಿ ಅವರ ಪತ್ರ ತಿದ್ದುಪಡಿ ಆಗಿಲ್ಲ: ಹೆಚ್‌ಡಿಕೆ ಆರೋಪಕ್ಕೆ ಸಚಿವ ಭೈರತಿ ಸುರೇಶ್ ಸ್ಪಷ್ಟನೆ

Most read

ಮುಡಾ ಬದಲಿ ನಿವೇಶನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಈಗ ಸಿಎಂ ಪತ್ನಿ ಅವರ ಪತ್ರವನ್ನು ತಿದ್ದಿದ್ದಾರೆ ಎಂದು ಆರೋಪ ಕೇಳಿ ಬಂದ ಬೆನ್ನಲ್ಲೇ, ದಾಖಲಾತಿ ತಿದ್ದುವ ಪರಿಸ್ಥಿತಿ ನಮಗೆ ಬಂದಿಲ್ಲ. ಸಿಎಂ ಪತ್ನಿ ಅವರ ದಾಖಲಾತಿ ತಿದ್ದುಪಡಿ ಆಗಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ದಾಖಲಾತಿ ತಿದ್ದಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದಾಖಲೆ ತಿದ್ದುವಂತ ಪರಿಸ್ಥಿತಿ ನಮಗೆ ಬಂದಿಲ್ಲ. ಅಂತಹ ನೀಚ ಕೆಲಸಕ್ಕೆ ನಾವ್ಯಾರೂ ಇಳಿದಿಲ್ಲ. ಜಮೀನಿಗೆ ಪರಿಹಾರ ನೀಡಿಲ್ಲ. ಅಷ್ಟೇ ವಿಸ್ತೀರ್ಣದ ಜಮೀನು ಎಂದು ಹೇಳಿದ್ದಾರೆ. ಅಲ್ಲಿ ವರ್ಷ ತಪ್ಪಾಗಿರಬಹುದು. ಇಲ್ಲವೇ ಸಮಾನಾಂತರ ಬಡಾವಣೆಯಲ್ಲಿ ನೀಡುವಂತೆ ಕೋರುತ್ತೇನೆ ಎಂದು ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ. ವಿಜಯನಗರ ಲೇಔಟ್ ಅಲ್ಲಿ ಅಂತ ಎಲ್ಲಿ ಬರೆದಿದ್ದಾರೆ? ಸಮಾನಾಂತರ ಜಾಗದಲ್ಲಿ ಅಂತ ಬರೆದಿದ್ದಾರೆ. ಮಾಧ್ಯಮಗಳು ಎಲ್ಲವನ್ನು ನೋಡಿ ಹಾಕಬೇಕು ಎಂದು ಹೇಳಿದ್ದಾರೆ.

ಕುಮಾರಸ್ವಾಮಿಗೆ ನಾನು ಹೇಳ್ತೇನೆ ನಿಮ್ಮಲ್ಲಿ ಏನೇ ದಾಖಲೆ ಇದ್ದರೂ ಕೋರ್ಟ್‌ಗೆ ಕೊಡಿ. ಯಾಕೆ ನೀವು ಸುಮ್ಮನೆ ಅಪ ಪ್ರಚಾರ ಮಾಡುತ್ತೀರಿ. ನ್ಯಾಯಾಧೀಶರೇ ನಾವು ಬಗೆಹರಿಸುತ್ತೇವೆ ಅಂದಿದ್ದಾರೆ. ಅಲ್ಲಿಯವರೆಗೆ ಕಾಯೋಕೆ ಏನು? ಏನೇ ದಾಖಲಾತಿ ಇದ್ದರು ನೀವು ಕೋರ್ಟ್ ಕೊಡಿ. ನ್ಯಾಯಾಲಯ ಅದನ್ನು ಪರಿಗಣಿಸುತ್ತದೆ ಎಂದು ಕಿಡಿಕಾರಿದರು.

More articles

Latest article